ರಾಮಸ್ವಾಮಿ ಹುಲಕೋಡು, ಬೆಂಗಳೂರು
ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬುದು ಈಗ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಬೇಕಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (dk shivakumar) ತಮ್ಮನ್ನೇ ಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕೆಂದು ಪಟ್ಟು ಹಿಡಿದು ಕುಳಿತಿದ್ದಾರೆ. ಈಗ ದೆಹಲಿಗೆ ತೆರಳಿರುವ ಅವರು ಇಂದೂ ಕೂಡ ಹೈಕಮಾಂಡ್ ಮುಂದೆ ಮುಖ್ಯಮಂತ್ರಿ ಹುದ್ದೆಗೇ ಪಟ್ಟು ಹಿಡಿಯುವ ಸಾಧ್ಯತೆಗಳಿವೆ. ಇದಕ್ಕೆ ಮುಖ್ಯ ಕಾರಣ ಅವರು ಅಪಾರವಾಗಿ ನಂಬುವ ನೊಣವಿನಕೆರೆ ಅಜ್ಜಯ್ಯನ ಮಠದಲ್ಲಿ ದೊರೆತ ಶಕುನ.
ಹೌದು, ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಡಿ.ಕೆ. ಶಿವಕುಮಾರ್ ನೊಣವಿನಕೆರೆ ಅಜ್ಜಯ್ಯನ ದರ್ಶನ ಪಡೆಯಲು ತೆರಳಿದ್ದರು. ಈ ಸಂದರ್ಭದಲ್ಲಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಈ ಬಾರಿ ತಾವು ಮುಖ್ಯಮಂತ್ರಿಯಾಗುತ್ತೇನೆಯೇ ಎಂದು ಕೇಳಿದ್ದರು. ಆಗ ಅಜ್ಜಯ್ಯನ ಶಕುನ ಕೇಳಿ ಡಿ.ಕೆ. ಶಿವಕುಮಾರ್ ಅಚ್ಚರಿ ಪಟ್ಟಿದ್ದರು. ʻʻಈ ಬಾರಿ ಮುಖ್ಯಮಂತ್ರಿಯಾದರೆ ಆಗುತ್ತೀರಿ, ಇಲ್ಲಾಂದ್ರೆ ಇಲ್ಲʼʼ ಎಂದು ಶಕುನ ನುಡಿಯಲಾಗಿತ್ತು ಎಂದು ಗೊತ್ತಾಗಿದೆ. ಹೀಗಾಗಿಯೇ ಡಿ.ಕೆ. ಶಿವಕುಮಾರ್ ಈ ಬಾರಿ ತಮಗೇ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.
ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿರುವ ʻಅಜ್ಜಯ್ಯನ ಮಠʼ ಎಂದೇ ಹೆಸರು ಮಾಡಿರುವ ಶ್ರೀ ಕಾಡಸಿದ್ದೇಶ್ವರ ಮಠವು ಡಿ.ಕೆ. ಶಿವಕುಮಾರ್ ಆಗಾಗ ಭೇಟಿ ನೀಡಿದ್ದರಿಂದಾಗಿ ಗಮನ ಸೆಳೆದಿದೆ. ಈ ಮಠಕ್ಕೆ ಕೇವಲ ಡಿ.ಕೆ. ಶಿವಕುಮಾರ್ ಮಾತ್ರವಲ್ಲ, ಹಲವು ರಾಜಕಾರಣಿಗಳೂ ಭೇಟಿ ನೀಡಿ ಮಾರ್ಗದರ್ಶನ ಪಡೆಯುತ್ತಲೇ ಬಂದಿದ್ದಾರೆ. ಅದರಲ್ಲಿ ಮಾಜಿ ಸಚಿವ ವಿ. ಸೋಮಣ್ಣ ಕೂಡ ಒಬ್ಬರು. ಈ ಚುನಾವಣೆಯ ಸಂದರ್ಭದಲ್ಲಿಯಂತೂ ಪ್ರತಿ ಹಂತದಲ್ಲಿಯೂ ಡಿ.ಕೆ. ಶಿವಕುಮಾರ್ ಮಠಕ್ಕೆ ಭೇಟಿ ನೀಡಿಯೇ ನಿರ್ಧಾರ ತೆಗೆದುಕೊಳ್ಳುತ್ತಾ ಬಂದಿದ್ದರು.
ʻʻಇಲ್ಲಿನ ಶ್ರೀಗಳ ಆಶೀರ್ವಾದಿಂದ ನನಗೆ ರಾಜಕೀಯ ಶಕ್ತಿ ಬಂದಿದೆʼʼ ಎಂದೇ ಡಿ.ಕೆ. ಶಿವಕುಮಾರ್ ಹೇಳಿಕೊಂಡು ಬಂದಿದ್ದು, ಈಗ ಮಠವು ಈ ಶಕುನ ನೀಡಿದ್ದರಿಂದ ಕಂಗಾಲಾಗಿ ಹೋಗಿದ್ದಾರೆ. ಒಂದು ವೇಳೆ ಈಗ ತಾವು ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಟ್ಟರೆ, ಶಕುನದಂತೆ ಮುಂದೆ ಮುಖ್ಯಮಂತ್ರಿಯಾಗುವ ಅವಕಾಶವೇ ಬಾರದೆ ಹೋದರೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ ಎಂದು ಅವರ ಆಪ್ತರು ವಿವರಿಸಿದ್ದಾರೆ.
ಇದು 500 ವರ್ಷ ಇತಿಹಾಸವಿರುವ ಮಠ
ನೊಣವಿನಕೆರೆಯ ಸೋಮೆಕಟ್ಟೆ ಕಾಡಸಿದ್ದೇಶ್ವರ ಮಠಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆ. ದಟ್ಟ ಕಾಡಿನ ನಡುವೆ ಈ ಮಠ ಇರುವುದರಿಂದ ʻಕಾಡಸಿದ್ದೇಶ್ವರ ಮಠʼ ಎಂಬ ಹೆಸರು ಬಂದಿದೆ. ಪುರಾಣ ಕತೆಗಳ ಪ್ರಕಾರ ಕಾಡಸಿದ್ದೇಶ್ವರರು ನಂದಿಯ ಮೇಲೆ ಸಂಚಾರ ಮಾಡುತ್ತಾ ನೊಣವಿನಕೆರೆಯ ದಕ್ಷಿಣ ಭಾಗದಲ್ಲಿರುವ ಕಾಡಿನಲ್ಲಿ ನೆಲೆಸಿದ್ದರು.
ಒಮ್ಮೆ ಕಾಡಸಿದ್ದೇಶ್ವರರು ಶಿವಯೋಗಾನು ಸಂಧಾನದಲ್ಲಿರುವಾಗ, ಬೇಟೆಗಾಗಿ ಬಂದಿದ್ದ ಹಾಗಲವಾಡಿ ಅರಸ ಮುದಿಯಪ್ಪನಾಯಕನು ಶ್ರೀ ಕಾಡಸಿದ್ದೇಶ್ವರರನ್ನು ಮೃಗವೆಂದು ಭಾವಿಸಿ ಬಾಣ ಬಿಡುತ್ತಾನೆ, ಆ ಬಾಣವು ಅವರನ್ನು ಭೇದಿಸಿಕೊಂಡು ಹೋಗುತ್ತದೆ. ಇದನ್ನು ಗಮನಿಸದ ಅರಸನು ವ್ಯಥೆಪಟ್ಟು ಶ್ರೀಗಳ ಪಾದದಲ್ಲಿ ಬಿದ್ದು ಗೋಳಾಡಿ
ಕ್ಷಮೆ ಬೇಡುತ್ತಾನೆ. ಆಗ ಅವರಿಗೆ ಕಾಡಸಿದ್ದೇಶ್ವರರು ಅನುಗ್ರಹ ನೀಡುತ್ತಾರೆ. ಈ ಸಂದರ್ಭದಲ್ಲಿ ಇಪ್ಪತ್ತು ಅಂಕಣದ ಮಠ ಹಾಗೂ ಮುಂಭಾಗದಲ್ಲಿ ಸಣ್ಣ ಗದ್ದುಗೆ ಕಟ್ಟಿಸಿಕೊಡುವುದಾಗಿ ಅರಸ ಮುದಿಯಪ್ಪನಾಯಕನು ಕಾಡಸಿದ್ದೇಶ್ವರರಿಗೆ ಮಾತುಕೊಟ್ಟಿರುತ್ತಾರೆ.
ಒಂದು ದಿನ ಅರ್ಧರಾತ್ರಿಯಲ್ಲಿ ಮುನಿಗಳು ಸುವರ್ಣ ಪಲ್ಲಕ್ಕಿಯಲ್ಲಿ ಶ್ರೀಗಳನ್ನು ಹೊತ್ತುಕೊಂಡು ಗದ್ದುಗೆಗೆ ತಂದಾಗ, ಅಲ್ಲಿ ಕರ್ಪೂರ ದಗ್ಗನೆ ಹತ್ತಿಕೊಂಡಿತು. ಶ್ರೀ ಕಾಡಸಿದ್ದೇಶ್ವರರು ಅದೃಶ್ಯರಾದರು, ಇದೇ ಮಠದ ಮೂಲ ಗದ್ದುಗೆ ಎಂದು ಇಂದೂ ಪೂಜಿಸಲ್ಪಡುತ್ತಿದೆ.
ಜ್ಯೋತಿಷ ತಜ್ಞ ಸ್ವಾಮೀಜಿ
ಈಗ ಕಾಡಸಿದ್ದೇಶ್ವರ ಮಠವನ್ನು ಶ್ರೀ ಕರಿವೃಷಭದೇಶಿಕೇಂದ್ರದ ಶಿವಯೋಗಿಶ್ವರ ಸ್ವಾಮೀಜಿ ಮುನ್ನಡೆಸುತ್ತಿದ್ದಾರೆ. 1985ರಿಂದ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅವರು ಮೂಲತಃ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದವರು.
ವಾಕ್ ಸಿದ್ದಿ ಪಡೆದಿರುವ ಅನುಷ್ಠಾನ ಪುರುಷರೆಂದು ಇವರು ಖ್ಯಾತರಾಗಿದ್ದು, ಜ್ಯೋತಿಷದಲ್ಲೂ ಪರಿಣತಿ ಹೊಂದಿದ್ದಾರೆ. ಹೀಗಾಗಿಯೇ ಅವರ ಆಶೀರ್ವಾದ ಪಡೆಯಲು ರಾಜ್ಯದ ಎಲ್ಲ ಭಾಗಗಳಿಂದ ಭಕ್ತರು, ರಾಜಕಾರಣಿಗಳು, ವ್ಯಾಪಾರಸ್ಥರು, ಉದ್ಯಮಿಗಳು ಆಗಮಿಸುತ್ತಿದ್ದಾರೆ. ತಮ್ಮ ಸಮಸ್ಯೆಗಳನ್ನು ಹೇಳಿದವರಿಗೆ ಸೂಕ್ತ ಪರಿಹಾರವನ್ನು ಅವರು ನೀಡುತ್ತಿರುವುದರಿಂದ ಮಠದ ಖ್ಯಾತಿಯು ಹೆಚ್ಚುತ್ತಿದೆ.
ಇದನ್ನೂ ಓದಿ : DK Shivakumar: ನೊಣವಿನಕೆರೆ ಅಜ್ಜಯ್ಯನ ಭೇಟಿ ಮಾಡಿದ ಡಿ.ಕೆ.ಶಿವಕುಮಾರ್; ಸಿಎಂ ಎಂದು ಜೈಕಾರ ಹಾಕಿದವರಿಗೆ ಬೈಗುಳ