ಶೀಲಾ ಸಿ. ಶೆಟ್ಟಿ, ಬೆಂಗಳೂರು
ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ವಿವಾಹಿತ ಮಹಿಳೆಯರು ರೇಷ್ಮೆ ದಾವಣಿ-ಲಂಗದ ಫ್ಯಾಷನ್‌ಗೆ (Varamahalaxmi Festival Fashion) ಸೈ ಎಂದಿದ್ದಾರೆ. ಹೌದು. ಈ ಹಬ್ಬದ ಟ್ರೆಡಿಷನಲ್ ಫ್ಯಾಷನ್‌ನಲ್ಲಿ ಇದೀಗ ನಾನಾ ವಿನ್ಯಾಸದ ಮನಮೋಹಕ ರೇಷ್ಮೆಯ ದಾವಣಿ-ಲಂಗ ಎಂಟ್ರಿ ನೀಡಿದ್ದು, ಎಲ್ಲಾ ವರ್ಗದ ಸ್ತ್ರೀಯರನ್ನು ಸೆಳೆದಿವೆ.
ಮನಮೋಹಕ ರೇಷ್ಮೆ ದಾವಣಿ-ಲಂಗ
ಶ್ರಾವಣ ಮಾಸದ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಪ್ರಮುಖವಾದದ್ದು. ಅದರಲ್ಲೂ ಹೆಣ್ಣು ಮಕ್ಕಳು ಸಂಭ್ರಮಿಸುವ ಹಬ್ಬ. ಈ ಹಬ್ಬಕ್ಕಾಗಿ ರೇಷ್ಮೆ ಸೀರೆಗಳನ್ನು ಕೊಳ್ಳುವುದು ಮೊದಲಿನಿಂದಲೂ ಇದೆ. ಕೊಂಚ ಫ್ಯಾಷೆನಬಲ್ ಆಗಿರುವವರು ಹಾಗೂ ವಿಭಿನ್ನವಾಗಿ ಬಯಸುವವರು ಅದು ಟ್ರೆಡಿಷನಲ್ ಆಗಿಯೇ ಇರಬೇಕೆಂದುಕೊಂಡವರು ದಾವಣಿ-ಲಂಗದ ಫ್ಯಾಷನ್‌ಗೆ ಸೈ ಎನ್ನುತ್ತಿದ್ದಾರೆ. ಅದು ಸಾಮಾನ್ಯ ಫ್ಯಾಬ್ರಿಕ್‌ನದ್ದಲ್ಲ. ಕಾಂಚೀವರಂ ಹಾಗೂ ಇತರೇ ಶುದ್ಧ ರೇಷ್ಮೆಯದ್ದನ್ನು ಆಯ್ಕೆ ಮಾಡುತ್ತಿದ್ದಾರೆ. ಇದು ನೋಡಲು ಸಾಂಪ್ರದಾಯಿಕ ಲುಕ್ ನೀಡುವುದರೊಂದಿಗೆ ಹಬ್ಬಕ್ಕೆ ಗ್ರ್ಯಾಂಡ್ ಆಗಿಯೂ ಕಾಣಿಸುತ್ತದೆ. ಮದುವೆಯಾಗಿರುವ ಸ್ತ್ರೀಯರು ಇತ್ತೀಚೆಗೆ ಇವನ್ನು ಹೆಚ್ಚು ಆಯ್ಕೆ ಮಾಡಲಾರಂಭಿಸಿದ್ದಾರೆ. ಇದಕ್ಕೆ ಕಾರಣ, ಇತ್ತೀಚೆಗೆ ಲಭ್ಯವಿರುವ ಮನಮೋಹಕ ಡಿಸೈನ್‌ಗಳು ಎನ್ನುತ್ತಾರೆ ಮಿಸೆಸ್ ಸೌತ್ ಇಂಡಿಯಾ (imp)2022 ಸುಚಿತ್ರಾ ವೇಣು ಗೋಪಾಲ್ .
ಟ್ರೆಂಡಿಯಾಗಿರುವ ರೇಷ್ಮೆಯ ದಾವಣಿ-ಲಂಗ
ಕಾಂಚೀವರಂ, ಧರ್ಮಾವರಂ, ಗಾರ್ಡನ್ ರೇಷ್ಮೆ, ಬಾರ್ಡರ್ ರೇಷ್ಮೆ ಸೀರೆಯ ದಾವಣಿ-ಲಂಗಗಳು ಈ ಸೀಸನ್‌ನಲ್ಲಿ ಅತಿ ಹೆಚ್ಚು ಟ್ರೆಂಡಿಯಾಗಿವೆ. ಸೆಮಿ ಸ್ಟಿಚ್‌ನಲ್ಲಿ ದೊರೆಯುವ ಇವನ್ನು ಅವರವರ ಬಾಡಿ ಫಿಟ್‌ಗೆ ಅನುಗುಣವಾಗಿ ಹೊಲೆಸಬಹುದು. ರೇಷ್ಮೆ ಸೀರೆಗಳ ಅಂಗಡಿಗಳಲ್ಲೂ ಇವು ದೊರೆಯುತ್ತಿವೆ. ಬ್ಲೌಸ್ ಹಾಗೂ ಲಂಗಕ್ಕೆ ಹಾಫ್ ಸೀರೆಯಂತೆ ಉಡಬಹುದಾದ ದಾವಣಿಯು ಸಿಗುತ್ತವೆ. ಒಟ್ಟಾರೆ ಸೆಟ್‌ನಲ್ಲಿ ದೊರೆಯುವ ಇವು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತಿವೆ ಎನ್ನುತ್ತಾರೆ ಮಾರಾಟಗಾರರು. ದುಬಾರಿ ಬೆಲೆಯ ಶುದ್ಧ ರೇಷ್ಮೆಯ ದಾವಣಿ-ಲಂಗ ಖರೀದಿಸಲು ಸಾಧ್ಯವಿಲ್ಲದವರು, ಸೆಮಿ ಸಿಲ್ಕ್‌ನಲ್ಲಿ ದೊರೆಯುವ ಸೆಟ್‌ನಲ್ಲೂ ಹೊಲೆಸಬಹುದು. ಊಹೆಗೂ ಮೀರಿದ ಡಿಸೈನ್ ಹಾಗೂ ಪ್ರಿಂಟ್ಸ್‌ನಲ್ಲಿ ಇವು ಲಭ್ಯ ಎನ್ನುತ್ತಾರೆ ಡಿಸೈನರ್ಸ್.
ವಿವಾಹಿತರ ದಾವಣಿ-ಲಂಗದ ಆಯ್ಕೆ ಹೀಗಿರಲಿ
- ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಿ.
- ಟ್ರೆಂಡಿ ಶೇಡ್ನವು ಫ್ಯಾಷೆನಬಲ್ ಆಗಿ ಕಾಣುತ್ತವೆ.
- ಬ್ಲೌಸ್ಗೆ ಬ್ಯಾಕ್ ಬಟನ್ ಇಡಿಸುವುದರಿಂದ ಲೆಹೆಂಗಾದಂತೆಯೂ ಧರಿಸಬಹುದು.
- ಮೇಕಪ್, ಹೇರ್ಸ್ಟೈಲ್ ಎಲ್ಲವೂ ಎಥ್ನಿಕ್ ಲುಕ್ಗೆ ಮ್ಯಾಚ್ ಆಗಬೇಕು.
- ಪ್ರಿಂಟೆಡ್ನವು ಅತಿ ಹೆಚ್ಚು ಟ್ರೆಂಡಿಯಾಗಿವೆ.
- ಮಾನೋಕ್ರೋಮ್ ಶೇಡ್ನವು ಟ್ರೆಂಡ್ನಲ್ಲಿಲ್ಲ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Varamahalaxmi Saree Fashion: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ಟ್ರೆಂಡಿಯಾದ 3 ಶೈಲಿಯ ರೇಷ್ಮೆ ಸೀರೆ