ಅಂಬಿಗರಹಳ್ಳಿ (ಕೆ.ಆರ್. ಪೇಟೆ, ಮಂಡ್ಯ ಜಿಲ್ಲೆ): ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳು ಸೇರುವ ಕೆ.ಆರ್. ಪೇಟೆ ತಾಲೂಕಿನ ಅಂಬಿಗರ ಹಳ್ಳಿಯಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಕುಂಭ ಮೇಳಕ್ಕೆ ವೈಭವದ ಚಾಲನೆ ದೊರಕಿದೆ. ಅಕ್ಟೋಬರ್ ೧೩ರಿಂದ ೧೬ರವರೆಗೆ ನಡೆಯುವ ಈ ಮಹಾ ಕುಂಭಮೇಳದ ಮೊದಲನೇ ದಿನವಾದ ಗುರುವಾರ ಶುಕ್ರವಾರ ಮಲೈ ಮಹದೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿವೆ. ಇತ್ತ ಮಲೆಮಹದೇಶ್ವರ ಬೆಟ್ಟದಿಂದ ಹೊರಟು ಮೂರು ದಾರಿಗಳಲ್ಲಿ ಬಂದಿರುವ ಮಹದೇಶ್ವರ ಜ್ಯೋತಿ ಕೆ.ಆರ್. ಪೇಟೆಯನ್ನು ಪ್ರವೇಶಿಸಿದ್ದು, ಅದ್ದೂರಿ ಮೆರವಣಿಗೆ ಮೂಲಕ ಸಾಗುತ್ತಿದೆ. ಮಹದೇಶ್ವರ ಜ್ಯೋತಿಗಳು ಅಕ್ಟೋಬರ್ ೧೪ರ ಮುಂಜಾನೆ ತ್ರಿವೇಣಿ ಸಂಗಮವನ್ನು ಪ್ರವೇಶಿಸಲಿವೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು, ೩೦೦ಕ್ಕೂ ಅಧಿಕ ಧರ್ಮಗುರುಗಳು, ಆರು ಲಕ್ಷಕ್ಕೂ ಅಧಿಕ ಭಕ್ತರು ಭಾಗಿಯಾಗುವ ಮಹಾ ವೈಭವ ಇದಾಗಲಿದೆ. ಅಂಬಿಗರಹಳ್ಳಿಯಲ್ಲಿ ಒಂಬತ್ತು ವರ್ಷಗಳ ಬಳಿಕ ಈ ಮಹಾ ಸಂಭ್ರಮ ಮನೆ ಮಾಡಿದೆ.
ಮೊದಲ ದಿನ ಬೆಳಗ್ಗಿನಿಂದ ಸಂಜೆವರೆಗೆ ಏನೇನಾಯಿತು?
ಮೂರು ದಿನಗಳ ಸಂಗಮದ ತಟಾಕದಲ್ಲಿರುವ ಅಂಬಿಗರಹಳ್ಳಿಯ ಶ್ರೀ ಮಹದೇಶ್ವರ ದೇವಸ್ಥಾನ ಮತ್ತು ಇಡೀ ಊರು ದೇದೀಪ್ಯಮಾನ ಬೆಳಕಿನ ಮಾಲೆಗಳಿಂದ ಕಂಗೊಳಿಸುತ್ತಿದ್ದು, ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಬೆಳಗ್ಗಿನ ಬ್ರಾಹ್ಮಿ ಮುಹೂರ್ತದಲ್ಲಿ ದೇವಾಲಯ ಪ್ರವೇಶ, ಭಗವಾಧ್ವಜ ಸ್ಥಾಪನೆ, ಹೋಮ ಹವನಗಳು ನಡೆದವು. ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಗಳೂ ಸಾಥ್ ನೀಡಿದರು.
ಮಹದೇಶ್ವರ ಜ್ಯೋತಿಯ ಭವ್ಯ ಮೆರವಣಿಗೆ
ಕಳೆದ ಅಕ್ಟೋಬರ್ 6ರಿಂದ ಮಲೈ ಮಹದೇಶ್ವರ ಬೆಟ್ಟದಿಂದ ಮೂರು ಜ್ಯೋತಿಗಳು ಹೊರಟಿದ್ದು, ಚಾಮರಾಜನಗರ, ಮೈಸೂರು, ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಸಂಚರಿಸಿ ಗುರುವಾರ ಕೆ.ಆರ್.ಪೇಟೆ ನಗರವನ್ನು ತಲುಪಿವೆ. ಮೊದಲನೇ ಜ್ಯೋತಿಯು 144 ಹಳ್ಳಿಗಳಲ್ಲಿ 895 ಕಿ.ಮೀ. ಸಾಗಿ ಸುಮಾರು 2 ಲಕ್ಷ ಜನರಿಗೆ ತಲುಪಿದೆ. ಎರಡನೇ ಜ್ಯೋತಿ 94 ಹಳ್ಳಿಗಳಲ್ಲಿ 604 ಕಿ.ಮೀ. ಸಾಗಿ ಸುಮಾರು 2 ಲಕ್ಷ ಜನರಿಗೆ ತಲುಪಿದೆ. ಮೂರನೇ ಜ್ಯೋತಿ 16 ಹಳ್ಳಿಗಳಲ್ಲಿ 832 ಕಿ.ಮೀ. ಸಾಗಿ ಸುಮಾರು 3 ಲಕ್ಷ ಜನರನ್ನು ತಲುಪಿ ಈ 3 ಜ್ಯೋತಿಗಳು ಒಟ್ಟು ಸುಮಾರು 10 ಲಕ್ಷ ಜನರನ್ನು ತಲುಪಿದ್ದು, ಗುರುವಾರ ಸಂಜೆ ಕೆ.ಆರ್. ಪೇಟೆ ನಗರದಲ್ಲಿ ಜತೆಯಾದವು.
ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ, ಕೆ.ಆರ್. ಪೇಟೆಯವರೇ ಆದ ಸಚಿವ ಕೆ.ಸಿ. ನಾರಾಯಣ ಗೌಡ, ಮಂಡ್ಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಮೂರೂ ಜ್ಯೋತಿಗಳನ್ನು ಸ್ವಾಗತಿಸಿದರು. ತೆಂಗಿನ ಕಾಯಿ ಒಡೆಯುವ ಮೂಲಕ ತ್ರಿವಳಿ ಜ್ಯೋತಿಗಳ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಅವರು ಜಿಲ್ಲಾ ಉತ್ಸವ ಉದ್ಘಾಟಿಸಲಿದ್ದಾರೆ.
ಅದ್ಧೂರಿ ಮೆರವಣಿಗೆಯಲ್ಲಿ ಭರತ ನಾಟ್ಯ, ಮೂಡಲಪಾಯ ಯಕ್ಷಗಾನ, ಕಂಸಾಳೆ, ತಮಟೆ, ಪೂಜಾ ಕುಣಿತ, ದೊಣ್ಣೆ ವರಸೆ, ಆಳ್ವಾಸ್ ಶಿಕ್ಷಣ ಸಂಸ್ಥೆ ಸೇರಿದಂತೆ 100ಕ್ಕೂ ಹೆಚ್ಚು ಕಲಾ ತಂಡಗಳು ಭಾಗಿಯಾಗಿವೆ. ೩೦೦೦ಕ್ಕೂ ಅಧಿಕ ಕಲಾವಿದರು ಈ ಮಹಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ಕೆ.ಆರ್. ಪೇಟೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜ್ಯೋತಿ ಸಾಗುತ್ತಿದೆ.
೧೪ರಂದು ಡಾ. ಹೆಗ್ಗಡೆಯವರಿಂದ ಉದ್ಘಾಟನೆ
ಅ.14ರಂದು ಬೆಳಗ್ಗೆ 11ಕ್ಕೆ ಮಹಾಕುಂಭಮೇಳವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರಾಜ್ಯ ಸಭಾ ಸದಸ್ಯರಾದ ಡಾ.ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಲಿದ್ದಾರೆ. ಆದಿ ಚುಂಚನಗಿರಿ ಮಹಾಸಂಸ್ಥಾನಮಠದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಮೈಸೂರು ರಾಮಕೃಷ್ಣ್ಣಾಶ್ರಮದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ಕಾಗಿನೆಲೆ ಕನಕಗುರು ಪೀಠದ ಶ್ರೀ ಶಿವಾನಂದ ಪುರಿ ಸ್ವಾಮೀಜಿ, ಶ್ರೀರಂಗಪಟ್ಟಣ ಬೇಬಿಮಠ ಮತ್ತು ಚಂದ್ರವನ ಆಶ್ರಮದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ,ಮಲೆಮಹದೇಶ್ವರ ಬೆಟ್ಟದ ಸಾಲೂರು ಬ್ರಹನ್ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ. ಧ್ವಜಾರೋಹಣವನ್ನು ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಅವರು ನೆರವೇರಿಸಲಿದ್ದಾರೆ. ರಾಜ್ಯದ ವಿವಿಧ ಸಚಿವರುಗಳು ಘನ ಉಪಸ್ಥಿತಿ ವಹಿಸಲಿದ್ದಾರೆ.
೧೫ರಂದು ಧಾರ್ಮಿಕ ಸಭೆ, ೧೬ರಂದು ಯೋಗಿ ಆದಿತ್ಯನಾಥ್ ಭಾಗಿ
ಮಹಾಕುಂಭ ಮೇಳದ ಧಾರ್ಮಿಕ ಸಭೆ ಅ.15ರಂದು ನಡೆಯಲಿದೆ. ಅ.16ರಂದು ಬೆಳಗ್ಗೆ 11ಕ್ಕೆ ಮಹಾಕುಂಭ ಮೇಳದ ಸಮಾರೋಪ ನಡೆಯಲಿದ್ದು, ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಜೀ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಧ್ವಜ ಅವರೋಹಣ ಮಾಡಲಿದ್ದಾರೆ. ಕೇಂದ್ರ ಮತ್ತು ರಾಜ್ಯದ ಅನೇಕ ಸಚಿವರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ. ಅ. ೧೬ರಂದು ಬೆಳಗ್ಗೆ 9:30ಕ್ಕೆ ಮಹಾಕುಂಭಮೇಳದ ಪುಣ್ಯಸ್ನಾನ ಕಾರ್ಯಕ್ರಮ ಜರುಗಲಿದೆ.
300ಕ್ಕೂ ಹೆಚ್ಚು ಧರ್ಮಗುರುಗಳು ಭಾಗಿ
ಕುಂಭಮೇಳ ಕಾರ್ಯಕ್ರಮದಲ್ಲಿ ದೇಶದ ನಾನಾ ಭಾಗಗಳಿಂದ ಸರ್ವಧರ್ಮಗಳ ಸಾಧು ಸಂತ ಶ್ರೇಷ್ಠರು, ಆಚಾರ್ಯರು, ಪ್ರಾಜ್ಞರುಗಳು, ಬಿಷಪ್, ಮೌಲ್ವಿಗಳು ಸೇರಿದಂತೆ 300ಕ್ಕೂ ಹೆಚ್ಚು ಧಾರ್ಮಿಕ ಗುರುಗಳು ಹಾಗೂ 6ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು, ಯಾತ್ರಾರ್ಥಿಗಳು ಪ್ರವಾಸಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ | ಕೆ.ಆರ್. ಪೇಟೆ ತ್ರಿವೇಣಿ ಸಂಗಮದ ಮಹಾ ಕುಂಭಮೇಳಕ್ಕೆ ಆಗಮಿಸಲು ಯೋಗಿ ಆದಿತ್ಯನಾಥ್ ಸಮ್ಮತಿ