ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗೌರಿ-ಗಣೇಶನ ಹಬ್ಬ ಸಮೀಪಿಸುತ್ತಿದ್ದಂತೆ ಎಲ್ಲೆಡೆ ಶಾಪಿಂಗ್ ಆರಂಭವಾಗಿದೆ.
ಹಬ್ಬದ ಸಂಭ್ರಮ ಹೆಚ್ಚಿಸಲು ಮಾರುಕಟ್ಟೆಗೆ ಈಗಾಗಲೇ ಟ್ರೆಡಿಷನಲ್ ಡಿಸೈನರ್ ವೇರ್ ಗಳು, ಬೆಳ್ಳಿ-ಬಂಗಾರದ ಆಭರಣಗಳು, ಕೃತಕ ಆಕ್ಸೆಸರೀಸ್ ಗಳು ಎಲ್ಲವೂ ಲಗ್ಗೆ ಇಟ್ಟಿವೆ. ಅಷ್ಟು ಮಾತ್ರವಲ್ಲ, ಗೌರಿ-ಗಣೇಶನ ಸಿಂಗಾರಕ್ಕೆ ಬಳಸುವ ಡೆಕೊರೇಟಿವ್ ಐಟಂಗಳು ಎಂಟ್ರಿ ನೀಡಿವೆ.
ಟ್ರೆಡಿಷನಲ್ ಡಿಸೈನರ್ ವೇರ್‌ಗಳಿಗೆ ಆದ್ಯತೆ
ಗೌರಿ-ಗಣೇಶನ ಹಬ್ಬಕ್ಕೆ ಹೆಣ್ಣು ಮಕ್ಕಳು ಹಾಗೂ ಪುರುಷರಿಗೆಂದೇ ಟ್ರೆಡಿಷನಲ್ ಡಿಸೈನರ್ ವೇರ್ ಗಳು ಕಾಲಿಟ್ಟಿವೆ. ಬಗೆಬಗೆಯ ರೇಷ್ಮೆ ಸೀರೆಗಳು, ರೆಡಿಮೇಡ್, ಸೆಮಿ ಸ್ಟಿಚ್ಡ್ ಲಂಗ-ದಾವಣಿ, ಲೆಹೆಂಗಾ, ಪಂಚೆ, ಶಲ್ಯಾ, ಜುಬ್ಬಾ, ಪೈಜಾಮದಂತಹ ಸಾಂಪ್ರದಾಯಿಕ ಉಡುಗೆಗಳು ಎಂಟ್ರಿ ನೀಡಿವೆ. ಸದ್ಯಕ್ಕೆ ಕ್ಯಾಶುವಲ್ ವೇರ್ ಸೈಡಿಗೆ ಸರಿದಿದ್ದು, ಎಲ್ಲಿ ನೋಡಿದರೂ ಇವುಗಳದ್ದೇ ಸಾಮ್ರಾಜ್ಯವಾಗಿದೆ ಎನ್ನುತ್ತಾರೆ ಮಾರಾಟಗಾರರು.
ವೆರೈಟಿ ಡಿಸೈನ್‌ನಲ್ಲಿ ಚಿಣ್ಣರ ಉಡುಗೆ
ಹಿರಿಯರನ್ನು ಹೊರತುಪಡಿಸಿದರೆ ಈ ಹಬ್ಬದಲ್ಲಿ ಅತಿ ಹೆಚ್ಚಾಗಿ ಚಿಣ್ಣರ ಉಡುಗೆ-ತೊಡುಗೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಪುಟ್ಟ ಲಂಗ-ದಾವಣಿ, ರೇಷ್ಮೆ ಲಂಗ, ಗಂಡು ಮಕ್ಕಳ ಜುಬ್ಬಾ ಪೈಜಾಮಗಳು ಆಗಮಿಸಿದ್ದು, ಕೊಳ್ಳುಗರ ಸಂಖ್ಯೆ ಹೆಚ್ಚಾಗಿದೆ. ಎಂದಿನಂತೆ ಮಕ್ಕಳ ವೆರೈಟಿ ವಿನ್ಯಾಸದ ಕ್ಯಾಶುವಲ್ ಉಡುಪುಗಳು ಕೂಡ ಬೇಡಿಕೆಯನ್ನು ಉಳಿಸಿಕೊಂಡಿವೆ. ತಲೆಗೆ ಹಾಕುವ ಹೇರ್ ಆಕ್ಸೆಸರೀಸ್ನಿಂದಿಡಿದು, ಕೈಗೆ ಹಾಗೂ ಕತ್ತಿಗೆ ಧರಿಸುವ ಮಕ್ಕಳ ಆಕ್ಸೆಸರೀಸ್ಗಳ ಮಾರಾಟ ಕೂಡ ಭರದಿಂದ ಸಾಗಿದೆ.
ಟ್ರೆಂಡಿ ಜುವೆಲರಿಗಳಿಗೆ ಹೆಚ್ಚಿದ ಬೇಡಿಕೆ
ಗೌರಿ-ಗಣೇಶನ ಹಬ್ಬದ ಸಮಯದಲ್ಲಿ ಉಡುಪುಗಳಿಗೆ ಮಾತ್ರವಲ್ಲ, ಜುವೆಲರಿಗಳಿಗೂ ಬೇಡಿಕೆ ಹೆಚ್ಚಿದೆ. ಬೆಳ್ಳಿ-ಬಂಗಾರದ ಆಭರಣಗಳನ್ನು ಕೊಳ್ಳುವವರು ಹೆಚ್ಚಾಗಿದ್ದಾರೆ. ಅದರಲ್ಲೂ ಟ್ರೆಡಿಷನಲ್ ಲುಕ್ ನೀಡುವ ಟೆಂಪಲ್ ಜುವೆಲರಿಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. “ಹಬ್ಬ ಸಮೀಪಿಸುತ್ತಿದೆ. ಕಡೆಗಳಿಗೆಯ ಧಾವಂತ ಕಡಿಮೆ ಮಾಡಿಕೊಳ್ಳಲು ಸಾಕಷ್ಟು ಮಂದಿ ಈಗಾಗಲೇ ಜುವೆಲರಿಗಳ ಶಾಪಿಂಗ್ಗೆ ಮುಂದಾಗಿದ್ದಾರೆ” ಎನ್ನುತ್ತಾರೆ ಆಭರಣ ಮಳಿಗೆಯೊಂದರ ಮಾರಾಟಗಾರರು.
ಇನ್ನು ಕೃತಕ ಆಭರಣಗಳ ಲಿಸ್ಟ್ನಲ್ಲಿ ವನ್ ಗ್ರಾಂ ಗೋಲ್ಡ್ ಹಾಗೂ ಗೋಲ್ಡ್ ಕವರಿಂಗ್ನ ನಾನಾ ಬಗೆಯ ಆಭರಣಗಳನ್ನು ಕೊಳ್ಳುವ ಮಹಿಳೆಯರು ಹೆಚ್ಚಾಗಿದ್ದಾರೆ. ಇವುಗಳಲ್ಲಿ ಕತ್ತಿಗೆ ಧರಿಸುವ ಚೋಕರ್, ಹಾರ, ಕಮರ್ಬಾಂದ್, ಬಳೆ-ಕಡಗ, ಕಿವಿಯೊಲೆ ಎಲ್ಲವೂ ಸೇರಿದೆ. ಮ್ಯಾಚಿಂಗ್ಗೆ ಸೂಟ್ ಮಾಡುವ ಸಲುವಾಗಿ ಕೊಳ್ಳುವವರ ಸಂಖ್ಯೆ ಹೆಚ್ಚಿದೆ ಎನ್ನುತ್ತಾರೆ ಆರ್ಟಿಫಿಶಿಯಲ್ ಜುವೆಲರಿ ಶಾಪ್ವೊಂದರ ಸೇಲ್ಸ್ಮ್ಯಾನ್.
ಆನ್ಲೈನ್ ಶಾಪಿಂಗ್ ಆಕರ್ಷಣೆ
ಆನ್ಲೈನ್ ವೆಬ್ ಸೈಟ್ ಗಳು ಕೂಡ ಈಗಾಗಲೇ ಹಬ್ಬದ ಹಿನ್ನೆಲೆಯಲ್ಲಿ ಡಿಸ್ಕೌಂಟ್ಸ್-ಆಫರ್ಸ್ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ನೀಡತೊಡಗಿವೆ. ಫ್ರೀ ಹೋಮ್ ಡಿಲೆವರಿ ಸೇರಿದಂತೆ, ಫೆಸ್ಟಿವ್ ಡಿಸ್ಕೌಂಟ್ಸ್ ಅನೌನ್ಸ್ ಮಾಡಿವೆ. ಇದು ಕೇವಲ ಮಹಿಳೆಯರ ಉಡುಪು ಹಾಗೂ ಜುವೆಲರಿಗಳಿಗೆ ಸೀಮಿತವಾಗಿಲ್ಲ. ಬದಲಿಗೆ ಹಬ್ಬದ ಪೂಜಾ ಸಾಮಗ್ರಿಯಂತಹ ಅಗತ್ಯ ಪರಿಕರಗಳಿಗೂ ವಿಸ್ತರಿಸಿದೆ. ಬಣ್ಣಬಣ್ಣದ ತೋರಣಗಳು, ಗಣೇಶನನ್ನು ಸಿಂಗರಿಸಲು ಬೇಕಾಗುವ ಸಾಮಗ್ರಿಗಳು, ದೀಪಗಳು ಸೇರಿದತೆ ಡೆಕೊರೇಷನ್ ವಸ್ತುಗಳಿಗೆ ಆನ್ ಲೈನ್ ನಲ್ಲಿ ಬೇಡಿಕೆ ಹೆಚ್ಚಾಗಿದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Festive Shopping: ವರಮಹಾಲಕ್ಷ್ಮಿ ಹಬ್ಬದ ಸೀರೆ ಶಾಪಿಂಗ್‌ಗೆ 7 ಐಡಿಯಾ