ಅಕ್ಷರ ತೃತೀಯದಂದು ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಭಾರಿ ಪ್ರಮಾಣದಲ್ಲಿ ಮಾರಾಟವಾಗುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಚಿನ್ನಾಭರಣ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಇಂದು ಖರೀದಿಸಿದರೆ ಅದು ವರ್ಷವಿಡೀ ಅಕ್ಷಯವಾಗುತ್ತದೆ ಎಂಬ ನಂಬಿಕೆ ಜನತೆಯಲ್ಲಿ ಬೇರೂರಿರುವ ಹಿನ್ನೆಲೆಯಲ್ಲಿ ಇದು ಹೆಚ್ಚಿದೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ವೈರಸ್ ಅಲೆಗಳ ಏರಿಳಿತ ಮತ್ತು ಲಾಕ್‌ಡೌನ್ ಎಫೆಕ್ಟ್‌ನಿಂದಾಗಿ ಚಿನ್ನಾಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ವ್ಯಾಪಾರ ಆಗಿರಲಿಲ್ಲ. ಆದರೆ ಈ ಬಾರಿ ಗ್ರಾಹಕ ಮಾರುಕಟ್ಟೆಯಲ್ಲಿ ಆಗಿರುವ ಭಾರಿ ಪ್ರಮಾಣದ ಚಟುವಟಿಕೆಯನ್ನು ಗಮನಿಸಿದರೆ, ದಾಖಲೆ ಪ್ರಮಾಣದ ವಹಿವಾಟು ನಡೆಯುವ ಸೂಚನೆ ದೊರೆತಿದೆ.
ಭಾರಿ ಜಿಎಸ್‌ಟಿ ಸಂಗ್ರಹ
ಕಳೆದ ತಿಂಗಳಿನಲ್ಲಿ ಆಗಿರುವ ₹ 1.68 ಲಕ್ಷ ಕೋಟಿ ಜಿಎಸ್‌ಟಿ ದಾಖಲೆ ಸಂಗ್ರಹದ ಹಿನ್ನೆಲೆಯಲ್ಲಿ, ಆರ್ಥಿಕ ಚಟುವಟಿಕೆಗಳು ಗರಿಗೆದರಿರುವ ಹಾಗೂ ಜನತೆಯಲ್ಲಿ ಖರೀದಿ ಉತ್ಸಾಹ ಹೆಚ್ಚಾಗಿರುವ ಸೂಚನೆಯಿದೆ. ಹೀಗಾಗಿ ಈ ಬಾರಿಯ ಹಬ್ಬದ ಸೀಸನ್ ಕೂಡ ಚುರುಕಾಗುವ ಸಾಧ್ಯತೆಯಿದೆ. ಕಳೆದ ತಿಂಗಳಿನಲ್ಲಿ ಆಗಮಿಸಿದ ಶ್ರೀರಾಮನವಮಿ ಹಬ್ಬವನ್ನು ಕೂಡ ರಾಜಧಾನಿಯ ಜನತೆ ಸಂಭ್ರಮದಿಂದ ಆಚರಿಸಿದ್ದರು.
ತಾಕೀತಿಗೇನು ಬೆಲೆ?
ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರು, ಅಕ್ಷಯ ತದಿಗೆಯಂದು ಮುಸ್ಲಿಮರ ಅಂಗಡಿಗಳಿಂದ ಚಿನ್ನಾಭರಣ ಖರೀದಿಸದಂತೆ ಹಿಂದೂಗಳಿಗೆ ತಾಕೀತು ಮಾಡಿದ್ದಾರೆ. ಕೆಲವು ಹಿಂದೂ ಸಂಘಟನೆಗಳು ಈ ಕರೆಯನ್ನು ಬೆಂಬಲಿಸಿವೆ. ಚಿನ್ನಾಭರಣ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಮುಸ್ಲಿಂ ಸಮುದಾಯದ ಮಾಲಿಕತ್ವದ ಅನೇಕ ಮಳಿಗೆಗಳು ತೊಡಗಿಸಿಕೊಂಡಿವೆ. ಆದರೆ, ಚಿನ್ನ ಖರೀದಿ ಮಾಡುವವರು ಇಂಥ ಕರೆಗಳಿಗೆ ಕಿವಿಗೊಡುವವರೇ ಅಲ್ಲವೇ ಎಂಬುದು ಅಕ್ಷಯ ತದಿಗೆಯಂದೇ ಗೊತ್ತಾಗಲಿದೆ.
ಅಕ್ಷಯ ತೃತೀಯದ ಮಹತ್ವ
ಅಕ್ಷಯ ಎಂದರೆ ಕ್ಷಯವಿಲ್ಲದಿರುವುದು ಎಂದರ್ಥ. ತೃತೀಯವೆಂದರೆ ವೈಶಾಖ ಮಾಸದ ಮೂರನೆಯ ದಿನ, ತದಿಗೆ. ಅಂದು ಪರಶುರಾಮನ ಜನುಮದಿನ. ಗಂಗಾ ದೇವಿ ಸ್ವರ್ಗದಿಂದ ಧರೆಗಿಳಿದ ದಿನ. ಮಹಾಲಕ್ಷ್ಮಿ ಸಮುದ್ರ ಮಥನದಿಂದ ಹುಟ್ಟಿಕೊಂಡು ದಿನ ಕೂಡ. ಅಂದೇ ಜಗಜ್ಯೋತಿ ಬಸವೇಶ್ವರರು ಕೂಡ ಜನಿಸಿದ್ದಾರೆ, ಹೀಗಾಗಿ ಬಸವ ಜಯಂತಿಯೂ ಇಂದೇ ಆಗಿದೆ. ಅಂದು ವಿಷ್ಣುವನ್ನು ಪೂಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ. ತದಿಗೆಯಂದು ಚಿನ್ನಾಭರಣ, ಭೂಮಿ ಇತ್ಯಾದಿ ಖರೀದಿ, ಹೂಡಿಕೆಗೆ ಉತ್ತಮವಾದ ದಿನವೆಂದು ಪರಿಗಣಿಸಲಾಗಿದೆ.
ಅಕ್ಷಯ ತದಿಗೆಯಂದು ಎಷ್ಟಿತ್ತು ಚಿನ್ನದ ಬೆಲೆ?
ವರ್ಷ | ಚಿನ್ನದ ಬೆಲೆ |
2018 | 31,534 |
2019 | 31,729 |
2020 | 46,527 |
2021 | 47,816 |
2022 | 51,754 |