ಕೆ.ಆರ್.ಪೇಟೆ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಭಾಗವಾಗಿ ಭಾನುವಾರ ನೂರಾರು ಯತಿ ವರ್ಯರು ಪುಣ್ಯ ಸ್ನಾನ ಮಾಡಿದರು. ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣ ತೀರ್ಥ ಮೂರು ನದಿಗಳ ತ್ರಿವೇಣಿ ಸಂಗಮದಲ್ಲಿ ನಾಲ್ಕು ದಿನಗಳಿಂದ ವಿವಿಧ ರೀತಿಯ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿದ್ದು, ಇಂದು ಸಂಜೆ ಸಮಾರೋಪ ನಡೆಯಲಿದೆ.
ಒಂಬತ್ತು ವರ್ಷಗಳ ಬಳಿಕ ಇಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದ್ದು, ಅಕ್ಟೋಬರ್ ೧೩ರಿಂದ ಅದ್ಧೂರಿ ಸಂಭ್ರಮ ಮನೆ ಮಾಡಿದೆ. ನಾಲ್ಕನೇ ದಿನವಾದ ಭಾನುವಾರ ಬೆಳಗ್ಗಿನಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ಸ್ಥಳೀಯ ದೇವರು ಮಹದೇಶ್ವರ, ಸಂಗಮೇಶ್ವರ, ಸ್ವತಂತ್ರ ಸಿದ್ಧಲಿಂಗೇಶ್ವರರಿಗೆ ವಿಶೇಷ ಪೂಜೆ, ಅಲಂಕಾರ.
ಮುಂಜಾನೆ ನಡೆದ ಸುಪ್ರಭಾತ ಸೇವೆ, ರುದ್ರಾಭಿಷೇಕ ನಡೆಯಿತು.
ಬಳಿಕ ಕುಂಭ ಮೇಳ ನಿಮಿತ್ತ ಪ್ರತಿಷ್ಠಾಪಿಸಲಾದ 154 ಕಳಶಗಳಿಗೆ ವಿಶೇಷ ಪೂಜೆ ನಡೆಯಿತು. ವೇದ ಬ್ರಹ್ಮ ಗದ್ಗೇಶ್ ನೇತೃತ್ವದ 40 ಜನ ಪುರೋಹಿತರಿಂದ ಗಣಪತಿ, ನವಗ್ರಹ, ರುದ್ರ ಹಾಗೂ ಕುಂಬೇಶ್ವರ ಹೋಮ ಆರಂಭಗೊಂಡು ಬೆಳಗ್ಗೆ 9:30ಕ್ಕೆ ಮಹಾ ಪೂರ್ಣಾಹುತಿ ಹೋಮ ಜರುಗಿತು.
ಸುತ್ತೂರು ಶ್ರೀಗಳು, ಚುಂಚಶ್ರೀಗಳು ಹಾಗೂ ಸಚಿವದ್ವಯರಾದ ನಾರಾಯಣಗೌಡ ಹಾಗೂ ಕೆ.ಗೋಪಾಲಯ್ಯ ಹೋಮದಲ್ಲಿ ಭಾಗಿಯಾಗಿದ್ದರು. 9:30ರಿಂದ 10:30 ರ ಶುಭ ವೃಶ್ಚಿಕ ಲಗ್ನದಲ್ಲಿ ಕುಂಬೇಶ್ವರ ಕಳಶ ವಿಸರ್ಜನೆ ನಡೆಯಿತು.
ಪುಣ್ಯ ಸ್ನಾನ ಮಾಡಿದ ಯತಿ ವರ್ಯರು.
ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ, ಸುತ್ತೂರಿನ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಅವದೂತ ವಿನಯ್ ಗುರೂಜಿ, ದುರ್ದುಂಡ ಮಹಾಂತ ಶಿವಯೋಗಿ ಸ್ವಾಮೀಜಿಗಳು ಪುಣ್ಯ ಸ್ನಾನದಲ್ಲಿ ಭಾಗಿಯಾದರು. ಪೂರ್ಣಾಹುತಿ ನಂತರ ಕಳಸದ ನೀರನ್ನು ನದಿಗೆ ಅರ್ಪಿಸಿದ ಯತಿವರ್ಯರು ಬಳಿಕ ಸ್ನಾನ ಮಾಡಿದರು. ಇದಾದ ಬಳಿಕ ಭಕ್ತರು ಪುಣ್ಯ ಸ್ನಾನ ಆರಂಭಿಸಿದರು.
ಸಮಾರೋಪ ಸಮಾರಂಭ
ಪುಣ್ಯಸ್ನಾನದ ಬಳಿಕ ಮಹಾ ಕುಂಭ ಮೇಳದ ಸಮಾರೋಪ ಸಮಾರಂಭ ನಡೆಯಲಿದ್ದು, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅವರ ಸಂಪುಟದ ಹಲವು ಸಚಿವರು ಭಾಗಿಯಾಗುವರು. 2 ಗಂಟೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಸಂಜೆ ವೇಳೆಗೆ ಮಹಾಕುಂಭ ಮೇಳಕ್ಕೆ ತೆರೆಬೀಳಲಿದೆ.
ಇದನ್ನೂ ಓದಿ | Maha kumbhamela | ನಾಳೆ ತ್ರಿವೇಣಿ ಸಂಗಮದ ಕುಂಭಮೇಳಕ್ಕೆ ತೆರೆ; ಬರಲಾಗದೆಂದು ಪತ್ರ ಬರೆದ ಯೋಗಿ