Site icon Vistara News

ಧವಳ ಧಾರಿಣಿ ಅಂಕಣ: Ganesh Chaturthi: ಶುದ್ಧ ಭಕ್ತಿಗೆ ಒಲಿಯುವ ಕರುಣಾಮಯ ಮೂರ್ತಿ

ganapathi

ವಿವಿಧ ಅವತಾರಗಳ ಹಲವು ಆಯಾಮಗಳ ಗಣೇಶ

(ಹಿಂದಿನ ಭಾಗದಲ್ಲಿ ಅಮೂರ್ತವಾದ ದೇವರನ್ನು ವಿಗ್ರಹದ ಮೂಲಕ ಕಂಡುಕೊಂಡು ಆ ಮೂಲಕ ಅಮೂರ್ತದ ಬ್ರಹ್ಮನನ್ನು ಕಾಣಬಹುದಾದ ಸನಾತನ ಸಂಸ್ಕೃತಿಯ ಕುರಿತು ವಿವರಿಸಿದ್ದೆ. ಪುರಾಣವೆಂದರೆ ಕಥಾರೂಪವಾಗಿ ಮೂರ್ತರೂಪವನ್ನು ಆರಾಧಿಸಿ ಆ ಮೂಲಕ ನಿರ್ವಿಕಲ್ಪವನ್ನು ತಲುಪುವ ಮಾರ್ಗವನ್ನು ಹೇಳುವುದು. ಆ ಕುರಿತು ಅವಲೋಕನ ಇಲ್ಲಿದೆ.)

ವಿನಾಯಕ ಜನಸಾಮಾನ್ಯರಿಗೆ ಇಷ್ಟವಾಗುವದು ಆತನ ಸರಳತನಕ್ಕೆ. ಮಣ್ಣಿನಲ್ಲಿ ಮೂರ್ತಿಮಾಡಿ ಆತನನ್ನು ಮನೆಮನೆಗೆ ತರುವಾಗ ಈತ ನಮ್ಮ ದೇವತೆ ಎನ್ನುವ ಭಾವ ಮೂಡುತ್ತದೆ. ಮಣ್ಣು ಮೂಲಾಧಾರಚಕ್ರದ ಸಂಕೇತ. ಮೂಲಾಧಾರ ಚಕ್ರದ ದಳಗಳ ಬಣ್ಣ ಕೆಂಪು. ಈ ಕಾರಣಕ್ಕೆ ಕೆಂಪು ಬಣ್ಣದ ಗಣಪತಿ ಶ್ರೇಷ್ಠವಾಗಿದೆ. ಆತನನ್ನು “ಕೃತಾಂಗರಾಗಂ ನವಕುಂಕುಮೇನ” ಕುಂಕುಮವರ್ಣದ ಬಟ್ಟೆಯನ್ನು ಧರಿಸಿದವನೆಂದೂ, ಕೆಂಪು ಅಂಗರಾಗವನ್ನು ಮೈಗೆಲ್ಲ ಬಳಿದುಕೊಂಡವನೆಂದು ವರ್ಣಿಸುವ ಶ್ಲೋಕವೊಂದಿದೆ. ಕೆಂಪುಬಣ್ಣದ ಗಣಪತಿ ಶ್ರೇಷ್ಠನ್ನುವುದಕ್ಕೆ ಒಂದು ಕಥೆಯಿದೆ. ಚತುರ್ಯುಗದಾರಂಭಕ್ಕೆ ಮುನ್ನ ಬ್ರಹ್ಮ ಇನ್ನೂ ನಿದ್ರೆಯಿಂದ ಎದ್ದಿರಲಿಲ್ಲ. ಆಗ ಅಲ್ಲಿಗೆ ಕೈಲಾಸಪತಿಯಾದ ಈಶ್ವರ ಬಂದು ನಾಲ್ಮೊಗನನ್ನು ಎಬ್ಬಿಸಿದ. ಅವಸರದಲ್ಲಿ ಎದ್ದ ಬ್ರಹ್ಮ ಒಮ್ಮೆ ಆಕಳಿಸಿದಾಗ ಕೆಂಪು ದಾಸವಾಳದ ಬಣ್ಣವನ್ನು ಹೊಂದಿದ ಸುಂದರಾಂಗ ಮತ್ತು ಅಷ್ಟೇ ದುಷ್ಟನಾದ ದೈತ್ಯನೋರ್ವ ಉದ್ಭವವಾದನು. ಕೆಂಪಗೆ ಇರುವ ಅವನನ್ನು ನೋಡಿದ ಬ್ರಹ್ಮನಿಗೆ ಪುತ್ರಮೋಹ ಉಂಟಾಗಿ ಅವನಿಗೆ ನೀನು ಕೋಪಗೊಂಡು ಯಾರನ್ನಾದರೂ ತಬ್ಬಿಕೊಂಡರೆ ಅಂತವರ ದೇಹ ಚೂರು ಚೂರಾಗಿ ಹೋಗುವುದು ಎನ್ನುವ ವರವನ್ನು ಇತ್ತನು. ಸಿಂಧೂರ ತನಗೆ ಸಾವು ಬರಬಾರದು ಎನ್ನುವ ವರವನ್ನು ಕೇಳಿದಾಗ ಅದು ಬ್ರಹ್ಮನಿಗೆ ಅದು ಸಾಧ್ಯವಿಲ್ಲದ ಮಾತು. ಆಗ ಆ ದೈತ್ಯನು ತನಗೆ ಮನುಷ್ಯರಿಂದಾಗಲೀ, ಪ್ರಾಣಿಗಳಿಂದಾಗಲೀ ಸಾವು ಬಾರದಂತಹ ವರವನ್ನು ಕೇಳಿದನು. ಮತ್ತು ತನ್ನನ್ನು ಕೊಂದು ತನ್ನ ರಕ್ತದಲ್ಲಿ ಸ್ನಾನವನ್ನು ಮಾಡಿದರೆ ಮಾತ್ರ ತಾನು ಸಾಯುವ ವರವನ್ನು ಕೇಳಿಕೊಂಡನು. ಇದು ಒಂದು ರೀತಿ ಹಿರಣ್ಯಕಶಿಪು ಕೇಳಿದ ವರದ ರೀತಿಯೇ ಇದೆ.

ವರಬಲದಿಂದ ಬಲಾನ್ವಿತನಾಗಿ ಆತನ ದುಷ್ಟತನ ಮೇರೆ ಮೀರಿತು. ಭೂಲೋಕವನ್ನು ಜಯಿಸಿ ದೇವಲೋಕದ ಮೇಲೆ ದಾಳಿ ಮಾಡಿ ಇಂದ್ರನನ್ನು ಪದಚ್ಯುತಗೊಳಿಸಿದನು. ಅಲ್ಲಿಂದ ನೇರವಾಗಿ ಬ್ರಹ್ಮಲೋಕಕ್ಕೆ ಬಂದು ಬ್ರಹ್ಮನನ್ನೇ ಅಪ್ಪಿ ಕೊಲ್ಲಲು ಹವಣಿಸಿದನು. ಅವನಿಗೆ ಬ್ರಹ್ಮಪದವಿಯ ಮೇಲೆ ಆಸೆಯಾಗಿತ್ತು. ಆಗ ಬ್ರಹ್ಮ ಜೀವವನ್ನು ಉಳಿಸಿಕೊಳ್ಳಲು ಓಡುತ್ತಾ ವೈಕುಂಠಕ್ಕೆ ಹೋಗಿ ನಾರಾಯಣನ ಆಶ್ರಯವನ್ನು ಬೇಡಿದನು. ಅಲ್ಲಿಗೂ ಬಂದ ದೈತ್ಯನನ್ನು ನೋಡಿ ವಿಷ್ಣು ಉಪಾಯವಾಗಿ ಕೈಲಾಸದಲ್ಲಿರುವ ಶಿವ ತಮ್ಮೆಲ್ಲರಿಗೂ ಬಲಿಷ್ಠನಾಗಿರುವ ಕಾರಣ ಆತನನ್ನು ಗೆದ್ದರೆ ತಮ್ಮನ್ನು ಗೆದ್ದಂತೆ ಎಂದು ಹೇಳಿ ಕಳುಹಿಸಿದನು. ಸಿಟ್ಟಿಗೆದ್ದ ಸಿಂಧೂರ ದೈತ್ಯ ನೇರವಾಗಿ ಕೈಲಾಸಕ್ಕೆ ಬಂದು ತಪಸ್ಸಿನಲ್ಲಿದ್ದ ಶಿವನನ್ನು ನೋಡಲು ಅಲ್ಲೇ ಇದ್ದ ಪಾರ್ವತಿಯನ್ನು ನೋಡಿ ಮೋಹಗೊಂಡನು. ಅವಳನ್ನು ಎತ್ತಿಕೊಂಡು ಪಾತಾಳಕ್ಕೆ ಬರತೊಡಗಿದನು ಆಗ ಭಯದಿಂದ ಕೂಗಿಕೊಂಡ ಪಾರ್ವತಿಯ ಕೂಗನ್ನು ಕೇಳಿದ ಶಿವ ಆ ದೈತ್ಯನ ಮೇಲೆ ಯುದ್ಧಕ್ಕೆ ಬಂದನು. ವರದ ಕುರಿತು ತಿಳಿದ ಬ್ರಹ್ಮ ನೇರವಾಗಿ ಗಣಪತಿಯ ಬಳಿ ಈ ವಿಷಯವನ್ನು ತಿಳಿಸಿ ಶಿವನ ಸಹಾಯಕ್ಕೆ ಹೋಗಲು ಹೇಳಿದನು. ಸೃಷ್ಟಿಯ ಆದಿಯಾದ ಕಾರಣ ಗಣಪತಿ ಮಯೂರೇಶ್ವರ ಅವತಾರವನ್ನು ತಾಳಿದ್ದನು. ಅವನಿಗೆ ಆನೆಮುಖವಿರಲಿಲ್ಲ. ವಿಷಯ ತಿಳಿದ ಮಯೂರೇಶ್ವರ ಬ್ರಾಹ್ಮಣವಟುವಿನ ವೇಷದಲ್ಲಿ ಹೋಗಿ ಸಿಂಧೂರದೈತ್ಯನನ್ನು ಸಮಾಧಾನಿಸಿ ಪಾರ್ವತಿಯನ್ನು ಹಿಂತಿರುಗಿ ಕೊಡಿಸಲು ಪ್ರಯತ್ನಿಸಿದರೂ ಅದು ಫಲಕಾರಿಯಾಗಲಿಲ್ಲ. ಕೋಪಗೊಂಡ ರಾಕ್ಷಸ ಶಿವನನ್ನು ಅಪ್ಪಿಕೊಳ್ಳಬೇಕು ಎಂದು ಬಂದಾಗ ಮಯೂರೇಶ ತನ್ನ ಕೈಯಲ್ಲಿದ್ದ ಪರಶುವನ್ನು ಅವರಿಬ್ಬರ ನಡುವೆ ಮಾಯೆಯಿಂದ ಇಟ್ಟನು.

ಈ ಕಾರಣದಿಂದ ಸಿಂಧೂರನಿಗೆ ಮೈಯಲ್ಲಿ ಗಾಯಗಳುಂಟಾಗಿ ಪರಾಭವಗೊಂಡು ಪಾತಾಳಕ್ಕೆ ನಡೆದರೂ ಪುನಃ ಅಲ್ಲಿಂದಲೇ ತನ್ನ ಉಪಟಳವನ್ನು ಮತ್ತೆ ಮೊದಲಿನಂತೆ ಪ್ರಾರಂಭಿಸಿದನು. ಹೀಗೆ ಯುಗಗಳು ಕಳೆದವು. ನಂತರ ಯಾವಾಗ ಗಜಾನನನಿಗೆ ಆನೆಯ ಮುಖ ಬಂದಿತೋ ಆಗ ಗಣೇಶನಿಗೆ ಸಿಂಧೂರ ದೈತ್ಯನ ಉಪಟಳದ ವಿಷಯ ತಿಳಿಯಿತು. ಹಿಂದಿನ ಅವತಾರದಲ್ಲಿ ಮಯೂರೇಶ್ವರನಾಗಿ ಸಿಂಧೂ ದೈತ್ಯನನ್ನು ಕೊಂದಿದ್ದ ಗಣೇಶ ಈಗ ಸಿಂಧೂರ ದೈತ್ಯನನ್ನು ಯುದ್ಧಕ್ಕೆ ಆಹ್ವಾನಿಸಿದನು. ಮಾನವನ ದೇಹ ಆನೆಯ ಮುಖವಿರುವ ಗಣೇಶ ಮತ್ತು ಸಿಂಧೂರ ದೈತ್ಯನ ನಡುವೆ ಭೀಕರ ಹೋರಾಟವಾದಾಗ ಗಜಾನನ ಆ ರಕ್ಕಸನನ್ನು ಹಿಡಿದು ಅವುಚಿ ಕೊಂದು ಅವನ ರಕ್ತದಿಂದ ಸ್ನಾನವನ್ನು ಮಾಡಿ ವಿಜ್ರಂಭಿಸಿದನು. ಆನೆಯೊಂದು ಸೊಕ್ಕಿನಿಂದ ಎರಗುವ ಕ್ರಿಯೆಯನ್ನು ಸಿಂಧೂರ ದೈತ್ಯನ ವಧಾ ಪ್ರಕರಣದಲ್ಲಿ ಗೋಚರಿಸುತ್ತದೆ. ಹೀಗೆ ಕೆಂಪುಬಣ್ಣದವನಾದ ಗಜಮುಖನನ್ನು ಋಷಿಗಳೆಲ್ಲರೂ ಸ್ತೋತ್ರಮಾಡಿ ಶಾಂತನಾಗಲು ಬೇಡಿಕೊಂಡರು. ಆಗ ಶಾಂತನಾದ ಗಣೇಶ ಯಾರು ರಕ್ತವರ್ಣದ ತನ್ನನ್ನು ಚವತಿಯ ದಿನ ಪೂಜಿಸುತ್ತಾರೋ ಅವರಿಗೆ ವಿಶೇಷ ಫಲ ದೊರೆಯುತ್ತದೆ ಎಂದು ವರಕೊಟ್ಟನು. ಹಾಗಾಗಿ ಕೆಂಪು ವರ್ಣದ ಗಣಪತಿಯ ಆರಾಧನೆ ಚವತಿ ಹಬ್ಬಕ್ಕೆ ಶ್ರೇಷ್ಠ.

ಗರಿಕೆಯರ್ಪಿಸುವ ಸರಳಪೂಜೆ ಅವನಿಗಿಷ್ಟ. ಒಂದು ಎಸಳಾದರೂ ಗರಿಕೆ ಆತನ ಪೂಜೆಗೆ ಬೇಕೇಬೇಕು. ಗಣಪತಿಗೆ ಗರಿಕೆಗಿಂತಲೂ ಹೆಚ್ಚಿನದಾಗಿ ಶಮೀ ಪತ್ರದಿಂದ ಪೂಜೆ ಮಾಡಿದರೆ ಮತ್ತು ಅರ್ಕ ಗಣಪತಿಯನ್ನು ಪೂಜಿಸಿದರೆ ಅತೀ ಶೀಘ್ರದಲ್ಲಿ ಅನುಗ್ರಹವಾಗುತ್ತದೆ ಎನ್ನುವುದನ್ನು ಗಣೇಶ ಪುರಾಣ ವರ್ಣಿಸುತ್ತದೆ. ಬಹಳ ಹಿಂದೆ ಮಾಲವ ದೇಶದಲ್ಲಿ ಔರವ ಮತ್ತು ಸುಮೇಧೆ ಎನ್ನುವ ಮುನಿ ದಂಪತಿಗಳಿಗೆ ಶಮೀಕ ಎನ್ನುವ ಸುಂದರಿಯಾದ ಮಗಳೊಬ್ಬಳಿದ್ದಳು. ತಪಸ್ವೀ ದಂಪತಿಗಳು ಅವಳನ್ನು ಬಹು ಮುದ್ದಿನಿಂದ ಸಾಕಿದ್ದರು. ಹೀಗಿರುವಾಗ ಪ್ರಾಯ ಪ್ರಬುದ್ಧೆಯಾದ ಅವಳನ್ನು ದೌಮ್ಯ ಮಹರ್ಷಿಯ ಮಗ ಮತ್ತು ಶೌನಕ ಮಹರ್ಷಿಯ ಶಿಷ್ಯನೂ ಆಗಿರುವ ಮಂದಾರ ಎನ್ನುವ ಅನುರೂಪನಾದ ಮುನಿಕುವರನಿಗೆ ಮದುವೆ ಮಾಡಿ ಕೊಟ್ಟರು. ಈ ಇಬ್ಬರೂ ದಂಪತಿಗಳೂ ಅನ್ಯೋನ್ಯವಾಗಿ ನಲಿಯುತ್ತಾ ವಿಹಾರ ಮಾಡುತ್ತಾ ರಸಿಕತೆಯಿಂದ ಅಡವಿಯಲ್ಲಿ ನಲಿಯುತ್ತಿದ್ದರು. ಆ ಸಮಯದಲ್ಲಿ ಭ್ರಶುಂಡಿ ಎನ್ನುವ ಗಣಪತಿಯ ಮಹಾ ಭಕ್ತ ಮತ್ತು ತಪಸ್ವಿ ಅವರ ಆಶ್ರಮಕ್ಕೆ ಬಂದನು ಆತನಿಗೂ ಗಣಪತಿಯಂತೆ ಸೊಂಡಿಲಿತ್ತು. ಆತನ ವಿರೂಪವನ್ನು ನೋಡಿದ ಮಂದಾರ ಮತ್ತು ಶಮೀಕರಿಗೆ ನಗು ತಡೆಯಲಿಕಾಗಲಿಲ್ಲ. ಅದು ಭ್ರಶುಂಡಿಯ ಗಮನಕ್ಕೂ ಬಂತು. ಆತ ಶೀಘ್ರಕೋಪಿ; ತನ್ನನ್ನು ನೋಡಿ ಅಪಹಾಸ್ಯ ಗೈದ ನೀವಿಬ್ಬರೂ ಯಾರಿಗೂ ಪ್ರಯೋಜನಕ್ಕೆ ಬಾರದ ವೃಕ್ಷಗಳಾಗಿ ಎಂದು ಶಾಪಕೊಟ್ಟನು. ಆಗ ಹೆದರಿದ ದಂಪತಿಗಳು ಅವನಿಗೆ ಅಳುತ್ತಾ ತಮ್ಮದು ತಪ್ಪಾಯಿತು, ಇದು ಅರಿಯದೇ ಮಾಡಿದ ತಪ್ಪು, ತಮ್ಮನ್ನು ಕ್ಷಮಿಸಬೇಕೆಂದು ಬೇಡಿಕೊಂಡರು.

ಕೋಪಗೊಂಡ ಮುನಿ ತಕ್ಷಣವೇ ಶಾಂತನಾಗಿ ತನ್ನಂತೇ ಇರುವ ಗಣಪತಿ ಯಾವಾಗ ಒಲಿಯುತ್ತಾನೋ ಆಗ ನಿಮಗೆ ಶಾಪದಿಂದ ಮುಕ್ತಿ ಎಂದು ಉಶ್ಯಾಪ ಕೊಟ್ಟನು. ತಕ್ಷಣವೇ ಶಮೀಕ ಇಡೀ ಮೈಮೇಲೆ ಮುಳ್ಳುಗಳಿಂದ ಕೂಡಿದ ಶಮೀ ವೃಕ್ಷವಾದರೆ, ಮಂದಾರ ಪಾಳುಬಿದ್ದ ಮನೆ ಜಾಗ್ದಲ್ಲಿ ಬೆಳೆಯುವ ಎಕ್ಕದ ಗಿಡವಾಗಿ ಮಾರ್ಪಟ್ಟನು. (ನಿನ್ನ ಮನೆ ಎಕ್ಕ ಹುಟ್ಟಹೋಗ ಎನ್ನುವ ಬೈಗಳಿಗೆ ಹಿನ್ನೆಲೆ ಇದೇ, ಎಕ್ಕ ಬೆಳೆಯುವುದೇ ಪಾಳುಬಿದ್ದೆಡೆ). ಇತ್ತ ತನ್ನ ಮಗಳು ಮತ್ತು ಅಳಿಯ ಕಾಣದೇ ಅವರನ್ನು ಹುಡುಕುತ್ತಾ ಔರವಋಷಿ ಮತ್ತು ತನ್ನ ಶಿಷ್ಯ ಎಲ್ಲಿ ಎಂದು ಹುಡುಕುತ್ತಾ ಶೌನಕ ಇಬ್ಬರೂ ಕಾಡಿಗೆ ಬಂದರು. ಅಲ್ಲಿ ಅವರು ಗಣಪತಿಯನ್ನು ಧ್ಯಾನ ಮಾಡಿ ನವದಂಪತಿಗಳ ಕುರಿತು ಅಲೋಚಿಸಿದಾಗ ಅವರಿಗೆ ಭ್ರಶುಂಡಿ ಕೊಟ್ಟ ಶಾಪದ ಸಂಗತಿ ತಿಳಿಯಿತು. ಆಗ ಅವರು ಗಜಾನನನನ್ನು ಒಲಿಸಿಕೊಳ್ಳಲು ಹನ್ನೆರಡು ವರುಷಗಳ ಕಾಲ ಬಲು ಕಠಿಣವಾದ ತಪಸ್ಸನ್ನು ಆಚರಿಸಿದರು. ಅವರ ಭಕ್ತಿಗೆ ಮೆಚ್ಚಿದ ಗಣಪತಿ ಅವರ “ಭ್ರಶುಂಡಿಯ ಮಹಾ ತಪಸ್ವಿ, ಆತ ಕೊಟ್ಟ ಶಾಪವನ್ನು ತಾನು ತೆಗೆಯಲಾರೆ. ಆದರೆ ಇಂದಿನಿಂದ ಯಾರು ಎಕ್ಕದ ಗಿಡದಿಂದ ತನ್ನ ಮೂರ್ತಿಯನ್ನು ಮಾಡಿ ಶಮೀ ಪತ್ರದಿಂದ ತನ್ನನ್ನು ಪೂಜಿಸಿದರೆ ದೂರ್ವೆಗಿಂತಲೂ ಶ್ರೇಷ್ಠ ವಾಗಿರುತ್ತದೆ”. ತನ್ನ ಮಗಳು ವೃಕ್ಷವಾಗಿರುವುದನ್ನು ಸಹಿಸದ ಆಕೆಯ ತಂದೆ ತನಗಿನ್ನೇಕೆ ಈ ಜಿವ, ಎಂದು ಪ್ರಾಯೋಪವೇಶ ವೃತವನ್ನು ಕೈಗೊಂಡು ತನ್ನ ದೇಹವನ್ನು ಅಗ್ನಿಗೆ ಅರ್ಪಿಸಿದನು. ಅಂದಿನಿಂದ ಔರ್ವ ಋಷಿ ಶಮೀ ವೃಕ್ಷದ ಒಳಗಡೆ ಅಗ್ನಿಯಾಗಿ ಇದ್ದಾನೆ. ಯಜ್ಞದಲ್ಲಿ ಅರುಣಿಯನ್ನು ಕಡೆದು ಅಗ್ನಿಜನನವನ್ನು ಮಾಡುವುದು ಈ ಹಿನ್ನೆಲೆಯಿಂದಾಗಿ. ಆ ಮೊದಲಾಗಿ ಶಮಿಪತ್ರ ಗಣಪತಿಗೆ ಶ್ರೇಷ್ಠವೆಂದಾಯಿತು.

ಪ್ರಿಯವ್ರತನೆನ್ನುವ ಮದ್ರದೇಶದ ರಾಜನಿಗೆ ಇಬ್ಬರು ಹೆಂಡತಿಯರು. ಹಿರಿಯ ರಾಣಿ ಕೀರ್ತಿ ಸದ್ಗುಣಿ. ಆದರೆ ಎರಡನೇ ಹೆಂಡತಿ ಪ್ರಭಾ ತನ್ನ ಸೌಂದರ್ಯದಿಂದ ರಾಜನನ್ನು ಬುಟ್ಟಿಗೆ ಹಾಕಿಕೊಂಡು ಹಿರಿಯ ರಾಣಿಯನ್ನು ಅವಮಾನಿಸುತ್ತಿದ್ದಳು. ಎರಡನೆ ಹೆಂಡತಿ ಪ್ರಭಾಳಿಗೆ ಪದ್ಮನಾಭೀ ಎನ್ನುವ ಸುಗುಣ ಮಗನೋರ್ವ ಜನಿಸಿದನು. ಅವಳಿಂದ ಪ್ರೇರೇಪಿತನಾದ ರಾಜನು ಸದಾ ಕಾಲವೂ ಹಿರಿಯ ರಾಣಿಯನ್ನು ಮೂದಲಿಸುತ್ತಿದ್ದನು. ಈ ಅವಮಾನದಿಂದ ನೊಂದ ಕೀರ್ತಿ ಆತ್ಮಹತ್ಯೆ ಮಾಡೀಕೊಳ್ಳಲು ಯೋಚಿಸಿದಾಗ ಅರಮನೆಯ ಪುರೋಹಿತರಾದ ದೇವಲ ಎನ್ನುವವರು ಗಣಪತಿಯ ಆರಾಧನೆ ಮಾಡು ಎಂದು ಕೀರ್ತಿಗೆ ಉಪದೇಶಿಸಿ ಹೋದರು. ತನ್ನ ಕಷ್ಟಗಳೆಲ್ಲ ಬಗೆಹರಿಯಲಿ ಎಂದು ಕೀರ್ತಿ ಬಹಳ ಕಷ್ಟಪಟ್ಟು ದೂರ್ವೆಯನ್ನು ಸಂಗ್ರಹಿಸಿ ಗಣಪತಿಯನ್ನು ಆರಾಧಿಸುತ್ತಿದ್ದಳು. ಒಂದು ಕಡುಬೇಸಿಗೆಯಲ್ಲಿ ಅವಳಿಗೆ ಎಷ್ಟು ಹುಡುಕಿದರೂ ದೂರ್ವೆ ಸಿಗಲಿಲ್ಲ. ಅವಳ ದಾಸಿಯರು ಅವಳಿಗೆ ಶಮೀ ವೃಕ್ಷದ ಎಲೆಯನ್ನು ಪೂಜೆಗೆಂದು ತಂದು ಕೊಟ್ಟರು. ಭಗವಂತ ಭಕ್ತಿಗೆ ಒಲಿಯುತ್ತಾನೆ ಹೊರತೂ ಆಡಂಬರಕ್ಕಲ್ಲ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗುರುಶಿಷ್ಯ ಪರಂಪರೆ: ತತ್ತ್ವದರ್ಶನದ ಹಾದಿಯನ್ನು ತೋರಿಸುವ ಜ್ಞಾನದ ಬೆಳಕು

ರಾಣಿ ಕೀರ್ತಿ ಭಕ್ತಿಯಿಂದ ಅರ್ಪಿಸಿದ ಶಮೀ ದಳಗಳಿಂದ ಗಣಪತಿ ಪ್ರಸನ್ನನಾಗಿ ಅವಳಿಗೆ ವರವನ್ನು ಇತ್ತಂತೆ ಸ್ವಪ್ನದಲ್ಲಿ ಕಂಡು ಬಂತು. ಪರಿಣಾಮವಾಗಿ ಕಿರಿಯ ರಾಣಿ ಪ್ರಭೆಯ ಈರ್ಷ್ಯೆ ಅವಳಿಗೆ ತಿರುವು ಮುರುಗಾಯಿತು. ಅವಳಿಗೆ ಮಾರಕ ರೋಗ ಬಂದು ಕುರೂಪಿಯಾದಳು. ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ಕೀರ್ತಿಯಲ್ಲಿ ಕ್ಷಮೆಕೋರುತ್ತಾ ಪ್ರೀತಿಯಿಂದ ಆಕೆಯನ್ನು ಕೂಡಿದನು. ಅವರಿಬ್ಬರ ದಾಂಪತ್ಯದಿಂದ ಆಕೆಗೆ “ಕ್ಷಿಪ್ರ ಪಸಾದನ” ಎನ್ನುವ ಮಗನು ಜನಿಸಿದನು. ಇದನ್ನು ಸಹಿಸದ ಕಿರಿಯ ರಾಣಿ ಆ ಮಗುವಿಗೆ ವಿಷವನ್ನಿಕ್ಕಿದಳು. ತನ್ನ ಮಗು ಗತಪ್ರಾಣದವನಾದದ್ದನ್ನು ಕಂಡ ರಾಣಿ ಕೀರ್ತಿಯ ದುಃಖ ಹೇಳತೀರದಾಯಿತು. ಅಲ್ಲಿಗೆ ಗೃತ್ಸಮದ ಎನ್ನುವ ಋಷಿ ಆ ಸಮಯಕ್ಕೆ ಸರಿಯಾಗಿ ಬಂದು ರಾಣಿಯನ್ನು ಸಂತೈಸಿ ಅವಳ ಹತ್ತಿರ “ನೀನು ಶಮೀಪತ್ರದಿಂದ ಗಣಪತಿಯ ಆರಾಧನೆಯ ಪುಣ್ಯವನ್ನು ನಿನ್ನ ಮಗನಿಗೆ ಧಾರೆ ಎರೆದು ಕೊಡು ಆತ ಬದುಕುತ್ತಾನೆ” ಎಂದನು. ರಾಣಿ ಹಾಗೇ ಮಾಡಲು ಮಗು ನಿದ್ರೆಯಿಂದ ಎದ್ದಂತೆ ಎದ್ದು ಓರ್ವ ಸತ್ಪುರ್ಷನಾಗಿ ಬಹುಕಾಲ ರಾಜ್ಯವನ್ನಾಳಿದನು. ಅಂದು ಮೊದಲಾಗಿ ಶಮೀ ಪತ್ರೆ ದೇವನಿಗೆ ಪ್ರಿಯವಾಗಲು ಕಾರಣ.

ಭಗವದ್ಗೀತೆಯಲ್ಲಿ ಕೃಷ್ಣ ಪತ್ರ, ಪುಷ್ಪ ಕೊನೆಗೆ ನೀರನ್ನಾದರೂ ಭಕ್ತಿಯಿಂದ ಯಾರು ಕೊಡುತ್ತಾರೋ ಅದು ತನಗೆ ಪ್ರಿಯವೆಂದಿದ್ದಾನೆ. ಅದನ್ನು ಈ ಕಥೆ ನೆನಪಿಸುತ್ತದೆ. ಗಣೇಶನಿಗೆ ದೂರ್ವೆ, ಶಮೀ, ಎಕ್ಕ ಅಂದರೆ ಲೋಕದ ಕಣ್ಣಿಗೆ ನಿರುಪಯುಕ್ತವೆಂದು ಕಾಣಿಸುವುದೆಲ್ಲವೂ ಪ್ರಿಯವಾಗಿದೆ. ಪ್ರಪಂಚದಲ್ಲಿ ಎಲ್ಲವೂ ದೇವನ ಸೃಷ್ಟಿ ಎನ್ನುವುದು ಇದರ ಹಿನ್ನೆಲೆ.

ಚವತಿಯ ಗಣೇಶನ ಮೂರ್ತಿ ಕೆತ್ತಿ ತೆಗೆಯುವುದಲ್ಲ, ಬೀಡಿಬಿಡಿಯಾದ ಮಣ್ಣನ್ನು ಆರಿಸಿ ಹದ ಮಾಡಿ ಮೆತ್ತಿ ಕಟ್ಟುವುದು. ಕುಟ್ಟಿ ತೆಗೆಯುವ ಮನೋಭಾವದಿಂದ ಕಟ್ಟುವ ಮನವನ್ನು ಬೆಸೆಯುವ ಸಂಸ್ಕೃತಿಗೆ ಈ ಚವತಿಯಲ್ಲಿ ಗಣಪ ನಮ್ಮನ್ನು ಹರಸಲಿ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀಕೃಷ್ಣ; ತಾನು ದೇವರೆನ್ನುತ್ತಲೇ ಮನುಷ್ಯರೊಡನೆ ಒಡನಾಡಿದವ

Exit mobile version