ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಎಲ್ಲೆಡೆ ಮುದ್ದು ಕೃಷ್ಣನ ಸಿಂಗಾರದ್ದೇ ಮಾತು. ಮನೆಗಳಲ್ಲಿ, ಶಾಲೆಯಲ್ಲಿ, ಬೇಬಿ ಸಿಟ್ಟಿಂಗ್‌ಗಳಲ್ಲಿ ಹೀಗೆ ಎಲ್ಲೆಡೆ ಚಿಣ್ಣರನ್ನು ಕೃಷ್ಣನಾಗಿಸಿ ಸಿಂಗರಿಸುವುದು ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ ಈಗಾಗಲೇ ಸಿಂಗಾರಕ್ಕೆ ಬೇಕಾಗುವ ಎಲ್ಲಾ ಬಗೆಯ ಕಾಸ್ಟ್ಯೂಮ್‌ಗಳು ಹಾಗೂ ಆಕ್ಸೆಸರೀಸ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಇವುಗಳನ್ನು ಬಳಸಿ, ಮಕ್ಕಳಿಗೆ ಹೇಗೆಲ್ಲಾಆಕರ್ಷಕವಾಗಿ ಕೃಷ್ಣನ ಅವತಾರ ಮಾಡಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ಸಿಂಪಲ್ಲಾಗಿ ವಿವರಿಸಿದ್ದಾರೆ.
ಕೃಷ್ಣನ ಕಾಸ್ಟ್ಯೂಮ್ ಆಯ್ಕೆ ಮಾಡಿ
ಮೊದಲಿಗೆ ಕಾಸ್ಟ್ಯೂಮ್ ರೆಡಿ ಮಾಡಿಟ್ಟುಕೊಳ್ಳಿ. ಮಾರುಕಟ್ಟೆಯಲ್ಲಿ ಲಭ್ಯವಿರುವ ನಾನಾ ವಿನ್ಯಾಸದ ಉಡುಪುಗಳಲ್ಲಿ ನಿಮ್ಮ ಪುಟ್ಟ ಕಂದಮ್ಮನಿಗೆ ಯಾವುದು ಆಕರ್ಷಕವಾಗಿ ಕಾಣುವುದನ್ನು ಕೊಂಡು ತನ್ನಿ. ಧೋತಿ, ಶಲ್ಯದೊಂದಿಗೆ, ಕಿರೀಟ, ಬಾಜುಬಂದ್‌ಗಳು ಹಾಗೂ ಒಂದೆರೆಡು ಮುತ್ತಿನಂತೆ ಕಾಣುವ ಸರಗಳು, ಕಮರ್‌ಬಾಂದ್, ಅದರೊಂದಿಗೆ ಕೊಳಲು ಸೇರಿದಂತೆ ಎಲ್ಲವೂ ಒಂದೇ ಪ್ಯಾಕ್‌ನೊಳಗೆ ದೊರೆಯುತ್ತವೆ. ಇಲ್ಲವಾದಲ್ಲಿ ಬಾಡಿಗೆಗೆ ಲಭ್ಯವಿರುವ ಕೃಷ್ಣನ ಕಾಸ್ಟ್ಯೂಮ್‌ಗಳನ್ನು ಬಳಸಬಹುದು.
ಮುದ್ದು ಕಂದ ಕೃಷ್ಣನಾಗಿ ಸಿಂಗರಿಸುವ ಮುನ್ನ
ಸಿಂಗರಿಸುವ ಮುನ್ನ, ಒಂದು ಥೀಮನ್ನು ಪ್ಲಾನ್ ಮಾಡಿ. ಉದಾಹರಣೆಗೆ ಬೆಣ್ಣೆ ಕೃಷ್ಣ, ಮುರಳಿ ಗೋಪಾಲ, ಅಂಬೆಗಾಲಿಡುವ ಕೃಷ್ಣ, ಮಡಿಕೆ ಒಡೆಯುವ ಕೃಷ್ಣ ಹೀಗೆ ನಾನಾ ಥೀಮ್‌ಗೆ ತಕ್ಕಂತೆ ಸಿಂಗರಿಸಿದಾಗ ಮಕ್ಕಳು ಚೆನ್ನಾಗಿ ಕಾಣುವರು.
ಮಕ್ಕಳಿಗೆ ಕೃಷ್ಣನ ಮೇಕಪ್ ಲೈಟಾಗಿರಲಿ
ಮಕ್ಕಳು ನ್ಯಾಚುರಲ್ ಆಗಿಯೇ ನೋಡಲು ಮುದ್ದು ಮುದ್ದಾಗಿರುತ್ತಾರೆ. ಹಾಗಾಗಿ ಹೆಚ್ಚು ಮೇಕಪ್ ಮಾಡಬೇಡಿ. ಕಣ್ಣಿಗೆ ಗುಣಮಟ್ಟದ ಕಾಜಲ್ ಹಚ್ಚಿ. ಹುಬ್ಬನ್ನು ತೀಡಿ. ಮಕ್ಕಳ ಕ್ರೀಮ್ ಹಾಗೂ ಪೌಡರ್ ಹಾಕಿ. ದೃಷ್ಠಿ ಬೊಟ್ಟು ಇಡಿ. ಕೂದಲು ನ್ಯಾಚುರಲ್ ಆಗಿ ಗುಂಗಾರಾಗಿದ್ದಲ್ಲಿ ಸೂಪರ್ಬ್. ಇಲ್ಲವಾದಲ್ಲಿ ಕೂದಲು ಕೊಂಚ ಮುಂಭಾಗಕ್ಕೆ ಬಾಚಿ. ಹಣೆಗೆ ೩ ನಾಮದ ಚಿತ್ತಾರ ಬಿಡಿಸಿ ನಂತರ ಕಿರೀಟ ತೊಡಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ದೀಪಿಕಾ ರಾಣಿ.
ಕಾಸ್ಟ್ಯೂಮ್ ಹಾಕಿ ಸಿಂಗರಿಸಿ
ಮಕ್ಕಳಿಗೆ ಆದಷ್ಟೂ ಸರ, ಕಿರೀಟ ಹಾಗೂ ಬಾಜುಬಂದ್‌ಗಳನ್ನು ಕೊನೆಯಲ್ಲಿ ಹಾಕಿ. ಇಲ್ಲವಾದಲ್ಲಿ ಕಿತ್ತುಕೊಳ್ಳಬಹುದು. ಧೋತಿಯೊಂದಿಗೆ ಶಲ್ಯ ಜಾರದಂತೆ ಚುಚ್ಚದಂತೆ ಪಿನ್ ಮಾಡಿ. ಕೊಳಲಿನೊಂದಿಗೆ ಮಕ್ಕಳು ಆಟವಾಡುವ ಸಾಧ್ಯತೆ ಹೆಚ್ಚು ಹಾಗಾಗಿ ಮಕ್ಕಳ ಕೈಗಳಿಗೆ ಇನ್ಯಾವುದೋ ಆಟಿಕೆಗಳನ್ನು ನೀಡಿ ಕೃಷ್ಣನಾಗಿ ಸಿಂಗರಿಸುವುದು ಉತ್ತಮ ಎನ್ನುತ್ತಾರೆ ಮೇಕ್‌ಒವರ್ ಎಕ್ಸ್‌ಪಟ್F ಲಕ್ಷ್ಮಿ.
ಮುದ್ದು ಕೃಷ್ಣನ ಸಿಂಗಾರಕ್ಕೆ ಒಂದಿಷ್ಟು ಟಿಪ್ಸ್:
- ಮುಖಕ್ಕೆ ಬಳಿದುಕೊಳ್ಳುವಂತಹ ಕಾಸ್ಮೆಟಿಕ್ಸ್ ಬಳಸಬೇಡಿ.
- ಮೊದಲೇ ಇಂಟರ್ನೆಟ್ನಲ್ಲಿ ಯಾವ್ಯಾವ ಪೋಸ್ಗೆ ಫೋಟೋ ಬೇಕು ಎಂಬುದನ್ನು ನೋಡಿಟ್ಟುಕೊಳ್ಳಿ.
- ಮಗುವಿನ ಊಟ-ತಿಂಡಿ ಹಾಗೂ ನಿದ್ದೆಯ ನಂತರ ಡ್ರೆಸ್ ಮಾಡಿ. ಕಿರಿಕಿರಿಯಾಗದು.
- ಥೀಮ್‌ಗೆ ತಕ್ಕಂತೆ ಅಗತ್ಯ ಸಾಮಗ್ರಿಗಳನ್ನು ಸ್ಥಳದಲ್ಲಿರಿಸಿ.
ಇದನ್ನೂ ಓದಿ| Krishna Janmashtami̇ 2022 | ಕೃಷ್ಣ ಜನ್ಮಾಷ್ಟಮಿ ಶಾಪಿಂಗ್ ಮೇನಿಯಾ