Site icon Vistara News

Maha Shivaratri 2023 : ಶಿವನ ಮಹಾ ಮಹೋತ್ಸವ ಮಹಾ ಶಿವರಾತ್ರಿ

Maha Shivaratri

ವಿದ್ವಾನ್ ನರಸಿಂಹ ಭಟ್ ಬಡಗು
ಭಾರತೀಯರ ಜೀವನಪದ್ಧತಿ ಅತಿ ವಿಶಿಷ್ಟವಾದದ್ದು. ಅದಕ್ಕೆ ಕಾರಣವಿಷ್ಟೆ; ಇವರ ಬದುಕು ಒಂದು ದಿನ ಹುಟ್ಟುವುದು ಇನ್ನೊಂದು ದಿನ ಸಾಯುವುದು ಮತ್ತು ಈ ಹುಟ್ಟುಸಾವುಗಳ ಮಧ್ಯೆ ಹಾಗೂ ಹೀಗೋ ಒಂದಷ್ಟು ದಿನ ಜೀವನವನ್ನು ಸವೆಸುವುದು ಇಷ್ಟೇ ಅಲ್ಲ. ಈ ಬದುಕಿಗೆ ಯಾವ ಅರ್ಥವೂ ಇಲ್ಲ. ಪಶುಗಳೂ ಇಂತಹ ಬದುಕನ್ನು ನಡೆಸುತ್ತವೆ. ಇದಕ್ಕಿಂತಲೂ ಭಿನ್ನವೂ ಇದರ ಜೊತೆಗೂಡಿದ್ದೂ ಆದ ಯಾವ ಅಂತರಂಗದ ಬದುಕುಂಟೋ ಅದೇ ನಿಜವಾದದ್ದು ಎಂದು ಸಾರಿದ ಭಾರತೀಯ ಮಹರ್ಷಿಗಳು ಇಂದ್ರಿಯ ತೃಪ್ತಿಯನ್ನು ಬಿಟ್ಟಿಲ್ಲ. ಆತ್ಮತೃಪ್ತಿಯನ್ನು ಮರೆತಿಲ್ಲ. ಇವೆರಡರ ಸಮನ್ವಯದ ಬಾಳಾಟವನ್ನೇ ಜೀವನ’ ಎಂದರು.

ಈ ಮಾನವಶರೀರವು ಇಹ ಮತ್ತು ಪರಗಳನ್ನು ಅತ್ಯಂತ ವ್ಯವಸ್ಥಿತವಾಗಿ ಅನುಭವಿಸಲೆಂದೇ ಭಗವಂತ ನಮಗೆ ಕೊಟ್ಟ ಅನುಗ್ರಹಯಂತ್ರ. ಅನೇಕ ಜನ್ಮಗಳ ಪುಣ್ಯದಿಂದ ಮಾತ್ರ ಮಾನವಜನ್ಮವನ್ನು ಪಡೆಯಲು ಸಾಧ್ಯ. ಆದ್ದರಿಂದ ಈ ಜನ್ಮದಲ್ಲೇ ಈ ಜೀವಕ್ಕೆ ಉತ್ತಮ ಸಂಸ್ಕಾರವನ್ನು ಕೊಡುವುದರ ಮೂಲಕ ಜೀವವು ದೇವನಲ್ಲಿ ಒಂದಾಗಬೇಕು. ಅದಕ್ಕೆಂದೇ ಭಗವಂತ ನಮಗಾಗಿ ಕೊಟ್ಟ ಉತ್ತಮಕಾಲಘಟ್ಟವನ್ನೇ “ಹಬ್ಬ” “ಪರ್ವ” “ಮಹೋತ್ಸವ” ಇತ್ಯಾದಿ ಪದಗಳಿಂದ ಕರೆಯಲಾಗಿದೆ. ಇಂತಹ ವಿಶೇಷಕಾಲಘಟ್ಟಗಳಲ್ಲಿ `ʻಶಿವರಾತ್ರಿ’ ಎಂಬ (Maha Shivaratri 2023) ವಿಶಿಷ್ಟ ಪರ್ವವೂ ಒಂದಾಗಿದೆ.

ಇಂದು ಈ ಶಿವರಾತ್ರಿಮಹೋತ್ಸವವನ್ನು ಭಯಂಕರವಾಗಿ ಆಚರಿಸಲಾಗುತ್ತಿದೆ. ಅದರ ಒಂದು ಝಲಕ್ಕನ್ನು ನೋಡುವುದಾದರೆ; ಇದು ರಾತ್ರಿ ಆಚರಿಸುವ ಹಬ್ಬ. ರಾತ್ರಿಯೆಲ್ಲಾ ಎಚ್ಚರವಾಗಿರುವ ಕಾಲ. ಅದಕ್ಕಾಗಿ ಜಾಗರಣೆ ಮಾಡಬೇಕು ಎಂಬಿಷ್ಟೇ ಅಂಶದಿಂದ ಜಾಗರಣೆಯನ್ನು ವಿದ್ಯುದ್ದೀಪದಿಂದ ರಾತ್ರಿಯನ್ನೇ ಹಗಲಾಗಿಸಿಕೊಂಡು ಬಗೆಬಗೆಯ ಆಟದಲ್ಲಿ ಕೂಟದಲ್ಲಿ ಕಾಲವನ್ನು ಕಳೆಯಲಾಗುತ್ತಿದೆ. ಜೂಜು ಮೋಜು ಮಸ್ತಿಯಲ್ಲೇ ಕಾಲಕಳೆಯುವ ಜನರು ಒಂದು ಕಡೆಯಾದರೆ ಉಪವಾಸ ಜಾಗರಣೆ ಇವೆಲ್ಲ ಮೂಢನಂಬಿಕೆಯ ಆಚರಣೆಗಳು ಎಂದು ಹೇಳುತ್ತಾ ಕಂಠಪರ್ಯಂತ ತಿಂದು ಗಡದ್ದಾಗಿ ನಿದ್ದೆ ಮಾಡಿ ಸುಖವಾಗಿ ರಾತ್ರಿ ಕಳೆಯಿತು! ಎಂದು ಹೇಳುವವರು ಇನ್ನೊಂದು ಕಡೆ.

ಅಷ್ಟು ಇಷ್ಟು ಭಗವಂತ, ಧರ್ಮ, ಎಂದೆಲ್ಲ ನಂಬಿದವರು ಸಾಧ್ಯವಾದಷ್ಟು ಉಪವಾಸದ ಹೆಸರಿನಲ್ಲಿ ಅಲ್ಪಸ್ವಲ್ಪ ತಿಂದು ತಿಳಿದಷ್ಟು ಪೂಜೆ ಮಾಡಿ ಈ ರಾತ್ರಿಯನ್ನು ಹಾಗೂಹೀಗೂ ಕಳೆದು ಶಿವರಾತ್ರಿಯನ್ನು ಆಚರಿಸಿದೆ ಎಂದು ಧನ್ಯಭಾವವನ್ನು ಅನುಭವಿಸುವವರು ಇನ್ನು ಹಲವರು. ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್’ ಅಷ್ಟೊ ಇಷ್ಟೊ ತಿಳಿದೋ ತಿಳಿಯದೋ ಧರ್ಮವನ್ನು ಆಚರಿಸುವುದು ಉತ್ತಮಪಕ್ಷವೇ. ಹಾಗಾದರೆ ಶಿವರಾತ್ರಿ ಎಂದರೇನು? ಈ ಆಚರಣೆಯಲ್ಲಿ ಮಹರ್ಷಿಗಳ ಕೊಡುಗೆ ಎನು? ಇದನ್ನು ಹೇಗೆ ಆಚರಿಸಬೇಕು? ಎಂಬಿತ್ಯಾದಿ ವಿಷಯಗಳನ್ನು ಶ್ರೀರಂಗಮಹಾಗುರುವಿನ ನೋಟದ ಜೊತೆ ತಿಳಿಯುವ ಪ್ರಯತ್ನ ಮಾಡೋಣ.

ಪುರಾಣಕಥೆಗಳು ಹೇಳುವುದೇನು?

ಒಮ್ಮೆ ಬ್ರಹ್ಮದೇವನು ವೈಕುಂಠಕ್ಕೆ ತೆರಳುತ್ತಾನೆ. ಆಗ ಶ್ರೀವಿಷ್ಣುವು ಶ್ರೀದೇವೀ ಭೂದೇವಿಯರಿಂದ ಸೇವೆಪಡೆಯುತ್ತಿದ್ದನು. ಬ್ರಹ್ಮದೇವನ ಆಗಮನವನ್ನು ಅಲಕ್ಷಿಸಿದ್ದನು. ಇದಕ್ಕೆ ಕೋಪಕೊಂಡ ಬ್ರಹ್ಮದೇವನು; ʻʻಅಯ್ಯಾ ! ಮಹಾವಿಷ್ಣುವೇ! ಈ ಸೃಷ್ಟಿಕರ್ತಾ ಬ್ರಹ್ಮನೇ ಬಂದರೂ ತಿರಸ್ಕಾರವೇ? ಎದ್ದೇಳು! ನಾನು ನಿನ್ನ ಪಿತಾಮಹ ಬಂದಿದ್ದೇನೆʼʼ ಎಂದ. ಅತ್ತ ಮಹಾವಿಷ್ಣುವು ತನ್ನ ಶಯನದಿಂದಲೇ; ʻʻನಿನಗೆ ಮಂಗಳವಾಗಲಿ! ನೀನೂ ಬಂದು ಈ ಆಸನದಲ್ಲಿ ಕುಳಿತುಕೊʼʼ ಎಂದನು. ಆ ಕ್ಷಣದಲ್ಲಿ ಬ್ರಹನು ಇನ್ನಷ್ಟು ಕೋಪದಿಂದ; ʻʻನಿನ್ನ ರಕ್ಷಕ ನಾನು. ಈ ಸೃಷ್ಟಿಗೇ ಕಾರಣ. ಇಷ್ಟಿದ್ದೂ ನನ್ನನ್ನು ಅಪಮಾನಿಸಿರುವೆಯಲ್ಲʼʼ ಎಂದನು.

ಆಗ ಮಹಾವಿಷ್ಣುವು ʻʻನನ್ನ ನಾಭಿಕಮಲದಲ್ಲಿ ಹುಟ್ಟಿರುವುದರಿಂದ ನೀನು ನನ್ನ ಮಗʼʼ ಎಂದನು. ಹೀಗೆ ನಾನು ಸೃಷ್ಟಿಕರ್ತಾ ಎಂದು ಬ್ರಹ್ಮನೂ, ನಾನು ನಿನ್ನನ್ನೇ ಸೃಷ್ಟಿಸಿದ ತಂದೆ ಎಂದು ವಿಷ್ಣುವೂ ಹೀಗೆ ಇಬ್ಬರ ಮಧ್ಯೆ ವಿವಾದ ಆರಂಭವಾಯಿತು. ಬ್ರಹ್ಮನು ಪಾಶುಪತವನ್ನೂ ವಿಷ್ಣುವು ಮಾಹೇಶ್ವರಾಸ್ತ್ರವನ್ನೂ ಪ್ರಯೋಗಿಸಲು ಮುಂದಾದರು. ಇದರಿಂದ ದೇವಗಣ ಭಯಗ್ರಸ್ತವಾಯಿತು. ಹೆದರಿ ಕೈಲಾಸದಲ್ಲಿರುವ ಶಿವನ ಬಳಿ ಓಡಿದರು.

ಈ ಮೊದಲೇ ವಿಷಯವನ್ನು ತಿಳಿದ ಶಿವನು ʻʻನಾನು ಈ ವಿವಾದವನ್ನು ಪರಿಹರಿಸುವೆʼʼ ʻʻಶಿವಲಿಂಗತಯೋದ್ಭೂತಃ ಕೋಟಿಸೂರ್ಯಸಮಪ್ರಭಃʼʼ ಎಂದು ಶಿವನು ತನ್ನ ಜ್ಯೋತಿರ್ಮಯರೂಪವನ್ನು ಪ್ರಕಟಪಡಿಸಿದನು. ಆಗ ಈ ಎರಡೂ ಅಸ್ತ್ರಗಳೂ ಲಿಂಗದಲ್ಲಿ ಲೀನವಾದವು. ಈ ಅವತಾರದ ದಿನವನ್ನೇ ʻಮಹಾಶಿವರಾತ್ರಿ’ ಎಂದು ಕರೆಯಲಾಗಿದೆ. (ಈಶಾನಸಂಹಿತಾ) ಇದೊಂದು ಕೇವಲ ಕಥೆಯಲ್ಲ. ತಾತ್ತ್ವಿಕವಾದ ಹಿನ್ನೆಲೆಯೂ ಉಂಟು. ಅದನ್ನು ಮುಂದೆ ನೋಡೋಣ.

ಮಹಾಕಾಲನಿಗೆ ಯಾವುದು ಕಾಲ?

ಮಹಾಕಾಲನಾದ ಶಿವನ ಆರಾಧನೆಗೆ ವಿಶೇಷವಾದ ಕಾಲ ಕೃಷ್ಣಪಕ್ಷದ ಚತುರ್ದಶೀ. ಪ್ರತಿಮಾಸದಲ್ಲೂ ಕೃಷ್ಣಪಕ್ಷದಲ್ಲಿ ಬರುವ ಚತುರ್ದಶಿಗೂ ಶಿವರಾತ್ರಿ ಎಂದೇ ಹೆಸರು. ಆದರೆ ಮಾಘಮಾಸದ ಕೃಷ್ಣಪಕ್ಷದ ಚತುರ್ದಶಿಗೆ ʻಮಹಾಶಿವರಾತ್ರಿ’ ಎಂದು ಕರೆಯಲಾಗುತ್ತದೆ. ಪ್ರತಿಯೊಂದು ತಿಥಿಯೂ ಒಂದೊಂದು ದೇವತೆಯ ಅಧಿಷ್ಠಾನವಾಗಿರುತ್ತದೆ. ಚತುರ್ಥಿಗೆ ಗಣೇಶ ಅಧಿಷ್ಠಾನ ದೇವತೆಯಾದಂತೆ ಚತುರ್ದಶಿಗೆ ಶಿವನು ಅಧಿಷ್ಠಾನ ದೇವನಾಗಿರುತ್ತಾನೆ. ಅಂದರೆ ಆಯಾ ತಿಥಿಯು ಆಯಾ ದೇವತೆಯ ಉಪಾಸನೆಗೆ ಪ್ರಶಸ್ತವಾದ ಕಾಲ ಎಂಬುದಾಗಿ ನಮ್ಮ ಪರಂಪರೆ ಸಾರಿದೆ. ಇದರಲ್ಲೂ ರಾತ್ರಿಯು ಶಿವನ ಉಪಾಸನೆಗೆ ಅತ್ಯಂತ ಶ್ರೇಷ್ಠವಾಗಿದೆ.

ಶಿವನಿಗೂ ರಾತ್ರಿಗೂ ಸಂಬಂಧವಿದೆ. ಸತ್ತ್ವ-ರಜಸ್ಸು-ತಮಸ್ಸು ಎಂಬ ತ್ರಿಗುಣಗಳಿಗೆ ತ್ರಿಮೂರ್ತಿಗಳಲ್ಲಿ ಕ್ರಮವಾಗಿ ವಿಷ್ಣು-ಬ್ರಹ್ಮ-ಮಹೇಶ್ವರರು ಅಧಿಪತಿಯಾಗಿರುತ್ತಾರೆ. ಕಾಲದಲ್ಲೂ ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಹೀಗೆ ಒಂದೊಂದು ಕಾಲಕ್ಕೂ ಒಂದೊಂದು ದೇವತೆಯ ಪ್ರಾಧಾನ್ಯವಿರುತ್ತದೆ. ರಾತ್ರಿಯಲ್ಲಿ ತಮಸ್ಸಿನ ಆಧಿಕ್ಯವಿರುವುದರಿಂದಗೆ ಶಿವನಿಗೆ ಪ್ರಾಧಾನ್ಯ.

ಶಿವನನ್ನು ಸಂಹಾರಕರ್ತಾ ಎಂದು ಕರೆಯಲಾಗುತ್ತದೆ. ಸ್ವಾಭಾವಿಕವಾಗಿ ರಾತ್ರಿಯು ಸಂಹಾರಕಾಲದ ಪ್ರತಿನಿಧಿ. ಇಂದ್ರಿಯಗಳನ್ನು ಸೆಳೆದುಕೊಳ್ಳುವ ಕಾಲ. ಜೀವಿಯು ಕರ್ಮಚೇಷ್ಟೆಗಳನ್ನೆಲ್ಲಾ ಬಿಟ್ಟು ಚೈತನ್ಯವನ್ನು ಉಪಸಂಹರಿಸಿಕೊಂಡು ನಿದ್ದೆಗೆ ಜಾರುವ ಕಾಲವಿದು.ಚʻʻಯಸ್ಯಾಂ ಜಾಗೃತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ”(ಗೀತಾ-69) ಎಂಬಂತೆ ಸಾಮಾನ್ಯ ಜೀವಿಯು ಜಾಡ್ಯನಿದ್ದೆಯಲ್ಲಿದ್ದರೆ ಮುನಿಯಾದವನು ಆಜಾಡ್ಯನಿದ್ರೆ –ಸಮಾಧಿಯಲ್ಲಿ ಮುಳುಗಿರುತ್ತಾನೆ. ಸಾಧಕನಿಗಿದು ಸಾಧನೆಗೆ ಪರ್ವಕಾಲವಾಗಿದೆ.

ಮನಸಸ್ಪತಿಯ ಜಾಗೃತವಾಗುವ ಪರ್ವ

ಶುಕ್ಲಪಕ್ಷದಲ್ಲಿ ಚಂದ್ರನು ವೃದ್ಧಿಹೊಂದುತ್ತಾ ಕೃಷ್ಣಪಕ್ಷದಲ್ಲಿ ಕ್ಷೀಣಿಸುತ್ತಾ ಹೋಗುತ್ತಾನೆ. ಚಂದ್ರನ ಪ್ರಭಾವ ಇಡೀ ಬ್ರಹ್ಮಾಂಡದ ಮೇಲೆ ಬೀರುತ್ತದೆ. ಅಲ್ಲದೇ ಚಂದ್ರನನ್ನು ಮನಸ್ಸಿಗೆ ಅಧಿಪತಿ ಎಂದು ಜ್ಯೋತಿಷ್ಯಶಾಸ್ತ್ರವು ಹೇಳುತ್ತದೆ. ಹಾಗಾಗಿ ಚಂದ್ರನ ವೃದ್ಧಿಕ್ಷಯಗಳು ನಮ್ಮ ಮನಸ್ಸಿನ ಮೇಲೂ ಪ್ರಭಾವವನ್ನು ಬೀರದಿರದು. ಈ ಕೃಷ್ಣಪಕ್ಷದ ರಾತ್ರಿಯು ವಿಶೇಷವಾದ ತಮಸ್ಸಿನ ಆವರಣವಾಗಿರುವುದರಿಂದ ಸಾಮಾನ್ಯ ಜೀವಿಯು ಜಾಡ್ಯನಿದ್ದೆಗೆ ಜಾರುವುದು ಸಹಜ. ಮತ್ತು ಈ ಗಾಢವಾದ ತಮಸ್ಸಿನ ಕಾಲವೇ ರಾಕ್ಷಸೀಶಕ್ತಿಗಳು ಪ್ರಬುದ್ಧರಾಗುವ ಸನ್ನಿವೇಶವಿರುತ್ತದೆ.

ನೈತಿಕ ಸಾಮಾಜಿಕ ಅಪರಾಧಗಳು ಘಟಿಸುವ ಕಾಲವೂ ಇದೇ ಆಗಿದೆ. ಇದೇ ಕಾಲವು ತಮಸ್ಸಿನ ಅಧಿಪತಿಗೆ ಪ್ರಿಯವಾದದ್ದು. ಮಂದಮತಿಗಳು ಈ ಕಾಲವನ್ನು ನಿದ್ದೆಯಲ್ಲಿ ಕಳೆಯುತ್ತಾರೆ. ಪ್ರಾಜ್ಞರಾದವರು ಈ ಕಾಲವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ಅವರಿಗಿದು ಸಂಧ್ಯಾಕಾಲ. ಮಧ್ಯರಾತ್ರಿಯನ್ನೂ ಸಂಧ್ಯಾಕಾಲಗಳಲ್ಲಿ ಒಂದೆಂದೂ ಇದು ಸಾಧನೆಗೆ ಅತ್ಯಂತ ಪ್ರಶಸ್ತ ಎಂದು ತೀರ್ಮಾನಿಸಲಾಗಿದೆ.

ʻʻನಿಶಿ ಭ್ರಮಂತಿ ಭೂತಾನಿ ಶಕ್ತಯಃ ಶೂಲಭೃದ್ಯತಃ” – ಶಿವ ಮತ್ತು ಅವನ ಅನುಚರರು ಸಂಚರಿಸುವ ಕಾಲವೂ ಇದೇ ಆಗಿದೆ. ʻʻಇಲ್ಲಿ ಶಿವನ ಸಹಚಾರಿಗಳಾಗಿ ಹೇಳಲ್ಪಟ್ಟಿರುವ ಭೂತಗಳು ಭಯ ಅಥವಾ ಬೀಭತ್ಸಗಳಿಗೆ ಕಾರಣರಾಗಿರುವ ಜೀವಿಗಳಲ್ಲ. ಜ್ಞಾನಿ ಭಕ್ತರಾದ ಪರಿವಾರಗಳು. ಆರಾಧಿಸುವವರಿಗೆ ಇಷ್ಟಾರ್ಥವನ್ನು ಅನುಗ್ರಹಿಸುವ ಶಕ್ತಿ ಇವುಗಳಿಗಿದೆ. ಅವು ಸಂಹಾರಕಾರ್ಯದಲ್ಲೂ ಶಿವನಿಗೆ ಸಹಾಯ ಮಾಡುತ್ತವೆ” ಎಂದು ಶ್ರೀರಂಗಮಹಾಗುರುಗಳು ವ್ಯಾಖ್ಯಾನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಚತುರ್ದಶೀ ನಿರ್ಣಯ ಹೇಗೆ?

ʻʻಮಾಘಮಾಸಸ್ಯ ಕೃಷ್ಣಾಯಾಂ ಚತುರ್ದಶ್ಯಾಂ ಸುರೇಶ್ವರ!|
ಅಹಂ ವತ್ಸ್ಯಾಮಿ ಭೂಪೃಷ್ಠೇ ರಾತ್ರೌ, ನೈವ ದಿವಾ ಕಲೌ || (ನಾಗರಖಂಡ)

ಎಂಬ ವಚನಾನುಸಾರ ಮಾಘ ಕೃಷ್ಣ ಚತುರ್ದಶಿಯು ಮಹಾಶಿವರಾತ್ರಿ ಎಂದು ಪರಿಗಣಿತವಾಗಿದೆ. ಇನ್ನು ಕೆಲವು ಕಡೆ ʻʻಫಾಲ್ಗುನಸ್ಯ ಚತುರ್ದಶ್ಯಾಂ ಕೃಷ್ಣಪಕ್ಷೇ ಸಮಾಹಿತಾಃ” (ಹೇಮಾದ್ರಿ ತೀರ್ಥಖಂಡ) ಎಂಬುದಾಗಿ ಫಾಲ್ಗುಣ ಮಾಸವನ್ನು ಸ್ವೀಕರಿಸಲಾಗುತ್ತದೆ. ಏನೇ ಆದರೂ ಚತುರ್ದಶಿಯು ಶಿವದೇವತಾತ್ಮಕವಾದ ತಿಥಿಯಾಗಿದೆ.

ತಿಥಿಯ ನಿರ್ಣಯ ಹೇಗೆ?
೧. “ಸರ್ವಾಪಿ ಶಿವರಾತ್ರಿಃ ಪ್ರದೋಷವ್ಯಾಪಿನ್ಯೇವ” (ನಿರ್ಣಯಾಮೃತ) “ಸೂರ್ಯಾಸ್ತದ ಅನಂತರ ಎರಡು ಘಂಟೆಯ ಕಾಲವೇ ಪ್ರದೋಷಕಾಲ. ಈ ಸಮಯದಲ್ಲಿ ಚತುರ್ದಶೀ ತಿಥಿಯು ಇರಬೇಕು.
೨. “ಪ್ರದೋಷನಿಶೀಥೋಭಯವ್ಯಾಪ್ತಿಃ ಇತಿ ಮಾಧವಃ ʼʼಪ್ರದೋಷ ಮತ್ತು ರಾತ್ರಿಯ ಎಂಟನೆ ಮುಹೂರ್ತದವರೆಗೆ ಚತುರ್ದಶೀ ಇರಬೇಕು.
೩. ಎರಡು ರಾತ್ರಿಯೂ ವ್ಯಾಪ್ತವಾಗಿದ್ದರೆ ಮಾರನೇ ದಿನವನ್ನೇ ಪರಿಗಣಿಸಬೇಕು.
೪. ಎರಡೂ ದಿನಗಳಲ್ಲಿಯೂ ತಿಥಿಯು ರಾತ್ರಿವ್ಯಾಪಿನಿಯಲ್ಲದಿದ್ದರೆ ಮಾರನೇ ದಿನವನ್ನೇ ಬಳಸಬೇಕು (ಹೇಮಾದ್ರಿ ಮತ್ತು ಕೌಸ್ತುಭ).
೫. ತ್ರಯೋದಶಿವಿದ್ಧವಾದ ಚತುರ್ದಶಿಯೇ ಶ್ರೇಷ್ಠ ಎಂಬುದಾಗಿ ಸ್ಕಂದಪುರಾಣ ಸಾರಿದೆ. ಈ ವ್ರತವು ಭಾನುವಾರ ಮತ್ತು ಮಂಗಳವಾರ ಹಾಗೂ ಶಿವ ಯೋಗದಿಂದ ಕೂಡಿದ್ದರೆ ಅತ್ಯಂತ ಶ್ರೇಷ್ಠ ಎಂಬುದಾಗಿ ತಿಳಿಯಬೇಕು.

ಶಿವನ ಸಂಖ್ಯೆ ಹನ್ನೊಂದು. ಚೈತ್ರಾದಿ ಮಾಸದಿಂದ ಮಾಘಮಾಸವು ಹನ್ನೊಂದನೇ ಮಾಸವಾಗಿದೆ. ಹಾಗಾಗಿ ಈ ಮಾಸವನ್ನು ʻʻಮಹಾಶಿವರಾತ್ರಿʼʼ ಎನ್ನಲಾಗಿದೆ. ʻʻಸಾಧಕರ ಅಂತರರಂಗದಲ್ಲಿ ಯಾವಾಗ ವಿಶೇಷವಾಗಿ ಶಿವನ ಸಾಕ್ಷಾತ್ಕಾರ ಆಗುತ್ತದೆಯೋ ಆ ಕಾಲವನ್ನೇ ಆಚರಣೆಗೆ ಬಳಸಬೇಕು” ಎಂಬುದು ಶ್ರೀರಂಗಮಹಾಗುರುಗಳ ಅಂತರಂಗವಾಗಿತ್ತು.

ಉಪವಾಸ ಹೇಗೆ?

ಉಪವಾಸವು ಮಹಾಶಿವರಾತ್ರಿ ವ್ರತದಲ್ಲಿ ಬಹುಮುಖ್ಯವಾದ ಅಂಗ. ಆಹಾರದ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದೇ ಉಪವಾಸ ಎಂಬರ್ಥವನ್ನು ಇಂದು ಎಲ್ಲಾ ಕಡೆ ಕಾಣುತ್ತೇವೆ. ಆದರೆ ಶ್ರೀರಂಗಮಹಾಗುರುಗಳು ಇದನ್ನು ವಿಶೇಷವಾಗಿ ವ್ಯಾಖ್ಯಾನಿಸುತ್ತಿದ್ದರು. “ಉಪ-ಸಮೀಪೇ, ವಾಸ-ಇರುವುದು. ಅಂದರೆ ಭಗವಂತನ ಬಳಿ ಮನಸ್ಸನ್ನು ಸದಾ ಇರಿಸುವುದೇ ಉಪವಾಸವಪ್ಪ” ಎಂದು. ಉಪವಾಸಕ್ಕೆ ನಿಜವಾದ ಅರ್ಥ ಇದುವೇ . ಇಂತಹ ಸ್ಥಿತಿಗೆ ಆಹಾರವನ್ನು ಬಳಸದೇ ಇರುವುದೂ ಕಾರಣ ಎಂಬರ್ಥದಲ್ಲಿ ಉಪವಾಸ ಪದದ ಬಳಕೆ ಉಚಿತವಾಗುವುದು.

“ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ”(ಗೀತಾ೨.೫೯) ಎಂಬ ಗೀತಾಚಾರ್ಯನ ಮಾತಿನಂತೆ ಆಹಾರವನ್ನು ಬಳಸದೇ ಇರುವುದು ವಿಷಯಲಾಲಸೆಯನ್ನು ದೂರಮಾಡುವುದು. ಆಗ ಇಂದ್ರಿಯನಿಗ್ರಹ ಮತ್ತು ಮನೋನಿಗ್ರಹ ಸುಲಭ. ನಿಗ್ರಹವೇ ಇಲ್ಲಿ ಮುಖ್ಯ ಉದ್ದೇಶವೇ ಹೊರತು ಕೇವಲ ಆಹಾರವನ್ನು ಬಳಸದಿರುವುದು ಎಂದೂ ಅಲ್ಲ. ಮತ್ತು ನಿಗ್ರಹವುಳ್ಳವನಿಗೆ ಹಸಿವು ಬಾಯಾರಿಕೆಗಳ ಪರಿವೆಯೇ ಇರದು. ಇಂತಹ ಕಂಡೀಶನ್ನು ಏನುಂಟು ಅದನ್ನೇ ಉಪವಾಸ ಎಂದು ಮಹರ್ಷಿಗಳು ಕರೆದಿದ್ದಾರೆ.

ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗು ಅಶಕ್ತರಾದವರು ಭಗವಂತನ ಪೂಜೆಗೆ ತೊಡಕು ಉಂಟಾಗದ ರೀತಿಯಲ್ಲಿ ಆಹಾರವನ್ನು ಬಳಸಿದರೆ ತಪ್ಪಲ್ಲ ಎಂದು ಶಾಸ್ತ್ರಗಳು ವಿಧಿಸಿವೆ. “ಉಪೋಷಿತೈಃ ಪೂಜಿತಃ ಸನ್ ನರಕಾತ್ ತಾರಯೇತ್ ತಥಾ”(ಗರುಡ) –ಈ ಉಪವಾಸವು ಎಲ್ಲಾ ಪಾಪಗಳನ್ನು ಪರಿಹರಿಸಿ ನಮ್ಮನ್ನು ಉದ್ಧಾರ ಮಾಡುವ ಉತ್ತಮವದ ವ್ರತಾಂಗವಾಗಿದೆ.

ಜಾಗರಣ ಎಂದರೇನು?
ಜಾಗರಣವು ಶಿವರಾತ್ರಿಯ ಇನ್ನೊಂದು ಮುಖ್ಯವಾದ ಅಂಗ. ಜಾಗರಣ ಎಂದರೆ ಎಚ್ಚರವಾಗಿರುವುದು. “ತಸ್ಯಾಂ ಜಾಗರಣಾದ್ರುದ್ರಃ ಪೂಜಿತೋ ಭುಕ್ತಿಮುಕ್ತಿದಃ” (ಗರುಡ) ಈ ದಿನ ಮಾಡಿದ ಜಾಗರಣವು ಇಹದಲ್ಲಿ ಭೋಗಕ್ಕೆ ಬೇಕಾದ ಸಂಪತ್ತನ್ನೂ, ಮತ್ತು ಪರದ ಭೋಗಕ್ಕೆ ಬೇಕಾದ ವೈರಾಗ್ಯವನ್ನೂ ಕೊಡುವುದಾಗಿದೆ. ಆದ್ದರಿಂದ ಈ ದಿನ ಮಾಡುವ ಜಾಗರಣಕ್ಕೆ ಅಷ್ಟೊಂದು ವಿಶೇಷತೆ ಇದೆ. ಹಾಗಾದರೆ ಜಾಗರಣೆ ಎಂದರೆ ಕೇವಲ ನಿದ್ದೆ ಮಾಡದೆ ಎಚ್ಚರವಾಗಿರುವುದು ಎಂಬ ಅರ್ಥವಲ್ಲ. ನಮ್ಮ ಇಂದ್ರಿಯ, ದೇಹ, ಮನಸ್ಸು ಇವುಗಳನ್ನೆಲ್ಲಾ ಅತ್ಯಂತ ಪಟುವಾಗಿಸಿಕೊಂಡು ಅವುಗಳಿಂದ ಭಗವಂತನನ್ನು ಪೂಜಿಸಬೇಕು, ಸ್ತೋತ್ರಮಾಡಬೇಕು, ಧ್ಯಾನಿಸಬೇಕು ಎಂದರ್ಥ. ನಮ್ಮೆಲ್ಲಾ ಕರಣಕಳೆಬರಗಳನ್ನೆಲ್ಲವನ್ನೂ ಭಗವಂತನಿಗಾಗಿ ಮೀಸಲಿಡುವ ಪವಿತ್ರಕಾಲವೇ ಜಾಗರಣ. ಹೊರತು ಎಚ್ಚರವಾಗಿದ್ದುಕೊಂಡು ಇನ್ನಾವುದೋ ಬಹಿರ್ಮುಖವಾದ ವ್ಯಾಪಾರದಲ್ಲೋ, ಮೋಜು ಮಸ್ತಿನಲ್ಲೋ ಕಾಲಹರಣ ಮಾಡುವುದು ಜಾಗರಣ ಖಂಡಿತ ಆಗಲಾರದು. ಇದು ಭಗವಂತನಿಗೆ ಮಾಡುವ ಅಪಚಾರ. ಸ್ತ್ರೀಯರು ಪುರುಷರು ಎಲ್ಲಾ ಜಾತಿಜನಾಂಗದವರೂ ಎಲ್ಲರೂ ಈ ಜಾಗರಣವನ್ನು ಮಾಡಬಹುದು. ಇಲ್ಲಿ ಒಂದನ್ನು ಮಾತ್ರ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ ವ್ರತ ನಿಯಮಗಳೆಲ್ಲವೂ ಯಾರು ಭಗವಂತನ ಮಡಿಲನ್ನು ಸೇರಿ ಈ ಸಂಸಾರಬಂಧನದಿಂದ ಮುಕ್ತಿ ಪಡೆಯಬೇಕು ಎಂದು ಅಪೇಕ್ಷಿಸುತ್ತಾರೋ ಅಂತಹವರಿಗೆ ಮಾತ್ರ ಎಂದು.

ಶಿವರಾತ್ರಿಯ ಪೂಜಾ ವಿಧಾನ

ಶಿವರಾತ್ರಿಯ ದಿನ ಇಡೀ ರಾತ್ರಿ ಪೂಜೆಯನ್ನು ಮಾಡಬೇಕು. ನಾಲ್ಕೂ ಯಾಮಗಳೂ ಪೂಜಾ ಯೋಗ್ಯವಾದ ಕಾಲವಾಗಿವೆ. ಶಿವಲಿಂಗ ಅಥವಾ ಕಲಶದಲ್ಲಿ ಶಿವನನ್ನು ಆವಾಹಿಸಿ ಷೋಡಶೋಪಚಾರಗಳಿಂದ ಪೂಜಿಸಬೇಕು. “ಅಭಿಷೇಕಪ್ರಿಯಃ ಶಿವಃ” ಎಂಬಂತೆ ಅಭಿಷೇಕವು ಶಿವನಿಗೆ ಅತ್ಯಂತ ಶ್ರೇಷ್ಠ. ಹಾಗಾಗಿ ಮೊದಲನೆಯ ಯಾಮದಲ್ಲಿ ಹಾಲಿನಿಂದ, ಎರಡನೆ ಯಾಮದಲ್ಲಿ ಮೊಸರಿನಿಂದ, ಮೂರನೆ ಯಾಮದಲ್ಲಿ ತುಪ್ಪದಿಂದ ಮತ್ತು ನಾಲ್ಕನೆ ಯಾಮದಲ್ಲಿ ಜೇನುತುಪ್ಪದಿಂದ ಅಭಿಷೇಕ ಮಾಡಬೇಕು.

ಯಜುರ್ವೇದದಲ್ಲಿ ಬರುವ ರುದ್ರಾನುವಾಕ ಮಂತ್ರವನ್ನು ಅಭಿಷೇಕದ ಜೊತೆ ಪಠಿಸಬೇಕು. ಪಂಚಾಮೃತ, ಗಂಧ, ಕುಂಕುಮ, ಕರ್ಪೂರ, ತೀರ್ಥ, ಸುವರ್ಣತೀರ್ಥಗಳಿಂದ ಶಿವನಿಗೆ ಅಭಿಷೇಕ ಮಾಡಬೇಕು. ಎಕ್ಕೆ, ಕರವೀರ, ಬಿಲ್ವ ಬಕುಲ ಇವು ಶಂಕರನಿಗೆ ಪ್ರಿಯಕರ. ಇವುಗಳಲ್ಲೂ ಬಿಲ್ವಪತ್ರೆ ಅತ್ಯಂತ ಶ್ರೇಷ್ಠವಾಗಿದೆ. ಮೂರು ದಳಗಳು ತ್ರಿಮೂರ್ತಿಗಳ ಪ್ರತಿರೂಪ. “ಇದರ ದರ್ಶನ, ಸ್ಪರ್ಶ ಮತ್ತು ಸಮರ್ಪಣೆಗಳು ಶಿವಸ್ಥಾನಕ್ಕೆ ಏರಿಸಬಲ್ಲವು ಎಂಬುದನ್ನು ಶ್ರೀರಂಗಮಹಾಗುರುಗಳು ಪ್ರಯೋಗದೊಂದಿಗೆ ಪಾಠ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಲಿಂಗಾಷ್ಟಕ, ಬಿಲ್ವಾಷ್ಟಕ ಮೊದಲಾದ ಸ್ತೋತ್ರಗಳಿಂದ ಶಿವನನ್ನು ಸ್ತುತಿ ಮಾಡಬೇಕು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಶಿವ ಅಷ್ಟೋತ್ತರ ಅಥವಾ ಸಹಸ್ರನಾಮಗಳಿಂದ ಅರ್ಚನೆ, ಶಿವಕಥಾಶ್ರವಣ, ಭಜನ, ಶಿವನಾಮಸಂಕೀರ್ತನ, ಹೀಗೆ ಶಿವಮಯವಾಗಿ ಜಾಗರೂಕರಾಗಿ ರಾತ್ರಿಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಮರುದಿನ ಬೆಳಿಗ್ಗೆ ಪಾರಣೆ (ವ್ರತಾಂತಭೋಜನ) ಮಾಡಿ ಶಿವರಾತ್ರಿವ್ರತವನ್ನು ಪೂರ್ಣಗೊಳಿಸಬೇಕು.

ಜಿಜ್ಞಾಸಾಪರಿಹಾರ

ಶಿವನು ತಮಸ್ಸಿಗೆ ಅಧಿದೇವತೆ, ಸಂಹಾರಕ ಅಂದರೆ ಕೊಲ್ಲುವವನು. ಹೀಗಿದ್ದೂ ಇಂತಹ ದೇವರನ್ನು ಪೂಜಿಸುವುದು ಮೂರ್ಖತನವಲ್ಲವೇ? ಇಂತಹ ದೇವರ ಪೂಜೆಯಿಂದ ಫಲವಾದರೂ ಏನು? ಮತ್ತು ಹಿಂದೆ ನೆನೆಪಿಸಿದ ಕಥೆಯ ತಾತ್ತ್ವಿಕವಾದ ಹಿನ್ನೆಲೆ ಏನು? ಎಂಬ ಮೊದಲಾದ ಪ್ರಶ್ನೆಗಳು ಓದುಗರ ಮನಸ್ಸಿನಲ್ಲಿ ಮೂಡುವುದು ಸಹಜ. ಈ ಸೃಷ್ಟಿಯಲ್ಲಿ ಸತ್ತ್ವ, ರಜಸ್ಸು ಮತ್ತು ತಮಸ್ಸು ಈ ಮೂರೂ ಗುಣಗಳು ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಸಾಮರಸ್ಯ ಇರಲು ಸಾಧ್ಯ.

ಒಬ್ಬ ಮನುಷ್ಯ ದಿನದ ಇಪ್ಪತ್ತನಾಲ್ಕೂ ಗಂಟೆಗಳ ಕಾಲವೂ ಅವಿಶ್ರಾಂತವಾಗಿ ಕೆಲಸದಲ್ಲಿ ನಿರತನಾದರೆ ಆರೋಗ್ಯ ಕೆಡುವುದಿಲ್ಲವೇ? ಕಾಲಕಾಲಕ್ಕೆ ನಿದ್ದೆಯನ್ನು ಮಾಡಿ ಕೆಲಸವನ್ನು ಮಾಡಿದರೆ ಆರೋಗ್ಯವಾಗಿ ಬದುಕಬಹುದು. ಹಾಗೆಯೇ ಜೀವಿಗಳು ಕರ್ಮಫಲಗಳನ್ನು ಅನುಭವಿಸಿ ಬಳಲಿದಾಗ ವಿಶ್ರಾಂತಿ ಪಡೆಯಲು ಅವನು “ಮರಣ ರೂಪವಾದ ವಿಶ್ರಾಂತಿಯನ್ನು ಕರುಣಿಸುವ ಕರುಣಾಮಯನಾದ ದೇವನೇ ಆಗಿದ್ದಾನೆ. ಜಾಗೃತ್ತಿಗೆ ಹೇಗೆ ರಜಸ್ಸು ಕಾರಣವೋ. ಸಮಾಧಾನಕ್ಕೆ ಸತ್ತ್ವಗುಣ ಕಾರಣ. ನಿದ್ದೆಗೆ ತಮಸ್ಸು ಕಾರಣ. ಶಿವನ ಅನುಗ್ರಹದಿಂದಲೇ ನಾವು ನಿತ್ಯವೂ ಸುಖವಾಗಿ ನಿದ್ರಿಸುತ್ತಿದ್ದೇವೆ.ಯಾವುದೇ ಗುಣವು ವ್ಯತ್ಯಾಸವಾದರೂ ಸೃಷ್ಟಿಯಲ್ಲಿ ಏರುಪೇರು ಸಹಜ. ಒಬ್ಬ ಸಾಧಕನು ಈ ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಈ ಮೂರೂ ಗುಣಗಳ ಅಧಿಷ್ಠಾನ ದೇವತೆಗಳ ಪ್ರಸಾದ ಅತಿಮುಖ್ಯ.

ನಮ್ಮ ಜೀವನಕ್ಕೆ ಅಡ್ಡಿಪಡಿಸುವ ರಾಕ್ಷಸೀಸ್ವಭಾವನ್ನು ನಾಶಪಡಿಸುವುದು ಸಂಹಾರಕಾರ್ಯವಾದರೂ ಇದರಿಂದ ಜೀವಸಂಕುಲಕ್ಕೆ ಒಳಿತೇ. ಇಂತಹ ದೇವರನ್ನು ಪೂಜಿಸುವುದರಿಂದ ಜೀವಕ್ಕೆ, ಜೀವನಕ್ಕೆ ಹೊಸ ಉತ್ಸಾಹವನ್ನು ಕೊಡುತ್ತದೆ. ನಮ್ಮ ಮಹರ್ಷಿಗಳ ಯಾವ ಉದ್ಘೋಷವಿದೆಯೋ ಪುರುಷಾರ್ಥಮಯ ಬಾಳಾಟ ಇದೇ ಮಾನವನ ಚರಮ ಮತ್ತು ಪರಮ ಲಕ್ಷ್ಯ. ಇದನ್ನು ಪಡೆಯಲು ಶಿವರಾತ್ರಿಮಹೋತ್ಸವವು ಸಾಧನವಾಗಲಿ ಎಂದು ಶಂಕರನನ್ನು ಪ್ರಾಥಿಸಿ ಮಂಗಳಮಾಡುತ್ತೇನೆ.

– ಲೇಖಕರು ಸಂಸ್ಕೃತ ಉಪನ್ಯಾಸಕರು, ಸಂಸ್ಕೃತಿ ಚಿಂತಕರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ : Prerane : ಧ್ಯಾನದಿಂದ ಮಾತ್ರ ಮೃತ್ಯು ಭಯ ದಾಟಲು ಸಾಧ್ಯ!

Exit mobile version