ಬೆಳಗಾವಿ: ಜಾತಿ, ಧರ್ಮಗಳ ಸಂಘರ್ಷ, ಅಪನಂಬಿಕೆ, ದ್ವೇಷಗಳೇ ತುಂಬಿಕೊಳ್ಳುತ್ತಿರುವ ಕಾಲದಲ್ಲಿ ಮನುಷ್ಯ ನಿಜವಾಗಿಯೂ ಬದುಕಬೇಕಾದ ಬಗೆಗಳು ಆಗಾಗ, ಅಲ್ಲಲ್ಲಿ ತೆರೆದುಕೊಳ್ಳುತ್ತವೆ. ಹಿಂದು-ಮುಸ್ಲಿಮರ ಸ್ನೇಹ ಭಾವದ ಕಾಲವಳಿದು ದ್ವೇಷ ಭಾವವೇ ಉಕ್ಕೇರುತ್ತಿರುವ ಹಂತದಲ್ಲಿ ನಡೆಯುತ್ತಿರುವ ಈ ವಿದ್ಯಮಾನಗಳು (Communal Harmony) ನಿಜಾರ್ಥದಲ್ಲಿ ಕತ್ತಲ ಸುರಂಗದ ಕೊನೆಯಲ್ಲಿರುವ ಬೆಳಕಿನ ಹಣತೆಗಳು ಅನಿಸುತ್ತವೆ. ಇಷ್ಟೊಂದು ಖುಷಿಯಿಂದ ವಿಚಾರವನ್ನು ಹೇಳುವುದಕ್ಕೆ ನಿಜಕ್ಕೂ ಒಂದು ಕಾರಣವಿದೆ.
ಬೆಳಗಾವಿ ಜಿಲ್ಲೆಯ (Belagavi News) ಬೈಲಹೊಂಗಲ ಪಟ್ಟಣದ ಕಂಠಿ ಗಲ್ಲಿಯಲ್ಲಿ (Kanti galli in Bailahongala) ಮುಸ್ಲಿಮರೇ ಮುಂದೆ ನಿಂತು ತಮ್ಮದೇ ದರ್ಗಾದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ (Ganeshothsava at Dargah) ತಾವೇ ಪೂಜೆ ಮಾಡಿ, ತಾವೇ ಘಂಟಾಘೋಷ ಮೊಳಗಿಸಿ ಜೈಗಣೇಶ (Muslims Chanted Jai Ganesha) ಎಂದು ಭಕ್ತಿಯಿಂದ, ಹೃದಯಾಂತರಾಳದಿಂದ ಜಯೋಘೋಷ ಮಾಡಿದ್ದಾರೆ. ಇದಕ್ಕೆ ಅಲ್ಲಿನ ಎಲ್ಲ ಹಿಂದುಗಳು ಸಹವರ್ತಿಗಳಾಗಿ, ಸಾಕ್ಷಿಗಳಾಗಿ ಸಂಭ್ರಮಿಸಿದ್ದಾರೆ.
ಬೈಲಹೊಂಗಲ ಪಟ್ಟಣದ ಕಂಠಿ ಗಲ್ಲಿಯಲ್ಲಿರುವ ಫಕ್ಕೀರಸ್ವಾಮಿ ದರ್ಗಾದಲ್ಲಿ (Fakeeraswamy Dargah at Kantigalli) ನಡೆದಿರುವ ವಿದ್ಯಮಾನ ಇದು. ಹಾಗಂತ ಇದೇನು ಹೊಸ ಸಂಪ್ರದಾಯ ಹುಟ್ಟು ಹಾಕಿದ್ದಲ್ಲ. ಯಾವಾಗ ಬಾಲ ಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆ ಸೃಷ್ಟಿಸಿದರೋ ಅಥವಾ ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮ ಯಾವಾಗ ಶುರುವಾಯಿತೋ ಅಂಥ ಸ್ವಾತಂತ್ರ್ಯ ಪೂರ್ವ ಕಾಲದಿಂದಲೇ ಹಿಂದು ಮತ್ತು ಮುಸ್ಲಿಮರು ಸೇರಿ ಆಚರಿಸುವ ವಿಶೇಷ ಗಣೇಶೋತ್ಸವವಾಗಿ ಇದು ಗಮನ ಸೆಳೆದಿದೆ.
ಜಗತ್ತಿನಲ್ಲಿ, ಸುತ್ತಮುತ್ತ ಏನೇ ನಡೆದರೂ ಅದೆಷ್ಟು ತಲಾಂತರಗಳು ಕಳೆದರೂ, ಪೀಳಿಗೆಗಳು ಬದಲಾದದರೂ ಸೌಹಾರ್ದತೆಯ ಈ ಪರಂಪರೆ ಮಾತ್ರ ಯಾವ ಕಲ್ಮಶಕ್ಕೂ ಒಳಗಾಗದೆ, ಯಾವ ಮಾಲಿನ್ಯಕ್ಕೂ ಕಿವಿಗೊಡದೆ ವರ್ಷ ವರ್ಷವೂ ಇನ್ನಷ್ಟು ಸಮೃದ್ಧವಾಗುತ್ತಿದೆ ಎನ್ನುವುದು ಹಿತವಾದ ಸುದ್ದಿ.
ಇಲ್ಲಿ ಎಲ್ಲ ಜಾತಿ, ಜನಾಂಗದವರು ದರ್ಗಾದ ಆಚರಣೆ ಮತ್ತು ಪರಂಪರೆಗೆ ಹೊಂದಿಕೊಂಡು ಬದುಕುತ್ತಿದ್ದಾರೆ. ದರ್ಗಾದಲ್ಲಿ ನಡೆಯುವ ಪ್ರತಿ ಧಾರ್ಮಿಕ ಆಚರಣೆ, ವಿಧಿ, ವಿಧಾನಗಳಿಗೆ ತಲೆ ಬಾಗಿ ನಡೆದುಕೊಳ್ಳುವ ಸಂಸ್ಕೃತಿ, ಪರಂಪರೆ ಇಲ್ಲಿಯ ಜನರದ್ದಾಗಿದೆ.
ಕೋಮು ಸೌಹಾರ್ದತೆಗೆ ಸಾಕ್ಷಿ ಗಣಪನ ಪ್ರತಿಷ್ಠಾಪನೆ
ಕಂಠಿ ಗಲ್ಲಿಯಲ್ಲಿರುವ ನಿವಾಸಿಗಳು ಪ್ರತಿ ವರ್ಷ ಒಟ್ಟಿಗೆ ಸೇರಿ ಮೊಹರಂ ಆಚರಣೆ ಮಾಡುತ್ತಾರೆ. ಜೊತೆಗೆ ಗಣೇಶ ಚತುರ್ಥಿಯನ್ನು ಅಷ್ಟೇ ನಯ, ವಿನಯ, ಭಕ್ತಿಭಾವದಿಂದ ಬರ ಮಾಡಿಕೊಂಡು ಗಣೇಶನ ಹಬ್ಬ ಆಚರಣೆ ಮಾಡಿಕೊಂಡು ಬಂದಿದ್ದಾರೆ.
ಮುಸ್ಲಿಂ ಬಾಂಧವರಿಂದ ಗಣಪನಿಗೆ ಜೈಘೋಷ
ಹಿಂದೂ, ಮುಸ್ಲಿಂ ಬಾಂಧವರು ಗಣಪನಿಗೆ ಹೂವು ಮಾಲೆ ಹಾಕಿ, ಕಾಯಿ, ಕರ್ಪೂರ ಬೆಳಗಿ, ಗಂಟೆ ಬಾರಿಸಿ, ಆರತಿ ಮಾಡಿ, ನೈವೇದೆ ಸಲ್ಲಿಸಿ ಪ್ರಾರ್ಥಿಸಿದರು. ಅರ್ಚಕರು ಬೋಧಿಸಿದ ಮಂತ್ರ ಘೋಷವನ್ನು ಮುಸ್ಲಿಂ ಬಾಂಧವರು ಭಕ್ತಿಯಿಂದ ನುಡಿದು ಗಜಾನನ ಮಹರಾಜಕೀ ಜೈ ಎಂದು ಘೋಷಣೆ ಹಾಕಿದರು.
ಊರ ಹಿರಿಯರು, ಊರ ಹಿರಿಯರು, ಸಹೃದಯಿಗಳ ಶಕ್ತಿ ಇದು
ಊರಿನ ಹಿರಿಯರಾದ ಮಹಾಂತೇಶ ಹಂಚಿನಮನಿ, ಈರಪ್ಪ ಬೆಂಡಿಗೇರಿ, ಪ್ರಕಾಶ ಪಾಗಾದ, ಅಶೋಕ ಪಾಗಾದ, ವಿಶಾಲ ರೊಡಬಸನವರ, ಸಚಿನ ಹಣಮಶೇಟ, ಕಿರಣ ಪಾಗಾದ, ಉಳವೇಶ ಪಾಗಾದ, ಬಾಬು ಅಡಿಮನಿ, ಶಫೀಕ ಬಡಿಮನಿ, ಜರ್ ನದಾಫ, ಶಿವಲಿಂಗ ಹೂಗಾರ, ಕುಮಾರ ಹೂಗಾರ, ಪ್ರಜ್ವಲ ಹೂಗಾರ, ಅನೇಕರು ಗಣೇಶ ಪ್ರತಿಷ್ಠಾಪನೆ ಜವಾಬ್ದಾರಿ ಹೊತ್ತುಕೊಂಡು ಯಶಸ್ವಿಗೊಳಿಸಿದ್ದಾರೆ.
ಇದನ್ನೂ ಓದಿ : Communal Harmony : ಗಣೇಶ ಬಪ್ಪ ಮೋರಯಾ ಎಂದ ಮುಸ್ಲಿಮರು; ಗಣಪನ ಶೋಭಾಯಾತ್ರೆಗಾಗಿ ಈದ್ ಮೆರವಣಿಗೆಯೇ ಮುಂದಕ್ಕೆ!
ಬೆಳಗಾವಿಯ ಬೈಲಹೊಂಗಲದ ಈ ಪರಂಪರೆಯಂತೆಯೇ ಇನ್ನೂ ಹಲವು ಕಡೆ ಹಿಂದು ಮುಸ್ಲಿಂ ಸೌಹಾರ್ದತೆಯ ನೂರಾರು ಉದಾಹರಣೆಗಳು ದೊರೆಯುತ್ತವೆ. ಇದು ಇನ್ನಷ್ಟು ಬೆಳೆಯಬೇಕು ಮತ್ತು ಹೊಸ ಹೊಸ ಸೌಹಾರ್ದದ ನಿದರ್ಶನಗಳು ಹುಟ್ಟಿಕೊಳ್ಳಬೇಕು ಎನ್ನುವುದೇ ಅಲ್ಲಿನ ಜನ ಆಶಯ.
ಈದ್ ಮೆರವಣಿಗೆಯನ್ನೇ ಮುಂದಕ್ಕೆ ಹಾಕಿದ ಬೆಳಗಾವಿಯ ಮುಸ್ಲಿಮರು
ಬೆಳಗಾವಿಯ ಸೌಹಾರ್ದ ಪರಂಪರೆ ಅದೆಷ್ಟು ಶಕ್ತಿಶಾಲಿಯಾಗಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ. ಬೆಳಗಾವಿಯಲ್ಲಿ ಗಣೇಶೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ಈ ಬಾರಿ ಸೆ. 28ರಂದು ಸಾರ್ವಜನಿಕ ಗಣೇಶೋತ್ಸವವ ಬೃಹತ್ ಶೋಭಾಯಾತ್ರೆ ನಡೆಯುತ್ತದೆ. ಈ ಬಾರಿ ಅಂದೇ ಈದ್ ಮಿಲಾದ್ ಹಬ್ಬವೂ ಬಂದಿದೆ. ಮುಸ್ಲಿಮರು ಕೂಡಾ ನಗರ ಮೆರವಣಿಗೆ ಮೂಲಕ ಇದನ್ನು ಸಂಭ್ರಮಿಸುತ್ತಾರೆ. ಆದರೆ ಎರಡನ್ನೂ ಒಂದೇ ದಿನ ಆಚರಿಸಿದರೆ ವ್ಯವಸ್ಥೆ ಮಾಡುವುದು ಕಷ್ಟವಾಗುತ್ತದೆ, ಕಾನೂನು ಭಂಜಕರಿಗೆ ಅವಕಾಶವಾದೀತು ಎಂದು ಭಾವಿಸಿದ ಮುಸ್ಲಿಂ ಹಿರಿಯರು ತಮ್ಮ ಈದ್ ಮೆರವಣಿಗೆಯನ್ನು ಅಕ್ಟೋಬರ್ ಒಂದಕ್ಕೆ ಮುಂದೂಡಿದ್ದಾರೆ.