ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುದ್ದು ಕೃಷ್ಣನ ಲುಕ್ ಹಾಗೂ ಫ್ಯಾನ್ಸಿ ಡ್ರೆಸ್ಗೆ ಸಾಥ್ ನೀಡುವ ಟ್ರೆಡಿಷನಲ್ ಮಿನಿ ಧೋತಿ, ಶಲ್ಯ ಹಾಗೂ ಟ್ರೆಡಿಷನಲ್ ಉಡುಪುಗಳು ಹಾಗೂ ಆಕ್ಸೆಸರೀಸ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಬೇಡಿಕೆ ಹೆಚ್ಚಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಕೃಷ್ಣ ಜನ್ಮಾಷ್ಟಮಿಯಂದು (Krishna Janmashtami) ನಾನಾ ಕಡೆ ಫ್ಯಾನ್ಸಿ ಡ್ರೆಸ್ ಹಾಗೂ ಫೋಟೊಶೂಟ್ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಪೋಷಕರು ಚಿಣ್ಣರಿಗೆ ಕೃಷ್ಣನ ಅವತಾರ ಮಾಡುವುದು ಕಾಮನ್ ಆಗಿದೆ. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ, ಮುದ್ದು ಕೃಷ್ಣನ ಅಲಂಕಾರಕ್ಕೆ ಬೇಕಾಗುವ ನಾನಾ ಬಗೆಯ ಪುಟ್ಟ ಪುಟ್ಟ ಟ್ರೆಡಿಷನಲ್ ಧೋತಿ, ಶಲ್ಯ ಸೇರಿದಂತೆ ನಾನಾ ಬಗೆಯ ಉಡುಪು ಹಾಗೂ ಧರಿಸುವ ಆಕ್ಸೆಸರೀಸ್ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಪುಟ್ಟ ಮಕ್ಕಳನ್ನು ಕೃಷ್ಣನಂತೆ ಬಿಂಬಿಸುವ ಮಿನಿ ಧೋತಿ-ಶಲ್ಯ
ಧರಿಸಿದಾಗ ಪುಟ್ಟ ಮಕ್ಕಳನ್ನು ಮುದ್ದು ಕೃಷ್ಣನಂತೆ ಬಿಂಬಿಸುವ ಮಿನಿ ಸೈಝಿನ ಬಾರ್ಡರ್ ಧೋತಿ ಹಾಗೂ ಶಲ್ಯಗಳು ಈ ಕೃಷ್ಣ ಜನ್ಮಾಷ್ಟಮಿಗೆ ನಾನಾ ಬಗೆಯಲ್ಲಿ ಎಂಟ್ರಿ ನೀಡಿವೆ. ಚಿಕ್ಕ ಕಂದಮ್ಮಗಳಿಂದಿಡಿದು ದೊಡ್ಡ ಮಕ್ಕಳಿಗೂ ಇವು ಲಭ್ಯ. ಅತಿ ಸುಲಭವಾಗಿ ಮಕ್ಕಳು ಧರಿಸಬಹುದಾದ ಧೋತಿಗಳು ಕಟ್ಟುವ ಬದಲು ವೆಲ್ಕ್ರಾನ್ ಸಿಸ್ಟಂನಲ್ಲಿವೆ. ಇದು ಮಕ್ಕಳಿಗೆ ಧರಿಸಲು ಸುಲಭವಾಗಿದೆ ಎನ್ನುತ್ತಾರೆ ಮಾರಾಟಗಾರರು. ಇನ್ನು ಧೋತಿಗೆ ಪುಟ್ಟ ಕುರ್ತಾಗಳು ಸಿಲ್ಕ್ ಹಾಗೂ ಕಾಟನ್ ಮಿಕ್ಸ್ ಸಿಲ್ಕ್ ಫ್ಯಾಬ್ರಿಕ್ನಲ್ಲಿ ಬಿಡುಗಡೆಗೊಂಡಿವೆ. ಸಾಫ್ಟ್ ಫ್ಯಾಬ್ರಿಕ್ನವು ನಾನಾ ಕಲರ್ನಲ್ಲಿ ಲಭ್ಯ. ಅವುಗಳಲ್ಲಿ ಕ್ರೀಮ್ ಹಾಗೂ ಆರೆಂಜ್ನವು ಹೆಚ್ಚು ಬಿಕರಿಯಾಗುತ್ತಿವೆ ಎನ್ನುತ್ತಾರೆ ಶಾಪ್ವೊಂದರ ಮಾಲೀಕರು.
ಕೃಷ್ಣನ ಡ್ರೆಸ್ಗೆ ಮ್ಯಾಚಿಂಗ್ ಆಕ್ಸೆಸರೀಸ್ಗಳು
ಕೃಷ್ಣ ಫ್ಯಾನ್ಸಿ ಡ್ರೆಸ್ಗೆ ಮ್ಯಾಚಿಂಗ್ ಮಾಡಬಹುದಾದ ಪುಟ್ಟ ಬಾಜುಬಂಧ್ಗಳೂ, ಹಾರ, ನೆಕ್ಲೇಸ್, ಸೊಂಟದ ಪಟ್ಟಿ. ಕಿವಿಯೊಲೆ ಸೇರಿದಂತೆ ಬಾಲಕೃಷ್ಣನ ಅಲಂಕಾರಕ್ಕೆ ಬೇಕಾದಂತವು ಸೆಟ್ನಲ್ಲಿ ದೊರೆಯುತ್ತಿವೆ. ಇವು ಮೊದಲೇ ನಿಮ್ಮ ಬಳಿ ಇದ್ದಲ್ಲಿ ರಿಟೈಲ್ನಲ್ಲಿ ಏನೂ ಬೇಕಾದರೂ ಬಿಡಿಬಿಡಿಯಾಗಿ ಖರೀದಿಸಬಹುದು.
ಅತ್ಯಾಕರ್ಷಕ ಕಿರೀಟ-ಕೊಳಲು
ಎಲ್ಲದಕ್ಕಿಂತ ಹೆಚ್ಚಾಗಿ ಬೇಡಿಕೆಯಲ್ಲಿರುವುದು ಪುಟ್ಟ ಕಿರೀಟಗಳು. ಇನ್ನು ನಾನಾ ವಿನ್ಯಾಸದ ಕೊಳಲುಗಳು ಆಗಮಿಸಿವೆ. ಇವು ಸೆಟ್ನಲ್ಲಿಯೂ ದೊರೆಯುತ್ತವೆ.
- ಮಕ್ಕಳ ವಯಸ್ಸಿಗೆ ಅನುಗುಣವಾಗಿ ಡ್ರೆಸ್ಗಳು ದೊರೆಯುತ್ತವೆ.
- ಅಲಂಕಾರಿಕ ವಸ್ತುಗಳನ್ನು ಬಳಸಿದ ಮೇಲೆ ಸುರಕ್ಷಿತವಾಗಿ ತೆಗೆದಿರಿಸಿದಲ್ಲಿ ಮುಂದಿನ ವರ್ಷ ಮರು ಬಳಕೆ ಮಾಡಬಹುದು.
- ಹ್ಯಾಂಡ್ಮೇಡ್ ಕಿರೀಟ ಹಾಗೂ ಕೊಳಲು ನಾನಾ ವಿನ್ಯಾಸದಲ್ಲಿ ಬಂದಿವೆ.
- ಕೃಷ್ಣನ ಔಟ್ಫಿಟ್ ಬಾಡಿಗೆಗೂ ದೊರೆಯುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Pearl Necklace Fashion: ಜ್ಯುವೆಲರಿ ಲೋಕದಲ್ಲಿ ಟ್ರೆಂಡಿಯಾದ 3 ಶೈಲಿಯ ಪರ್ಲ್ ನೆಕ್ಲೇಸ್