Site icon Vistara News

Adhika Masa 2023 : ಅಧಿಕಮಾಸದಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ!

adhika masa 2023

ಶೋಭಕೃತ್‌ ನಾಮ ಸಂವತ್ಸರದಲ್ಲಿ 12 ಮಾಸಗಳಿಗೆ ಬದಲಾಗಿ 13 ಮಾಸವಿದೆ. ಹೌದು ಈ ಸಂವತ್ಸರ ಅಧಿಕ ಮಾಸವಿರುವ ಸಂವತ್ಸರ. ಹೀಗಾಗಿಯೇ ಹಬ್ಬ-ಹರಿದಿನಗಳ ಮಾಸ ಎಂದೇ ಹೆಸರು ಪಡೆದಿರುವ ಶ್ರಾವಣ ಮಾಸವು ಎರಡು ಇರಲಿದೆ. ಒಂದು ಅಧಿಕ ಮಾಸವಾದರೆ ಮತ್ತೊಂದು ನಿಜ ಶ್ರಾವಣ. ನಿಜ ಶ್ರಾವಣದಲ್ಲಿ ಎಂದಿನಂತೆ ಹಬ್ಬಗಳು, ವ್ರತಾಚರಣೆ ನಡೆಯಲಿದೆ. ಅಧಿಕ ಶ್ರಾವಣದಲ್ಲಿ ಕೆಲ ಆಚರಣೆಗಳಿಗೆ ನಿಷೇಧವಿದೆ. ಜು.18 ರಿಂದ ಅಧಿಕ ಶ್ರಾವಣ (Adhika Masa 2023) ಆರಂಭವಾಗುತ್ತಿದೆ.

ಚಾಂದ್ರೆ ಮಾಸೋ ಹ್ಯಸಂಕ್ರಾಂತೋ ಮಲಮಾಸಃ ಪ್ರಕೀರ್ತಿತಃ| ಸ್ಮೃತಿಮುಕ್ತಾವಳಿಯ ವಾಕ್ಯದಂತೆ
ಯಾವ ಚಾಂದ್ರಮಾಸದಲ್ಲಿ ಒಂದೂ ಸಂಕ್ರಮಣವೂ ಸಂಭವಿಸುವುದಿಲ್ಲವೋ ಅದಕ್ಕೆ ಅಧಿಕಮಾಸ ಅಥವಾ ಮಲಮಾಸ ಎಂದು ಹೆಸರು. ಸಾಧರಣವಾಗಿ ಒಂದು ವರ್ಷಕ್ಕೆ ಹನ್ನೆರಡು ತಿಂಗಳುಗಳೇ ಇದ್ದರೂ ಅಧಿಕಮಾಸ ಬಂದಾಗ ವರ್ಷಕ್ಕೆ ಹದಿಮೂರು ತಿಂಗಳಾಗುತ್ತವೆ ಅಧಿಕಮಾಸವು ಹದಿಮೂರನೆಯ ತಿಂಗಳು ಆಗುತ್ತದೆ. ಅಧಿಕ ಮಾಸವನ್ನು ಮಲ ಮಾಸ ಅಥವಾ ಪುರುಷೋತ್ತಮ ಮಾಸ ಎಂದೂ ಕರೆಯಲಾಗುತ್ತದೆ.

ಯಸ್ಮಿನ್ ಮಾಸೇ ನ ಸಂಕ್ರಾಂತಿಃ ಸಂಕ್ರಾಂತಿ ದ್ವಯಮೇವ ವಾ |
ಮಲಮಾಸಕ್ಷಯೌ ಜ್ಞೇಯೌ ಸರ್ವಧರ್ಮ ವಿವರ್ಜಿತೌ ||

ಯಾವ ತಿಂಗಳಿನಲ್ಲಿ ರವಿಸಂಕ್ರಾಂತಿ ಇರುವುದಿಲ್ಲವೋ ಅದು ಅಧಿಕಮಾಸ; ಎರಡು ರವಿ ಸಂಕ್ರಮಣಗಳು ಬಂದರೆ ಅದು ಕ್ಷಯಮಾಸ ಎಂದು ಭವಿಷ್ಯೋತ್ತರ ಪುರಾಣದಲ್ಲಿ ಹೇಳಲಾಗಿದೆ.

ಪವಿತ್ರವಾದ ಮಾಸ

ಸರಾಸರಿ 33 ತಿಂಗಳಿಗೊಮ್ಮೆ ಬರುವ ಅಧಿಕಮಾಸವು ಬಹಳ ಮಹತ್ವವಾದುದು ಮತ್ತು ಪವಿತ್ರವಾದ ಮಾಸವಾಗಿದ್ದು, ದೇವರ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾದ ಸಮಯವಾಗಿದೆ. ಪುರುಷೋತ್ತಮರೂಪಿ ಪರಮಾತ್ಮನು ಈ ಮಾಸದ ನಿಯಾಮಕನಾದುದರಿಂದ ಪುರುಷೋತ್ತಮ ಮಾಸ ಎಂದೂ, ಅನೇಕ ಮಂಗಳಕಾರ್ಯಗಳಿಗೆ ನಿಷಿದ್ಧವಾದ ಈ ಮಾಸವು ಮಲಮಾಸವೆಂದು ಕರೆಯಲ್ಪಡುತ್ತದೆ.

ಹಿಂದೂ ಪಂಚಾಂಗದ ಪ್ರಕಾರ ಅಧಿಕ ಮಾಸವು ಮೂರು ವರ್ಷಗಳಿಗೊಮ್ಮೆ ಬರುತ್ತದೆ. ಸೌರ ವರ್ಷದಲ್ಲಿ 365 ದಿನ ಮತ್ತು 6 ಗಂಟೆಗಳಿರುತ್ತವೆ. ಅದೇ ಚಂದ್ರ ವರ್ಷದಲ್ಲಿ 354 ದಿನಗಳಿರುತ್ತದೆ. ಎರಡು ವರ್ಷಗಳ ನಡುವೆ ಹನ್ನೊಂದು ದಿನಗಳ ವ್ಯತ್ಯಾಸ ಬರಲಿದೆ. ಹಾಗಾಗಿ ಈ ಅಂತರವನ್ನು ಸರಿದೂಗಿಸುವ ಸಲುವಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಅಧಿಕ ಮಾಸ ಬರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಎಲ್ಲಿಯವರೆಗೆ ಅಧಿಕ ಮಾಸ?

2023ರ ಜುಲೈ 18ರಂದು ಅಧಿಕ ಮಾಸ ಆರಂಭವಾಗಲಿದ್ದು, ಆಗಸ್ಟ್ 16ಕ್ಕೆ ಮುಕ್ತಾಯಗೊಳ್ಳಲಿದೆ. ಅಧಿಕ ಮಾಸವು ವಿಷ್ಣುವಿನ ಆರಾಧನೆಗೆ ಅತ್ಯಂತ ಶ್ರೇಷ್ಠ ಮಾಸವಾಗಿದೆ.

ಅಧಿಕ ಮಾಸವು ದೇವರ ಪೂಜೆ, ಭಜನೆ, ಕೀರ್ತನೆ, ಪಾರಾಯಣಗಳಿಗೆ ಪ್ರಶಸ್ತವಾದ ಮಾಸವಾಗಿದೆ. ಧಾರ್ಮಿಕ ಕಾರ್ಯಗಳಿಗೆ ಈ ಮಾಸದಲ್ಲಿ ಹೆಚ್ಚಿನ ಒತ್ತನ್ನು ನೀಡಲಾಗುತ್ತದೆ. ಅಧಿಕ ಮಾಸದಲ್ಲಿ ಮಾಡಿದ ದೇವರ ಕಾರ್ಯಗಳು ಮೋಕ್ಷಕ್ಕೆ ದಾರಿ ಮಾಡಿಕೊಡಲಿದೆ. ಹಾಗಾಗಿ ಈ ಮಾಸದಲ್ಲಿ ಹೆಚ್ಚಿನ ದೈವೋಪಾಸನೆ ಮಾಡುವುದು ಒಳಿತು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಅಧಿಕಮಾಸದಲ್ಲಿ ಈ ವ್ರತಗಳನ್ನು ಆಚರಿಸಬಹುದು;
1) ಉಪವಾಸ ವ್ರತ, ಏಕಭುಕ್ತ, ನಕ್ತಭೋಜನ, ಅಯಾಚಿತ, ಧಾರಣ ಪಾರಣ ಈ ಪ್ರಕಾರ ಐದು ವ್ರತಗಳಲ್ಲಿ ಒಂದೊಂದನ್ನು ಒಂದು ತಿಂಗಳು ಪೂರ್ತಿ ಮಾಡುವುದರಿಂದ ವಿಶೇಷ ಪುಣ್ಯಪ್ರಾಪ್ತಿ ಇದೆ.
2) ಒಂದು ತಿಂಗಳು ಪ್ರತಿದಿನ ತಾಂಬೂಲದಾನದಿಂದ ಸೌಭಾಗ್ಯಪ್ರಾಪ್ತಿಯಾಗಲಿದೆ.
3) ಒಂದು ತಿಂಗಳು ಪ್ರತಿದಿನ ದೇವರ ಹಾಗು ಗುರುಗಳ ಸನ್ನಿಧಿಯಲ್ಲಿ ಅಖಂಡದೀಪದಾನದಿಂದ ಲಕ್ಷ್ಮೀ ಪ್ರಾಪ್ತಿಯಾಗಲಿದೆ.
4) ಪ್ರತೀದಿನ ಗಂಗಾ ಮೊದಲಾದ ಮಹಾನದಿಗಳಲ್ಲಿ ಪ್ರಾತಃಸ್ನಾನದಿಂದ ಸರ್ವಪಾಪನಿವೃತ್ತಿಯಾಗಲಿದೆ.
5) ಒಂದು ತಿಂಗಳು ಪ್ರತಿದಿನ 33 ಅಪೂಪ (ಅತಿರಸ) ದಾನದಿಂದ ಅನಿಷ್ಠ ತೊಲಗಿ ಇಷ್ಟಾರ್ಥಸಿದ್ಧಿಯಾಗಿದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಶುಭ ಕಾರ್ಯಗಳನ್ನು ಮಾಡುವಂತಿಲ್ಲ!

ಅಧಿಕ ಮಾಸದಲ್ಲಿ ಅರಿವಿದ್ದೋ, ಅರಿವಿಲ್ಲದೆಯೋ ಮಾಡುವ ಕೆಲವು ಕೆಲಸಗಳಿಂದ ಗಳಿಸಿದ ಪುಣ್ಯ ನಾಶವಾಗುತ್ತದೆ ಎಂಬುದನ್ನು ಶಾಸ್ತ್ರದಲ್ಲಿ ಹೇಳಲಾಗಿದೆ. ಅಧಿಕ ಮಾಸದಲ್ಲಿ ದೈನಂದಿನ ಕಾರ್ಯಗಳ ಜೊತೆಗೆ ದೇವರ ಆರಾಧನೆ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡಬೇಕೆಂದು ಶಾಸ್ತ್ರ ಹೇಳುತ್ತದೆ. ಮಂಗಳ ಕಾರ್ಯಗಳನ್ನು ಈ ಮಾಸದಲ್ಲಿ ಮಾಡುವುದು ನಿಷಿದ್ಧವಾಗಿದೆ.

ಪ್ರತಿ ಮಾಸದಲ್ಲೂ ಸೂರ್ಯನ ಸಂಕ್ರಮಣ ಪ್ರತ್ಯೇಕ ರಾಶಿಯಲ್ಲಿ ಆಗುತ್ತದೆ, ಅಧಿಕ ಮಾಸದಲ್ಲಿ ಸೂರ್ಯ ಸಂಕ್ರಮಣವಿರುವುದಿಲ್ಲ. ಹಾಗಾದಾಗ ಸೂರ್ಯ ಮತ್ತು ಚಂದ್ರನ ವೇಗದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ವಾತಾವರಣ ದಲ್ಲಿ ಏರುಪೇರಾಗುತ್ತದೆ. ಅತಿವೃಷ್ಟಿ, ಅನಾವೃಷ್ಟಿ, ರೋಗ-ರುಜಿನಗಳ ಬಾಧೆ ಹೆಚ್ಚಾಗುತ್ತದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುವ ಸಂಭವ ಅಧಿಕವಾಗಿರುತ್ತದೆ. ಹಾಗಾಗಿ ಪುಣ್ಯ ಕಾರ್ಯಗಳನ್ನು ಮಾತ್ರ ಮಾಡಬೇಕೆಂದು ಶಾಸ್ತ್ರ ಹೇಳುತ್ತದೆ. ಆದ್ದರಿಂದ ಶುಭ ಕಾರ್ಯಗಳಾದ ಮದುವೆ, ಮುಂಜಿ ಮತ್ತು ಚೌಲ ಕಾರ್ಯಗಳನ್ನು ಈ ಮಾಸದಲ್ಲಿ ಮಾಡುವುದು ನಿಷಿದ್ಧವಾಗಿದೆ. ಮಗುವನ್ನು ಮೊದಲ ಬಾರಿಗೆ ಮನೆಯಿಂದ ಹೊರಗೆ ಕರೆದೊಯ್ಯುವುದು, ಪಟ್ಟಾಭಿಷೇಕ, ಅನ್ನ ಪ್ರಾಶನ ಕೂಡ ಮಾಡಬಾರದು.

ಪ್ರತಿನಿತ್ಯ ಈ ಮಂತ್ರ ಜಪಿಸಿ!
ಗೋವರ್ಧನಧರಂ ವಂದೇ ಗೋಪಾಲಂ ಗೋಪರೂಪಿಣಂ |
ಗೋಕುಲೋತ್ಸವಮೀಶಾನಂ ಗೋವಿಂದಂ ಗೋಪಿಕಾಪ್ರಿಯಂ ||

ಅಧಿಕಮಾಸದಲ್ಲಿ ಪ್ರತಿನಿತ್ಯ 33 ಬಾರಿ ಈ ಸ್ತೋತ್ರವನ್ನು ಹೇಳಬೇಕೆಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.

ಹೊಸ ವ್ಯಾಪಾರ ಆರಂಭಿಸಬೇಡಿ

ಅಧಿಕ ಮಾಸದಲ್ಲಿ ಹೊಸತಾಗಿ ವ್ಯಾಪಾರ, ಉದ್ಯೋಗ ಮುಂತಾದವುಗಳನ್ನು ಆರಂಭಿಸಿದರೆ ಉತ್ತಮವಲ್ಲ, ಜೊತೆಗೆ ಅಂದುಕೊಂಡ ಯಶಸ್ಸು ದೊರಕುವುದಿಲ್ಲ ಎಂಬ ನಂಬಿಕೆ ಇದೆ. ಹಾಗಾಗಿ ಈ ಮಾಸದಲ್ಲಿ ಯಾವುದೇ ಅಂಗಡಿ, ಮಳಿಗೆ, ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಆರಂಭಿಸಬಾರದು. ಹೊಸ ಯೋಜನೆಗಳು, ಹೊಸ ಉದ್ಯೋಗಾವಕಾಶಗಳು ಅಥವಾ ಪ್ರಮುಖ ಹೂಡಿಕೆಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ನಿವೇಶನ ಖರೀದಿ ಬೇಡ

ಅಧಿಕ ಮಾಸದಲ್ಲಿ ಹೊಸ ಯೋಜನೆಗಳನ್ನು, ದೊಡ್ಡ ಮಟ್ಟದ ಹೂಡಿಕೆಗಳನ್ನು ಮಾಡುವುದು ಉತ್ತಮವಲ್ಲ. ಜೊತೆಗೆ ನಿವೇಶನಗಳ ಖರೀದಿಗೆ ಮತ್ತು ಹೊಸ ಮನೆಯ ನಿರ್ಮಾಣ ಕಾರ್ಯವನ್ನು ಅಧಿಕ ಮಾಸದಲ್ಲಿ ಆರಂಭಿಸುವುದು ಒಳಿತಲ್ಲವೆಂದು ಶಾಸ್ತ್ರ ಹೇಳುತ್ತದೆ.

ಇದನ್ನೂ ಓದಿ: Adhika Masa 2023 : ಅಧಿಕ ಮಾಸದ ಲೆಕ್ಕಾಚಾರ ಹೇಗೆ? ಮಹತ್ವವೇನು?

ಅಧಿಕಮಾಸವು ಬಂದಾಗ ತೀರ್ಥಯಾತ್ರೆ ಪಿತೃಕಾರ್ಯ, ತೀರ್ಥಶ್ರಾದ್ಧ, ವಿವಾಹ ಕಾಮ್ಯವ್ರತ, ಕಾಮ್ಯ ಉಪವಾಸ ಮೊದಲದುವುಗಳನ್ನು ಮಾಡಬಾರದು ಎಂದು ಬೃಹನ್ನಾರದೀಯ ಪುರಾಣದಲ್ಲಿ ಹೇಳಲಾಗಿದೆ. ಉದ್ಯೋಗದಲ್ಲಿ ಹೊಸತನ್ನೇನಾದರೂ ಮಾಡುವುದಿದ್ದರೆ ಈ ಮಾಸದಲ್ಲಿ ಮಾಡದಿರುವುದು ಒಳಿತಂತೆ.

Exit mobile version