ಬೆಂಗಳೂರಿನಂಥ ಮಹಾನಗರದಲ್ಲಿದ್ದೂ ಎಷ್ಟೋ ಬಾರಿ ನಮಗೆ ನಮ್ಮದೇ ಊರಿನ ಐತಿಹ್ಯಗಳು ಗೊತ್ತಿರುವುದಿಲ್ಲ. ನಮ್ಮ ಪಕ್ಕದ ಬೀದಿಯಲ್ಲೇ ಇರುವ ದೇವಸ್ಥಾನವೊಂದರ ವಿಶೇಷತೆಯ ಅರಿವಿರುವುದಿಲ್ಲ. ಎಷ್ಟೋ ಬಾರಿ ಅದೇ ಗಲ್ಲಿಯಲ್ಲಿ ಹಾದುಹೋದರೂ ಒಳಗೊಮ್ಮೆ ಹೋಗಿ ಅನುಭವಿಸಿ ಬರುವುದಿಲ್ಲ. ವಿಶೇಷವೆಂದರೆ, ಬೆಂಗಳೂರು ಉದ್ಯಾನಗಳ ನಗರಿ ಹೇಗೋ ಹಾಗೆಯೇ, ದೇವಸ್ಥಾನಗಳ ನಗರಿಯೂ ಹೌದು. ಇಲ್ಲಿ ಶತಶತಮಾನಗಳಷ್ಟು ಹಳೆಯ, ಪುರಾತನ ದೇಗುಲಗಳು ಮೌನವಾಗಿ ಕೂತು ತಮ್ಮ ಕಥೆಗಳನ್ನು ಹೇಳುತ್ತವೆ. ಮಹಾಶಿವರಾತ್ರಿಯ (Maha Shivaratri 2023) ನೆಪದಲ್ಲಿ ಬೆಂಗಳೂರಿನ ಇಂಥ ಪುರಾತನ ಶಿವ ದೇವಸ್ಥಾನದ (shiva temples) ಸಮುಚ್ಛಯಗಳಲ್ಲೊಮ್ಮೆ ಸುತ್ತು ಹಾಕಿಕೊಂಡು ಬರೋಣ.
೧. ಕೋಟೆ ಜಲಕಂಠೇಶ್ವರ ಸ್ವಾಮಿ ದೇವಸ್ಥಾನ: ಕಲಾಸಿಪಾಳ್ಯ ಬಸ್ ನಿಲ್ದಾಣದ ಬಳಿ ಇರುವ ಕೋಟೆ ಜಲಕಂಠೇಶ್ವರ ಸ್ವಾಮಿ ದೇವಸ್ಥಾನ ಬೆಂಗಳೂರಿನ ಹಳೆಯ ದೇವಸ್ಥಾನಗಳಲ್ಲಿ ಒಂದು. ಇದು ಚೋಳರ ಕಾಲದ್ದು. ಕೆಂಪೇಗೌಡರ ಕಾಲದಲ್ಲಿ ಇದು ಜೀರ್ಣಾಭಿವೃದ್ಧಿ ಹೊಂದಿದ ಇದು ಸುಮಾರು ೪೦೦ ವರ್ಷಗಳಿಂದ ಹಾಗೆಯೇ ಇದೆ. ಜಲಕಂಠೇಶ್ವರ, ಪಾರ್ವತಿ ಹಾಗೂ ಕೈಲಾಸನಾಥ ದೇಗುಲಗಳು ಈ ಸಮುಚ್ಛಯದೊಳಗಿದ್ದು ಸಾವಿರಾರು ಭಕ್ತರನ್ನು ಸೆಳೆಯುತ್ತದೆ. ಒಂಭತ್ತು ಸ್ತಂಭಗಳು ನವಗ್ರಹಗಳನ್ನು ಹೊಂದಿದೆ. ಮುಖ್ಯದ್ವಾರದಿಂದ ಪ್ರವೇಶ ಮಾಡುವಾಗಲೇ ಅರ್ಧ ನಾರೀಶ್ವರ ವಿಗ್ರಹ ಕಣ್ಣಿಗೆ ಬೀಳುವ ಹಾಗಿದ್ದು, ಇದರಲ್ಲಿ ಪಾರ್ವತಿಯ ಮುಖವಷ್ಟೇ ಒಂದು ಬದಿಯಿಂದ ಮುಖ್ಯವಾಗಿ ಕಾಣುವುದು ವಿಶೇಷ.
೨. ಗವಿಗಂಗಾಧರೇಶ್ವರ ದೇವಸ್ಥಾನ: ಕೆಂಪೇಗೌಡನಗರದ ಗವಿಪುರಂ ಬಡಾವಣೆಯ ಬಹುಮುಖ್ಯ ಆಕರ್ಷಣೆ ಎಂದರೆ ಗವಿಗಂಗಾಧರೇಶ್ವರ ದೇವಾಲಯ. ಗವಿಪುರಂನ ಗುಹಾ ದೇವಾಲಯ ಎಂದೇ ಖ್ಯಾತಿವೆತ್ತಿರುವ ಇದು ಏಕಶಿಲಾ ಕಂಬಗಳಿಂದ ಮಾಡಲ್ಪಟ್ಟಿದೆ. ೧೬ನೇ ಶತಮಾನದಲ್ಲಿ ಕೆಂಪೇಗೌಡರು ಇದನ್ನು ನಿರ್ಮಿಸಿದರೆಂದು ಇತಿಹಾಸ ಹೇಳುತ್ತದೆ. ಮಕರ ಸಂಕ್ರಾಂತಿಯಂದು ದೇವಾಲಯದೊಳಕ್ಕೆ ನೇರವಾಗಿ ಮೊದಲ ಸೂರ್ಯರಶ್ಮಿ ಪ್ರತಿಫಲಿಸುವುದರಿಂದ ಹಿಡಿದು ಈ ದೇವಾಲಯಕ್ಕೆ ಅದರದ್ದೇ ಆದ ವಿಶೇಷತೆಗಳಿವೆ. ಹಾಗಾಗಿ ಗವಿಪುರಂ ಬೆಂಗಳೂರಿನ ಅತ್ಯಂತ ಪ್ರಮುಖ ಹಾಗೂ ಹಳೆಯ ದೇವಾಲಯಗಳಲ್ಲಿ ಒಂದಾಗಿ ಭಕ್ತರಿಗೆ ಪ್ರಿಯವಾಗಿದೆ.
೩. ಕಾಡು ಮಲ್ಲೇಶ್ವರ ದೇವಸ್ಥಾನ: ಈ ದೇವಸ್ಥಾನ ೧೭ನೇ ಶತಮಾನಕ್ಕೆ ಸೇರಿದ್ದು. ಮರಾಠಾ ರಾಜರುಗಳಲ್ಲಿ ಒಬ್ಬರಾದ ವೆಂಕೋಜಿ (ಶಿವಾಜಿಯ ದಾಯಾದಿ) ನಿರ್ಮಿಸಿದನೆಂದು ಹೇಳಲಾಗುತ್ತದೆ. ದ್ರಾವಿಡ ಶೈಲಿಯಲ್ಲಿರುವ ಈ ದೇವಸ್ಥಾನದಲ್ಲಿ ಶಿವನನ್ನು ಮಲ್ಲಿಕಾರ್ಜುನನ ರೂಪದಲ್ಲಿ ಪೂಜಿಸಲಾಗುತ್ತದೆ. ದೇವಾಲಯದ ಮುಂಭಾಗವನ್ನು ನಂದೀಶ್ವರ ತೀರ್ಥ ಅಥವಾ ಬಸವ ತೀರ್ಥವೆಂದೂ ಹೇಳಲಾಗುತ್ತದೆ. ಇದೇ ಬೆಂಗಳೂರಿನ ವೃಷಭಾವತಿ ನದಿಯ ಹುಟ್ಟು ಎಂಬ ನಂಬಿಕೆ. ಮಲ್ಲೇಶ್ವರ ಎಂಬ ಹೆಸರು ಬರಲು ಕಾರಣವೂ ಇದೇ ದೇವಾಲಯ.
ಇದನ್ನೂ ಓದಿ: Maha Shivaratri 2023 : ಶಿವನ ಮಹಾ ಮಹೋತ್ಸವ ಮಹಾ ಶಿವರಾತ್ರಿ
೪. ಹಲಸೂರು ಸೋಮೇಶ್ವರ ದೇವಸ್ಥಾನ: ಹಲಸೂರು ರಸ್ತೆಯ ಸೋಮೇಶ್ವರಪುರದಲ್ಲಿರುವ ಈ ದೇವಸ್ಥಾನ ಬೆಂಗಳೂರಿನ ಅತ್ಯಂತ ಹಳೆಯ ದೇವಸ್ಥಾನಗಳಲ್ಲಿ ಬಹುಮುಖ್ಯವಾದದ್ದು. ಚೋಳರು ನಿರ್ಮಿಸಿದರೆಂದು ಹೇಳಲಾದರೂ ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ವಿಜಯನಗರ ಕಾಲದಲ್ಲಿ ಮಾಡಲಾಯಿತೆಂದು ಹೇಳಲಾಗುತ್ತದೆ. ಇನ್ನೊಂದು ಕಥೆಯ ಪ್ರಕಾರ ಕೆಂಪೇಗೌಡರು ಬೇಟೆಯಾಡುತ್ತಾ ಯಲಹಂಕದ ಬಳಿ ಬಂದಾಗ ಸುಸ್ತಾಘಿ ಮರದ ಕೆಳಗೆ ವಿಶ್ರಾಂತಿ ಪಡೆದಾಗ, ಕನಸಿನಲ್ಲಿ ಬಂದ ಸೋಮೇಶ್ವರ ದೇವರು ಇಂಥ ಜಾಗದಲ್ಲಿ ದೇವಾಲಯ ನಿರ್ಮಿಸೆಂದು ಹೇಳಿದ ಕಾರಣ ನಿರ್ಮಿತವಾದ ದೇಗುಲ ಎಂಬ ವಿವರಣೆಯೂ ಸಿಗುತ್ತದೆ.
೫. ಹಳೆ ಮಡಿವಾಳ ಸೋಮೇಶ್ವರ ದೇವಸ್ಥಾನ: ಇದೂ ಕೂಡಾ ಬೆಂಗಳೂರಿನ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದು. ಚೋಳರ ಕಾಲದಲ್ಲಿ ಇದು ೧೨೪೭ರಲ್ಲಿ ನಿರ್ಮಿತವಾಯಿತು ಎನ್ನುತ್ತದೆ ಇತಿಹಾಸ. ಈ ದೇವಸ್ಥಾನದ ಶಿವಲಿಂಗ ʻಸ್ವಯಂಭುʼ ಅಂದರೆ, ನೈಸರ್ಗಿಕವಾಗಿ ಉದ್ಭವವಾದ ಲಿಂಗವಾದ್ದರಿಂದ ವಿಶೇಷ ಎಂಬ ನಂಬಿಕೆ ಇದೆ. ದೇವಸ್ಥಾನದ ಗೋಡೆಗಳಲ್ಲಿ ಇಂದಿಗೂ ೧೨೪೭ರ ಕಾಲದ ಶಾಸನಗಳನ್ನು ಕಾಣಬಹುದು.
ಇದನ್ನೂ ಓದಿ: Maha Shivaratri 2023 : ಪೂಜೆ ಮಾಡುವಾಗ ಅರಿಶಿನ-ಕುಂಕುಮ ಶಿವನಿಗೇಕೆ ಬೇಡ?