ಗಣೇಶನ ಹಬ್ಬದ (Ganesh Chaturthi) ಹಿನ್ನೆಲೆಯಲ್ಲಿ ಗಣೇಶ ಮೂರ್ತಿಯನ್ನು ಸ್ಥಾಪಿಸುವುದಕ್ಕೆಂದು ಎಲ್ಲೆಡೆ ಭರದ ಸಿದ್ಧತೆ ನಡೆಯುತ್ತಿದೆ. ತಮ್ಮ ತಮ್ಮಲ್ಲೇ ಸ್ಪರ್ಧೆ ಎನ್ನುವಂತೆ ಒಂದಕ್ಕಿಂತ ಒಂದು ಚಂದದ ಗಣಪನನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಅದರಲ್ಲೂ ಕೆಲವು ಸ್ಥಳಗಳ ಗಣಪನಂತೂ ಇಡೀ ದೇಶದಲ್ಲೇ ಪ್ರಖ್ಯಾತಿ ಪಡೆದುಕೊಂಡುಬಿಟ್ಟಿವೆ. ಆ ರೀತಿಯಲ್ಲಿ ಖ್ಯಾತಿ ಪಡೆದುಕೊಂಡ ಕೆಲವು ಗಣಪತಿ ಪೆಂಡಾಲ್ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಲಾಲ್ಬಾಗ್ ಕಾ ರಾಜಾ, ಮುಂಬೈ
ಮಹಾರಾಷ್ಟ್ರದ ಮುಂಬೈನ ಲಾಲ್ಬಾಗ್ ಕಾ ರಾಜಾ ಭಾರತದಲ್ಲಿ ಅತ್ಯಂತ ಖ್ಯಾತಿ ಪಡೆದುಕೊಂಡಿರುವ ಗಣಪತಿ ಪೆಂಡಾಲ್ ಆಗಿದೆ. ಇದು ದೇಶದ ಅತಿ ದೊಡ್ಡ ಗಣಪತಿ ಪೆಂಡಾಲ್ ಕೂಡ ಹೌದು. ಇಲ್ಲಿ ಹತ್ತು ದಿನಗಳ ಕಾಲ ಗಣಪತಿಗೆ ವಿಶೇಷ ಪೂಜೆ ನಡೆಯುತ್ತದೆ. ಲಾಲ್ಬಾಗ್ ಮಾರುಕಟ್ಟೆ ಸ್ಥಳದಲ್ಲೇ ಗಣಪತಿಯನ್ನು ಸ್ಥಾಪಿಸಲಾಗುತ್ತದೆ. 1934ರಲ್ಲಿ ಕಾಂಬ್ಳಿ ಕುಟುಂಬದಿಂದ ಸ್ಥಾಪಿಸಲ್ಪಟ್ಟ ಶ್ರೀಮಂತ ಇತಿಹಾಸ ಇಲ್ಲಿನ ಗಣೇಶನಿಗೆ. ಇಲ್ಲಿ ಲಕ್ಷಾಂತರ ಭಕ್ತರು ಗಣಪನ ದರ್ಶನ ಮಾಡುತ್ತಾರೆ.
ಸಿದ್ಧಿವಿನಾಯಕ ದೇವಸ್ಥಾನ, ಮುಂಬೈ
ಮುಂಬೈನಲ್ಲಿರುವ ಮತ್ತೊಂದು ಪ್ರಸಿದ್ಧ ಗಣಪತಿ ಪೆಂಡಾಲ್ ಸಿದ್ಧಿವಿನಾಯಕ ದೇವಸ್ಥಾನದ ಪೆಂಡಾಲ್. ಈ ದೇವಸ್ಥಾನ ಕೂಡ ಭಾರಿ ಫೇಮಸ್. ಈ ದೇವಾಲಯ 18ನೇ ಶತಮಾನದ್ದು. 1801ರಲ್ಲಿ ದೇವಬಾಯಿ ಪಾಟೀಲ್ ಹೆಸರಿನ ಮಹಿಳೆಯೊಬರು ಈ ದೇವಸ್ಥಾನ ನಿರ್ಮಿಸಿದರು. ಎರಡೂವರೆ ಅಡಿ ಎತ್ತರದ ಗಣಪನ ಮೂರ್ತಿ ಇಲ್ಲಿದೆ. ಇಲ್ಲಿಗೆ ಸೆಲೆಬ್ರಿಟಿಗಳು, ರಾಜಕಾರಣಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಬಂದು ದೇವರ ಆಶೀರ್ವಾದ ಪಡೆಯುತ್ತಾರೆ.
ದಗ್ಡು ಶೇಠ್ ಹಲ್ವಾಯಿ ಗಣಪತಿ, ಪುಣೆ
ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿಯಾದ ಪುಣೆಯು ಪ್ರಸಿದ್ಧ ದಗ್ಡು ಶೇಠ್ ಹಲ್ವಾಯಿಯಲ್ಲಿ ಗಣಪತಿ ದೇವಾಲಯ ಕೂಡ ಪ್ರಖ್ಯಾತ ದೇವಾಲಯವಾಗಿದೆ. ಅತಿ ಎತ್ತರದ ಗಣೇಶನ ಮೂರ್ತಿ ಈ ದೇಗುಲದಲ್ಲಿದೆ. 19ನೇ ಶತಮಾನದ ಉತ್ತರಾರ್ಧದಲ್ಲಿ ಹೆಸರಾಂತ ಸಿಹಿ ವ್ಯಾಪಾರಿ ದಗ್ಡು ಶೇಠ್ ಹಲ್ವಾಯಿ ಮತ್ತು ಅವರ ಪತ್ನಿ ಲಕ್ಷ್ಮಿಬಾಯಿ ಈ ದೇವಾಲಯವನ್ನು ಸ್ಥಾಪಿಸಿದರು. ದೇಗುಲದ ಗಣೇಶನ ಮೂರ್ತಿ 2.2 ಮೀಟರ್ ಎತ್ತರವಿದೆ. ಇಲ್ಲಿ ವಿನಾಯಕ ಚತುರ್ಥಿಗೆ ಗಣೇಶನನ್ನು ಸ್ಥಾಪಿಸಿ ಹತ್ತು ದಿನಗಳ ಕಾಲ ವಿಶೇಷ ಪೂಜೆ ನಡೆಸಲಾಗುತ್ತದೆ.
ಮನಾಚೆ ಗಣಪತಿ, ಪುಣೆ
ಪುಣೆಯ ಗಣೇಶ ಚತುರ್ಥಿ ಆಚರಣೆಯ ಮತ್ತೊಂದು ಸುಂದರ ಸ್ಥಳವೆಂದರೆ ಮನಾಚೆ ಗಣಪತಿ ಪೆಂಡಾಲ್. “ಮನಾಚೆ ಗಣಪತಿ” ಎಂದರೆ ಮರಾಠಿಯಲ್ಲಿ ಮನಸಿನ ಗಣಪತಿ, ಗೌರವಾನ್ವಿತ ಗಣಪತಿ ಎಂದರ್ಥ. ಅಷ್ಟವಿನಾಯಕ ಯಾತ್ರೆ ಎಂದು ಕರೆಯಲ್ಪಡುವ ನಿರ್ದಿಷ್ಟ ಅನುಕ್ರಮದಲ್ಲಿ ಈ ದೇವಾಲಯಗಳಿಗೆ ಭೇಟಿ ನೀಡುವ ಸಂಪ್ರದಾಯವು ಹಲವಾರು ಶತಮಾನಗಳ ಹಿಂದಿನದಾಗಿದೆ.
ಆ ಎಂಟು ಗಣಪತಿಗಳಲ್ಲಿ ಕಸ್ಬಾ ಗಣಪತಿ, ತಾಂಬಡಿ ಜೋಗೇಶ್ವರಿ ಗಣಪತಿ, ಗುರೂಜಿ ತಾಲಿಮ್ ಗಣಪತಿ, ಕೇಸರಿ ವಾಡ ಗಣಪತಿ, ತುಳಶಿಬಾಗ್ ಗಣಪತಿ, ಸರಸ್ಬಾಗ್ ಗಣಪತಿ, ಶನಿವಾರ ವಾಡ ಗಣಪತಿ ಮತ್ತು ಅಲ್ಕಾ ಚೌಕ್ ಗಣಪತಿ ಸೇರಿವೆ.
ಖೈರತಾಬಾದ್ ಗಣಪತಿ, ಹೈದರಾಬಾದ್
ಹೈದರಾಬಾದ್ನ ಖೈರತಾಬಾದ್ ಗಣಪತಿ ಪೆಂಡಾಲ್ ದೇಶದಲ್ಲೇ ಅತ್ಯಂತ ಖ್ಯಾತಿಯ ಪೆಂಡಾಲ್ ಆಗಿದೆ. ಇಲ್ಲಿಗೆಂದೇ ನುರಿತ ಕುಶಲಕರ್ಮಿಗಳು ಅತಿ ದೊಡ್ಡ ಗಾತ್ರದ ಗಣೇಶ ಮೂರ್ತಿಯನ್ನು ರಚಿಸುತ್ತಾರೆ. ಇಲ್ಲಿ ಸುಮಾರು 60 ಅಡಿ ಎತ್ತರದಷ್ಟು ಗಣಪತಿಯನ್ನು ಸ್ಥಾಪಿಸಲಾಗುತ್ತದೆ. ಇಲ್ಲಿ 1954ರ ಕಾಲದಿಂದಲೂ ಗಣಪತಿಯನ್ನು ಸ್ಥಾಪಿಸಲಾಗುತ್ತಿದೆ. ಇಲ್ಲಿ ಮೊದಲಿಗೆ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ಕಾರ್ಯಕರ್ತ ದಿವಂಗತ ಎಸ್.ಶಂಕರಯ್ಯ ಅವರು ಗಣಪತಿಯನ್ನು ಸ್ಥಾಪಿಸಿದರು ಎಂಬ ಇತಿಹಾಸವಿದೆ.
ಕೇಶವಜಿ ನಾಯಕ್ ಚಾಳ್ ಗಣಪತಿ, ಮುಂಬೈ
ಮುಂಬೈನ ಕೇಶವಜಿ ನಾಯಕ್ ಚಾಳ್ನ ಗಣಪತಿ ಪೆಂಡಾಲ್ ಕೂಡ ವಿಶೇಷ ಗಣಪತಿ ಪೆಂಡಾಲ್ಗಳಲ್ಲಿ ಒಂದಾಗಿದೆ. ಇಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಗಣಪತಿ ಸ್ಥಾಪನೆ ಮಾಡಲಾಗುತ್ತಿದೆ. 1893ರಲ್ಲಿ ಕೇಶವಜಿ ನಾಯಕ್ ಅವರು ಗಿರ್ಗಾಂವ್ ಮತ್ತು ಸುತ್ತಮುತ್ತಲಿನ ನಿವಾಸಿಗಳಿಗೆ ಗಣೇಶನ ಆಶೀರ್ವಾದವನ್ನು ಸಿಗಲಿ ಎನ್ನುವ ಉದ್ದೇಶದೊಂದಿಗೆ ಇಲ್ಲಿ ಗಣಪತಿ ಸ್ಥಾಪನೆ ಮಾಡಿದರು ಎನ್ನಲಾಗುತ್ತದೆ. ಇಲ್ಲಿಯೂ ಕೂಡ ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ಗಣೇಶೋತ್ಸವ ನಡೆಸಲಾಗುತ್ತದೆ.
ಶ್ರೀ ಸಾರ್ವಜನಿಕ ಗಣೇಶೋತ್ಸವ, ಗೋವಾ
ಗೋವಾದಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವದ ಪೆಂಡಾಲ್ ಅತ್ಯಂತ ಪ್ರಸಿದ್ಧ ಪೆಂಡಾಲ್ಗಳಲ್ಲಿ ಒಂದಾಗಿದೆ. ಇಲ್ಲಿನ ಗಣಪತಿ ನೋಡಲೆಂದು ರಾಜ್ಯದ ಮೂಲೆಮೂಲೆಗಳಿಂದ ಜನರು ಬರುತ್ತಾರೆ. ಗಣೇಶನ ಅದ್ಧೂರಿ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಅನೇಕ ರೀತಿಯ ಚಟುವಟಿಕೆಗಳನ್ನು ಹಬ್ಬದ ಸಮಯದಲ್ಲಿ ಏರ್ಪಡಿಸಲಾಗುತ್ತದೆ.
ಮೈಸೂರು ಅರಮನೆ, ಮೈಸೂರು
ಮೈಸೂರಿನಲ್ಲಿ ದಸರಾ ಪ್ರಸಿದ್ಧ. ಹಾಗೆಯೇ ಇಲ್ಲಿ ಗಣೇಶ ಹಬ್ಬವೂ ಪ್ರಸಿದ್ಧವೇ. ಅರಮನೆಗೆ ಸಂಬಂಧ ಪಟ್ಟಂತೆ ಗಣೇಶ ದೇವಸ್ಥಾನವಿದ್ದು, ಅಲ್ಲಿ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ನಡೆಸಲಾಗುತ್ತದೆ. ಇಲ್ಲಿನ ಗಣೇಶ ಹಬ್ಬಕ್ಕೆ ರಾಜ ವೈಭವದ ಸ್ಪರ್ಶವಿರುತ್ತದೆ. ಅದನ್ನು ನೋಡಲೆಂದೇ ಜನ ಗಣೇಶ ಹಬ್ಬದ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡುತ್ತಾರೆ.
ಆರ್ ಕೆ ಮಠ, ಕೋಲ್ಕೋತಾ
ಪಶ್ಚಿಮ ಬಂಗಾಳದಲ್ಲಿ ಗಣೇಶ ಹಬ್ಬ ಅದ್ಧೂರಿಯಾಗಿ ನಡೆಯುವುದೆಂದರೆ ಅದು ಆರ್ ಕೆ ಮಠದಲ್ಲಿ. ಇಲ್ಲಿ ಕಲಾತ್ಮಕವಾಗಿ ಗಣೇಶನ ಸ್ಥಾಪನೆ ಮಾಡಲಾಗುತ್ತದೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ರಾಮಕೃಷ್ಣ ಮಿಷನ್ನ ಶಾಖೆಯಾಗಿ, ಆರ್ಕೆ ಮಠವು ಆಧ್ಯಾತ್ಮಿಕ ಮತ್ತು ಲೋಕೋಪಕಾರಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಹಬ್ಬದ ಸಮಯದಲ್ಲಿ ಇಲ್ಲಿ ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಬಂಗಾಲಿ ಸಂಸ್ಕೃತಿಯ ಮೆರುಗು ಇದಕ್ಕಿದೆ.
ಶ್ರೀ ವಿದ್ಯಾರಣ್ಯ ಯುವಕ ಸಂಘದ ಗಣೇಶೋತ್ಸವ, ಬೆಂಗಳೂರು
ಬೆಂಗಳೂರಿನ ಬಸವನಗುಡಿಯಲ್ಲಿ ಶ್ರೀ ವಿದ್ಯಾರಣ್ಯ ಯುವಕ ಸಂಘವು ಪ್ರತಿ ವರ್ಷ ಅದ್ಧೂರಿಯಾಗಿ ಗಣೇಶೋತ್ಸವದ ಪೆಂಡಾಲ್ ಹಾಕುತ್ತದೆ. ವಾರದ ಕಾಲ ನಡೆಯುವ ಗಣೇಶೋತ್ಸವದಲ್ಲಿ ದೇಶದ ಪ್ರಮುಖ ಕಲಾವಿದರ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಪ್ರತಿ ವರ್ಷ ವಿಭಿನ್ನವಾಗಿ ಈ ಸಂಘಟನೆಯಿಂದ ಗಣೇಶ ಸಂಭ್ರಮ ನಡೆಯುತ್ತದೆ.
ಹಾಗೆಯೇ, ಈ ಗಣೇಶ ಚತುರ್ಥಿಗೆ ಭೇಟಿ ನೀಡಲು ಇನ್ನೊಂದು ಪ್ರಸಿದ್ಧ ಸ್ಥಳವೆಂದರೆ ಬೆಂಗಳೂರಿನ ಜಯನಗರ ನಾಲ್ಕನೇ ಹಂತದಲ್ಲಿರುವ ಶ್ರೀ ವಿನಾಯಕ ದೇವಸ್ಥಾನ. ಇಲ್ಲೂ ಕೂಡ ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ಚೌತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಕರ್ನಾಟಕದ ಹಲವು ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಭೇಟಿ ನೀಡಿ ದೇವರ ಆಶೀರ್ವಾದ ಪಡೆದು ಬರುತ್ತಾರೆ. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿಯೂ ಗಣೇಶ ಚತುರ್ಥಿ ದಿನ ವಿಶೇಷ ಪೂಜೆ ಇರುತ್ತದೆ.
ಇದನ್ನೂ ಓದಿ: Ganesh Chaturthi: ಗಣೇಶ ಚತುರ್ಥಿ ಆಚರಣೆಗೆ ಸಿದ್ಧತೆ ಶುರು; ಏನು ಈ ಹಬ್ಬದ ಹಿನ್ನೆಲೆ?