ಕರ್ನಾಟಕ
Makar Sankranti 2023 | ಶಿವಲಿಂಗಕ್ಕೆ ಮೂರು ನಿಮಿಷಗಳ ಸೂರ್ಯರಶ್ಮಿ ಸ್ಪರ್ಶ; ಈ ವರ್ಷ ಸಕಲರಿಗೂ ಹರ್ಷ
Makar Sankranti 2023 | ಗವಿಗಂಗಾಧರನಿಗೆ ಮೂರು ನಿಮಿಷಗಳ ಸೂರ್ಯರಶ್ಮಿ ಸ್ಪರ್ಶಿಸಿದ್ದು, ವಿಸ್ಮಯವನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ಈ ವರ್ಷ ಸಕಲರಿಗೂ ಸುಖ-ಶಾಂತಿ ನೆಲಸಲಿದೆ ಎಂದು ಪ್ರಧಾನ ಅರ್ಚಕರು ನುಡಿದಿದ್ದಾರೆ.
ಬೆಂಗಳೂರು: ಮಕರ ಸಂಕ್ರಾಂತಿಯಂದು (Makar Sankranti 2023) ಗವಿಗಂಗಾಧರೇಶ್ವರ ದೇಗುಲದಲ್ಲಿ ಶಿವಲಿಂಗಕ್ಕೆ ಸೂರ್ಯ ರಶ್ಮಿ ಕಿರಣ ಸ್ಪರ್ಶಿಸಿದೆ. ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ಸ್ವಾಮಿ ದೇಗುಲದಲ್ಲಿ ನಡೆಯುವ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದು ಬಂದಿತ್ತು.
ಸೂರ್ಯ ಶಿವನನ್ನು ಸ್ಪರ್ಶಿಸುವ ವೇಳೆ ದೇವಸ್ಥಾನದೊಳಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಲಾಗಿತ್ತು. ಬದಲಿಗೆ ಹೊರಭಾಗದಲ್ಲಿ ಎಲ್ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾಗಿತ್ತು. ದಕ್ಷಿಣದಿಂದ ಉತ್ತರಕ್ಕೆ ಸೂರ್ಯ ತನ್ನ ಪಥ ಬದಲಾಯಿಸುವ ಪುಣ್ಯಕಾಲದಲ್ಲಿ ಗವಿಗಂಗಾಧರೇಶ್ವರನ ದೇಗುಲದಲ್ಲಿ ಸಂಕ್ರಾಂತಿಯಂದು ನಡೆಯುವ ಕೌತುಕವನ್ನು ಕಣ್ತುಂಬಿಕೊಂಡರು. ಸೂರ್ಯ ಶಿವನನ್ನು ಸ್ಪರ್ಶಿಸಿದ ನಂತರ ಶಿವನಿಗೆ ಅಭಿಷೇಕ ಮಾಡಿ ಅಲಂಕಾರ ಮಾಡಲಾಯಿತು.
ಒಟ್ಟು 3 ನಿಮಿಷಗಳ ಕಾಲ ಶಿವನನ್ನು ಸೂರ್ಯ ರಶ್ಮಿ ಸ್ಪರ್ಶಿಸಿತ್ತು. ಈ ಕುರಿತು ಮಾತನಾಡಿದ ದೇವಸ್ಥಾನದ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತ್, ಕಳೆದ ವರ್ಷ ಸೂರ್ಯನ ಬೆಳಕು ಶಿವನನ್ನು ಬೆಳಗಿ ಉತ್ತರಾಯಣ ಮಾಡಿತ್ತು. ಆದರೆ ಯಾವ ಭಕ್ತರಿಗೂ ಸೂರ್ಯನ ಪೂಜೆ ಕಾಣಲಿಲ್ಲ. ಈ ವರ್ಷ ಮೂರು ನಿಮಿಷಗಳ ಕಾಲ ಶಿವನ ಮೇಲೆ ಸೂರ್ಯ ರಶ್ಮಿ ಬಿದ್ದಿದ್ದು, ಸಕಲರಿಗೂ ಸುಖ-ಶಾಂತಿ ನೆಲಸಲಿದೆ ಎಂದಿದ್ದಾರೆ.
ಇದನ್ನೂ ಓದಿ | ರೈತ ಸಂಕ್ರಾಂತಿ | ರೈತರ ಜತೆಗೆ ಆನ್‌ಲೈನ್ ಸಂವಾದ ನಡೆಸಲಿದ್ದಾರೆ ಎಚ್.ಡಿ. ಕುಮಾರಸ್ವಾಮಿ
ಕರ್ನಾಟಕ
Sudha Murty: ಅಮೆರಿಕದಲ್ಲಿ ಕಾರ್ಯಕ್ರಮ ಎಂದು ಸುಧಾ ಮೂರ್ತಿ ಹೆಸರಲ್ಲಿ ವಂಚನೆ; ಇಬ್ಬರ ವಿರುದ್ಧ ಕೇಸ್
Sudha Murty: ಅಮೆರಿಕದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ, ಸುಧಾ ಮೂರ್ತಿ ಅವರು ಆಗಮಿಸಲಿದ್ದಾರೆ ಎಂದು ಹೇಳಿಕೊಂಡು ವಂಚಿಸಿದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಬೆಂಗಳೂರು: ಅಮೆರಿಕದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ (Infosys Foundation) ಸುಧಾ ಮೂರ್ತಿ ಅವರು ಆಗಮಿಸಲಿದ್ದಾರೆ ಎಂದು ಹೇಳಿಕೊಂಡು, ಸುಧಾ ಮೂರ್ತಿ (Sudha Murty) ಅವರ ಫೋಟೊ ಬಳಸಿ ವಂಚನೆ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರ ವಿರುದ್ಧ ಸುಧಾ ಮೂರ್ತಿ ಅವರ ಆಪ್ತ ಸಹಾಯಕಿ (Personal Assistant) ಮಮತಾ ಸಂಜಯ್ ದೂರು ದಾಖಲಿಸಿದ್ದಾರೆ.
ಸುಧಾ ಮೂರ್ತಿ ಅವರ ಹೆಸರು, ಫೋಟೊ ಬಳಸಿಕೊಂಡು ವಂಚನೆ ಮಾಡಿದ ಹಿನ್ನೆಲೆಯಲ್ಲಿ ಶ್ರುತಿ ಹಾಗೂ ಲಾವಣ್ಯ ಎಂಬುವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಮಮತಾ ಸಂಜಯ್ ಅವರು ದೂರು ನೀಡಿದ್ದಾರೆ. ಕಂಪನಿಯಲ್ಲಿ ಪರಿಶೀಲನೆ ನಡೆಸಿದಾಗ ಸುಧಾ ಮೂರ್ತಿ ಅವರ ಹೆಸರು ಬಳಸಿಕೊಂಡು ಜನರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಕೇಸ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ದಾಖಲಾದ ಎಫ್‌ಐಆರ್ ಪ್ರತಿ
ಏನಿದು ಪ್ರಕರಣ?
ಅಮೆರಿಕದಲ್ಲಿ ಕನ್ನಡ ಕೂಟ ಆಫ್ ನಾರ್ತನ್ ಕ್ಯಾಲಿಫೋರ್ನಿಯಾ (KKNC) ವತಿಯಿಂದ ಕಳೆದ ಏಪ್ರಿಲ್‌ನಲ್ಲಿ 50ನೇ ವಾರ್ಷಿಕೋತ್ಸವ ಆಯೋಜಿಸಲಾಗಿತ್ತು. ಸುಧಾ ಮೂರ್ತಿ ಅವರಿಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂಬುದಾಗಿ ಇ-ಮೇಲ್ ಮೂಲಕ ಆಹ್ವಾನ ನೀಡಲಾಗಿತ್ತು. ಆದರೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ ಎಂದು ಸುಧಾ ಮೂರ್ತಿ ಅವರು ಇ-ಮೇಲ್ ಮೂಲಕ ತಿಳಿಸಿದ್ದರು. ಆದರೆ, ಕೆಕೆಎನ್‌ಸಿ ಕಾರ್ಯಕ್ರಮದಲ್ಲಿ ಸುಧಾ ಮೂರ್ತಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರುತಿ ಹಾಗೂ ಲಾವಣ್ಯ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Sudha Murty: ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನೋಡಿ ಶ್ಲಾಘಿಸಿದ ಸುಧಾ ಮೂರ್ತಿ
ಸುಧಾ ಮೂರ್ತಿ ಅವರು ಅಮೆರಿಕಕ್ಕೆ ಆಗಮಿಸಲಿದ್ದಾರೆ. ಮೀಟ್ ಆ್ಯಂಡ್ ಗ್ರೀಟ್ ವಿತ್ ಡಾ.ಸುಧಾ ಮೂರ್ತಿ (Meet And Greet With Dr. Sudha Murty) ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಇಬ್ಬರು ಆರೋಪಿಗಳು ಜನರನ್ನು ವಂಚಿಸಿದ್ದಾರೆ. ಒಂದು ಟಿಕೆಟ್‌ಗೆ 40 ಡಾಲರ್ (ಸುಮಾರು 3,300 ರೂ.) ಪಡೆದು ವಂಚಿಸಲಾಗಿದೆ. ಸುಧಾ ಮೂರ್ತಿ ಕಚೇರಿ ಹೆಸರಿನಲ್ಲಿ, ಸುಧಾ ಮೂರ್ತಿ ಅವರ ಫೋಟೊ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಹಾಗಾಗಿ, ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸುಧಾ ಮೂರ್ತಿ ಅವರ ಆಪ್ತ ಸಹಾಯಕಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಜಯನಗರ ಠಾಣೆಯಲ್ಲಿ ಐಟಿ ಕಾಯ್ದೆಯ 66 C, 66 D ಸೆಕ್ಷನ್ ಹಾಗೂ ಐಪಿಸಿ 419, 420 ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ
Cauvery Dispute : ಸಮರ್ಥವಾಗಿ ವಾದ ಮಾಡದೆ ನಮಗೆ ಸೋಲಾಯಿತೇ? ಆರೋಪದಲ್ಲಿ ನಿಜವೆಷ್ಟು? ಸುಳ್ಳೆಷ್ಟು?
Cauvery Dispute: ಕಾವೇರಿ ವಿಚಾರದಲ್ಲಿ ಎಲ್ಲ ಹಂತಗಳಲ್ಲಿ ನಮಗೆ ಸೋಲಾಗಲು ಪ್ರಮುಖ ಕಾರಣ, ನಾವು ಸರಿಯಾಗಿ ವಾದ ಮಾಡದೆ ಇರುವುದು, ವಾಸ್ತವಾಂಶ ತಿಳಿಸದೆ ಇರುವುದು. ಈ ಆರೋಪ ನಿಜವೇ? ಹಾಗಿದ್ದರೆ ಕರ್ನಾಟಕದ ವಾದ ಏನಿತ್ತು? ಬಾರ್ ಎಂಡ್ ಬೆಂಚ್ ವೆಬ್‌ಸೈಟ್ ಪ್ರಸ್ತುತಪಡಿಸಿದ ಅಧ್ಯಯನಾತ್ಮಕ ಅಂಶಗಳನ್ನು ನಿಮ್ಮ ಮುಂದಿಡಲಾಗಿದೆ.
ಬೆಂಗಳೂರು: ಕಾವೇರಿ ನೀರು ವಿಚಾರದಲ್ಲಿ (Cauvery Dispute) ಕರ್ನಾಟಕ ಎಲ್ಲ ಹಂತಗಳಲ್ಲೂ ಹಿನ್ನಡೆ ಅನುಭವಿಸಲು ಕಾರಣ ರಾಜ್ಯದ ಅಧಿಕಾರಿಗಳು (Officials of Karnataka) ಸರಿಯಾದ ವಾದ ಮಂಡಿಸದೇ ಇರುವುದು ಎನ್ನುವುದು ಹೆಚ್ಚಿನವರ ಆಪಾದನೆ. ಅದರಲ್ಲೂ ಕರ್ನಾಟಕದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಾದ ಮಾಡಿದ್ದರಿಂದ ಸೋಲಾಯಿತು ಎನ್ನುವುದು ಇನ್ನೊಂದು ವಾದ. ಹಾಗಿದ್ದರೆ ಈ ಆರೋಪ ಸತ್ಯವೇ? ಅಥವಾ ರಾಜಕೀಯಪ್ರೇರಿತವೇ? ಹಾಗಿದ್ದರೆ ಕರ್ನಾಟಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery Water Management Authority) ಮುಂದೆ ಏನೇನು ವಾದ ಮಾಡಿತ್ತು?
ಎಲ್ಲರಿಗೂ ತಿಳಿದಿರುವಂತೆ ಸೆ. 21ರಂದು ನಡೆದ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ (Supreme Court) ಎತ್ತಿ ಹಿಡಿದದ್ದು ಸೆ. 19ರಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶವನ್ನು. ಅದರಾಚೆಗೆ ಅದು ಯಾವ ಅಂಶವನ್ನೂ ಕೇಳಿಸಿಕೊಳ್ಳಲಿಲ್ಲ. ಹಾಗಿದ್ದರೆ ಸೆ. 19ರ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕ ತನ್ನ ವಾದದಲ್ಲಿ ಸೋಲು ಕಂಡಿತೇ? ಹಾಗಾಗಿ ಪ್ರಾಧಿಕಾರ ಕರ್ನಾಟಕದ ವಿರುದ್ಧವಾಗಿ ತೀರ್ಪು ನೀಡಲು, ನೀರು ಬಿಡುಗಡೆಗೆ ಆದೇಶ ನೀಡಲು ಕಾರಣವಾಯಿತೇ ಎನ್ನುವುದು ಮುಖ್ಯ ಪ್ರಶ್ನೆ.
ಇದನ್ನು ತಿಳಿಯಬೇಕು ಎಂದಾದರೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೆ.19ರಂದು ನಡೆಸಿರುವ 24ನೇ ಸಭೆಯ (ತುರ್ತು ಸಭೆ) ನಡಾವಳಿಗಳನ್ನು ಗಮನಿಸಬೇಕು.
ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೆ. 12ರಂದು ನೀಡಿದ ಆದೇಶದಲ್ಲಿ ಪ್ರತಿದಿನ 5000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಸೂಚಿಸಿತ್ತು. ವಾಸ್ತವವಾಗಿ ತಮಿಳುನಾಡಿನ ಅಧಿಕಾರಿಗಳು ಪ್ರತಿದಿನ 12,500 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಬೇಕು ಎಂದು ಕೋರಿದ್ದರು. ಇದಕ್ಕೆ ಪ್ರತಿಯಾಗಿ ಕರ್ನಾಟಕದ ಅಧಿಕಾರಿಗಳು ವಾಸ್ತವಾಂಶಗಳನ್ನು ಮುಂದಿಟ್ಟು ತಮಿಳುನಾಡು ಕೋರಿಕೆಯನ್ನು ಮನ್ನಿಸಲು ಸಾಧ್ಯವಿಲ್ಲ. ತಾವು ಕೆಆರ್‌ಎಸ್ ಹಾಗೂ ಕಬಿನಿಯಿಂದ ಒಟ್ಟು 2500 ಕ್ಯೂಸೆಕ್ಸ್ ನೀರು ಮಾತ್ರ ಹರಿಸಬಹುದು ಎಂದು ವಾದ ಮಾಡಿದ್ದರು. ಅಂತಿಮವಾಗಿ ಪ್ರಾಧಿಕಾರವು ಪ್ರತಿದಿನ 5000 ಕ್ಯೂಸೆಕ್ಸ್ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲುಆರ್‌ಸಿ) ಸೆ.12ರ ಅದೇಶವನ್ನು ಎತ್ತಿಹಿಡಿದಿತ್ತು. ಹಾಗಿದ್ದರೆ 2500 ಕ್ಯೂಸೆಕ್ ನೀರು ಬಿಡಬಹುದು ಎಂದು ಒಪ್ಪಿದ್ದಾದರೂ ಯಾಕೆ ಎನ್ನುವ ಪ್ರಶ್ನೆಯೂ ಎದ್ದು ಬರುತ್ತದೆ. ಹೀಗೆ ಮಾಡಿದ್ದರಿಂದ ಸಮನ್ವಯ ಸೂತ್ರವಾಗಿ ಪ್ರಾಧಿಕಾರ 5000 ಕ್ಯೂಸೆಕ್ ನೀರು ಬಿಡಿ ಎಂದು ಹೇಳಿದೆ. ಕೊಡುವುದೇ ಇಲ್ಲ ಎಂದು ವಾದಿಸಬೇಕಿತ್ತು ಎನ್ನುವುದು ಕೆಲವರ ವಾದ.
ಹಾಗಿದ್ದರೆ ಒಟ್ಟಾರೆಯಾಗಿ ಪ್ರಾಧಿಕಾರದ ಅಂದಿನ ಸಭೆಯಲ್ಲಿ ಕರ್ನಾಟಕ ಮಾಡಿದ ವಾದ ಏನಾಗಿತ್ತು? ತಮಿಳುನಾಡು ಏನು ಹೇಳಿತ್ತು. ಬಾರ್ ಎಂಡ್ ಬೆಂಚ್ ವೆಬ್ ಸೈಟ್ ಸಂಗ್ರಹಿಸಿದ ಸಮಗ್ರ ಮಾಹಿತಿಯ ಸಾರವನ್ನು ಇಲ್ಲಿ ನೀಡಲಾಗಿದೆ.
ಪ್ರಾಧಿಕಾರದ ಮುಂದೆ ಕರ್ನಾಟಕದ ವಾದ ಏನಿತ್ತು?
- ಪ್ರಸಕ್ತ ವರ್ಷದಲ್ಲಿ ಮಳೆಯ ಅಭಾವ ಉಂಟಾಗಿದ್ದು, ಶೇ.75ರಷ್ಟು ನೈರುತ್ಯ ಮುಂಗಾರು ಇದಾಗಲೇ ಪೂರ್ಣಗೊಂಡಿದೆ. ಮಳೆ ಸಾಧ್ಯತೆ ಕ್ಷೀಣಿಸಿದ್ದು, ಒಂದೊಮ್ಮೆ ಮಳೆಯಾದರೂ ಕಾವೇರಿ ಜಲಾನಯನ ಪ್ರದೇಶದಲ್ಲಿನ ಪರಿಸ್ಥಿತಿ ಬದಲಾಗುವುದಿಲ್ಲ. ಪರಿಸ್ಥಿತಿಯು ಇನ್ನೂ ಕೆಟ್ಟ ಸ್ಥಿತಿಗೆ ಹೊರಳಬಹುದು ಎಂಬುದು ನಮ್ಮ ಆತಂಕವಾಗಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಸಂಕಷ್ಟ ಹಂಚಿಕೆಗೆ ಮುಂದಾಗಬೇಕಿದೆ. ಕಾವೇರಿ ನೀರು ವಿವಾದ ನ್ಯಾಯ ಮಂಡಳಿಯ ಅಧಿಸೂಚನೆಯ ಕಲಂ VII ಜೊತೆಗೆ ಕಲಂ XIX(ಎ) ಅಡಿ ನಿರ್ದೇಶಿಸಿರುವಂತೆ ಸೂಕ್ತ ಅನುಪಾತದ ಅನ್ವಯ ನೀರು ಹಂಚಿಕೆಗೆ ಮುಂದಾಗಬೇಕು. ಈ ವಿಚಾರವನ್ನು ಸುಪ್ರೀಂ ಕೋರ್ಟ್ 2018ರ ತೀರ್ಪಿನಲ್ಲಿಯೂ ಬದಲು ಮಾಡಿಲ್ಲ.
- 2023ರ ಸೆಪ್ಟೆಂಬರ್ 12ರಂದು ನಡೆದ ಸಭೆಯಲ್ಲಿ ಸಿಡಬ್ಲ್ಯುಆರ್‌ಸಿ ಪ್ರತಿ ದಿನ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ತಪ್ಪಾಗಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 19ರಂದು ಸಿಡಬ್ಲ್ಯುಆರ್‌ಸಿಗೆ ಪತ್ರ ಬರೆದು ಹೊಸದಾಗಿ ಪ್ರಕರಣ ಪರಿಗಣಿಸಿ, ನಿರ್ದೇಶಿಸುವಂತೆ ಕೋರಲಾಗಿದೆ.
- ಜೂನ್ 1ರಿಂದ ಸೆಪ್ಟೆಂಬರ್ 11ರವರೆಗೆ ಕರ್ನಾಟಕದ ಜಲಾಶಗಳಿಗೆ 104.273 ಟಿಎಂಸಿ ನೀರು ಮಾತ್ರ ಹರಿದುಬಂದಿದೆ. ಕಳೆದ 30 ವರ್ಷಗಳ ಸರಾಸರಿ ಮಳೆ ಪ್ರಮಾಣದ ಹೋಲಿಕೆಯಲ್ಲಿ ಶೇ. 54.42ರಷ್ಟು ಕೊರತೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 228.793 ಟಿಎಂಸಿ ನೀರು ಹರಿದು ಬರುತ್ತಿತ್ತು.
- ಜೂನ್ 1ರಿಂದ ಸೆಪ್ಟೆಂಬರ್ 11ರವರೆಗೆ 46.271 ಟಿಎಂಸಿ ನೀರನ್ನು ಕಬಿನಿ ಮತ್ತು ಕೆಆರ್‌ಎಸ್ ಜಲಾಶಯದಿಂದ ಹರಿಸಲಾಗಿದೆ. ಕರ್ನಾಟಕವು ನೈರುತ್ಯ ಮುಂಗಾರಿನಿಂದ ಕೇವಲ 25.689 ಟಿಎಂಸಿ ನೀರು ಸಂಗ್ರಹಿಸಿದೆ. ತಮಿಳುನಾಡು ರಾಜ್ಯವು ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಬೆಳೆಗಳಿಗೆ ಈಶಾನ್ಯ ಮಾರುತ ಆಧರಿಸಿದ್ದು, ಕ್ಯಾರಿಓವರ್ ಸ್ಟೋರೇಜ್ (ಮುಂಬಳಕೆ ಸಂಗ್ರಹ) ಅನ್ನು ದುರ್ಬಳಕೆ ಮಾಡಿ ಈಗಾಗಲೇ 100 ಟಿಎಂಸಿ ನೀರನ್ನು ಕರ್ನಾಟಕದಿಂದ ಪಡೆದಿದೆ. ಸಂಕಷ್ಟದ ಸಂದರ್ಭದಲ್ಲಿ ತಮಿಳುನಾಡು ನೀರು ದುರ್ಬಳಕೆ ಮಾಡಿಕೊಂಡಿರುವುದನ್ನು ಎಲ್ಲರೂ ಕಾಣಬಹುದಾಗಿದೆ.
- ಮಳೆ ಕೊರತೆಯನ್ನು ನಿರ್ಧರಿಸುವಾಗ ನಿಯಂತ್ರಣ ಸಮಿತಿಯು ಕಾವೇರಿ ಪಾತ್ರದ ಒಟ್ಟು 81,155 ಚದರ ಕಿ ಮೀ ಜಲಾನಯನ ಪ್ರದೇಶವನ್ನು ಪರಿಗಣಿಸುವ ಬದಲಾಗಿ ಕರ್ನಾಟಕದ ನಾಲ್ಕು ಜಲಾಶಯಗಳ ಜಲಾನಯನ ಪ್ರದೇಶ 12,812 ಚದರ ಕಿ ಮೀ ಅನ್ನು ಮಾತ್ರವೇ ಪರಿಗಣಿಸುವ ಮೂಲಕ ಸ್ವೇಚ್ಛೆಯಿಂದ ನಿರ್ಧಾರ ತಳೆದಿದೆ. ಮಳೆಯ ಕೊರತೆಯನ್ನು ಆಧರಿಸಿ ಮಾತ್ರವೇ ಸಂಕಷ್ಟ ನಿರ್ಧರಿಸುವಂತಿಲ್ಲ. ಬದಲಿಗೆ ನದೀ ಮುಖಜ ಭೂಮಿಯಲ್ಲಿರುವ ಅಂತರ್ಜಲದ ಲಭ್ಯತೆಯನ್ನು ಪರಿಗಣಿಸಬೇಕು. ಅಲ್ಲದೇ, ನದೀ ಮುಖಜ ಭಾಗದಲ್ಲಿನ ಈಶಾನ್ಯ ಮಳೆಮಾರುತವನ್ನೂ ಸಹ ಪರಿಗಣಿಸಬೇಕು. ಸಂಕಷ್ಟದ ಸಂದರ್ಭದಲ್ಲಿ ರಾಜ್ಯಗಳ ಕನಿಷ್ಠ ಅವಶ್ಯಕತೆ ಹಾಗೂ ವಾಸ್ತವಿಕ ಅಂಶಗಳನ್ನು ಆಧರಿಸಿ ನೀರು ಹಂಚಿಕೆ ಮಾಡುವುದು ಸೂಕ್ತವಾದ ಮಾನದಂಡವಾಗಿದೆ.
- ಸಿಡಬ್ಲ್ಯುಆರ್‌ಸಿಯು ಕಳೆದ 30 ವರ್ಷಗಳ ಸರಾಸರಿ ಮಳೆ ಹಾಗೂ 2023ರ ಜೂನ್ 1ರಿಂದ ಸೆಪ್ಟೆಂಬರ್ 11ರವರೆಗಿನ ಬೆಳೆ ಆಧರಿಸಿ ಕೊರತೆ ಅಂದಾಜಿಸಿದೆ. ಆದರೆ, ಕಾವೇರಿ ನ್ಯಾಯ ಮಂಡಳಿಯು 1938-35ರಿಂದ 1971-27ರವರೆಗಿನ ಅಂಕಿ ಅಂಶ ಆಧರಿಸಿ ಸಾಮಾನ್ಯ ಮಳೆ ವರ್ಷದಲ್ಲಿ ಕಾವೇರಿ ಕೊಳ್ಳದ ನೀರು ಲಭ್ಯತೆಯನ್ನು 740 ಟಿಎಂಸಿ ಎಂದು ನಿರ್ಧರಿಸಿತ್ತು.
- ಕರ್ನಾಟಕ ಜಲಾಶಯಗಳ ಜಲಾನಯನ ಪ್ರದೇಶಗಳ ವಿಚಾರದಲ್ಲಿ, ಕರ್ನಾಟಕದ ಅಣೆಕಟ್ಟುಗಳ ಕೆಳಗಿರುವ ಹಾಗೂ ಬಿಳಿಗುಂಡ್ಲು ಅಂತರ ರಾಜ್ಯ ಗಡಿಗಿಂತ ಮೇಲಿರುವ ಸುಮಾರು 23,921 ಚ.ಕಿಮೀ ವ್ಯಾಪ್ತಿಯ ಮಧ್ಯಂತರ ಜಲಾನಯನ ಪ್ರದೇಶದಲ್ಲಿನ ಮಳೆ ಕೊರತೆಯನ್ನು ಸಿಡಬ್ಲ್ಯುಆರ್‌ಸಿಯು ಪ್ರಜ್ಞಾಪೂರ್ವಕವಾಗಿ ಮರೆಮಾಚಿದೆ. ಇದರ ವ್ಯಾಪ್ತಿಯು 23,921 ಚದರ ಕಿ ಮೀ ಆಗಿದೆ. ಈ ಪ್ರದೇಶದಲ್ಲಿನ ಮಳೆ ಕೊರತೆಯು ಕರ್ನಾಟಕದ ಅಣೆಕಟ್ಟುಗಳ ಮೇಲ್ಭಾಗದಲ್ಲಿರುವ ಜಲಾನಯನ ಪ್ರದೇಶದಲ್ಲಿ ಮಳೆಕೊರತೆ ಪ್ರಮಾಣವಾದ ಶೇ.54.42 ಕ್ಕಿಂತ ಹೆಚ್ಚಿದೆ.
- ಈ ಮಧ್ಯಂತರ ಜಲಾನಯನ ಪ್ರದೇಶದ 23,921 ಚದರ ಕಿಮೀ ವ್ಯಾಪ್ತಿಯಲ್ಲಿ 2023ರ ಜೂನ್ 1ರಿಂದ ಸೆಪ್ಟೆಂಬರ್ 11ರ ಅವಧಿಯಲ್ಲಿ ಅಂದಾಜು 14.286 ಟಿಎಂಸಿ ಹರಿಯುವ ನಿರೀಕ್ಷೆ ಇತ್ತು. ಆದರೆ, ಇದರಿಂದ 2 ಟಿಎಂಸಿಗೂ ಕಡಿಮೆ ಪ್ರಮಾಣದ ಕನಿಷ್ಠ ಹರಿವಾಗಿದೆ.
- ಸಾಮಾನ್ಯ ವರ್ಷದಲ್ಲಿ ಸೆಪ್ಟೆಂಬರ್ ತಿಂಗಳ ಕೋಟಾ ಪ್ರಕಾರ 36.76 ಟಿಎಂಸಿ ನೀರನ್ನು ಬಿಳಿಗುಂಡ್ಲು ಮೂಲಕ ಹರಿಸಬೇಕು. 2023ರ ಸೆಪ್ಟೆಂಬರ್ 13ರಿಂದ 27ರ ಅವಧಿಯಲ್ಲಿ 18.38 ಟಿಎಂಸಿ ಬಿಡಬೇಕಿದೆ. ಆದರೆ, ಮಳೆ ಕೊರತೆಯ ಕಾರಣಕ್ಕೆ 10.002 ಟಿಎಂಸಿ ಕಳೆದು 8.378 ಟಿಎಂಸಿ ಅಥವಾ ಪ್ರತಿ ದಿನ 6400 ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ನಿರ್ಧರಿಸುವ ಮೂಲಕ ಸಿಡಬ್ಲ್ಯುಆರ್‌ಸಿ ಪ್ರಮಾದ ಎಸಗಿದೆ. ಈ ಅಂದಾಜು ಸ್ವೇಚ್ಛೆಯಿಂದ ಕೂಡಿದೆ. ಏಕೆಂದರೆ ಸೆಪ್ಟೆಂಬರ್‌ನಲ್ಲಿ ನೈರುತ್ಯ ಮುಂಗಾರು ವಿಫಲವಾಗಿದೆ. ಅಲ್ಲದೆ, ಹವಾಮಾನ ಇಲಾಖೆಯ ಅಂದಾಜನ್ನು ಗಣನೆಗೆ ತೆಗೆದುಕೊಂಡರೆ ಮಧ್ಯಂತರ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆ ಇನ್ನೂ ಹೆಚ್ಚಿರಲಿದೆ. ಈ ನೆಲೆಯಲ್ಲಿ 2023ರ ಸೆಪ್ಟೆಂಬರ್ 27ರವರೆಗೆ ಪ್ರತಿದಿನ 5000 ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶಿಸುವ ಮೂಲಕ ಸಿಡಬ್ಲ್ಯುಆರ್‌ಸಿ ತರ್ಕದಲ್ಲಿ ವಿಫಲವಾಗಿದೆ.
- ನದಿ ಮುಖಜ ಭಾಗದಲ್ಲಿನ ಅಂತರ್ಜಲ ಲಭ್ಯತೆಯನ್ನು ಸಿಡಬ್ಲ್ಯುಆರ್‌ಸಿ ಅನುಕೂಲಕ್ಕೆ ತಕ್ಕಂತೆ ಅವಗಣನೆ ಮಾಡಿದೆ. ಈಶಾನ್ಯ ಮಾರುತವು ತಮಿಳುನಾಡಿನ ಕೊರತೆಯನ್ನು ತುಂಬುವ ಸಾಧ್ಯತೆ ಇದೆ. ಇದನ್ನು ಸಿಡಬ್ಲ್ಯುಆರ್‌ಸಿ ಪರಿಗಣಿಸಿಲ್ಲ. ಬಾಕಿ ಇರುವ ತಿಂಗಳ ಅವಧಿಗೆ (ಮುಂದಿನ ಜೂನ್‌ವರೆಗೆ) ಕರ್ನಾಟಕಕ್ಕೆ ಕನಿಷ್ಠ ಅಗತ್ಯವಾಗಿ 106 ಟಿಎಂಸಿ ನೀರು ಬೇಕಿದೆ ಎಂಬುದನ್ನು ಸಿಡಬ್ಲ್ಯುಆರ್‌ಸಿ ಗಣನೆಗೆ ತೆಗೆದುಕೊಳ್ಳುವಲ್ಲಿ ಎಡವಿದೆ. ಕರ್ನಾಟಕದ ಜಲಾಶಯಗಳಲ್ಲಿ ಸದ್ಯ 54.114 ಟಿಎಂಸಿ ನೀರು ಇದ್ದು, ಸರಾಸರಿ ಮಳೆಯ ಪ್ರಮಾಣಕ್ಕೆ ಶೇ.54 ಮಳೆ ಕೊರತೆಯನ್ನು ಸೇರಿಸಿದರೆ ಒಳಹರಿವು 44.78 ಟಿಎಂಸಿ ಮಾತ್ರ ಇರುವ ಸಾಧ್ಯತೆ ಇದೆ. ಈ ಲೆಕ್ಕದಲ್ಲಿ ಒಟ್ಟ ನೀರು ಲಭ್ಯತೆಯ ಪ್ರಮಾಣ 98.854 ಟಿಎಂಸಿ ಮಾತ್ರ ಆಗಲಿದೆ. ಆದರೆ, ನಾವು ಕಳೆದ ಮೂವತ್ತು ವರ್ಷಗಳ ಅತಿ ಹೆಚ್ಚು ಮಳೆ ಕೊರತೆಯ ವರ್ಷಗಳಲ್ಲಿನ ಪ್ರತಿ ತಿಂಗಳ ಕನಿಷ್ಠ ಒಳಹರಿವನ್ನು ಪರಿಗಣಿಸಿ ಲೆಕ್ಕ ಹಾಕಿದರೆ ಸೆಪ್ಟೆಂಬರ್ ತಿಂಗಳ ಉಳಿಕೆ ಅವಧಿಯ 10 ಟಿಎಂಸಿಯೂ ಸೇರಿದಂತೆ ಡಿಸೆಂಬರ್ ವರೆಗಿನ ನೀರು ಲಭ್ಯತೆಯ ಪ್ರಮಾಣ ಒಟ್ಟು 20 ಟಿಎಂಸಿ ದಾಟುವುದಿಲ್ಲ. ಈ ನೆಲೆಯಲ್ಲಿ ಗಮನಿಸಿದರೆ ಕರ್ನಾಟಕಕ್ಕೆ ಲಭ್ಯವಾಗುವ ನೀರಿನ ಪ್ರಮಾಣ 74.114 ಟಿಎಂಸಿ ಮೀರುವ ಸಾಧ್ಯತೆ ಇಲ್ಲ. ಹಾಗಾಗಿ, ಕರ್ನಾಟಕದ ಅಗತ್ಯ ಬಳಕೆಗೆ ಮಿತಿಗೊಳಿಸಲಾದ 106 ಟಿಎಂಸಿ ನೀರಿನ ಪ್ರಮಾಣವು ಸಹ ಲಭ್ಯವಾಗದೆ ಹೋಗಬಹುದು.
- ಸಿಡಬ್ಲ್ಯುಆರ್‌ಸಿಯು ಬಿಳಿಗುಂಡ್ಲುವಿನಲ್ಲಿ ಕರ್ನಾಟಕದಿಂದ ಹರಿಸಬೇಕಾದ ನೀರಿನ ಪ್ರಮಾಣದಲ್ಲಿ 7.799 ಟಿಎಂಸಿ ಕೊರತೆಯಾಗಿದೆ ಎಂದು ಅಂದಾಜಿಸಿರುವುದು ಸಂಪೂರ್ಣವಾಗಿ ದೋಷಪೂರಿತವಾಗಿದೆ. ಇದಕ್ಕೆ ಯಾವುದೇ ಆಧಾರವಿಲ್ಲ. ಬರುವ ತಿಂಗಳುಗಳಲ್ಲಿ ಸಿಡಬ್ಲ್ಯುಆರ್‌ಸಿ ಅಂದಾಜಿಸಿರುವ ಕೊರತೆಯು ಶೇ. 45.58 ಮಾತ್ರವಲ್ಲ. ಇದು ಇನ್ನೂ ಹೆಚ್ಚಾಗಲಿದೆ.
- ಈಶಾನ್ಯ ಮಳೆಮಾರುತವು ತಮಿಳುನಾಡಿನಲ್ಲಿ ಸಾಧಾರಣವಾಗಿ 45 ದಿನ ಇರಲಿದೆ. ತಮಿಳುನಾಡಿನಲ್ಲಿ ಅಂತರ್ಜಲವು 20ರಿಂದ 30 ಟಿಎಂಸಿ ಇದ್ದು, ಹಾಲಿ ನೀರು ಸಂಗ್ರಹ ಮತ್ತು ಅಂದಾಜು 60 ಟಿಎಂಸಿ ನೀರು ಮಧ್ಯಂತರ ಜಲಾನಯನ ಪ್ರದೇಶದಿಂದ ಹರಿದು ಬರುವುದರಿಂದ ತಮಿಳುನಾಡು ಪರಿಸ್ಥಿತಿಯನ್ನು ನಿರ್ವಹಿಸಬಹುದಾಗಿದೆ. ಕರ್ನಾಟಕದ ರೈತರಿಗೆ ಅಗತ್ಯವಾಗಿರುವ ಕನಿಷ್ಠ ನೀರಾವರಿ ಅಗತ್ಯತೆ ಹಾಗೂ ಕುಡಿಯುವ ನೀರಿನ ಅಗತ್ಯತೆಯ ದೃಷ್ಟಿಯಿಂದ ನೀರು ಬಿಡುಗಡೆ ಮಾಡಲಾಗದು. ವಿಶೇಷವಾಗಿ ಜಗತ್ತಿನ ತಂತ್ರಜಾನ ಹಬ್ ಆಗಿರುವ ಬೆಂಗಳೂರು ವಾರ್ಷಿಕ 100 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಗಳಿಕೆ ಮಾಡುತ್ತಿದ್ದು, ಇದರ ಕುಡಿಯುವ ನೀರಿನ ಅವಶ್ಯಕತೆಯ ದೃಷ್ಟಿಯಿಂದ ನೀರು ಹರಿಸಲಾಗದು.
- ಕರ್ನಾಟಕದಲ್ಲಿ ಬರ ಪರಿಸ್ಥಿತಿ ಇದ್ದು, ಕಾವೇರಿ ಪ್ರದೇಶದಲ್ಲಿ ಬರುವ 15 ತಾಲ್ಲೂಕುಗಳು ಬರಪೀಡಿತವಾಗಿವೆ. ಇದನ್ನು ಸಹ ಪ್ರಾಧಿಕಾರವು ಪರಿಣಿಸಬೇಕಿದೆ.
ಇದನ್ನೂ ಓದಿ: Cauvery Dispute : ಕಾವೇರಿ ವಿವಾದದಲ್ಲಿ ಪ್ರಧಾನಿ ಮಧ್ಯಪ್ರವೇಶ ಕೋರುವುದು ತಪ್ಪಲ್ಲ; ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ ಆಚಾರ್ಯ
ಹಾಗಿದ್ದರೆ ತಮಿಳುನಾಡು ವಾದ ಏನಾಗಿತ್ತು?
- ತಮಿಳುನಾಡಿನಲ್ಲಿ ನೀರಾವರಿ ಪ್ರದೇಶ ವಿಸ್ತರಿಸಲಾಗಿದೆ ಮತ್ತು ದೊಡ್ಡ ಮಟ್ಟದಲ್ಲಿ ಫಸಲು ಬೆಳೆಯಲಾಗುತ್ತಿದೆ ಎಂಬ ಕರ್ನಾಟಕದ ವಾದದಲ್ಲಿ ಸತ್ಯವಿಲ್ಲ.
- ನೀರು ಸಂಗ್ರಹಕ್ಕೆ ಸೌಲಭ್ಯ ಇದ್ದರೂ ತಮಿಳುನಾಡು ಸಮರ್ಥವಾಗಿ ನೀರು ಬಳಕೆ ಮಾಡುತ್ತಿಲ್ಲ ಎಂಬ ವಾದ ಸರ್ವಥಾ ಸರಿಯಲ್ಲ. ಕುರುವೈಗೆ ನ್ಯಾಯಮಂಡಳಿಯ ಬೆಳೆ ನೀರು ಅಗತ್ಯದ (ಸಿಡಬ್ಲುಆರ್) ಪ್ರಕಾರ ಜೂನ್-ಆಗಸ್ಟ್‌ನಲ್ಲಿ 30 ಟಿಎಂಸಿ ಬೇಕಿದೆ. ಜುಲೈ-ಆಗಸ್ಟ್‌ನಲ್ಲಿ ಸಾಂಬಾ ಬೆಳೆಗೆ 32 ಟಿಎಂಸಿ ನೀರು ಬೇಕಿದೆ. ಭೂಮಿ ಹದಗಳಿಸಲು ಮತ್ತು ಬಿತ್ತನೆಗೆ ಹೆಚ್ಚಿನ ನೀರು ಬೇಕಿದೆ. ಒಟ್ಟಾರೆ 95 ಟಿಎಂಸಿ ನೀರು ಬೇಕಿದ್ದು, ಜೂನ್ 12ರಿಂದ 31ರವರೆಗೆ ಮೆಟ್ಟೂರಿನಲ್ಲಿ 68.357 ಟಿಎಂಸಿ ಮಾತ್ರ ನೀರಿದೆ.
- ಈಶಾನ್ಯ ಮಳೆಮಾರುತದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗುವುದಿಲ್ಲ. ಈ ವೇಳೆ ಚಂಡಮಾರುತದಿಂದಾಗಿ ಬೆಳೆಗೆ ಹಾನಿ ಉಂಟಾಗಿದ್ದೂ ಇದೆ. ನೈರುತ್ಯ ಮಾನ್ಸೂನ್ ವಿಫಲವಾಗಿರುವುದರಿಂದ ಈಶಾನ್ಯ ಮಾನ್ಸೂನ್ ಸಹ ವಿಫಲವಾಗುವ ಸಾಧ್ಯತೆ ಇದೆ.
- ಪ್ರಸಕ್ತ ವರ್ಷದಲ್ಲಿ ಕರ್ನಾಟಕ 1.701 ಲಕ್ಷ ಎಕರೆ ಪ್ರದೇಶದಲ್ಲಿ ಫಸಲು ಮಾಡಿದೆ ಎಂದು ಹೇಳಿದೆ. 2023ರ ಜೂನ್ 1ರಿಂದ ಸೆಪ್ಟೆಂಬರ್ 11ರವರೆಗೆ ಕರ್ನಾಟಕವು 25.662 ಟಿಎಂಸಿ ನೀರನ್ನು ನಾಲ್ಕು ಪ್ರಮುಖ ಜಲಾಶಯಗಳಿಂದ ಕಾಲುವೆಗಳ ಮೂಲಕ ಹರಿಸಿಕೊಂಡಿದೆ. ಇದರ ಜೊತೆಗೆ ಕೆಆರ್‌ಎಸ್ ಮತ್ತು ಕಬಿನಿ ಅಣೆಕಟ್ಟುಗಳ ಕಾಲುವೆಗಳ ಮೂಲಕ ಹರಿಸಿರುವ ನೀರಿನ ಮಾಹಿತಿಯನ್ನು ಕರ್ನಾಟಕ ನೀಡಿಲ್ಲ.
- 2023ರ ಜೂನ್‌ನಿಂದ 2024ರ ಜನವರಿಯವರೆಗೆ ನಾಲ್ಕು ಜಲಾಶಯಗಳಿಂದ 72 ಟಿಎಂಸಿ ಕರ್ನಾಟಕಕ್ಕೆ ಬೇಕಿದೆ. ಆದರೆ, ಕರ್ನಾಟಕವು ಈಗಾಗಲೇ ಶೇ. 50ರಷ್ಟು ನೀರುಬಳಕೆ ಮಾಡಿದೆ.
- ತಮಿಳುನಾಡು ವಾದವನ್ನು ಪರಿಗಣಿಸದೇ ಸೆಪ್ಟೆಂಬರ್ 13ರಿಂದ 15 ದಿನ ಪ್ರತಿದಿನ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆ ಸಿಡಬ್ಲ್ಯುಅರ್‌ಸಿ ಆದೇಶಿಸಿದೆ. ಪ್ರೊ-ರಾಟಾ ತತ್ವದ ಅಡಿ ವಿಮುಖವಾಗಿರುವುದು ಮತ್ತು 12,500 ಕ್ಯೂಸೆಕ್ಸ್‌ನಿಂದ 5 ಸಾವಿರ ಕ್ಯೂಸೆಕ್ಸ್‌ಗೆ ಇಳಿಸಿರುವುದಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ ಎಂದು ತಮಿಳುನಾಡಿನ ಅಧಿಕಾರಿಗಳು ವಾದಿಸಿದ್ದಾರೆ.
ಕರ್ನಾಟಕ
Bus Accident: ನಿಂತಿದ್ದ ಲಾರಿಗೆ ಸಾರಿಗೆ ಬಸ್ ಡಿಕ್ಕಿ; 32 ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ
Bus Accident: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಮಲ್ಲದಗುಡ್ಡದ ಬಳಿ ರಸ್ತೆ ಬದಿ ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ. ಲಾರಿಗೆ ಇಂಡಿಕೇಟರ್ ಹಾಕದೆ ನಿಲ್ಲಿಸಿದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ (Sindhanur) ರಸ್ತೆ ಬದಿ ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ (KSRTC Bus) ಡಿಕ್ಕಿಯಾಗಿದ್ದು (Bus Accident), 32 ಜನ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.
ಸಿಂಧನೂರಿನಿಂದ ಅಂಕಲಿಮಠದ ಕಡೆಗೆ ಹೊರಟ್ಟಿದ್ದ ವೇಳೆ ರಸ್ತೆ ಬದಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿಯಾಗಿದೆ. ಬಸ್ ಕಂಡಕ್ಟರ್ ಸೇರಿ ಐವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಕೂಡಲೇ ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿದೆ. ಇನ್ನು ಸಣ್ಣ ಪುಟ್ಟ ಗಾಯಗಳಾದವರಿಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂಡಿಕೇಟರ್ ಹಾಕದಿರುವುದೇ ಕಾರಣ
ರಸ್ತೆ ಬದಿ ನಿಲ್ಲಿಸಿದ ಲಾರಿಗೆ ಚಾಲಕನು ಇಂಡಿಕೇಟರ್ ಹಾಕದಿರುವುದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಲಾರಿ ಚಾಲಕನು ಇಂಡಿಕೇಟರ್ ಹಾಕದೆ ಲಾರಿಯನ್ನು ನಿಲ್ಲಿಸಿದ್ದಾನೆ. ಬಸ್ ಎದುರಿಗೆ ಲಾರಿ ಬಂದಿದ್ದು, ಸೈಡ್ ಕೊಡಲು ಹೋದಾಗ ರಸ್ತೆ ಬದಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಬಸ್ ನಜ್ಜುಗುಜ್ಜಾಗಿದೆ. ಸಿಂಧನೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ವಾರದ ಹಿಂದಷ್ಟೇ ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಹೋಗಿ ಮರಳಿ ಬರುತ್ತಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಒಂದೇ ಕುಟುಂಬದ ಐವರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಹಾಗೆಯೇ, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಇದನ್ನೂ ಓದಿ: Accident Case : ಚಲಿಸುತ್ತಿದ್ದಾಗಲೇ ಸುಟ್ಟು ಕರಕಲಾದ ಕಾರು; ಬೈಕ್‌ಗೆ ಬಸ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು
ತೆಲಂಗಾಣದ ಸೂರ್ಯಪೇಠ ಜಿಲ್ಲೆಯ ಮಠಮಪಲ್ಲಿಯಲ್ಲಿ ನಡೆದ ಅಪಘಾತದಲ್ಲಿ ಈ ಸಾವು ಸಂಭವಿಸಿದೆ. ಅಥಣಿಯ ಕುಟುಂಬದವರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಹಾಗೂ ಲಾರಿ ನಡುವೆ ನಡೆದಿರುವ ಭೀಕರ ಅಪಘಾತ ಇದಾಗಿದೆ.
ಬೆಂಗಳೂರು
World Heart Day: ಹೃದಯ ಆರೋಗ್ಯ ಜಾಗೃತಿಗಾಗಿ ಸಾಗರ್ ಆಸ್ಪತ್ರೆಯಿಂದ ಸೈಕ್ಲೋಥಾನ್; 500 ಮಂದಿ ಭಾಗಿ
World Heart Day: ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಲ್ಲಿ ಸಾಗರ್ ಆಸ್ಪತ್ರೆಯಿಂದ ಸೈಕ್ಲೋಥಾನ್ ಆಯೋಜಿಸಲಾಗಿತ್ತು. ಸೈಕ್ಲೋಥಾನ್ ಮೂಲಕ ಸಾರ್ವಜನಿಕರಿಗೆ ಹೃದಯ ಆರೋಗ್ಯ ಜಾಗೃತಿ ಮೂಡಿಸಲಾಯಿತು.
ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಉತ್ಕೃಷ್ಟತೆಗೆ ಹೆಸರಾಗಿರುವ ಸಾಗರ್ ಆಸ್ಪತ್ರೆಯಿಂದ ವಿಶ್ವ ಹೃದಯ ದಿನ (World Heart Day) ಹಿನ್ನೆಲೆಯಲ್ಲಿ ಹೃದಯ ಆರೋಗ್ಯ ಜಾಗೃತಿಗಾಗಿ ನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ಸೈಕ್ಲೋಥಾನ್ ಆಯೋಜಿಸಲಾಗಿತ್ತು. ಸುಮಾರು 500 ಸೈಕಲ್ ಸವಾರರು ಭಾಗವಹಿಸಿದ್ದ ಸೈಕ್ಲೋಥಾನ್‌ಗೆ ತಜ್ಞ ವೈದ್ಯ ಡಾ.ಡಬ್ಲ್ಯು.ಡಿ. ಮೋಹನ್ ಅವರು ಚಾಲನೆ ನೀಡಿದರು.
ನಂತರ ಖ್ಯಾತ ನಟಿ ಪೂಜಾ ಗಾಂಧಿ ಅವರು ಸಿಪಿಆರ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಾಗರ್ ಆಸ್ಪತ್ರೆಯ ನಿರಂತರ ಪ್ರಯತ್ನ ಶ್ಲಾಘನೀಯ. ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳ ಆತಂಕಕಾರಿ ಹೆಚ್ಚಳದ ಹಿನ್ನೆಲೆಯಲ್ಲಿ, ಜನರಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದು ತಿಳಿಸಿದರು.
ಸಿಪಿಆರ್ ತರಬೇತಿ
ಬನಶಂಕರಿಯ ಸಾಗರ್ ಹಾಸ್ಪಿಟಲ್ಸ್‌ನಲ್ಲಿ ತುರ್ತು ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಸುಹಾಸ್ ಮತ್ತು ತಂಡ ಜೀವ ಉಳಿಸುವ ವಿಶೇಷ ಸಿಪಿಆರ್ ಬಗ್ಗೆ ತರಬೇತಿ ನೀಡಿದರು. ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ಇದು ಸಹಾಯಕ.
ಬಿಎಸ್‌ಕೆಯ ಸಾಗರ್ ಹಾಸ್ಪಿಟಲ್ಸ್‌ನ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಕಿಶೋರ್ ಕೆಎಸ್ ಹಾಗೂ ಸಮಾಲೋಚಕ ಹೃದ್ರೋಗ ತಜ್ಞ ಡಾ.ಬಿ.ಕೆ.ರಘುನಂದನ್ ಆರೋಗ್ಯಕರ ಹೃದಯಕ್ಕಾಗಿ ಸಲಹೆಗಳನ್ನು ನೀಡಿದರು.
ಸಾಗರ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಅಧ್ಯಕ್ಷೆ ಎಂ.ಎಸ್.ಇಶಿಕಾ ಮುಲ್ತಾನಿ, ಅವರು ವಿಶ್ವ ಹೃದಯ ದಿನದಂದು ಸಾರ್ವಜನಿಕರಲ್ಲಿ ಹೃದಯ ಸ್ವಾಸ್ಥ್ಯದ ಜಾಗೃತಿಗಾಗಿ ಸೈಕ್ಲೋಥಾನ್ ಅನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕೆ ನಮಗೆ ಹೆಮ್ಮೆಯಿದೆ ಎಂದರು.
ಇದನ್ನೂ ಓದಿ | Baking soda side effects: ಅಡುಗೆಯಲ್ಲಿ ಸೋಡಾ ಬಳಸಿದರೆ ಉಂಟಾಗುವ ಸೈಡ್ ಎಫೆಕ್ಟ್ ಏನೇನು?
ಸಾಗರ್ ಆಸ್ಪತ್ರೆ ಸಮೂಹವು ದಶಕಗಳಿಂದ ರೋಗಿಗಳಿಗೆ ಗುಣಮಟ್ಟದ ಮತ್ತು ಸರಿಯಾದ ಆರೈಕೆಯನ್ನು ನೀಡಲು ಬದ್ಧವಾಗಿರುವ ಪ್ರಮುಖ ಆರೋಗ್ಯ ಸಂಸ್ಥೆಯಾಗಿದೆ. ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಮತ್ತು ನುರಿತ ವೈದ್ಯರ ತಂಡವನ್ನು ಹೊಂದಿದ್ದು, ಸಮುದಾಯಕ್ಕೆ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಸೈಕ್ಲೋಥಾನ್‌ನಲ್ಲಿ ಭಾಗವಹಿಸಿದ್ದ ಸೈಕಲ್ ಸವಾರರು.
-
ವೈರಲ್ ನ್ಯೂಸ್14 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಸುವಚನ4 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ19 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
South Cinema16 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ಪ್ರಮುಖ ಸುದ್ದಿ13 hours ago
Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ
-
ದೇಶ24 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ಬಾಲಿವುಡ್20 hours ago
Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್ ಸೀರೆಯುಟ್ಟು ಫಸ್ಟ್ ಲುಕ್ನಲ್ಲೇ ನಾಚಿ ನೀರಾದ ರಶ್ಮಿಕಾ!
-
ಕರ್ನಾಟಕ18 hours ago
Mother-Child death : 3 ವರ್ಷದ ಮಗುವಿನ ಕತ್ತು ಹಿಸುಕಿ ಬಾವಿಗೆ ಹಾರಿದ ತಾಯಿ; ಎಷ್ಟು ಕಷ್ಟ ಅನುಭವಿಸಿದ್ದಳೋ?