Site icon Vistara News

Maha kumbhamela | ನಾಳೆ ತ್ರಿವೇಣಿ ಸಂಗಮದ ಕುಂಭಮೇಳಕ್ಕೆ ತೆರೆ; ಬರಲಾಗದೆಂದು ಪತ್ರ ಬರೆದ ಯೋಗಿ

maha kumbamlaa

ಮಂಡ್ಯ: ಇಲ್ಲಿನ ಕೆ.ಆರ್.ಪೇಟೆಯ ಅಂಬಿಗರಹಳ್ಳಿಯಲ್ಲಿ ನಡೆಯುತ್ತಿರುವ ತ್ರಿವೇಣಿ ಸಂಗಮದ ಮಹಾ ಕುಂಭಮೇಳ (Maha kumbhamela) ಸಂಭ್ರಮವು 3ನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರ ಮುಂಜಾನೆ 6 ಗಂಟೆಯಿಂದ ಕಳಸ ಪೂಜೆ, ಗಣಪತಿ, ನವಗ್ರಹ, ಮೃತ್ಯುಂಜಯ ಹೋಮ, ಸಹಸ್ರ ಹೋಮ, ಮೋದಕ ಹೋಮ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ನೆರವೇರಿದವು.

Maha kumbhamela

ಮಹಾ ಕುಂಭಮೇಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇರಿದ್ದವು, ಶಾಸ್ತ್ರೀಯ ಸಂಗೀತ ಹಾಗೂ ಸ್ಯಾಕ್ಸೋಫೋನ್ ಮೂಲಕ ಸಂಗೀತಗಾರರು ಜನರನ್ನು ರಂಜಿಸಿದ್ದರು. ಜತೆಗೆ ರಾಜ್ಯದ ಪ್ರಮುಖ ಮಠಗಳ ಸುಮಾರು 50ಕ್ಕೂ ಮಠಾಧೀಶರು ಧಾರ್ಮಿಕ ಸಭೆ ನಡೆಸಿದರು. ಅಕ್ಟೋಬರ್ 13ಕ್ಕೆ ಶುರುವಾದ ಮಹಾ ಕುಂಭಮೇಳಕ್ಕೆ ಭಾನುವಾರ ತೆರೆಬೀಳಲಿದೆ.

ಈ ಸಂಬಂಧ ಮಾತನಾಡಿರುವ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ, ಮಹಾ ಕುಂಭಮೇಳದ ಕೊನೆಯ ದಿನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಅವರನ್ನು ಆಹ್ವಾನಿಸಲಾಗಿತ್ತು. ಅವರು ಸಮ್ಮತಿಯನ್ನೂ ನೀಡಿದ್ದರು. ಆದರೆ, ಉತ್ತರ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ ಅವರು ಬರಲಾರರು. ಉಳಿದಂತೆ ಭಾನುವಾರದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗೈರಾಗುವ ಕುರಿತು ಸಿಎಂಗೆ ಯೋಗಿ ಪತ್ರ

ಸಂಜೆ ವೇಳೆಗೆ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭಮೇಳ ಕಾರ್ಯಕ್ರಮಕ್ಕೆ ಗೈರಾಗುತ್ತಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿಗೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಪತ್ರ ಬರೆದಿದ್ದಾರೆ. ಕುಂಭಮೇಳದಲ್ಲಿ ಭಾಗಿಯಾಗಲು ಆಹ್ವಾನಿಸಿದ್ದಕ್ಕೆ ಕೃತಜ್ಞನಾಗಿದ್ದೇನೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಗಂಗಾ, ಯಮುನಾ, ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಕುಂಭ ಮೇಳ ಆಯೋಜಿಸಲಾಗುತ್ತದೆ. ಕರ್ನಾಟಕದ ತ್ರಿವೇಣಿ ಸಂಗಮದಲ್ಲೂ ಕುಂಭ ಮೇಳ ಆಯೋಜಿಸಿರುವುದು ತಿಳಿದಾಗ ಹೃದಯ ತುಂಬಿ ಬಂತು. ಕಾವೇರಿ, ಹೇಮಾವತಿ, ಲಕ್ಷ್ಮಣ ತೀರ್ಥ ನದಿಗಳ ಸಂಗಮದಲ್ಲಿ ನಡೆಯುವ ಕುಂಭ ಮೇಳಕ್ಕೆ ಬರಲು ಇಚ್ಛಿಸಿದ್ದೆನು.

ಆದರೆ, ಉತ್ತರ ಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹಾಗಾಗಿ ಕರ್ನಾಟಕದ ಕುಂಭಮೇಳದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಈ ಕುಂಭಮೇಳವೂ ಸಾಮಾಜಿಕ ಸಾಮರಸ್ಯ ಮತ್ತು ಐಕ್ಯತೆ ಸಾಧಿಸಲಿ ಎಂದು ಕುಂಭಮೇಳ ಯಶಸ್ಸಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ | Kumbh Mela | ಕೆ.ಆರ್‌.ಪೇಟೆ ತ್ರಿವೇಣಿ ಸಂಗಮದಲ್ಲಿ‌ ಗಂಗಾರತಿ ಸಂಪನ್ನ

Exit mobile version