Site icon Vistara News

Chaturmasya 2022 | ಮಾತೃತ್ವವನ್ನು ಗೌರವಿಸುವುದು ಸಮಾಜದ ಕರ್ತವ್ಯ: ರಾಘವೇಶ್ವರ ಭಾರತೀ ಸ್ವಾಮೀಜಿ

ಗೋಕರ್ಣ: ಮಾತೃತ್ವವನ್ನು ಗೌರವಿಸುವುದು ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು. ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ (Chaturmasya) ಅಂಗವಾಗಿ ಭಾನುವಾರ (ಜುಲೈ 31) ನಡೆದ ಮಾತೃ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.

ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ

ಜಗತ್ತಿನಲ್ಲಿ ಪುರುಷ ಏನು ಬೇಕಾದರೂ ಆಗಬಹುದು, ಆದರೆ ಮಾತೆ ಮಾತ್ರ ಆಗಲಾರ. ಆದ್ಧರಿಂದ ಪುರುಷ ಸಾಧಿಸುವ ಯಾವುದೇ ಯಶಸ್ಸಿನ ಕೀರ್ತಿಯು ಆತನನ್ನು ಹೊತ್ತು ಹೆತ್ತು ಸಲಹಿದ ಮಾತೆಗೆ ಸಲ್ಲಬೇಕು. ಆದರೆ ಮಾತೃಶಕ್ತಿಯ ಸ್ವರೂಪ ಅಡಿಗಲ್ಲಿನಂತೆ. ರಾಮನಷ್ಟು ಕೌಸಲ್ಯೆ, ಕೃಷ್ಣನಷ್ಟು ಯಶೋಧೆ ಮುನ್ನಲೆಗೆ ಬಂದಿಲ್ಲ. ಮಹಿಳೆ ಎಂದರೆ ಜನನದಿಂದಲೇ ದೇವಿಯ ಸ್ವರೂಪವನ್ನು ಹೊಂದಿರುವ ಶಕ್ತಿ. ಹೆಣ್ಣನ್ನು ನೋಯಿಸುವುದೆಂದರೆ ಅದು ಅತ್ಯಂತ ಪಾಪದ ಕಾರ್ಯ. ಆ ಹಕ್ಕು ಯಾರಿಗೂ ಇಲ್ಲ. ಆಕೆ ಕಣ್ಣೀರು ಇಟ್ಟರೆ ಅದು ಶಾಪ. ಮಹಿಳೆ ಸಂತೋಷವಾಗಿದ್ದರೆ ಮಾತ್ರ ಶ್ರೇಯಸ್ಸು.

ತಾಯಿಯ ಋಣ ತೀರಿಸಲು ಅಸಾಧ್ಯ. ಅದು ಅಗೋಚರವಾಗಿರುತ್ತದೆ. ತಾಯಿಯಾದವಳು ಎಲೆಮರೆಯ ಕಾಯಿಯಾಗಿಯೇ ಉಳಿದುಬಿಡುತ್ತಾಳೆ. ಆದಿಶಂಕರರು ಮಾತೆಯರಿಗೆ ನೀಡಿದ ಮಹತ್ವವನ್ನು ಮಾತೃಪಂಚಕದಲ್ಲಿ ಬಣ್ಣಿಸಿದ್ದಾರೆ. ತಾಯಿಯ ಹಾರೈಕೆಯ ಫಲವಾಗಿ ಮನುಷ್ಯ ಎತ್ತರಕ್ಕೆ ಬೆಳೆಯುತ್ತಾನೆ. ಆದರೆ, ಅದಕ್ಕೆ ಪ್ರತಿಯಾಗಿ ಒಣಗಿದ ಅಕ್ಕಿಕಾಳು ಹಾಕುವ ಸ್ಥಿತಿ ನನ್ನದು ಎಂದು ಶಂಕರರು ವೇದನೆಯಿಂದ ಹೇಳಿದರು ಎಂದು ಸ್ವಾಮೀಜಿ ತಿಳಿಸಿದರು.

ಸ್ತ್ರೀಯರಿಗೆ ಬಾಹುಬಲ ಇಲ್ಲದಿದ್ದರೂ ಭಾವ ಬಲ ಇದೆ. ಸ್ತ್ರೀಯರಿಗೆ ಕೋಮಲತ್ವ ಇದೆ. ಅದಕ್ಕೆ ಎಂದಿಗೂ ಧಕ್ಕೆ ಬರಬಾರದು. ಯಾವುದೇ ವಯೋಮಾನದ ಮಹಿಳೆಯರನ್ನು ಗೌರವಿಸುವುದು ಸಮಾಜದ ಆದ್ಯ ಕರ್ತವ್ಯ. ಯಾವ ಮಕ್ಕಳೂ ಮಾತೆಯ ಬಗ್ಗೆ ಅವಜ್ಞೆ ಮಾಡಬಾರದು. ಮಾತೆಯರಿಗೆ ಕ್ಲೇಶ ಕೊಡಬಾರದು ಎಂದು ಹೇಳಿದರು.

ಮಾತೆಯರು ಮಠದ ಶಕ್ತಿ. ಮಠದ ಪ್ರಾಣ ಇರುವುದೂ ಈ ಶಕ್ತಿಯಲ್ಲೆ. ವ್ಯಾಸಪೂಜೆಯ ದಿನ ಇದ್ದ ಜನಸ್ತೋಮಕ್ಕಿಂತ ಹೆಚ್ಚಿನ ಮಾತೃಸ್ತೋಮ ಇಂದು ಸೇರಿದೆ. ಶ್ರೀಮಠದ ಮಾತೃಶಕ್ತಿ ಬೆಳೆದಿರುವುದರ ಸಂಕೇತ ಇದು. ತಾಯಂದಿರು ಮಠಕ್ಕೆ ಕೊಟ್ಟ ಸ್ಪಂದನ ಅಂಥದ್ದು ಎಂದು ಬಣ್ಣಿಸಿದರು. ಮಠದಲ್ಲಿ ಪುರುಷರು ಮಾಡಬೇಕಾದ ಕಾರ್ಯವನ್ನು ಮಾತೆಯರು ಮಾಡುತ್ತಿದ್ದಾರೆ. ಶ್ರೀಮಠವು ಯಾವುದೇ ಯೋಜನೆಯನ್ನು ನೀಡಿದರೂ, ಮಾತೆಯರು ಅದನ್ನು ಈವರೆಗೆ ಯಶಸ್ವಿಯಾಗಿ ಮಾಡುತ್ತಾ ಬಂದಿದ್ದಾರೆ. ಮಠದ ಮಾತೆಯರೆಂಬ ಪುಣ್ಯಭೂಮಿಯಲ್ಲಿ ಯಾವ ಸತ್ಕಾರ್ಯಗಳ ಬೀಜ ಬಿತ್ತಿದರೂ ಚಿನ್ನ ಬೆಳೆಯುತ್ತದೆ ಎಂದು ಹೇಳಿದರು.

ಮಾತೃ ಸಮಾವೇಶ ಅಂಗವಾಗಿ ಛಾತ್ರಭಿಕ್ಷೆ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಇಲ್ಲಿ ಕಲಿಯುವ ವಟುಗಳಿಗೆ ಮಾತೆಯರು ಭಿಕ್ಷಾಸೇವೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಕಾರ್ಯದರ್ಶಿ ದೇವಿಕಾ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ | Chaturmas 2022 | ಯಾವ ಯತಿವರ್ಯರ ಚಾತುರ್ಮಾಸ್ಯ ವ್ರತಾಚರಣೆ ಎಲ್ಲಿ?

Exit mobile version