Site icon Vistara News

ಶಾಲೆಗಳಲ್ಲಿ ಗಣೇಶೋತ್ಸವ ಆಚರಣೆಗೆ ಮುಕ್ತ ಅವಕಾಶ: ಮತ್ತೆ ಶುರುವಾಗುತ್ತಾ ಹಿಜಾಬ್‌ ವಿವಾದದ ಧರ್ಮ ಸಂಘರ್ಷ

Ganesh idol

ಬೆಂಗಳೂರು: ರಾಜ್ಯದ ಯಾವುದೇ ಸರಕಾರಿ ಶಾಲೆಯಲ್ಲಿ ಗಣೇಶೋತ್ಸವ ಆಚರಣೆಗೆ ಸರಕಾರ ಮುಕ್ತ ಅವಕಾಶ ನೀಡಿದೆ. ಹಿಂದಿನಿಂದ ಆಚರಣೆ ಮಾಡಿಕೊಂಡು ಬಂದವರೂ ಆಚರಿಸಬಹುದು, ಹೊಸದಾಗಿ ಆರಂಭ ಮಾಡುವವರಿಗೂ ಮುಕ್ತ ಸ್ವಾತಂತ್ರ್ಯವಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ಸ್ಪಷ್ಟಪಡಿಸಿದ್ದಾರೆ.

ಈ ಅನುಮತಿ ಇದೀಗ ವಿವಾದದ ರೂಪ ಪಡೆದುಕೊಳ್ಳುವ ಹಾದಿಯಲ್ಲಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ, ಉತ್ಸವ ಆಚರಣೆಗೆ ಅವಕಾಶ ನೀಡುವ ಸರಕಾರ ಹಿಂದೆ ಮುಸ್ಲಿಂ ಧಾರ್ಮಿಕ ಸಂಕೇತಗಳು, ಆಚರಣೆಗಳಿಗೆ ಸಂಬಂಧಿಸಿ ಅತ್ಯಂತ ಕಟುವಾಗಿ ನಡೆದುಕೊಂಡಿದೆ ಎನ್ನುವುದನ್ನು ಕೆಲವರು ನೆನಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇದೊಂದು ಧರ್ಮ ಸಂಘರ್ಷದ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಕಂಡುಬಂದಿದೆ. ಜತೆಗೆ ಕಳೆದ ಕೆಲವು ತಿಂಗಳಿನಿಂದ ತಣ್ಣಗಾಗಿದ್ದ ಹಿಜಾಬ್‌ ವಿವಾದವೂ ಮರುಜೀವ ಪಡೆದುಕೊಳ್ಳುವ ಸಾಧ್ಯತೆಯೂ ಎದುರಾಗಿದೆ.

ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮುಕ್ತ ಸ್ವಾತಂತ್ರ್ಯ ನೀಡಲಾಗುತ್ತದೆ. ಹೊಸದಾಗಿ ಮೂರ್ತಿ ಸ್ಥಾಪನೆ ಆರಂಭಿಸುವುದಿದ್ದರೂ ಅನುಕೂಲ ಮಾಡಿಕೊಡುವುದಾಗಿ ಶಿಕ್ಷಣ ಇಲಾಖೆ ಹೇಳಿದೆ. ರಾಜ್ಯದ ಹಲವು ಶಾಲೆಗಳಲ್ಲಿ ಈಗಾಗಲೇ ಈ ಆಚರಣೆ ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಶಾರದಾ ಪೂಜೆಯಂತೆ ಗಣೇಶೋತ್ಸವದ ಆಚರಣೆಯೂ ನಡೆಯುತ್ತಿದೆ. ಇಷ್ಟು ವರ್ಷದವರೆಗೆ ಇದಕ್ಕೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಆದರೆ, ಈ ಬಾರಿ ರಾಜ್ಯದಲ್ಲಿ ನಾನಾ ವಿಷಯಗಳಿಗೆ ಸಂಬಂಧಿಸಿ ವಿವಾದ ಎದ್ದಿರುವ ಹೊತ್ತಿನಲ್ಲೇ ಇದೂ ಬಂದಿರುವುದರಿಂದ ಚರ್ಚೆಗಳು ಹುಟ್ಟಿಕೊಂಡಿವೆ.

ಶಿಕ್ಷಣ ಇಲಾಖೆಯ ಈ ನಡೆಗೆ ವಿರೋಧ ವ್ಯಕ್ತಪಡಿಸುವ ಕೆಲವರು, ಮುಸ್ಲಿಂ ಧಾರ್ಮಿಕ ಸಂಕೇತಗಳಿಗೆ ವಿಧಿಸಿರುವ ನಿಷೇಧವನ್ನು ಪ್ರಶ್ನಿಸುತ್ತಿದ್ದಾರೆ. ಶಾಲೆಯಲ್ಲಿ ಶುಕ್ತವಾರ ಒಂದು ದಿನ ನಮಾಜ್ ಮಾಡಿದ್ದಕ್ಕೆ ಶಾಲೆಯ ಮುಖ್ಯಸ್ಥರನ್ನೇ ಕೆಲಸದಿಂದ ಸಸ್ಪೆಂಡ್ ಮಾಡಿರುವ ಶಿಕ್ಷಣ ಇಲಾಖೆ ಈಗ ಗಣೇಶ ಮೂರ್ತಿ ಕೂಡಿಸಲು ಅವಕಾಶ ಮಾಡಿಕೊಟ್ಟಿದ್ದು ಹೇಗೆ ಎಂಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ.

ನಮಾಜ್‌ಗೂ, ಕ್ರಿಸ್‌ಮಸ್‌ಗೂ ಅವಕಾಶ ಕೋರಿಕೆ
ಅಂದು ಹಿಜಾಬ್‌ ಧರಿಸಿ ಶಾಲೆ, ಕಾಲೇಜಿಗೆ ಬರಬಾರದು ಎಂಬ ನಿಯಮ ಮಾಡಿದವರು ಈಗ ಗಣೇಶ ಕೂಡಿಸಲು ಹೇಗೆ ಅವಕಾಶ ಕೊಡುತ್ತೀರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಗಣೇಶೋತ್ಸವ ಆಚರಣೆಗೆ ಅವಕಾಶ ಕೊಡುವುದಾದರೆ, ಶುಕ್ರವಾರ ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ ಮಾಡಿಕೊಡಿ, ಕ್ರೈಸ್ತರಿಗೆ ಡಿಸೆಂಬರ್‌ನಲ್ಲಿ ಕ್ರಿಸ್ ಮಸ್ ಆಚರಣೆಗೆ ಅವಕಾಶ ಕೊಡಿ ಎಂಬ ಬೇಡಿಕೆಗಳು ಕೇಳಿಬಂದಿವೆ. ಶಿಕ್ಷಣ ಇಲಾಖೆ ಒಂದು ವರ್ಗದ ಮತ ಬ್ಯಾಂಕ್‌ ಭದ್ರ ಗೊಳಿಸಲು ಹೇಗೆ ಬೇಕೋ ಹಾಗೆ ನಿಯಮಗಳನ್ನು ಮಾಡುತ್ತಿರುವುದು ಸರಿಯಲ್ಲ ಎನ್ನುವುದು ಈ ವರ್ಗದ ವಾದ.

ಶಿಕ್ಷಣ ಸಚಿವರು ಏನಂತಾರೆ?
ಗಣೇಶೋತ್ಸವಕ್ಕೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು, ಹಲವು ಶಾಲೆಗಳಲ್ಲಿ ಹಿಂದಿನಿಂದಲೂ ಗಣೇಶೋತ್ಸವ ಆಚರಣೆ ನಡೆಯುತ್ತಿದೆ. ಅವುಗಳನ್ನು ಮುಂದುವರಿಸಲು ಯಾವುದೇ ಸಮಸ್ಯೆ ಇಲ್ಲ. ಹೊಸದಾಗಿ ಯಾರಾದರೂ ಆಚರಣೆ ಆರಂಭ ಮಾಡುವುದಕ್ಕೂ ಅವಕಾಶ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ| ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ಕೋರಿಕೆ, ಕೊಡದಿದ್ದರೆ ಹೋರಾಟದ ಎಚ್ಚರಿಕೆ

Exit mobile version