ಬೆಂಗಳೂರು: ಮಕರ ಸಂಕ್ರಾಂತಿಯಂದು (Makar Sankranti 2023) ಗವಿಗಂಗಾಧರೇಶ್ವರ ದೇಗುಲದಲ್ಲಿ ಶಿವಲಿಂಗಕ್ಕೆ ಸೂರ್ಯ ರಶ್ಮಿ ಕಿರಣ ಸ್ಪರ್ಶಿಸಿದೆ. ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ಸ್ವಾಮಿ ದೇಗುಲದಲ್ಲಿ ನಡೆಯುವ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದು ಬಂದಿತ್ತು.
ಸೂರ್ಯ ಶಿವನನ್ನು ಸ್ಪರ್ಶಿಸುವ ವೇಳೆ ದೇವಸ್ಥಾನದೊಳಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಲಾಗಿತ್ತು. ಬದಲಿಗೆ ಹೊರಭಾಗದಲ್ಲಿ ಎಲ್ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾಗಿತ್ತು. ದಕ್ಷಿಣದಿಂದ ಉತ್ತರಕ್ಕೆ ಸೂರ್ಯ ತನ್ನ ಪಥ ಬದಲಾಯಿಸುವ ಪುಣ್ಯಕಾಲದಲ್ಲಿ ಗವಿಗಂಗಾಧರೇಶ್ವರನ ದೇಗುಲದಲ್ಲಿ ಸಂಕ್ರಾಂತಿಯಂದು ನಡೆಯುವ ಕೌತುಕವನ್ನು ಕಣ್ತುಂಬಿಕೊಂಡರು. ಸೂರ್ಯ ಶಿವನನ್ನು ಸ್ಪರ್ಶಿಸಿದ ನಂತರ ಶಿವನಿಗೆ ಅಭಿಷೇಕ ಮಾಡಿ ಅಲಂಕಾರ ಮಾಡಲಾಯಿತು.
ಒಟ್ಟು 3 ನಿಮಿಷಗಳ ಕಾಲ ಶಿವನನ್ನು ಸೂರ್ಯ ರಶ್ಮಿ ಸ್ಪರ್ಶಿಸಿತ್ತು. ಈ ಕುರಿತು ಮಾತನಾಡಿದ ದೇವಸ್ಥಾನದ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತ್, ಕಳೆದ ವರ್ಷ ಸೂರ್ಯನ ಬೆಳಕು ಶಿವನನ್ನು ಬೆಳಗಿ ಉತ್ತರಾಯಣ ಮಾಡಿತ್ತು. ಆದರೆ ಯಾವ ಭಕ್ತರಿಗೂ ಸೂರ್ಯನ ಪೂಜೆ ಕಾಣಲಿಲ್ಲ. ಈ ವರ್ಷ ಮೂರು ನಿಮಿಷಗಳ ಕಾಲ ಶಿವನ ಮೇಲೆ ಸೂರ್ಯ ರಶ್ಮಿ ಬಿದ್ದಿದ್ದು, ಸಕಲರಿಗೂ ಸುಖ-ಶಾಂತಿ ನೆಲಸಲಿದೆ ಎಂದಿದ್ದಾರೆ.
ಇದನ್ನೂ ಓದಿ | ರೈತ ಸಂಕ್ರಾಂತಿ | ರೈತರ ಜತೆಗೆ ಆನ್‌ಲೈನ್ ಸಂವಾದ ನಡೆಸಲಿದ್ದಾರೆ ಎಚ್.ಡಿ. ಕುಮಾರಸ್ವಾಮಿ