ಗಣೇಶ ಚತುರ್ಥಿ
Gowri Habba 2022 | ಗೌರಿ ಹಬ್ಬದಂದು ಸ್ವರ್ಣಗೌರಿ ವ್ರತ ಹೇಗೆ ಮಾಡಬೇಕು?
ಗೌರಿ ಹಬ್ಬ (Gowri Habba 2022 ) ಬಂದೇ ಬಿಟ್ಟಿದೆ. ಈ ಹಬ್ಬದಂದು ಸ್ವರ್ಣ ಗೌರಿಯನ್ನು ಹೇಗೆ ಪೂಜಿಸಬೇಕು, ಇದಕ್ಕೆ ಸಿದ್ಧತೆ ಹೇಗಿರಬೇಕೆಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಲೇಖನ ಓದಿ, ಜತೆಗೆ ವಿಡಿಯೋವನ್ನೂ ನೋಡಿ.
ಡಾ. ಅನಸೂಯ ಎಸ್. ರಾಜೀವ್
ಭಾದ್ರಪದ ಮಾಸದ ಶುಕ್ಲಪಕ್ಷ ತದಿಗೆಯಂದು ಆಚರಿಸುವ ವ್ರತವೇ ಸ್ವರ್ಣಗೌರಿ ವ್ರತ ಅಥವಾ ಗೌರಿಹಬ್ಬ (Gowri Habba 2022). ಗೌರಿಯು ಕೈಲಾಸದಿಂದ ಭೂಮಿಗೆ ಭಾದ್ರಪದ ಶುಕ್ಲ ತದಿಗೆಯಂದು ಬರುತ್ತಾಳೆ. ಅವಳನ್ನು ಕರೆದು ತವರು ಮನೆಯ ಆತಿಥ್ಯ ಮಾಡಿ ವಾಪಸ್ಸು ಮಗನೊಂದಿಗೆ ಕಳುಹಿಸಿಕೊಡುವುದೇ ಹಬ್ಬದ ವೈಶಿಷ್ಟ್ಯ. ಗೌರಿ ಹಬ್ಬವು ಸ್ತ್ರೀಯರು ಸೌಭಾಗ್ಯಕ್ಕಾಗಿ, ಪತಿದೇವರ ಒಳಿತಿಗಾಗಿ ಆಚರಿಸುವ ವ್ರತ. ಗೌರಿಯು ಭಾದ್ರಪದ ಶುಕ್ಲ ತದಿಗೆಯಂದು ಶಿವಲಿಂಗ ಮಾಡಿ ಶಿವನನ್ನು ಭಕ್ತಿಯಿಂದ ಪೂಜಿಸಿದಳು.
ಹಬ್ಬದ ಆಚರಣೆ ಹೇಗೆ?
ಮೊದಲಿಗೆ ಮನೆಯನ್ನು ತಳಿರು ತೋರಣಗಳಿಂದ,ರಂಗೋಲಿಗಳಿಂದ ಅಲಂಕರಿಸಬೇಕು. ಮಂಟಪವನ್ನು ಸಿದ್ಧಪಡಿಸಿ, ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿಕೊಂಡು ಪದ್ಮ ಬರೆದು ಸಣ್ಣ ತಟ್ಟೆಯಲ್ಲಿ ಅರಿಶಿನ ಗೌರಿಯನ್ನು ಇಟ್ಟುಕೊಳ್ಳಬೇಕು. ಇದರ ಹಿಂದೆ ಮಣ್ಣಿನಗೌರಿಯನ್ನು ಇಡಬೇಕು. ಇಲ್ಲಿ ಗೌರಿದೇವಿಯ ಸುವರ್ಣ ಪ್ರತಿಮೆಯನ್ನಿಡಬೇಕೆಂದು ಶಾಸ್ತ್ರ ಹೇಳುತ್ತದೆ. ಆದರೆ ಅದು ಆಚರಣೆಯಲ್ಲಿ ಕಷ್ಟಸಾಧ್ಯ.
ಗೌರಿಯು ಸುವರ್ಣ ವರ್ಣದವಳು. ಚಿನ್ನವನ್ನು ನೋಡಿದಾಗ, ಮುಟ್ಟಿದಾಗ, ಅಥವಾ ಧರಿಸಿದಾಗ ಪ್ರಕೃತಿಯಲ್ಲಿ ದೇವತಾ ಪ್ರಸನ್ನತೆಗೆ ಬೇಕಾದ ಯಾವ ಸ್ಥಿತಿ ಉಂಟಾಗುತ್ತದೋ ಆ ಸ್ಥಿತಿಯು ಅರಿಶಿನವನ್ನು ನೋಡಿದಾಗ ಮುಟ್ಟಿದಾಗ ಅಥವಾ ಧರಿಸಿದಾಗಲೂ ಉಂಟಾಗುತ್ತದೆ.
ಪದ್ಧತಿ ಇರುವವರು ಮಣ್ಣಿನ ಗೌರಿಯನ್ನೂ ಪದ್ಧತಿ ಇಲ್ಲದವರು ಅರಿಶಿನದ ಗೌರಿಯನ್ನೂ ಇಟ್ಟು ಪೂಜಿಸುತ್ತಾರೆ. ಮೊದಲಿಗೆ ಗಂಗೆ ಪೂಜೆ ಮಾಡಿ ನಂತರ ಗಂಗೆಯ ಮತ್ತಿಕೆಯಿಂದ ಗೌರಿ ತಯಾರಿಸಿ ಅದನ್ನು ಮನೆಗೆ ತಂದು ಷೋಡಷೋಪಚಾರ ಪೂಜೆ ಮಾಡತಕ್ಕದ್ದು ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಈಗಿನ ಕಾಲದಲ್ಲಿ ಅಷ್ಟೊಂದು ಸಮಯವಿಲ್ಲದ ಕಾರಣ, ಹಿಂದಿನ ದಿನವೇ ಗೌರಿ ಗಣೇಶನನ್ನು ತಂದಿಟ್ಟಿರುತ್ತಾರೆ.
ಗೌರಿ ಹಬ್ಬದ ದಿನ ಮಣ್ಣಿನ ಗೌರಿಯ ಪೂಜೆಗೆ ಮುಂಚೆ ಗಂಗೆಪೂಜೆ ಮಾಡಿ ನಂತರ ಗೌರಿಯನ್ನು ಪ್ರತಿಷ್ಠಾಪಿಸಿ ಅದರ ಸುತ್ತಲೂ ಸೀರೆಯನ್ನೋ, ರವಿಕೆ ಕಣವನ್ನೋ ಸುತ್ತುವುದು. ಘಂಟಾನಾದ ಸಹಿತ ಪೂಜೆಯಾರಂಭಿಸಿ, ಆಚಮನ, ಸಂಕಲ್ಪ, ಕಳಶ ಪೂಜೆ, ಮಹಾಗಣಪತಿ ಪಜೆ, ಗೌರಿ ಪ್ರತಿಷ್ಠಾಪನೆ, ಮಾಡಿ ದೇವಿಯನ್ನು ಧ್ಯಾನಿಸಿ ಪುಷ್ಪಾಕ್ಷತೆಗಳಿಂದ ಆಕೆಯನ್ನು ಆವಾಹಿಸಿ ರತ್ನ ಸಿಂಹಾಸನವನ್ನು ಸಮರ್ಪಿಸಿ, ಅರ್ಘ್ಯ, ಪಾದ್ಯ, ಆಚಮನ, ಮಧುಪರ್ಕ, ಪಂಚಾಮೃತ ಸ್ನಾನ, ಶುದ್ಧೋದಕ ಸ್ನಾನ, ವಸ್ತ್ರ ಆಭರಣ, ಬಳೆಬಿಚ್ಚೋಲೆ, ಕಾಡಿಗೆ, ಯಜ್ಞೋಪವೀತ, ಗಂಧ, ಅಕ್ಷತೆ, ಅರಿಶಿನ, ಕುಂಕುಮ, ಇತ್ಯಾದಿ ಸೌಭಾಗ್ಯ ದ್ರವ್ಯಗಳು ಮತ್ತು ಪುಷ್ಪಗಳನ್ನು ಗೌರಿಗೆ ಸಮರ್ಪಿಸಬೇಕು.
ದೇವಿಗೆ ಅಂಗಪೂಜೆ, ಪುಷ್ಪಪೂಜೆ, ಪತ್ರಪೂಜೆ, ನಾಮಪೂಜೆಗಳನ್ನು ಸಲ್ಲಿಸಿ, ದಾರದ ಹದಿನಾರು ಗ್ರಂಥಿಗಳಿಗೂ ಪೂಜೆ ಸಲ್ಲಿಸಬೇಕು. ಗೌರೀದೇವಿಯ ಅಂಗಪೂಜೆ ಮಾಡುವುದು ಹದಿನಾರು ಸ್ಥಾನಗಳಲ್ಲಿ. ಗೌರೀ ಪೂಜೆಯ ಪತ್ರ ಪುಷ್ಪಗಳ ಸಂಖ್ಯೆ ಹದಿನಾರು. ದೋರ ಗ್ರಂಥಿಗಳು ಹದಿನಾರು. ಗೌರೀ ವ್ರತದ ಸಾಲ್ಯಕ್ಕೆ ಬೇಕಾಗುವ ವರ್ಷಗಳು ಹದಿನಾರು. ಬಾಗಿನಗಳು ಹದಿನಾರು. ಹದಿನಾರು ಕಲೆಗಳಿಂದ ಕೂಡಿದ ಪರಮಾತ್ಮಮಯಿಯಾದ ಪ್ರಕೃತಿ ಮಾತೆಯೇ ಗೌರೀದೇವಿ ಎಂಬ ತತ್ತ್ವವು ಸೂಚಿತವಾಗಿದೆ.
ಅಷ್ಟೋತ್ತರ ದಿವ್ಯನಾಮಗಳಿಂದ ದೇವಿಯನ್ನು ಅರ್ಚಿಸಿ, ಧೂಪ, ದೀಪ, ನೈವೇದ್ಯ, ತಾಂಬೂಲ, ಫಲ, ದಕ್ಷಿಣೆ, ಅರ್ಘ್ಯ, ನೀರಾಜನ, ಪುಷ್ಪಾಂಜಲಿ, ಪ್ರದಕ್ಷಿಣೆ ನಮಸ್ಕಾರಗಳನ್ನು ಸಮರ್ಪಿಸಬೇಕು ದೇವಿಯ ನೈವೇದ್ಯಕ್ಕೆ ಸಮರ್ಪಿಸಬೇಕಾದ ವಿಶೇಷ ದ್ರವ್ಯ ಹುಗ್ಗಿ, ಗುಡಾನ್ನ, ಕೋಸಂಬರಿ, ಹೋಳಿಗೆ, ಪಾಯಸ.
ಮೊರದ ಬಾಗಿನ ನೀಡುವುದು
ಪೂಜೆಯಾದ ಮೇಲೆ ಮೊರದ ಬಾಗಿನಗಳನ್ನು ದೇವಿಗೆ ಮೂರು ಸಲ ಒಪ್ಪಿಸಿಬಿಡುವುದು.ಮೊರದ ಬಾಗಿನವನ್ನು ಜೋಡಿಸುವುದು ಹೇಗೆಂದರೆ, ಮೊರಕ್ಕೆ ಪೇಪರ್ ಅಥವಾ ಬಾಳೆ ಎಲೆ ಹಾಕಿ ಒಂದು ಪಾವು ಅಕ್ಕಿ, ತೊಗರಿಬೇಳೆ, ಕಡಲೇಬೇಳೆ, ಉದ್ದಿನಬೇಳೆ, ಹೆಸರುಬೇಳೆ, ಉಪ್ಪು, ರವೆ, ಬೆಲ್ಲದಚ್ಚು, ತೆಂಗಿನಕಾಯಿ, ವೀಳ್ಯದೆಲೆ ಅಡಿಕೆ, ದಕ್ಷಿಣೆ, ರವಿಕೆ ಕಣ, ಬಳೆ ಬಿಚ್ಚೋಲೆ, ಬಳೆಗಳು, ಅರಿಶಿನ ಕುಂಕುಮಗಳನ್ನು ಹಾಕಿ ಇಡುವುದು.
ಗೌರಿಗೆ ಉಪ್ಪಕ್ಕಿ: ಗೌರಿ ಪೂಜೆಯಾದ ನಂತರ ಮಧ್ಯಾಹ್ನ ಊಟಕ್ಕೆ ಮುನ್ನ ಗೌರಿಯ ಮುಂದೆ ಒಂದು ತಟ್ಟೆಯಲ್ಲಿ ಉಪ್ಪು ಹಾಗೂ ಅಕ್ಕಿಯನ್ನು ತಟ್ಟೆಗೆ ಹಾಕಿಕೊಂಡು ಅದನ್ನು ಮೂರು ಸಲ ತೆಗೆದು ತೆಗೆದು ಬೇರೆ ತಟ್ಟೆಗೆ ಹಾಕಬೇಕು.
ಸೋಬಲಕ್ಕಿ: ಗಣಪತಿ ಹಬ್ಬದಂದು ಗಣಪತಿಯನ್ನು ವಿಸರ್ಜಿಸುವುದಕ್ಕಿಂತ ಮೊದಲ ಗೌರಿಯನ್ನು ವಿಸರ್ಜಿಸಬೇಕು. ಗೌರಿಯನ್ನು ವಿಸರ್ಜಿಸಿ ಕೆಳಗಿಳಿಸಿದಾಗ ಅವಳಿಗೆ ಒಂದು ತಟ್ಟೆಯಲ್ಲಿ ರವಿಕೆ ಕಣ, ತೆಂಗಿನಕಾಯಿ, ಎಲೆ ಅಡಿಕೆ, ಬೆಲ್ಲದಚ್ಚು ಇಟ್ಟು ದೇವಿಗೆ ತೋರಿಸಿ ಆರತಿ ಮಾಡಬೇಕು. ಮಗಳು ತವರು ಮನೆಗೆ ಬಂದು ವಾಪಸ್ಸು ಹೊರಡುವಾಗ ತಾಯಿಯು ಅವಳಿಗೆ ಸೋಬಲಕ್ಕಿಯನ್ನು ಇಟ್ಟು ಕಳುಹಿಸುವುದು ಒಂದು ವಾಡಿಕೆ. ಅದರ ಪ್ರತೀಕವೇ ಈ ಸೋಬಲಕ್ಕಿ ಇಡುವ ವಿಧಾನ.
ಗೌರಿಯನ್ನು ಕಳುಹಿಸಿಕೊಡುವಾಗ ಮಂಗಳೋತ್ಸವದ ಅಂಗವಾಗಿ ಗುಡಾನ್ನ, ಘೃತಾನ್ನ, ಹುಳಿಯನ್ನ, ಪಾಯಸ, ಪರಮಾನ್ನ ಎಂಬ ಪಂಚಪಕ್ವಾನ್ನಗಳನ್ನು ಅರ್ಪಿಸಿ ಮಂಗಳಾರತಿ ಮಾಡಿ ಅವಳನ್ನು ಕಳುಹಿಸಿಕೊಡಬೇಕು.
– ಲೇಖಕರು ಪ್ರವಚನಕಾರರರು, ಜ್ಯೋತಿಷಿಗಳು
ಇದನ್ನೂ ಓದಿ | Festive makeup | ಹಬ್ಬದ ಆಕರ್ಷಕ ಮೇಕಪ್‌ಗೆ 5 ಐಡಿಯಾ
ಕರ್ನಾಟಕ
ಗಣೇಶ ವಿಸರ್ಜನೆ | ಡಿಜೆ ಸೌಂಡ್‌ಗೆ ವ್ಯಕ್ತಿ ಹೃದಯಾಘಾತದಿಂದ ಸಾವು?
ಡಿಜೆ ಸೌಂಡ್ ಎಫೆಕ್ಟ್‌ಗೆ ಹೃದಯಾಘಾತದಿಂದ ವ್ಯಕ್ತಿಯೊಬ್ಬ ಮೃತಪಟ್ಟಿರುವುದಾಗಿ ಹೆಬ್ಬಾಕ ಗ್ರಾಮಸ್ಥರು ಆರೋಪಿಸಿದ್ದಾರೆ. ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಈ ಘಟನೆ ನಡೆದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತುಮಕೂರು: ತುಮಕೂರು ತಾಲೂಕಿನ ಹೆಬ್ಬಾಕ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ಡಿಜೆ ಸೌಂಡ್ ಹಾಕಿಕೊಂಡು ಭರ್ಜರಿಯಾಗಿ ಕುಣಿದು ಕುಪ್ಪಳಿಸಿ ಸಂಭ್ರಮಿಸಲಾಗಿದೆ. ಆದರೆ, ಇದೇ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ, ಡಿಜೆ ಶಬ್ದಕ್ಕೇ ಮೃತಪಟ್ಟಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ.
ಇಲ್ಲಿನ ತುಮಕೂರು ತಾಲೂಕಿನ ಹೆಬ್ಬಾಕ ಗ್ರಾಮದಲ್ಲಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮಸ್ಥರೆಲ್ಲ ಸೇರಿ ಸಂಭ್ರಮದಿಂದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಶನಿವಾರ ವಿಸರ್ಜನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಶನಿವಾರ ರಾತ್ರಿ ವಿವಿಧ ಕಲಾತಂಡಗಳೊಂದಿಗೆ ಡಿಜೆಯನ್ನು ಸಹ ತರಿಸಲಾಗಿತ್ತು. ಈ ವೇಳೆ ಡಿಜೆ ಸೌಂಡ್‌ಗೆ ವಿರೂಪಾಕ್ಷಪ್ಪ (50) ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಆದರೆ, ವಿರೂಪಾಕ್ಷಪ್ಪ ಸಾವಿಗೆ ಅತಿಯಾದ ಡಿಜೆ ಸೌಂಡ್ ಕಾರಣ ಎಂದು ಕೆಲವರು ಆರೋಪ ಮಾಡಿದ್ದಾರೆ. ಈ ಸಂಬಂಧ ಗ್ರಾಮದಲ್ಲಿ ನಡೆದ ಗಣಪತಿ ವಿಸರ್ಜನಾ ಮಹೋತ್ಸವದ ವಿಡಿಯೊಗಳನ್ನು ಸಹ ಶೇರ್ ಮಾಡಲಾಗಿದೆ. ಈ ವಿಡಿಯೊ ಸಹ ವೈರಲ್ ಆಗಿದೆ. ಸರ್ಕಾರವು ಡಿಜೆಗೆ ಸಂಬಂಧಿಸಿದಂತೆ ಕೆಲವು ಸುತ್ತೋಲೆಗಳನ್ನು ಹೊರಡಿಸಿದ್ದು, ಸಂಬಂಧಪಟ್ಟ ಇಲಾಖೆಗಳಿಂದ ಡಿಜೆಗೆ ಅನುಮತಿ ಕಡ್ಡಾಯ ಎಂದು ಆದೇಶವಿದೆ. ಆದರೆ, ಕಾರ್ಯಕ್ರಮದ ಆಯೋಜಕರು ಸರ್ಕಾರಿ ಆದೇಶವನ್ನು ಪಾಲಿಸದೆ ಅನಧಿಕೃತವಾಗಿ ಡಿಜೆ ಸೆಟ್ ತರಿಸಿದ್ದರು ಎನ್ನಲಾಗಿದೆ. ಆದರೆ, ವಿರೂಪಾಕ್ಷಪ್ಪ ಅವರ ಸಾವು ಯಾವ ಕಾರಣಕ್ಕೆ ಎಂಬ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.
ಇದನ್ನೂ ಓದಿ | Viral Video | ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಡ್ಯಾಗರ್ ಹಿಡಿದು ಕುಣಿದು ಕುಪ್ಪಳಿಸಿದ ಪುಂಡರು
ಕರ್ನಾಟಕ
ಹೊಸಪೇಟೆ | ಬೃಹತ್ ಗಣಪತಿ ಮೂರ್ತಿ ಸಹಿತ ಕ್ರೇನ್ ಪಲ್ಟಿ: ಅಡಿಗೆ ಸಿಲುಕಿ ಇಬ್ಬರು ಯುವಕರು ದಾರುಣ ಮೃತ್ಯು
ಹೊಸಪೇಟೆಯ ಟಿಬಿ ಡ್ಯಾಂ ಬಳಿ ಗಣೇಶ ಮೂರ್ತಿ ವಿಸರ್ಜನೆಯ ವೇಳೆ ಕ್ರೇನ್ ಪಲ್ಟಿಯಾಗಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.
ವಿಜಯನಗರ: ಗಣಪತಿ ಮೂರ್ತಿ ವಿಸರ್ಜನೆಯ ವೇಳೆ ಬೃಹತ್ ಮೂರ್ತಿಯನ್ನು ನೀರಿಗೆ ಇಳಿಸುತ್ತಿದ್ದ ಕ್ರೇನ್ ಪಲ್ಟಿಯಾಗಿ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟಿದ್ದಾರೆ.
ಹೊಸಪೇಟೆಯ ತುಂಗ ಭದ್ರಾ ಡ್ಯಾಂ ಕಾಲುವೆಯ ಬಳಿ ಶನಿವಾರ ರಾತ್ರಿ ೧.೩೦ರ ಹೊತ್ತಿಗೆ ಈ ದುರ್ಘಟನೆ ನಡೆದಿದೆ. ಮಗುಚಿಬಿದ್ದ ಕ್ರೇನ್‌ನ ಅಡಿ ಸಿಲುಕಿದ ಇಬ್ಬರು ಯುವಕರಲ್ಲಿ ಒಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ತುಂಗಭದ್ರಾ ಡ್ಯಾಂನ ಇವಿ ಕ್ಯಾಂಪ್ ನಿವಾಸಿಗಳಾದ ಅಶೋಕ್ (೧೮) ಮತ್ತು ಸಾಯಿ ನಿಖಿಲ್ (೧೮) ಮೃತಪಟ್ಟವರು.
೩೪ ಅಡಿ ಎತ್ತರದ ಹೊಸಪೇಟೆ ಗಣಪ
ಹೊಸಪೇಟೆಯಲ್ಲಿ ಕಳೆದ ಆಗಸ್ಟ್ ೩೧ರಂದು ಸುಮಾರು ೩೪ ಅಡಿ ಎತ್ತರದ ಬೃಹತ್ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಶನಿವಾರ ವಿಸರ್ಜನಾ ಮೆರವಣಿಗೆ ನಡೆದಿತ್ತು. ಅಂತಿಮವಾಗಿ ಟಿಬಿ ಡ್ಯಾಂನ ಕಾಲುವೆಯಲ್ಲಿ ಗಣೇಶನ ಮೂರ್ತಿಯನ್ನು ವಿಸರ್ಜಿಸಲು ಸಕಲ ಸಿದ್ಧತೆ ನಡೆದಿತ್ತು. ವಾಹನದಲ್ಲಿ ಅಲಂಕರಿಸಿ ತರಲಾಗಿದ್ದ ಗಣೇಶ ಮೂರ್ತಿಯನ್ನು ಕ್ರೇನ್ ಮೂಲಕ ಎತ್ತಿ ಕಾಲುವೆಗೆ ಇಳಿಸಬೇಕು ಎನ್ನುವಷ್ಟರಲ್ಲಿ ಕ್ರೇನೇ ಆಯತಪ್ಪಿ ಪಲ್ಟಿಯಾಗಿದೆ. ಆಗ ಈ ಇಬ್ಬರು ಯುವಕರು ಅದರ ಅಡಿಗೆ ಸಿಲುಕಿದ್ದಾರೆ.
ಗಣಪತಿ ಶೋಭಾ ಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದು, ಈ ಇಬ್ಬರು ಯುವಕರು ಕೂಡಾ ವಿಸರ್ಜನೆಯ ಅಂತಿಮ ಹಂತವನ್ನು ನೋಡುವ ಕುತೂಹಲದಿಂದ ಬಂದಿದ್ದರು. ಇವರು ಉತ್ಸವ ಸಮಿತಿಗೆ ಸೇರಿದವರೇನೂ ಅಲ್ಲ. ಸಾಮಾನ್ಯ ನಾಗರಿಕರು ಅಷ್ಟೆ.
ಇದು ಹೊಸಪೇಟೆಯ ಹೊರವಲಯದಲ್ಲಿರುವ ಟಿಬಿ ಡ್ಯಾಂನ ಕಾಲುವೆ ಬಳಿ ನಡೆದ ದುರಂತವಾಗಿದ್ದು, ರೈಲು ನಿಲ್ದಾಣದ ಸಮೀಪ ಬರುತ್ತದೆ. ಕ್ರೇನ್ ಪಲ್ಟಿಯಾಗಿ ಇಬ್ಬರು ಅಡಿಯಲ್ಲಿ ಸಿಲುಕಿದ ವಿಷಯ ತಿಳಿಯುತ್ತಲೇ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು. ಆದರೆ ಯುವಕರು ಕ್ರೇನ್‌ನ ಅಡಿಯಲ್ಲಿ ಸಿಕ್ಕಿದ್ದರಿಂದ ಹೊರತೆಗೆಯುವುದು ಸಾಧ್ಯವಿರಲಿಲ್ಲ. ಅದರಲ್ಲೂ ಇಬ್ಬರೂ ತೀವ್ರವಾಗಿ ನರಳುತ್ತಿದ್ದರು.
ಕೂಡಲೇ ಬೇರೆ ಎರಡು ಕ್ರೇನ್‌ಗಳನ್ನು ತರಿಸಿಕೊಂಡು ಬಿದ್ದ ಕ್ರೇನನ್ನು ಮೇಲೆ ಎತ್ತಿ ಇಬ್ಬರನ್ನೂ ಹೊರತೆಗೆಯಲಾಗಿತ್ತು. ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಅವರನ್ನು ಹೊರಗೆ ತರಲಾಯಿತು. ಆದರೆ, ಅಷ್ಟು ಹೊತ್ತಿಗೆ ಅಶೋಕ್ ಪ್ರಾಣ ಹೋಗಿತ್ತು. ಸಾಯಿನಿಖಿಲ್ ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಒಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಂತಿಮವಾಗಿ ನಿಖಿಲ್ ಕೂಡಾ ಪ್ರಾಣ ಕಳೆದುಕೊಂಡಿದ್ದಾರೆ.
ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ , ಪಿಐಗಳಾದ ಹುಲುಗಪ್ಪ, ಶ್ರೀನಿವಾಸ್ ಮೇಟಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿದರು. ಮಧ್ಯರಾತ್ರಿಯೇ ಟಿಬಿ ಡ್ಯಾಂನ ಇವಿ ಕ್ಯಾಂಪಸ್ ನಿವಾಸಿಗಳು ಧಾವಿಸಿ ಬಂದರು. ಮನೆಯವರ ಸಂಕಟ, ಗೋಳಾಟಗಳು ಕಲ್ಲೆದೆಯನ್ನೂ ಕರಗಿಸುವಂತಿತ್ತು. ಇನ್ನೂ ಪಿಯುಸಿ ಓದುವ ಹಂತದಲ್ಲಿದ್ದ ಹುಡುಗರ ಸಾವು ಅವರನ್ನು ಕಂಗೆಡಿಸಿತ್ತು.
ಇದನ್ನೂ ಓದಿ | Ganesh Chaturthi | ವಿಸರ್ಜನೆ ಬದಲು ಠಾಣೆಯತ್ತ ಗಣೇಶ ಮೆರವಣಿಗೆ: ಡಿಜೆ ಸೀಜ್‌ಗೆ ಆಕ್ರೋಶ
ಕರ್ನಾಟಕ
Ganeshotsav | ಹುಬ್ಬಳ್ಳಿಯಲ್ಲಿ ಬೃಹತ್ ಗಣಪತಿ ಮೂರ್ತಿಗಳ ವಿಸರ್ಜನೆ
ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ರಸ್ತೆಯುದ್ದಕ್ಕೂ ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿಯುವ ಮೂಲಕ ಯುವ ಸಮೂಹ ಗಮನ ಸೆಳೆಯಿತು.
ಹುಬ್ಬಳ್ಳಿ: ನಗರದ ದುರ್ಗದಬೈಲ್, ದಾಜೀಬಾನ್ ಪೇಟ್, ಮರಾಠಾ ಗಲ್ಲಿ ಸೇರಿ ವಿವಿಧ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಬೃಹತ್ ಗಣೇಶ ಮೂರ್ತಿಗಳ ವಿಸರ್ಜನೆಯೊಂದಿಗೆ ಸಾರ್ವಜನಿಕ ಗಣೇಶೋತ್ಸವಕ್ಕೆ(Ganeshotsav) ಶುಕ್ರವಾರ ತೆರೆಬಿದ್ದಿದೆ.
ವಿಸರ್ಜನೆ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ರಸ್ತೆಯುದ್ದಕ್ಕೂ ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿಯುವ ಮೂಲಕ ಯುವ ಸಮೂಹ ಗಮನ ಸೆಳೆಯಿತು. ಒಂದೆಡೆ ಡಿಜೆ ಮತ್ತೊಂದೆಡೆ ವಿವಿಧ ವಾದ್ಯಗಳು ಮೆರವಣಿಗೆ ಮೆರುಗು ನೀಡಿದವು. ಡೊಳ್ಳು ಕುಣಿತ, ಜಾಂಜ್, ಗೆಜ್ಜೆಮಜಲು, ಡೋಲು ಸೇರಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.
ಸಾರ್ವಜನಿಕರ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.
ಇದನ್ನೂ ಓದಿ | Ganeshotsav | ಶಿವಮೊಗ್ಗದಲ್ಲಿ ಬಿಗಿ ಭದ್ರತೆ ನಡುವೆ ಅದ್ಧೂರಿ ಗಣೇಶ ರಾಜಬೀದಿ ಉತ್ಸವ
ಕರ್ನಾಟಕ
Ganeshotsav | ಶಿವಮೊಗ್ಗದಲ್ಲಿ ಬಿಗಿ ಭದ್ರತೆ ನಡುವೆ ಅದ್ಧೂರಿ ಗಣೇಶ ರಾಜಬೀದಿ ಉತ್ಸವ
ಗಣೇಶನ ರಾಜಬೀದಿ ಉತ್ಸವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಸಂಪೂರ್ಣ ಕೇಸರಿಮಯವಾಗಿತ್ತು. ಕೇಸರಿ ಪೇಟದಲ್ಲಿ ಮಿಂಚುತ್ತಿದ್ದ ಯುವಕ ಹಾಗೂ ಯುವತಿಯರು ಡೊಳ್ಳು ಹಾಗೂ ಡಿಜೆ ಸದ್ದಿಗೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದರು.
ಶಿವಮೊಗ್ಗ: ನಗರದಲ್ಲಿ ಇತಿಹಾಸ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ(Ganeshotsav) ಸಾವಿರಾರು ಜನರ ಸಮ್ಮುಖದಲ್ಲಿ ಶುಕ್ರವಾರ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಶಾಂತಿಯುತವಾಗಿ ನಡೆಯಿತು.
ಗಣೇಶನ ರಾಜಬೀದಿ ಉತ್ಸವ ಹಿನ್ನೆಲೆಯಲ್ಲಿ ನಗರ ಸಂಪೂರ್ಣ ಕೇಸರಿಮಯವಾಗಿತ್ತು. ಕೋಟೆ ಪಾರ್ವತಿ ಭೀಮೇಶ್ವರ ದೇವಾಲಯದಿಂದ ರಾಜ ಬೀದಿ ಉತ್ಸವಕ್ಕೆ ಮಧ್ಯಾಹ್ನ ಚಾಲನೆ ನೀಡಲಾಯಿತು. ಕೇಸರಿ ಪೇಟದಲ್ಲಿ ಮಿಂಚುತ್ತಿದ್ದ ಯುವಕ ಹಾಗೂ ಯುವತಿಯರು ಡೊಳ್ಳು ಹಾಗೂ ಡಿಜೆ ಸದ್ದಿಗೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ಹಿಂದು ಕಾರ್ಯಕರ್ತ ಹರ್ಷ, ದಕ್ಷಿಣ ಕನ್ನಡ ಪ್ರವೀಣ್ ನೆಟ್ಟಾರು, ಸಾವರ್ಕರ್ ಭಾವಚಿತ್ರಗಳು ಹಾಗೂ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು. ಮೆರವಣಿಗೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಎಂಪಿ ರೇಣುಕಾಚಾರ್ಯ ಮತ್ತಿತರ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.
ಗಣೇಶ ಮೆರವಣಿಗೆ ಸಾಗಿದ ಗಾಂಧಿ ಬಜಾರ್‌ನ ಸುನ್ನಿ ಜಾಮಿಯಾ ಮಸೀದಿ ಬಳಿ ಕ್ಷಿಪ್ರ ಕಾರ್ಯಾಚರಣೆ (ಆರ್‌ಎಎಫ್) ನಿಯೋಜನೆ ಮಾಡಿ, ಮೆರವಣಿಗೆ ಮೇಲೆ ಸಿಸಿ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗಿತ್ತು. ಇನ್ನುಳಿದಂತೆ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಎಸ್‌ಪಿ ಬಿ.ಎಂ.ಲಕ್ಷ್ಮಿಪ್ರಸಾದ್ ನೇತೃತ್ವದಲ್ಲಿ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿತ್ತು.
ಇದನ್ನೂ ಓದಿ | Banking | ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ 31.14 ಕೋಟಿ ರೂ. ಲಾಭ, ಬೆಂಗಳೂರು ವಿಭಾಗದಲ್ಲೇ ನಂ. 1 ಸ್ಥಾನದ ಗೌರವ
-
ಕರ್ನಾಟಕ20 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ17 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ15 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ಕರ್ನಾಟಕ11 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ದೇಶ16 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ಕರ್ನಾಟಕ8 hours ago
ಸರ್ಕಾರಿ ಬಸ್ ಓಡಿಸಿದ ಖಾಸಗಿ ವ್ಯಕ್ತಿ; ಕ್ರೂಸರ್ಗೆ ಡಿಕ್ಕಿ, ತಪ್ಪಿತು ಭಾರೀ ಅನಾಹುತ
-
ದೇಶ19 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಕರ್ನಾಟಕ9 hours ago
Free Bus: ಉಚಿತ ಬಸ್ ಪ್ರಯಾಣಕ್ಕೆ ಸಿಕ್ಕಿತು ಅನುಮೋದನೆ; ಏಳು ಕಂಡೀಷನ್ನೊಂದಿಗೆ ಚಾಲನೆ!