ಗಣಪತಿ ಹಬ್ಬ ಬಂದಿದೆ (Ganesh Chaturthi 2022). ಗಣಪತಿ ತಿಂಡಿ ಪೋತ. ಸಿಕ್ಕಿದ್ದನ್ನೆಲ್ಲಾ ತಿಂದು ಹೊಟ್ಟೆ ಒಡೆದುಕೊಂಡಾತ! ಹೀಗಾಗಿ ಗಣಪತಿ ಹಬ್ಬದಂದು ಆತನಿಗೆ ಬಗೆ ಬಗೆಯ ತಿನಿಸುಗಳನ್ನು ಸಿದ್ಧಪಡಿಸಿ, ನೈವೇದ್ಯ ಮಾಡುವುದು ವಾಡಿಕೆ.
ಗಣಪತಿಗೆ ಮೋದಕ ಎಂದರೆ ಬಹಳ ಇಷ್ಟ. ಕೈಯಲ್ಲಿಯೇ ಅದನ್ನು ಹಿಡಿದುಕೊಂಡು ಕುಳಿತಿದ್ದಾನೆ! ಹೀಗಾಗಿ ಹಬ್ಬದಲ್ಲಿ ನೈವೇದ್ಯಕ್ಕೆ ಮೋದಕ ಇರಲೇಬೇಕು. ಇನ್ನು ಕಡುಬು, ಉಂಡೆ (ಲಡ್ಡು), ಕಜ್ಜಾಯ ಎಂದರೆ ಬಹಳ ಪ್ರೀತಿ. ಮೋದಕದ ಜತೆಗೆ ಇವೆಲ್ಲವನ್ನೂ ಮಾಡಿ ಗಣಪತಿ ಹಬ್ಬದಂದು ನೈವೇದ್ಯ ಮಾಡಲಾಗುತ್ತದೆ. ಗಣೇಶನಿಗೆ ಪ್ರಿಯವಾದ ಈ ತಿನಿಸುಗಳನ್ನು ಮಾಡುವುದು ಹೇಗೆ? ರೆಸಿಪಿ ಇಲ್ಲಿದೆ.
ಮೋದಕ ಮಾಡುವುದು ಹೇಗೆ?
ಬೇಕಾಗುವ ಸಾಮಗ್ರಿ: ಮೈದಾ ಹಿಟ್ಟು- 1/4 ಕೆ.ಜಿ, ಚಿರೋಟಿ ರವೆ 50 ಗ್ರಾಂ, ಸಾಟಿ ಜಿಡ್ಡು- 2 ಟೇಬಲ್ ಸ್ಪೂನ್, ಕರಿಯಲು ಎಣ್ಣೆ- 1/2 ಕೆ.ಜಿ.
ಮಾಡುವ ವಿಧಾನ: ಮೊದಲು ಕಣಕ ಮಾಡಿಟ್ಟುಕೊಳ್ಳಿ. ಮೈದಾ, ರವೆ ಸೇರಿಸಿ ಕಾಯಿಸಿದ ಜಿಡ್ಡನ್ನು ಸೇರಿಸಿ. ಚೆನ್ನಾಗಿ ನೀರುಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿರಿ. ಚೆನ್ನಾಗಿ ನಾದಿ 1/2ಗಂಟೆ ಬಿಡಿ. ಈಗ ಕಣಕ ತಯಾರಾಗುತ್ತದೆ. ಹುರಿಗಡಲೆ, ಬೆಲ್ಲಗಳನ್ನು ಮಿಕ್ಸಿಯಲ್ಲಿ ಅರೆದು ಅದಕ್ಕೆ ತೆಂಗಿನ ತುರಿ, ಏಲಕ್ಕಿ ಪುಡಿ ಬೆರೆಸಿದರೆ ಹೂರಣ ತಯಾರಾಗುತ್ತದೆ.
ನಿಂಬೆ ಗಾತ್ರದ ಕಣಕವನ್ನು ಪೂರಿಯ ಹದಕ್ಕೆ ಲಟ್ಟಿಸಿ, ಒಳಗೆ ಹೂರಣ ಇಟ್ಟು ಮೇಲ್ಭಾಗಕ್ಕೆ ತಿರುವಿ ಮುಚ್ಚಿ. ಅದನ್ನು ಕಾದ ಎಣ್ಣೆಯಲ್ಲಿ ಕರಿಯಿರಿ. ಬಸಿ ಪಾತ್ರೆಯಲ್ಲಿ ಹಾಕಿ, ತೆಗೆದಿರಿಸಿ. ಗಣಪನಿಗೆ ನಿವೇದಿಸಿ, ಪ್ರಸಾದವಾಗಿ ಸ್ವೀಕರಿಸಿ.
ಮೋದಕ ಹೀಗೂ ಮಾಡಬಹುದು
ಬೇಕಾಗುವ ಸಾಮಾಗ್ರಿ: ಒಂದೂವರೆ ಕಪ್ ತೆಂಗಿನ ಹಾಲು, ಗೋಡಂಬಿ, ಚಿರೋಟಿ ರವೆ ಅಥವಾ ಅಕ್ಕಿ ಹಿಟ್ಟು, ಸ್ವಲ್ಪ ಗೋದಿ ಹಿಟ್ಟು, ತೆಂಗಿನ ಹಾಲು, ಪಿಸ್ತಾ, ಏಲಕ್ಕಿ, ಬೆಲ್ಲ ತುಪ್ಪ, ಚಿಟಿಕೆ ಉಪ್ಪು, ತೆಂಗಿನ ಹೂರ್ಣ.
ಮಾಡುವ ವಿಧಾನ: ಕಡಿಮೆ ಉರಿಯಲ್ಲಿ ನೀರು ಕುದಿಸಿ, ಅದರಲ್ಲಿ ಅಕ್ಕಿಹಿಟ್ಟು ಅಥವಾ ಚಿರೋಟಿ ರವೆ, ಸ್ವಲ್ಪ ಗೋಧಿ ಹಿಟ್ಟು ಹಾಕಿ ಸ್ವಲ್ಪ ಬೇಯಿಸಿಕೊಳ್ಳಿ. ಅದಕ್ಕೆ ತೆಂಗಿನ ಹಾಲನ್ನು ಅಲ್ಪ ಪ್ರಮಾಣದಲ್ಲಿ ಹಾಕಿ ಮಿಶ್ರಣ ಮಾಡಿ ಗಟ್ಟಿಯಾಗಿ ನಾದಿಕೊಳ್ಳಿ. ಕಾಯಿ ಹಾಲು ಹಾಕಿ ಹಿಟ್ಟನ್ನು ಕಲಸಿಕೊಂಡರೆ ಕಣಕ ತಯಾಗಿರುತ್ತದೆ.
ನಂತರ ತೆಂಗಿನಕಾಯಿ ತುರಿಗೆ ಬೆಲ್ಲವನ್ನು ಹಾಕಿ,ಪಿಸ್ತಾ, ಗೋಡಂಬಿ ಹಾಕಿ ಬೇಯಿಸಿ ಹೂರಣ ತಯಾರಿಸಿಕೊಳ್ಳಿ. ಮಿಶ್ರಣ ಮಾಡಿದ ಹಿಟ್ಟನ್ನು ಸಣ್ಣದಾಗಿ ಲಟ್ಟಿಸಿ ಅದಕ್ಕೆ ಕಾಯಿ ಹೂರಣ ತುಂಬಿ ಮೋದಕ ತಯಾರಿಸಿಕೊಳ್ಳಿ. ನಂತರ ಕಾದ ಎಣ್ಣೆಗೆ ಹಾಕಿ ಹೊಂಬಣ್ಣ ಬರುವ ತನಕ ಮಂದ ಉರಿಯಲ್ಲಿ ಕರಿಯಬೇಕು. ನಂತರ ಬಸಿ ಪಾತ್ರೆಯಲ್ಲಿ ಹಾಕಿ, ತೆಗೆದಿರಿಸಿ. ಗಣಪನಿಗೆ ನಿವೇದಿಸಿ, ಪ್ರಸಾದವಾಗಿ ಸ್ವೀಕರಿಸಿ.
ಚೂರ್ಮ ಲಡ್ಡು ತಯಾರಿಸಿ
ಬೇಕಾಗುವ ಸಾಮಾಗ್ರಿ: ಚೂರ್ಮ ಲಡ್ಡು ತಯಾರಿಸಲು ಕಡಲೆ ಹಿಟ್ಟು 3 ಕಪ್, ಎಳ್ಳು 4-5 ಚಮಚ ಸ್ಪೂನ್, ತೆಂಗಿನ ತುರಿ 1ಕಪ್, ಬೆಲ್ಲ ಒಂದೂವರೆ ಕಪ್, 8-9 ಟೇಬಲ್ ಸ್ಪೂನ್ ತುಪ್ಪ, ಸ್ವಲ್ಪ ಗೋಡಂಬಿ ಬೇಕು.
ಮಾಡುವ ವಿಧಾನ: ದೊಡ್ಡ ಪಾತ್ರೆಗೆ ಕಡಲೆ ಹಿಟ್ಟನ್ನು ಹಾಕಿ, ಅದಕ್ಕೆ ಸ್ವಲ್ಪ ನೀರು ಸೇರಿಸಿ ಕಲೆಸಿ, ಮಿಶ್ರಣ ತರಿ ತರಿಯಾಗಿರಲಿ. ನಂತರ 2 ಚಮಚ ತುಪ್ಪವನ್ನು ಬಾಣಲೆಗೆ ಹಾಕಿ ಬಿಸಿ ಮಾಡಿ, ತುಪ್ಪ ಬಿಸಿಯಾದಾಗ ಅದರಲ್ಲಿ ಕಡಲೆ ಹಿಟ್ಟು ಹಾಕಿ ಹುರಿಯಿರಿ. ಒಂದು ಪಾತ್ರೆಯಲ್ಲಿ ಹಾಕಿಡಿ. ಈಗ ಅದೇ ಪ್ಯಾನ್‌ಗೆ ಒಂದು ಚಮಚ ತುಪ್ಪ ಹಾಕಿ ಅದರಲ್ಲಿ ಎಳ್ಳು ಮತ್ತು ತೆಂಗಿನ ತುರಿ ಹಾಕಿ ಕಡಿಮೆ ಉರಿಯಲ್ಲಿ 4-5 ನಿಮಿಷ ಹುರಿಯಿರಿ.
ನಂತರ ಅದನ್ನು ತೆಗೆದು ಮತ್ತೊಂದು ಬಟ್ಟಲಿನಲ್ಲಿ ಇಡಿ. ನಂತರ ಉಳಿದ ತುಪ್ಪವನ್ನು ಬಾಣಲೆಗೆ ಹಾಕಿ ಅದಕ್ಕೆ ಬೆಲ್ಲ ಹಾಕಿ ರಡು ನಿಮಿಷ ಬಿಸಿ ಮಾಡಿ ಮತ್ತು ಸ್ವಲ್ಪ ಬೆಲ್ಲ ಹಾಕಿ ಬೆಲ್ಲ ಕರಗುವಷ್ಟು ಹೊತ್ತು ಬಿಸಿ ಮಾಡಿ. ಈಗ ಹುರಿದಿಟ್ಟ ಕಡಲೆಹಿಟ್ಟು, ಎಳ್ಳು, ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಉರಿಯಿಂದ ಇಳಿಸಿ. ನಂತರ ಕೈಗೆ ತುಪ್ಪ ಸವರಿಕೊಂಡು ಆ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆ ಕಟ್ಟಿ, ನಂತರ ಅದನ್ನು ಗೋಡಂಬಿಯಿಂದ ಅಲಂಕರಿಸಿದರೆ ರುಚಿಯಾದ ಲಡ್ಡು ಗಣಪತಿಯ ನೈವೇದ್ಯಕ್ಕೆ ಸಿದ್ಧ.
ಬೂಂದಿ ಲಡ್ಡು ಮಾಡಿ
ಬೇಕಾಗುವ ಸಾಮಾಗ್ರಿ: ಬೂಂದಿ ಲಡ್ಡು ತಯಾರಿಸಲು ಎರಡೂವರೆ ಕಪ್ ಕಡಲೆ ಹಿಟ್ಟು, ಅರ್ಧ ಲೀಟರ್ ಹಾಲು, ಅರ್ಧ ಚಮಚ ಏಲಕ್ಕಿ ಪುಡಿ, ಮೂರು ಕಪ್ ತುಪ್ಪ, ಬಾದಾಮಿ ಚೂರುಗಳು, ಬೇಕಿದ್ದರೆ ಪಿಸ್ತಾ ಚೂರನ್ನು ಬಳಸಿ
ಕೊಳ್ಳಬಹುದು. ಪಾಕ ತಯಾರಿ ಸಲು ಎರಡೂವರೆ ಕಪ್ ಸಕ್ಕರೆ, ಮೂರೂವರೆ ಕಪ್ ನೀರು, ಎರಡು ಚಮಚ
ಹಾಲು, ಕೇಸರಿ ಬಣ್ಣ.
ಮಾಡುವ ವಿಧಾನ: ಲಾಡು ತಯಾರಿಸಲು ಮೊದಲು ಪಾಕವನ್ನು ತಯಾರಿಸಿಟ್ಟು ಕೊಳ್ಳ ಬೇಕು. ನೀರನ್ನು ಕಾಯಲು ಇಟ್ಟು ಸಕ್ಕರೆ ಹಾಕಿ ಅದು ಕರಗುವ ತನಕವೂ ಕಾಯಿಸಬೇಕು. ಅದಕ್ಕೆ ಎರಡು ಚಮಚ ಹಾಲು ಬೆರೆಸಿ ಮೂರ್ನಾಲ್ಕು ನಿಮಿಷ ಕಾಯಿಸಬೇಕು. ಮೇಲೆ ನೊರೆ ಏಳಲು ಆರಂಭಿಸುತ್ತಿದ್ದಂತೆ ಚೆನ್ನಾಗಿ ತಿರುಗಿಸಿ ಮತ್ತೆ ಕಾಯಿಸ ಬೇಕು. ಇದಕ್ಕೆ ಏಲಕ್ಕಿ ಪುಡಿ ಮತ್ತು ಕೇಸರಿ ಬಣ್ಣ ಸೇರಿಸಿ ಪಾಕವನ್ನು ಇಟ್ಟುಕೊಳ್ಳಬೇಕು.
ಕಡಲೆಹಿಟ್ಟು ಮತ್ತು ಹಾಲನ್ನು ತೆಳ್ಳನೆ ಹಿಟ್ಟಿನಂತೆ ಕಲೆಸಿಕೊಳ್ಳಬೇಕು. ಬಾಣಲೆಗೆ ತುಪ್ಪ ಹಾಕಿ ಕಾಯಿಸಿ, ಬೆರೆಸಿರುವ ಕಡಲೆ ಹಿಟ್ಟನ್ನು ಸಣ್ಣ ತೂತುಗಳಿರುವ ಹಿಡಿ (ಬೂಂದಿ ತಯಾರಿಸುವಂತಹ ಹಿಡಿ) ಮೂಲಕ ಬಾಣಲೆಗೆ ಸಣ್ಣ ಸಣ್ಣ ಉಂಡೆಗಳಾಗಿ ಬೀಳುವಂತೆ ನೋಡಿ ಕೊಳ್ಳಬೇಕು. ಬೂಂದಿ ಕೆಂಬಣ್ಣಕ್ಕೆ ತಿರುಗುವ ತನಕ ಬೇಯಿಸಿ ತೆಗೆಯಬೇಕು.
ಕರಿದ ಬೂಂದಿಯನ್ನು ಪಾಕಕ್ಕೆ ಹಾಕಿ ಮತ್ತೆ ಎತ್ತಿ ತಟ್ಟೆಯ ಮೇಲೆ ಆರಲು ಬಿಡಬೇಕು. ಅದಕ್ಕೆ ಬಾದಾಮಿ, ಪಿಸ್ತಾ ಚೂರುಗಳನ್ನು ಸೇರಿಸಿ, ಒಂದೈದು ನಿಮಿಷದ ನಂತರ ಬೂಂದಿಗೆ ಸ್ವಲ್ಪ ಬಿಸಿ ನೀರು ಚುಮುಕಿಸಿ ತೇವದ ಕೈಗಳಲ್ಲಿ ಉಂಡೆ ಕಟ್ಟಬೇಕು. ಈ ಉಂಡೆಯನ್ನು ಗಣಪತಿಗೆ ಅರ್ಪಿಸಿದರೆ ಆತನಿಗೆ ಬಹಳ ಇಷ್ಟವಾಗುತ್ತದೆ.
ಕಜ್ಜಾಯ ಮಾಡುವುದು ಹೀಗೆ
ಬೇಕಾಗುವ ಸಾಮಗ್ರಿ: ಒಂದು ಕೆಜಿ ದಪ್ಪ ಅಕ್ಕಿ, ಒಂದು ಕೆಜಿ ಬೆಲ್ಲ, 1/4 ಕೆಜಿ ಬಿಳಿ ಎಳ್ಳು, ಅರ್ಧ ಒಣಕೊಬ್ಬರಿ, 1/4 ಕೆಜಿ ಚಿರೋಟಿ ರವೆ.
ಮಾಡುವ ವಿಧಾನ: ಅಕ್ಕಿಯನ್ನು 36 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಅಂದ್ರೆ ಸುಮಾರಾಗಿ ಇಂದು ಬೆಳಿಗ್ಗೆ ನೆನೆಸಿದರೆ, ಮಾರನೇ ದಿನ ಸಂಜೆವರೆಗೆ ಇಡಬೇಕು. ನಂತರ ನೀರನ್ನೆಲ್ಲಾ ಒಂದು ಬಟ್ಟೆಯಲ್ಲಿ ಬಸಿದು ತೆಗೆದು, ಬಟ್ಟೆ ಹಾಸಿ ನೆಲದ ಮೇಲೆ ಗಾಳಿಗೆ ಹರಡಬೇಕು. ಅಕ್ಕಿಯಲ್ಲಿರುವ ತೇವಾಂಶಗಳೆಲ್ಲಾ ಆರಿದ ಮೇಲೆ ಮಿಕ್ಸಿ ಮಾಡಿ ಜರಡಿ ಹಿಡಿಯಿರಿ. ತರಿತರಿಯಾಗಿದ್ದರೂ ಆಗುತ್ತದೆ.
ಇದಕ್ಕೆ ಒಣಕೊಬ್ಬರಿ, ಎಳ್ಳು ಪುಡಿ ಮಾಡಿ, ರವೆ ಹಾಕಿ ಬೆರೆಸಿಕೊಳ್ಳಿ. ಬೆಲ್ಲವನ್ನು ಪುಡಿ ಮಾಡಿಕೊಂಡು ಇದಕ್ಕೆ 4-5 ಚಮಚ ನೀರು ಹಾಕಿ ದಪ್ಪ ತಳದ ಪಾತ್ರೆಯಲ್ಲಿ ಪಾಕ ಮಾಡಲು ಒಲೆಯ ಮೇಲಿಡಿ. ಪಾಕ ಬೆರಳಲ್ಲಿ ಹಿಡಿದು ನೋಡಿ. ಅಂಟು ಅಂಟಾದಾಗ ಇದಕ್ಕೆ ಬೆರೆಸಿಕೊಂಡ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಿ. ಗಂಟಾಗದಂತೆ ಕಲಸಿ ಬೇಯಿಸಿ. ಸಣ್ಣ ಉರಿಯಲ್ಲಿ ಬೇಯಿಸಬೇಕು. ತಳ ಹತ್ತದಂತೆ ತಿರುಗಿಸುತ್ತಿರಬೇಕು. ಸ್ವಲ್ಪ ಹೊತ್ತಾದ ನಂತರ, ನೀರಿನಲ್ಲಿ ಕೈಯನ್ನು ಅದ್ದಿ ಇದನ್ನು ಮುಟ್ಟಿ ನೋಡಿ. ಕೈಗೆ ಕಜ್ಜಾಯದ ಹಿಟ್ಟು ಅಂಟದಿದ್ದರೆ ಬೆಂದಿದೆ ಎಂದರ್ಥ. ಆಗ ಕೆಳಗಿಳಿಸಿ ತಣ್ಣಗಾಗಲು
ಬಿಡಿ. ನಂತರ ಒದ್ದೆ ಕೈಯಲ್ಲಿ ಹಿಟ್ಟನ್ನು ತೆಗೆದುಕೊಂಡು ಶುಭ್ರವಾದ ಒದ್ದೆ ಬಟ್ಟೆಯ ಮೇಲೆ ಅಂಗೈಯಗಲ ದಪ್ಪಗೆ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ. ಕಂದು ಬಣ್ಣ ಬಂದಾಗ ತೆಗೆಯಿರಿ.
ಸಿಹಿಕುಂಬಳಕಾಯಿ ಹಾಗೂ ಬಾಳೆಹಣ್ಣು ಬಳಸಿಯೂ ಕಜ್ಜಾಯ ಮಾಡಬಹುದು. ಗಣೇಶನಿಗೆ ಪ್ರಿಯವಾದ ತಿಂಡಿಗಳಲ್ಲಿ ಕಜ್ಜಾಯವೂ ಒಂದು. ನೀವು ಮಾಡಿದ ಕಜ್ಜಾಯ ಗಣೇಶನಿಗೆ ಖಂಡಿತಾ ಇಷ್ಟವಾಗುತ್ತದೆ.
ಇದನ್ನೂ ಓದಿ |Krishna Janmashtami̇ 2022 | ತಿಂಡಿ ಪ್ರಿಯ ಶ್ರೀಕೃಷ್ಣನಿಗೆ ನಿಮ್ಮ ಮನೆಯಲ್ಲಿ ಯಾವ ಉಂಡೆ ಮಾಡುವಿರಿ?