Site icon Vistara News

Gowri Habba 2022 | ಗೌರಿ ಹಬ್ಬದಂದು ಸ್ವರ್ಣಗೌರಿ ವ್ರತ ಹೇಗೆ ಮಾಡಬೇಕು?

Gowri Habba 2022

ಡಾ. ಅನಸೂಯ ಎಸ್‌. ರಾಜೀವ್‌
ಭಾದ್ರಪದ ಮಾಸದ ಶುಕ್ಲಪಕ್ಷ ತದಿಗೆಯಂದು ಆಚರಿಸುವ ವ್ರತವೇ ಸ್ವರ್ಣಗೌರಿ ವ್ರತ ಅಥವಾ ಗೌರಿಹಬ್ಬ (Gowri Habba 2022). ಗೌರಿಯು ಕೈಲಾಸದಿಂದ ಭೂಮಿಗೆ ಭಾದ್ರಪದ ಶುಕ್ಲ ತದಿಗೆಯಂದು ಬರುತ್ತಾಳೆ. ಅವಳನ್ನು ಕರೆದು ತವರು ಮನೆಯ ಆತಿಥ್ಯ ಮಾಡಿ ವಾಪಸ್ಸು ಮಗನೊಂದಿಗೆ ಕಳುಹಿಸಿಕೊಡುವುದೇ ಹಬ್ಬದ ವೈಶಿಷ್ಟ್ಯ. ಗೌರಿ ಹಬ್ಬವು ಸ್ತ್ರೀಯರು ಸೌಭಾಗ್ಯಕ್ಕಾಗಿ, ಪತಿದೇವರ ಒಳಿತಿಗಾಗಿ ಆಚರಿಸುವ ವ್ರತ. ಗೌರಿಯು ಭಾದ್ರಪದ ಶುಕ್ಲ ತದಿಗೆಯಂದು ಶಿವಲಿಂಗ ಮಾಡಿ ಶಿವನನ್ನು ಭಕ್ತಿಯಿಂದ ಪೂಜಿಸಿದಳು.

ಡಾ. ಅನಸೂಯ ಎಸ್‌. ರಾಜೀವ್‌

ಹಬ್ಬದ ಆಚರಣೆ ಹೇಗೆ?
ಮೊದಲಿಗೆ ಮನೆಯನ್ನು ತಳಿರು ತೋರಣಗಳಿಂದ,ರಂಗೋಲಿಗಳಿಂದ ಅಲಂಕರಿಸಬೇಕು. ಮಂಟಪವನ್ನು ಸಿದ್ಧಪಡಿಸಿ, ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿಕೊಂಡು ಪದ್ಮ ಬರೆದು ಸಣ್ಣ ತಟ್ಟೆಯಲ್ಲಿ ಅರಿಶಿನ ಗೌರಿಯನ್ನು ಇಟ್ಟುಕೊಳ್ಳಬೇಕು. ಇದರ ಹಿಂದೆ ಮಣ್ಣಿನಗೌರಿಯನ್ನು ಇಡಬೇಕು. ಇಲ್ಲಿ ಗೌರಿದೇವಿಯ ಸುವರ್ಣ ಪ್ರತಿಮೆಯನ್ನಿಡಬೇಕೆಂದು ಶಾಸ್ತ್ರ ಹೇಳುತ್ತದೆ. ಆದರೆ ಅದು ಆಚರಣೆಯಲ್ಲಿ ಕಷ್ಟಸಾಧ್ಯ.

ಗೌರಿಯು ಸುವರ್ಣ ವರ್ಣದವಳು. ಚಿನ್ನವನ್ನು ನೋಡಿದಾಗ, ಮುಟ್ಟಿದಾಗ, ಅಥವಾ ಧರಿಸಿದಾಗ ಪ್ರಕೃತಿಯಲ್ಲಿ ದೇವತಾ ಪ್ರಸನ್ನತೆಗೆ ಬೇಕಾದ ಯಾವ ಸ್ಥಿತಿ ಉಂಟಾಗುತ್ತದೋ ಆ ಸ್ಥಿತಿಯು ಅರಿಶಿನವನ್ನು ನೋಡಿದಾಗ ಮುಟ್ಟಿದಾಗ ಅಥವಾ ಧರಿಸಿದಾಗಲೂ ಉಂಟಾಗುತ್ತದೆ.

ಪದ್ಧತಿ ಇರುವವರು ಮಣ್ಣಿನ ಗೌರಿಯನ್ನೂ ಪದ್ಧತಿ ಇಲ್ಲದವರು ಅರಿಶಿನದ ಗೌರಿಯನ್ನೂ ಇಟ್ಟು ಪೂಜಿಸುತ್ತಾರೆ. ಮೊದಲಿಗೆ ಗಂಗೆ ಪೂಜೆ ಮಾಡಿ ನಂತರ ಗಂಗೆಯ ಮತ್ತಿಕೆಯಿಂದ ಗೌರಿ ತಯಾರಿಸಿ ಅದನ್ನು ಮನೆಗೆ ತಂದು ಷೋಡಷೋಪಚಾರ ಪೂಜೆ ಮಾಡತಕ್ಕದ್ದು ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಈಗಿನ ಕಾಲದಲ್ಲಿ ಅಷ್ಟೊಂದು ಸಮಯವಿಲ್ಲದ ಕಾರಣ, ಹಿಂದಿನ ದಿನವೇ ಗೌರಿ ಗಣೇಶನನ್ನು ತಂದಿಟ್ಟಿರುತ್ತಾರೆ.

ಗೌರಿ ಹಬ್ಬದ ದಿನ ಮಣ್ಣಿನ ಗೌರಿಯ ಪೂಜೆಗೆ ಮುಂಚೆ ಗಂಗೆಪೂಜೆ ಮಾಡಿ ನಂತರ ಗೌರಿಯನ್ನು ಪ್ರತಿಷ್ಠಾಪಿಸಿ ಅದರ ಸುತ್ತಲೂ ಸೀರೆಯನ್ನೋ, ರವಿಕೆ ಕಣವನ್ನೋ ಸುತ್ತುವುದು. ಘಂಟಾನಾದ ಸಹಿತ ಪೂಜೆಯಾರಂಭಿಸಿ, ಆಚಮನ, ಸಂಕಲ್ಪ, ಕಳಶ ಪೂಜೆ, ಮಹಾಗಣಪತಿ ಪಜೆ, ಗೌರಿ ಪ್ರತಿಷ್ಠಾಪನೆ, ಮಾಡಿ ದೇವಿಯನ್ನು ಧ್ಯಾನಿಸಿ ಪುಷ್ಪಾಕ್ಷತೆಗಳಿಂದ ಆಕೆಯನ್ನು ಆವಾಹಿಸಿ ರತ್ನ ಸಿಂಹಾಸನವನ್ನು ಸಮರ್ಪಿಸಿ, ಅರ್ಘ್ಯ, ಪಾದ್ಯ, ಆಚಮನ, ಮಧುಪರ್ಕ, ಪಂಚಾಮೃತ ಸ್ನಾನ, ಶುದ್ಧೋದಕ ಸ್ನಾನ, ವಸ್ತ್ರ ಆಭರಣ, ಬಳೆಬಿಚ್ಚೋಲೆ, ಕಾಡಿಗೆ, ಯಜ್ಞೋಪವೀತ, ಗಂಧ, ಅಕ್ಷತೆ, ಅರಿಶಿನ, ಕುಂಕುಮ, ಇತ್ಯಾದಿ ಸೌಭಾಗ್ಯ ದ್ರವ್ಯಗಳು ಮತ್ತು ಪುಷ್ಪಗಳನ್ನು ಗೌರಿಗೆ ಸಮರ್ಪಿಸಬೇಕು.

ದೇವಿಗೆ ಅಂಗಪೂಜೆ, ಪುಷ್ಪಪೂಜೆ, ಪತ್ರಪೂಜೆ, ನಾಮಪೂಜೆಗಳನ್ನು ಸಲ್ಲಿಸಿ, ದಾರದ ಹದಿನಾರು ಗ್ರಂಥಿಗಳಿಗೂ ಪೂಜೆ ಸಲ್ಲಿಸಬೇಕು. ಗೌರೀದೇವಿಯ ಅಂಗಪೂಜೆ ಮಾಡುವುದು ಹದಿನಾರು ಸ್ಥಾನಗಳಲ್ಲಿ. ಗೌರೀ ಪೂಜೆಯ ಪತ್ರ ಪುಷ್ಪಗಳ ಸಂಖ್ಯೆ ಹದಿನಾರು. ದೋರ ಗ್ರಂಥಿಗಳು ಹದಿನಾರು. ಗೌರೀ ವ್ರತದ ಸಾಲ್ಯಕ್ಕೆ ಬೇಕಾಗುವ ವರ್ಷಗಳು ಹದಿನಾರು. ಬಾಗಿನಗಳು ಹದಿನಾರು. ಹದಿನಾರು ಕಲೆಗಳಿಂದ ಕೂಡಿದ ಪರಮಾತ್ಮಮಯಿಯಾದ ಪ್ರಕೃತಿ ಮಾತೆಯೇ ಗೌರೀದೇವಿ ಎಂಬ ತತ್ತ್ವವು ಸೂಚಿತವಾಗಿದೆ.

ಅಷ್ಟೋತ್ತರ ದಿವ್ಯನಾಮಗಳಿಂದ ದೇವಿಯನ್ನು ಅರ್ಚಿಸಿ, ಧೂಪ, ದೀಪ, ನೈವೇದ್ಯ, ತಾಂಬೂಲ, ಫಲ, ದಕ್ಷಿಣೆ, ಅರ್ಘ್ಯ, ನೀರಾಜನ, ಪುಷ್ಪಾಂಜಲಿ, ಪ್ರದಕ್ಷಿಣೆ ನಮಸ್ಕಾರಗಳನ್ನು ಸಮರ್ಪಿಸಬೇಕು ದೇವಿಯ ನೈವೇದ್ಯಕ್ಕೆ ಸಮರ್ಪಿಸಬೇಕಾದ ವಿಶೇಷ ದ್ರವ್ಯ ಹುಗ್ಗಿ, ಗುಡಾನ್ನ, ಕೋಸಂಬರಿ, ಹೋಳಿಗೆ, ಪಾಯಸ.

ಮೊರದ ಬಾಗಿನ ನೀಡುವುದು
ಪೂಜೆಯಾದ ಮೇಲೆ ಮೊರದ ಬಾಗಿನಗಳನ್ನು ದೇವಿಗೆ ಮೂರು ಸಲ ಒಪ್ಪಿಸಿಬಿಡುವುದು.ಮೊರದ ಬಾಗಿನವನ್ನು ಜೋಡಿಸುವುದು ಹೇಗೆಂದರೆ, ಮೊರಕ್ಕೆ ಪೇಪರ್ ಅಥವಾ ಬಾಳೆ ಎಲೆ ಹಾಕಿ ಒಂದು ಪಾವು ಅಕ್ಕಿ, ತೊಗರಿಬೇಳೆ, ಕಡಲೇಬೇಳೆ, ಉದ್ದಿನಬೇಳೆ, ಹೆಸರುಬೇಳೆ, ಉಪ್ಪು, ರವೆ, ಬೆಲ್ಲದಚ್ಚು, ತೆಂಗಿನಕಾಯಿ, ವೀಳ್ಯದೆಲೆ ಅಡಿಕೆ, ದಕ್ಷಿಣೆ, ರವಿಕೆ ಕಣ, ಬಳೆ ಬಿಚ್ಚೋಲೆ, ಬಳೆಗಳು, ಅರಿಶಿನ ಕುಂಕುಮಗಳನ್ನು ಹಾಕಿ ಇಡುವುದು.

ಗೌರಿಗೆ ಉಪ್ಪಕ್ಕಿ: ಗೌರಿ ಪೂಜೆಯಾದ ನಂತರ ಮಧ್ಯಾಹ್ನ ಊಟಕ್ಕೆ ಮುನ್ನ ಗೌರಿಯ ಮುಂದೆ ಒಂದು ತಟ್ಟೆಯಲ್ಲಿ ಉಪ್ಪು ಹಾಗೂ ಅಕ್ಕಿಯನ್ನು ತಟ್ಟೆಗೆ ಹಾಕಿಕೊಂಡು ಅದನ್ನು ಮೂರು ಸಲ ತೆಗೆದು ತೆಗೆದು ಬೇರೆ ತಟ್ಟೆಗೆ ಹಾಕಬೇಕು.
ಸೋಬಲಕ್ಕಿ: ಗಣಪತಿ ಹಬ್ಬದಂದು ಗಣಪತಿಯನ್ನು ವಿಸರ್ಜಿಸುವುದಕ್ಕಿಂತ ಮೊದಲ ಗೌರಿಯನ್ನು ವಿಸರ್ಜಿಸಬೇಕು. ಗೌರಿಯನ್ನು ವಿಸರ್ಜಿಸಿ ಕೆಳಗಿಳಿಸಿದಾಗ ಅವಳಿಗೆ ಒಂದು ತಟ್ಟೆಯಲ್ಲಿ ರವಿಕೆ ಕಣ, ತೆಂಗಿನಕಾಯಿ, ಎಲೆ ಅಡಿಕೆ, ಬೆಲ್ಲದಚ್ಚು ಇಟ್ಟು ದೇವಿಗೆ ತೋರಿಸಿ ಆರತಿ ಮಾಡಬೇಕು. ಮಗಳು ತವರು ಮನೆಗೆ ಬಂದು ವಾಪಸ್ಸು ಹೊರಡುವಾಗ ತಾಯಿಯು ಅವಳಿಗೆ ಸೋಬಲಕ್ಕಿಯನ್ನು ಇಟ್ಟು ಕಳುಹಿಸುವುದು ಒಂದು ವಾಡಿಕೆ. ಅದರ ಪ್ರತೀಕವೇ ಈ ಸೋಬಲಕ್ಕಿ ಇಡುವ ವಿಧಾನ.

ಗೌರಿಯನ್ನು ಕಳುಹಿಸಿಕೊಡುವಾಗ ಮಂಗಳೋತ್ಸವದ ಅಂಗವಾಗಿ ಗುಡಾನ್ನ, ಘೃತಾನ್ನ, ಹುಳಿಯನ್ನ, ಪಾಯಸ, ಪರಮಾನ್ನ ಎಂಬ ಪಂಚಪಕ್ವಾನ್ನಗಳನ್ನು ಅರ್ಪಿಸಿ ಮಂಗಳಾರತಿ ಮಾಡಿ ಅವಳನ್ನು ಕಳುಹಿಸಿಕೊಡಬೇಕು.

– ಲೇಖಕರು ಪ್ರವಚನಕಾರರರು, ಜ್ಯೋತಿಷಿಗಳು

ಇದನ್ನೂ ಓದಿ | Festive makeup | ಹಬ್ಬದ ಆಕರ್ಷಕ ಮೇಕಪ್‌ಗೆ 5 ಐಡಿಯಾ

Exit mobile version