ನವದೆಹಲಿ: ಈ ವರ್ಷ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿದ್ದು, ಈ ಪೈಕಿ ಎರಡು ಸೂರ್ಯ ಗ್ರಹಣಗಳಿರಲಿವೆ. ಏಪ್ರಿಲ್ 20, ಗುರುವಾರ ಈ ವರ್ಷದ ಮೊದಲ ಸೂರ್ಯಗ್ರಹಣ ಗೋಚರಿಸಲಿದೆ. ಈ ಗ್ರಹಣವನ್ನು ಹೈಬ್ರಿಡ್ ಸೂರ್ಯಗ್ರಹಣ (Hybrid Solar Eclipse 2023) ಎಂದೂ ಕರೆಯಲಾಗುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ದಕ್ಷಿಣ ಫೆಸಿಫಿಕ್, ಪಶ್ಚಿಮ ಆಸ್ಟ್ರೇಲಿಯಾ, ಪೂರ್ವ ತೀಮೂರ್, ಇಂಡೋನೇಷ್ಯಾದಲ್ಲಿ ಕಾಣಲಿದೆ. ಬೆಳಗ್ಗೆ 7.04ಕ್ಕೆ ಸೂರ್ಯಗ್ರಹಣ ಆರಂಭವಾಗಲಿದ್ದು, ಸಂಪೂರ್ಣ ಗ್ರಹಣ 8.07ಕ್ಕೆ ಸಂಭವಿಸಲಿದೆ.
ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ, ಭೂಮಿ ಮೇಲೆ ಚಂದ್ರನ ನೆರಳು ಹಾದು ಹೋಗುತ್ತದೆ. ಆಗ ಸೂರ್ಯ ಉಂಗುರ ರೀತಿಯಲ್ಲಿ ಕಾಣುತ್ತಾನೆ. ಇದನ್ನೇ ಹೈಬ್ರಿಡ್ ಸೂರ್ಯಗ್ರಹಣ ಎಂದು ಕರೆಯುತ್ತಾರೆ. ಅಂದ ಹಾಗೆ, ಈ ರೀತಿಯ ಗ್ರಹಣ ಶತಮಾನಕ್ಕೆ ಸಂಭವಿಸುವ ವಿದ್ಯಮಾನವಾಗಿದೆ. ಈ ಹಿಂದೆ 2013ರಲ್ಲಿ ಹೈಬ್ರಿಡ್ ಸೂರ್ಯಗ್ರಹಣ ಸಂಭವಿಸಿತ್ತು. 2031ರಲ್ಲೂ ಸಂಭವಿಸುತ್ತದೆ ಎಂದು ಹೇಳಲಾಗುತ್ತಿದೆ. ಆ ನಂತರ, ಮುಂದಿನ ಹೈಬ್ರಿಡ್ ಸೂರ್ಯಗ್ರಹಣಕ್ಕಾಗಿ ನಾವು 2164ರವರೆಗೆ ಕಾಯಬೇಕಾಗುತ್ತದೆ.
ಈಗಾಗಲೇ ಹೇಳಿದಂತೆ ಈ ವರ್ಷ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿವೆ. ಏಪ್ರಿಲ್ 20 ಮತ್ತು ಅಕ್ಟೋಬರ್ 14ರಂದು ಸೂರ್ಯಗ್ರಹಣ ಸಂಭವಿಸಿದರೆ, ಮೇ 5 ಮತ್ತು ಅಕ್ಟೋಬರ್ 28ರಂದು ಚಂದ್ರಗ್ರಹಣ ಮೇಳೈಸಲಿದೆ. ಆಕಾಶದಲ್ಲಿನ ಈ ಕೌತುಕಗಳ, ಖಗೋಳಾಸಕ್ತರಿಗೆ ಹೆಚ್ಚಿನ ಮನರಂಜನೆಯನ್ನು ಒದಗಿಸಲಿವೆ.
ಇದನ್ನೂ ಓದಿ: Horoscope Today | ಸೂರ್ಯ ಗ್ರಹಣದ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ
ಸಾಮಾನ್ಯವಾಗಿ ಗ್ರಹಣಗಳ ಜತೆಯಾಗಿಯೇ ಬರುತ್ತವೆ. ಅಂದರೆ, ಸೂರ್ಯ ಮತ್ತು ಚಂದ್ರ ಗ್ರಹಣಗಳು ಒಟ್ಟೊಟ್ಟಿಗೆ ಬರುತ್ತವೆ. ಈಗ ಏಪ್ರಿಲ್ 2ರಂದು ಹೈಬ್ರಿಡ್ ಸೂರ್ಯಗ್ರಹಣ ಸಂಭವಿಸಿದೆ, ಈ ವರ್ಷದ ಮೊದಲ ಚಂದ್ರಗ್ರಹಣ ಮೇ 5ಕ್ಕೆ ಸಂಭವಿಸಲಿದೆ. ಈ ಗ್ರಹಣವು ದಕ್ಷಿಣ ಮತ್ತು ಪೂರ್ವ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅಂಟಾರ್ಟಿಕಾದಲ್ಲಿ ಕಾಣಿಸಲಿದೆ.