Site icon Vistara News

Adhika Masa 2023 : ಅಧಿಕ ಮಾಸದ ಲೆಕ್ಕಾಚಾರ ಹೇಗೆ? ಮಹತ್ವವೇನು?

adhika masa calculation

ನಾರಾಯಣ ಯಾಜಿ
ಪ್ರತೀ ಮೂರು ವರುಷಗಳಿಗೊಮ್ಮೆ ಪಂಚಾಂಗದಲ್ಲಿ ಬರುವ ಅಧಿಕ ಮಾಸದ (Adhika Masa 2023) ಕುರಿತು ಎಲ್ಲರಿಗೂ ಗೊತ್ತು. ಈ ಮಾಸವನ್ನು ಪುರುಷೋತ್ತಮ ಮಾಸವೆಂದೂ ಸಹ ಕರೆಯುತ್ತಾರೆ. ಈ ತಿಂಗಳಿನಲ್ಲಿ ಯಾವುದೇ ಶುಭಕಾರ್ಯವನ್ನು ನಡೆಸಕೂಡದು ಎನ್ನುವ ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ಇಡೀ ತಿಂಗಳು ಕಳೆದು ಹೋಗಿಬಿಡುತ್ತದೆ.

ಗ್ರೆಗೋರಿಯನ್ ಕ್ಯಾಲೇಂಡಿರನ ಪ್ರಕಾರ ನಾಲ್ಕು ವರ್ಷಗಳಿಗೊಮ್ಮೆ ಬರುವ Year Leap ಕುರಿತು ಎಲ್ಲರಿಗೂ ಅರಿವಿದೆ. ವರ್ಷವನ್ನು ನಾಲ್ಕರಿಂದ ಸಂಪೂರ್ಣವಾಗಿ ಭಾಗಿಸಿದಾಗ ಬರುವ ಇಸವಿಯ ಫೆಬ್ರುವರಿ ತಿಂಗಳಲ್ಲಿ ಇಪ್ಪತ್ತೊಂಬತ್ತು ದಿನಗಳು ಬರುತ್ತವೆ. ಉದಾಹರಣೆಗೆ 1996, 2000 ಹಾಗೇ ಮುಂದಿನ ವರ್ಷ, 2024 ರ ಫೆಬ್ರುವರಿ ತಿಂಗಳು ಅಧಿಕ ವರ್ಷದ ದಿನಗಳು. ಇನ್ನುಳಿದ ಇಸವಿಯಲ್ಲಿ ಈ ತಿಂಗಳಿಗೆ ಇಪ್ಪತ್ತೆಂಟೇ ದಿನಗಳು. ಆದರೆ ಹಿಂದೂ ಪಂಚಾಂಗದ ಪ್ರಕಾರ ಬರುವ ಅಧಿಕ ಮಾಸಕ್ಕೆ ನಿರ್ದಿಷ್ಟ ತಿಂಗಳೇನೂ ಇಲ್ಲ; ಯಾವುದೋ ತಿಂಗಳಲ್ಲಿಯೋ ಬಂದು ಹೋಗುತ್ತವೆ.

ಇದು ಹೀಗೇಕೆ ಎನ್ನುವುದರ ಹಿಂದೆ ಭಾರತೀಯರ ಖಗೋಳ ಶಾಸ್ತ್ರದ ಜ್ಞಾನಪರಂಪರೆಯೇ ಇದೆ ಎನ್ನುವುದು ಹೆಚ್ಚಿನವರಿಗೆ ಅರಿವಿಲ್ಲ. ಗ್ರಹಗಳ ಚಲನೆ ಅದರ ವಕ್ರಗತಿಯನ್ನು ಮತ್ತು ಕಣ್ಣಿಗೆ ಕಾಣುವ ಗ್ರಹಣಗಳ ಅವಧಿಯನ್ನು ನಿಖರವಾಗಿ ಲೆಕ್ಕೆಹಾಕಿದ ನಮ್ಮ ಸನಾತನಿಗಳಿಗೆ ಪಂಚಾಂಗವೆಂದರೆ ಮೂಗು ಮುಚ್ಚಿ ಕುಳಿತು ದೇವರ ಧ್ಯಾನಮಾಡುವ ಒಂದು ಸಾಧನವಲ್ಲ. ಅದು ಕಾಲದ ನಿಖರವಾದ ಅಳತೆ. ಇದನ್ನು ಅರಿಯಬೇಕಾದರೆ ಮೊದಲು ಪಂಚಾಂಗದ ಕುರಿತು ಸ್ಥೂಲವಾಗಿ ತಿಳಿದುಕೊಳ್ಳಬೇಕು.

ವಾರ, ತಿಥಿ, ನಕ್ಷತ್ರ, ಕರಣ ಮತ್ತು ಯೋಗ ಈ ಐದು ಅಂಗಗಳ ಕುರಿತು ಸ್ಪಷ್ಟವಾಗಿ ತಿಳಿಸುವುದೇ ಪಂಚಾಂಗ. ಆಧುನಿಕವಾಗಿ ಕಾಲವನ್ನು ವರ್ಷ, ತಿಂಗಳು, ಪಕ್ಷ, ವಾರ, ಘಂಟೆ, ನಿಮಿಷ, ಸೆಕೆಂಡು ಮತ್ತು ಸೆಕೆಂಡನ್ನು ವಿಭಜನೆಮಾಡುವ ವಿಧಾನದಲ್ಲಿ ಅಳೆಯುತ್ತಾರೆ. ಋಷಿಗಳು ಕಾಲವನ್ನು ಪರಮಾಣು ಅಂದರೆ ಯಾವುದನ್ನು ವಿಭಜಿಸಲಾಗದೋ ಅಲ್ಲಿಂದ ಎನ್ನುವ ಮಾನದಿಂದ ಪ್ರಾರಂಭಿಸಿ ಪರಮ ಮಹತ್ತು ಎನ್ನುವ ಕಾಲಬೇಧಗಳಿಲ್ಲದ ಸ್ಥಿತಿಯತನಕ ಅಳೆದಿರುವ ಮಾನವನ್ನು ಭಾಗವತ ವರ್ಣಿಸುತ್ತದೆ. ವಿಜ್ಞಾನ ಇದನ್ನು Infinite ಅನಂತವೆಂದು ಹೇಳಿದೆ.

ಕಾಲ ನಿರ್ಣಯಕ್ಕೆ ಸೂರ್ಯನೇ ಮೂಲ

ಭಾಗಿಸಲಾರದ ಮತ್ತು ಭಾಗಕಾರಕ್ಕೆ ಸಿಕ್ಕದೆ ನಡುವಿನ Space-ಆಕಾಶವನ್ನು ಅಳತೆಮಾಡುವ ಕ್ರಿಯೆಗೆ ಕಾಲವೆನ್ನುತ್ತಾರೆ. ಸಂಧ್ಯಾವಂದನೆಯಲ್ಲಿ ಪ್ರತೀ ನಿತ್ಯವೂ ದಿನಗಳನ್ನು ಪರಾರ್ಧದಿಂದ ತೆಗೆದುಕೊಳ್ಳುತ್ತೇವೆ. ಪರಮ ಮಹತ್ತು ಎನ್ನುವುದಕ್ಕಿಂತ ಹಿಂದಿನ ಅಳತೆ ಇದು. ನಾವು ಲೆಕ್ಕಹಾಕುವಾಗ ಎಲ್ಲಿಂದ ಮುಂದೆ ಎಣಿಕೆ ಸಾಧ್ಯವಾಗುವುದಿಲ್ಲವೋ ಅದನ್ನು “ಪರಾರ್ಧ” ಎನ್ನುತ್ತಾರೆ. ಈಗ ನಡೆಯುತ್ತಿರುವ ಕಾಲ ಬ್ರಹ್ಮನ ಹಗಲಿನ ಎರಡನೆಯ ಭಾಗ. ಈ ಕಾಲಮಾನವನ್ನು ನಮ್ಮ ಪರಿಮಿತಿಯಲ್ಲಿ ಅಳೆಯಬೇಕಾದರೆ ಅದಕ್ಕೆ ಲಭ್ಯತೆ ಇರುವ ವಸ್ತು ಬೇಕು. ಈ ವಸ್ತು ತನ್ನ ಪಥದಲ್ಲಿ ವ್ಯತ್ಯಾಸ ಮಾಡಿಕೊಳ್ಳಕೂಡದು. ಅದಕ್ಕೆ ಸಿಕ್ಕ ವಸ್ತುವೇ ‘ಸೂರ್ಯ’.

ಸೂರ್ಯ ದಿನ ರಾತ್ರಿಗಳನ್ನು ಒಂದು ನಿರ್ದಿಷ್ಟ ಸಮಯಕ್ಕೆ ಉಂಟುಮಾಡುತ್ತಾನೆ. ಅದನ್ನು ಅರ್ಥಮಾಡಿಕೊಂಡ ಋಷಿಮುನಿಗಳು ಆತನನ್ನು ಕೇಂದ್ರವನ್ನಾಗಿಸಿಕೊಂಡರು. ಎರಡನೆಯ ಬಾನಿನ ಕೌತುಕವೇ ಚಂದ್ರ. ಮತ್ತೆ ನಕ್ಷತ್ರ, ಹನ್ನೆರೆಡು ರಾಶಿಗಳು… ಹೀಗೆ ಹಲವಾರು ವಿಧಾನಗಳು ಇದ್ದರೂ ಮುಖ್ಯವಾಗಿ ಕಣ್ಣಿಗೆ ಕಾಣುವ ಸೂರ್ಯ ಮತ್ತು ಚಂದ್ರನ ಚಲನೆಯನ್ನು ಅನುಸರಿಸಿ ವಾರ/ದಿನಗಳಿಂದ ಪ್ರಾರಂಭಿಸಿ ವರ್ಷಗಳ ವರೆಗೆ ಅಳೆತೆಮಾಡುವ ವಿಧಾನವನ್ನು ಸೌರಮಾನ ಮತ್ತು ಚಾಂದ್ರಮಾನ ಎನ್ನುವ ರೀತಿಯಲ್ಲಿ ವಿಭಾಗಿಸಲಾಗಿದೆ.

ಭೂಮಿ ಸೂರ್ಯನತ್ತ ತಿರುಗಲು ತೆಗೆದುಕೊಳ್ಳುವ ಅವಧಿ 365 ದಿವಸ 5 ತಾಸು 59 ನಿಮಿಷ 16 ಸೆಕೆಂಡುಗಳು. ಇದನ್ನು 365.25 ದಿವಸ ಎಂದು ಇಟ್ಟುಕೊಂಡರು. ಒಂದು ವರುಷಕ್ಕೆ ಸುಮಾರು ಆರು ಗಂಟೆಯಂತೆ ನಾಲ್ಕು ವರ್ಷಗಳಾದಾಗ ಒಂದು ದಿನಗಳ ವ್ಯತ್ಯಾಸವಾಗಿಬಿಡುತ್ತದೆ. ಅದನ್ನು ಸರಿದೂಗಿಸಲು ಗ್ರೆಗೋರಿಯನ್ ಪಂಚಾಂಗದಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಅಧಿಕಮಾಸವಾಗಿ ಒಂದು ದಿನವನ್ನು ಹೆಚ್ಚಿಗೆ ಮಾಡಿದರು. ಈ ಲೆಕ್ಕಾಚಾರದ ಹಿಂದೆ ರೋಚಕ ಇತಿಹಾಸವೇ ಇದೆ. ಇಂದು ನಾವು ಕಾಣುತ್ತಿರುವ ಕ್ಯಾಲೆಂಡರಿನ ಸೂತ್ರಕ್ಕೆ ಹದಿನಾರನೇಯ ಶತಮಾನದವರೆಗೆ ಕಾಯಬೇಕಾಯಿತು.

ಪೋಪ್ ಗ್ರೆಗೋರಿಯನ್ ಪೋಪರಿಗಿರುವ ವಿಶೇಷ ಪರಮಾಧಿಕಾರ “ಪಾಪಲ್ ಬುಲ್ಲ್” (Papal bull)ದ ಮೂಲಕ 1582ನೆಯ ಇಸ್ವಿ ಫೆಬ್ರವರಿ 24ರಂದು ಪರಮಾಯಿಶಿಯನ್ನು ಹೊರಡಿಸಿ ರೂಢಿಗೆ ತಂದಿರುವುದೆನ್ನುವುದನ್ನು ಗಮನಿಸಬೇಕು. ವರ್ಷಗಳನ್ನು ಅಳೆಯಲು ಸೌರಮಾನ ಪದ್ಧತಿ ಸುಲಭವಾದರೆ ತಿಂಗಳನ್ನು ಅಳೆಯಲು ನಮಗೆ ಸಿಗುವ ಸಾಧನ ಚಂದ್ರ. ಪ್ರತೀ ತಿಂಗಳೂ ಕಣ್ಣಿಗೆ ಕಾಣುವಂತೆ ಅಮಾವಾಸ್ಯೆ ಮತ್ತು ಹುಣ್ಣಿಮೆಗಳು ಆಗುತ್ತಲೇ ಇರುತ್ತವೆ. ಮತ್ತು ಪ್ರತಿ ದಿನವೂ ಆತ ಬೇರೆ ಬೇರೆ ಸಮಯಕ್ಕೆ ಉದಯಿಸಿ ಅಸ್ತಮಿಸುತ್ತಾನೆ. (ಭಾರತೀಯ ಕಾಲಗಣನೆಯಲ್ಲಿ ಸೂರ್ಯನ ಸುತ್ತಲೇ ಎಲ್ಲವೂ ಸುತ್ತುತ್ತವೆ ಎನ್ನುವ ಸ್ಪಷ್ಟವಾದ ಉಲ್ಲೇಖಗಳಿವೆ. ಆದರೆ ಲೆಕ್ಕಾಚಾರಕ್ಕೆ ಅನುಕೂಲವಾಗಲು ಸೂರ್ಯನ ಚಲನೆಯನ್ನು ಭೂಮಿಯ ಜಾಗದಲ್ಲಿಟ್ಟರು ಅಷ್ಟೆ.) ಹೀಗೆ ಲೆಕ್ಕಹಾಕುವಾಗ ಸುಮಾರು ಮೂವತ್ತು ದಿನಗಳಿಗೆ ಚಂದ್ರ ಒಂದು ಸುತ್ತು ಬರುತ್ತಾನೆ ಎನ್ನುವುದನ್ನು ಕಂಡುಕೊಂಡರು.

ಸೌರಮಾನ – ಚಂದ್ರಮಾನ

ಸೂರ್ಯ(ಭೂಮಿ) ಖಗೋಲದ ಹನ್ನೆರಡು ರಾಶಿಗಳಲ್ಲಿ ತಿರುಗುವ ಅವಧಿಯನ್ನು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು ಮಕರ, ಕುಂಭ ಮತ್ತು ಮೀನ ಹೀಗೆ ಹನ್ನೆರಡು ತಿಂಗಳಾಗಿ ವಿಭಾಗಿಸಿದೆ. (ಇದು ಪ್ರಾಚೀನ ರೋಮನ್ನಿನಲ್ಲಿಯೂ ಇತ್ತು). ಇದನ್ನು ಸೌರಮಾನ ಪದ್ಧತಿ ಎನ್ನುತ್ತಾರೆ. ಅದೇ ರೀತಿ ಚಂದ್ರ ಸಹ ಹನ್ನೆರಡು ತಿಂಗಳಲ್ಲಿ ಸುತ್ತಿಬರುವ ತಿಂಗಳನ್ನು ಚೈತ್ರ ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತೀಕ, ಮಾರ್ಗಶೀರ್ಷ, ಪುಷ್ಯ. ಮಾಘ ಮತ್ತು ಪಾಲ್ಗುಣಗಳೆನ್ನುವ ಹನ್ನೆರಡು ಮಾಸಗಳನ್ನಾಗಿ ಹೆಸರಿಸಲಾಯಿತು. ಇದು ಚಾಂದ್ರಮಾನ ಪದ್ಧತಿ. ಇವು ಅಮಾವಾಸ್ಯೆಯಿಂದ ಆರಂಭಿಸಿ ಅಮಾವಾಸ್ಯೆಯತನಕದ ದಿನಗಳು.

ತುಂಬಾ ಮಹತ್ವದ ಅಂಶವೆಂದರೆ ಕಾಲ ಗಣನೆಯಲ್ಲಿ ಭಾರತೀಯ ಪದ್ಧತಿ ಇರುವುದು ಸೂರ್ಯೋದಯದಿಂದ ಸೂರ್ಯೋದಯದ ತನಕ. ಪಾಶ್ಚಿಮಾತ್ಯರು ಕಾಲವನ್ನು ಮಧ್ಯರಾತ್ರಿಯಿಂದ ಮಧ್ಯರಾತ್ರಿಯ ತನಕ ಗಣಿಸುತ್ತಾರೆ. ಭೂಮಿಯ ದೀರ್ಘ ವೃತ್ತಾಕಾರದ ಪರಿಧಿಯ ಕಾರಣದಿಂದ ಋತುಮಾನಗಳುಂಟಾಗುತ್ತವೆ. ಹಾಗಾಗಿ ಪ್ರತೀ ದಿನವೂ ಅಕ್ಷಾಂಶ ಮತ್ತು ರೇಖಾಂಶಕ್ಕನುಗುಣವಾಗಿ ಸೂರ್ಯ ಮೂಡುವ ಸಮಯದಲ್ಲಿಯೂ ಬದಲಾವಣೆಯಾಗುತ್ತಿರುತ್ತದೆ. ಅದೇ ಕಾಲಕ್ಕೆ ಚಂದ್ರನೂ ಸಹ ಮೂಡುವ ಸಮಯದಲ್ಲಿ ಆಗುವ ಸಮಯದ ಬದಲಾವಣೆಯನ್ನು ಗಣನೆಗೆ ತೆಗೆದುಕೊಂಡು ಅದನ್ನು ಮೂವತ್ತು ದಿನಗಳಿಗೊಂದರಂತೆ ಮೂವತ್ತು ತಿಥಿಗಳನ್ನಾಗಿ ವಿಭಾಗಿಸಲಾಯಿತು. ಸೂರ್ಯ ಚಂದ್ರರು ಮೂಡುವ ರೇಖಾಂಶದ ವ್ಯತ್ಯಾಸವನ್ನು ತಿಥಿಯೆನ್ನುತ್ತಾರೆ.

ಒಂದು ನಿರ್ದಿಷ್ಟ ಸ್ಠಳದಲ್ಲಿ ಯಾವ ತಿಥಿ ಬರುತ್ತದೆ ಎನ್ನುವುದನ್ನು ಆಯಾ ಪ್ರದೇಶದ ಸೂರ್ಯ ಮತ್ತು ಚಂದ್ರರ ರೇಖಾಂಶದ ವ್ಯತ್ಯಾಸವನ್ನು 12 ಡಿಗ್ರಿಯಿಂದ ಭಾಗಿಸುವ ಮೂಲಕ ಗುರುತಿಸುತ್ತಾರೆ. ಸರಳವಾಗಿ ಹೇಳಬೇಕೆಂದರೆ ಚಂದ್ರ ಸೂರ್ಯನಿಂದ ಎಷ್ಟು ಡಿಗ್ರಿಯಷ್ಟು ದೂರದಲ್ಲಿದ್ದಾನೆ ಎನ್ನುವುದನ್ನು ಆಯಾ ದಿನದ/ಹೊತ್ತಿನ ತಿಥಿ ತಿಳಿಸುತ್ತದೆ. (ಇವು ಕೇವಲ ಸ್ಥೂಲ ಪರಿಚಯ; ಲೆಕ್ಕಾಚಾರವನ್ನು ಇಲ್ಲಿ ಕೊಟ್ಟಿಲ್ಲ) ಚಂದ್ರನ ತಿರುಗುವ ಗತಿ ಸೂರ್ಯನಿಂದಲೂ ತುಂಬಾ ವೇಗವಾಗಿರುವ ಕಾರಣ ಆತ ಪರಿಭ್ರಮಣ ಮಾಡುವಾಗ ಸೂರ್ಯನ ಸಂಗಡ ಅಥವಾ ಆತನಿಂದ 180 ಡಿಗ್ರಿ ದೂರದಲ್ಲಿಯ ತನಕ ಇರುತ್ತಾನೆ. ಜೊತೆಯಲ್ಲಿದ್ದಾಗ ಅಮಾವಾಸ್ಯೆ ಮತ್ತು ದೂರದಲ್ಲಿ ಇದ್ದಾಗ ಹುಣ್ಣಿಮೆ ಆಗುತ್ತದೆ. ಉಳಿದ ತಿಥಿಗಳು ಈ ನಡುವಿನ ದಿನಗಳಲ್ಲಿ ಬರುತ್ತವೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಚಾಂದ್ರಮಾನ ತಿಂಗಳ ಲೆಕ್ಕಾಚಾರ ಹೇಗೆ?

ಚಂದ್ರ ಭೂಮಿಯನ್ನು ಸುತ್ತಲು ತೆಗೆದುಕೊಳ್ಳುವ ಅವಧಿ 29.5306 ದಿನಗಳು; ಇದನ್ನು ಮೂವತ್ತು ತಿಥಿಗಳನ್ನಾಗಿ ವಿಭಜಿಸಲಾಯಿತು.
ಚಾಂದ್ರಮಾನ ವರ್ಷ :- 29.5306 X 12 = 354.3672 ದಿನಗಳು.
ಇಲ್ಲಿಗೆ ಸೌರಮಾನ ವರ್ಷಕ್ಕೂ ಮತ್ತು ಚಾಂದ್ರಮಾನ ವರ್ಷಕ್ಕೂ ಪ್ರತೀ ವರ್ಷದಲ್ಲಿಸುಮಾರು ಹನ್ನೊಂದು ದಿನಗಳ ಅಂತರವಿದೆ. ಕಾಲಮಾನದ ನಿಖರ ಅಧ್ಯಯನಕ್ಕೆ ಸೂರ್ಯ ಅಗತ್ಯವಿರುವ ಕಾರಣದಿಂದಾಗಿ ಮೂರು ವರ್ಷಗಳಿಗೊಮ್ಮೆ ಒಂದು ತಿಂಗಳನ್ನು ಪಂಚಾಂಗದಲ್ಲಿ ಹೆಚ್ಚಿಗೆ ಸೇರಿಸಿ ಅದನ್ನು ಅಧಿಕಮಾಸವೆಂದು ಕರೆಯುವ ವಿಧಾನವನ್ನು ಅನುಸರಿಸಿದರು.

ವಾಶಿಷ್ಠ ಸಿದ್ಧಾಂತದ ಪ್ರಕಾರ ಅಧಿಕ ಮಾಸವು ಪ್ರತೀ 32 ತಿಂಗಳು 16 ದಿವಸ 8 ಘಟಿಯ ಅಂತರದಲ್ಲಿ ಬರುತ್ತದೆ. ಒಂದು ತಾಸಿಗೆ 2.5 ಘಟಿ. ಒಂದು ದಿನಕ್ಕೆ ಅರವತ್ತು ಘಟಿಗಳು. ಹಿಂದಿನ ಅಧಿಕ ಮಾಸ 2020 ರಲ್ಲಿ ಆಶ್ವೀಜ ಮಾಸದಲ್ಲಿ ( 18 ಸೆಪ್ಟೆಂಬರ್ 2020 ರಿಂದ ಪ್ರಾರಂಬವಾಗಿ 16 ಅಕ್ಟೋಬರ್ 2020 ರತನಕ) ಬಂದಿತ್ತು ಈ ಸಂವತ್ಸರದಲ್ಲಿ ಶ್ರಾವಣ ಮಾಸವನ್ನು ಅಧಿಕ ಮಾಸವೆಂದು ಕರೆಯಲಾಗಿದೆ. ಈ ವೆತ್ಯಾಸ ಯಾಕೆ, ನಮ್ಮಲ್ಲಿಯೂ ನಿರ್ಧಿಷ್ಟ ತಿಂಗಳನ್ನು ಅಧಿಕಮಾಸವೆಂದು ಯಾಕೆ ಗುರುತಿಸಿಲ್ಲ ವೆನ್ನುವುದಕ್ಕೆ ಖಗೋಲ ಶಾಸ್ತ್ರದ ಲೆಕ್ಕಾಚಾರದ ಹಿನ್ನೆಲೆಯಿದೆ.

ಕಾಲ ಗಣನೆಯಲ್ಲಿ ಅನುಕೂಲವಾಗಲಿ ಎಂದು ಚಂದ್ರನ ಗತಿಯನ್ನು ಅನುಸರಿಸಿ ತಿಥಿ ವಾರ ನಕ್ಷತ್ರಗಳನ್ನು ಅನುಸರಿಸಿದರೂ ಅಂತಿಮವಾಗಿ ಇವೆಲ್ಲ ಸೂರ್ಯನ ಚಲನೆಗೆ ಹೊಂದಿಸಿಕೊಳ್ಳುವುದನ್ನು ಈಗಾಗಲೇ ತಿಳಿದಿದ್ದೀವೆ. ಹಾಗಾಗಿ ಪಂಚಾಂಗದಲ್ಲಿ ಚಂದ್ರಮಾನದ ತಿಂಗಳಾದ ಚೈತ್ರ, ವೈಶಾಖಗಳಂತೆ ಸೌರಮಾನದ ತಿಂಗಳಾದ ಮೇಷ ವೃಷಭ ಮಾಸಗಳನ್ನೂ ಅನುಸರಿಸುತ್ತಾರೆ. ಈ ಕಾರಣದಿಂದಲೇ ಯುಗಾದಿ ಆಚರಣೆಯಲ್ಲಿ ಚಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ ಎನ್ನುವ ಎರಡು ಆಚರಣೆಗಳನ್ನು ಗಮನಿಸಬಹುದು.

ಅಮಾವಾಸ್ಯೆಯಿಂದ ಅಮಾವಾಸ್ಯೆಯ ತನಕ ಹೇಗೆ ಚಂದ್ರಮಾನ ತಿಂಗಳವೋ ಅದೇ ರೀತಿ ಸಂಕ್ರಾಂತಿಯಿಂದ ಸಂಕ್ರಾಂತಿಯ ತನಕ ಸೌರಮಾನದ ತಿಂಗಳು ಬರುತ್ತವೆ. (ಈ ವರ್ಷ ಚಾಂದ್ರಮಾನ ಯುಗಾದಿ ಮಾರ್ಚ್ 22 ಕ್ಕೆ ಬಂದರೆ ಸೌರಮಾನ ಯುಗಾದಿ ಎಪ್ರಿಲ್ 15 ಕ್ಕೆ ಬಂದಿದೆ). ಭೂಮಿಯನ್ನು ಪ್ರಮುಖವಾಗಿ ಮೇಷದಿಂದ ಮೀನದ ತನಕ ಹನ್ನೆರಡು ಅಕ್ಷಾಂಶಗಳನ್ನಾಗಿ ವಿಭಜಿಸಿದ್ದಾರೆ. ಪೃಥ್ವಿಯ ದೀರ್ಘ ವೃತ್ತಾಕಾರದ ಚಲನೆಯಿಂದಾಗಿ ಋತುಗಳ ಬದಲಾವಣೆಯಾಗುತ್ತದೆ ಎನ್ನುವ ವಿಷಯ ತಿಳಿದಿದೆ. ಸೂರ್ಯ ತಿಂಗಳಿಗೊಮ್ಮೆ ಒಂದು ರಾಶಿಯನ್ನು ಬದಲಿಸುತ್ತಾನೆ. ಇದಕ್ಕೇ ಸಂಕ್ರಾಂತಿ ಎಂದು ಹೆಸರು. ಹೀಗೆ ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಒಂದು ವರ್ಷದಲ್ಲಿ 12 ಸಂಕ್ರಾಂತಿಗಳು ಆಗುತ್ತವೆ.

ಚೈತ್ರ ಮಾಸದಿಂದ ಫಾಲ್ಗುಣ ಮಾಸದವರೆಗೆ ಪ್ರತಿಯೊಂದು ಮಾಸದಲ್ಲಿ ಒಂದು ಸಂಕ್ರಮಣ ಇರುತ್ತದೆ. ಆದರೆ 32.5 ತಿಂಗಳಾದ ಮೇಲೆ 36ನೆಯ ತಿಂಗಳೊಳಗೆ ಬರುವ ಯಾವುದೋ ಮಾಸದಲ್ಲಿ ಸಂಕ್ರಾಂತಿಯೇ ಇರುವುದಿಲ್ಲ. ಹಿಂದಿನ ತಿಂಗಳಲ್ಲಿ ಅಮಾವಾಸ್ಯೆಯ ದಿನ ಸಂಕ್ರಾಂತಿ ಇರುತ್ತದೆ. ಮತ್ತು ಮುಂದಿನ ತಿಂಗಳಲ್ಲಿ ಪ್ರತಿಪದೆಗೆ ಸಂಕ್ರಾಂತಿ ಇರುತ್ತದೆ. ಯಾವ ತಿಂಗಳಲ್ಲಿ ಸಂಕ್ರಾಂತಿ ಇರುವುದಿಲ್ಲವೋ ಆ ತಿಂಗಳನ್ನು ಅಧಿಕ ಮಾಸವೆಂದು ಕರೆಯುತ್ತಾರೆ. ಈ ವರ್ಷ ಆಷಾಢ ಕಳೆದಮೇಲೆ ಬರುವ ಪ್ರತಿಪದೆಯಿಂದ ಅಮಾವಾಸ್ಯೆಯ(ತಾ. 18/07/2023 ರಿಂದ 17/08/2023) ನಡುವೆ ಸಂಕ್ರಾಂತಿ ಇಲ್ಲ. ಅದು ಶ್ರಾವಣ ಮಾಸದ ಹಿಂದಿನ ಮಾಸವಾಗಿರುವುದರಿಂದ ಅದನ್ನು ಅಧಿಕ ಶ್ರಾವಣವೆಂದು ಕರೆದಿದ್ದಾರೆ. ಅದಕ್ಕೂ ಮುಂದಿನ ತಿಂಗಳನ್ನು ನಿಜ ಶ್ರಾವಣವೆಂದು ಕರೆದಿದ್ದಾರೆ. ಮಹತ್ವದ ಸಂಗತಿಯೆಂದರೆ ಈ ಅಧಿಕ ಮಾಸವು ಮಾರ್ಗಶೀರ್ಷದಿಂದ ಮಾಘ ಮಾಸದ ತನಕ ಬರುವುದಿಲ್ಲ. ಕಾರ್ತೀಕ ಮಾಸವನ್ನೂ ಇದಕ್ಕೆ ಸೇರಿಸಬಹುದು. ಸುಮಾರು 250 ವರ್ಷಗಳಿಗೊಮ್ಮೆ ಕಾರ್ತೀಕ ಮಾಸದಲ್ಲಿ ಅಧಿಕಮಾಸ ಬರುತ್ತದೆ. 1963 ರಲ್ಲಿಯೊಮ್ಮೆ ಕಾರ್ತೀಕಮಾಸದಲ್ಲಿ ಅಧಿಕ ಮಾಸವಿತ್ತು.

ಕ್ಷಯಮಾಸವೂ ಉಂಟು!

ಅಧಿಕ ಮಾಸವಿರುವಂತೆಯೇ ಒಮ್ಮೆಮ್ಮೆ ಕ್ಷಯಮಾಸವೂ ಬರುತ್ತದೆ. ಅಂದರೆ ಯಾವ ತಿಂಗಳಲ್ಲಿಯಾದರೂ ಎರಡು ಅಮಾವಾಸ್ಯೆಯ ನಡುವೆ ಎರಡು ಸಂಕ್ರಾಂತಿ ಬರುವುದುಂಟು. ಸಂಕ್ರಾಂತಿಯ ಬಿಂದು ಬರುವ ಸ್ವಲ್ಪ ಮೊದಲು ಅಮಾವಾಸ್ಯೆ ಮುಕ್ತಾಯವಾದರೆ ಆ ತಿಂಗಳನ್ನು ಕ್ಷಯಮಾಸವೆನ್ನುತ್ತಾರೆ.

ಕಾರ್ತೀಕ ಮಾಸದಿಂದ ಮಾಘಮಾಸಗಳಲ್ಲಿ ಸೌರ ಮಾಸವು (ನವಂಬರದಿಂದ ಫೆಬ್ರುವರಿಯ ತನಕ) ಚಾಂದ್ರಮಾನಕ್ಕಿಂತ ಸ್ವಲ್ಪ ಕಡಿಮೆ ಅವಧಿಯದಾಗಿರುತ್ತದೆ. ಅದಕ್ಕಾಗಿಯೇ ಅಧಿಕಮಾಸಗಳು ಈ ತಿಂಗಳಲ್ಲಿ ಬರುವುದಿಲ್ಲ. ಸುಮಾರು 141 ವರ್ಷಗಳಿಗೊಮ್ಮೆ ಕ್ಷಯಮಾಸವು ಬರುತ್ತದೆ. ಕೊನೆಯದಾಗಿ 1982-83 ರಲ್ಲಿ ಮಾಘ ಮಾಸದಲ್ಲಿ ಕ್ಷಯ ಮಾಸ ಬಂದಿತ್ತು. ಅಂತಹ ವರ್ಷದಲ್ಲಿ ಎರಡು ಅಧಿಕ ಮಾಸಗಳು ಬರುತ್ತವೆ. ಮೊದಲನೆಯದು ಕ್ಷಯಮಾಸಕ್ಕಿಂತ ಎರಡು ಮೂರು ತಿಂಗಳು ಮೊದಲು, ಅದನ್ನು ಸಂಸರ್ಪ ಮಾಸವೆನ್ನುತ್ತಾರೆ. ಇನ್ನೊಂದನ್ನು ಮಲಿಮ್ಲಚ ಮಾಸವೆನ್ನುತ್ತಾರೆ.

ಇದನ್ನೂ ಓದಿ : ಧವಳ ಧಾರಿಣಿ ಅಂಕಣ: ಗುರುಶಿಷ್ಯ ಪರಂಪರೆ: ತತ್ತ್ವದರ್ಶನದ ಹಾದಿಯನ್ನು ತೋರಿಸುವ ಜ್ಞಾನದ ಬೆಳಕು

1982 ರ ಆಶ್ವೀಜ ಮಾಸ ಮೊದಲ ಅಧಿಕ ಮಾಸವಾದರೆ ಇನ್ನೊಂದು ಪಾಲ್ಗುಣ ಮಾಸ ಅಧಿಕಮಾಸವಾಗಿತ್ತು. ಸಂಕ್ಷಿಪ್ತವಾಗಿ ವಿವರಿಸಬೇಕೆಂದರೆ ಅಧಿಕ ಮಾಸವೆಂದರೆ ಸಂಕಾಂತಿ ರಹಿತ ಚಾಂದ್ರಮಾನ ಮಾಸ. ಕ್ಷಯ ಮಾಸವೆಂದರೆ ಎರಡು ಸಂಕ್ರಾಂತಿಗಳು ಒಂದು ಚಾಂದ್ರಮಾನ ಮಾಸದಲ್ಲಿ ಬರುವುದು.

ಅಧಿಕ ಮಾಸದಲ್ಲಿ ದೇವರ ಆರಾಧನೆಯ ಜೊತೆಗೆ ನಮ್ಮ ಪ್ರಾಚೀನ ಋಷಿಗಳ ಖಗೋಳ ಜ್ಞಾನಕ್ಕೂ ಗೌರವವನ್ನು ಸಲ್ಲಿಸೋಣ.

– ಲೇಖಕರು ಯಕ್ಷಗಾನ ಅರ್ಥಧಾರಿ ಮತ್ತು ವಿಮರ್ಶಕ

Exit mobile version