Site icon Vistara News

Modi in Bengaluru | ಆದಿಚುಂಚನಗಿರಿ ಶ್ರೀಗಳ ಮಾತಿಗೆ ಮೋದಿ ಮೆಚ್ಚುಗೆ; ಕೈ ಮುಗಿದು ಚಪ್ಪಾಳೆ

Modi in Bengaluru

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾದ, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯನ್ನು (ಪ್ರಗತಿ ಪ್ರತಿಮೆ) ಅನಾವರಣಗೊಳಿಸಿದ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಮಾತಿಗೆ ಪ್ರಧಾನಿ ನರೇಂದ್ರ ಮೋದಿಯವರು (Modi in Bengaluru) ಕೈ ಮುಗಿದು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮೊದಲಿಗೆ ಪ್ರಧಾನಿಯವರನ್ನು ಗೌರವಿಸುವ ಸಂದರ್ಭದಲ್ಲಿ “ಕೆಂಪೇಗೌಡ ಪೇಟ”ವನ್ನು ಅವರಿಗೆ ತೊಡಿಸಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು, ಪೇಟದ ಕುರಿತು ಅಲ್ಲಿಯೇ ಮೋದಿಗೆ ವಿವರಿಸಿದ್ದರು. ಅವರ ವಿವರಣೆಯನ್ನು ಮೋದಿ ಆಸಕ್ತಿಯಿಂದ ಕೇಳಿಸಿಕೊಂಡರು. ನಂತರ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಿದ ಸ್ವಾಮೀಜಿ, ಮೋದಿಯವರು ಕುತೂಹಲದಿಂದ ತಮ್ಮ ಮಾತು ಕೇಳುವಂತೆ ಮಾಡಿದರು.

“ಭಾರತ ಉಳಿದರೆ ಎಲ್ಲರೂ ಉಳಿಯುತ್ತಾರೆ, ಭಾರತ ಅಳಿದರೆ ಎಲ್ಲರೂ ಅಳಿಯುತ್ತಾರೆʼʼ ಎಂಬ ಸ್ವಾಮಿ ವಿವೇಕಾನಂದರು ಮಾತುಗಳನ್ನು ಶ್ರೀಗಳು ಭಾಷಣದಲ್ಲಿ ಉಲ್ಲೇಖಿಸಿದಾಗ ಪ್ರಧಾನಿ ಮೋದಿ ಅವರತ್ತ ನೋಡಿದರು. ನಾಡ ಪ್ರಭು ಕೆಂಪೇಗೌಡರು ಕೌಶಲದ ಮಹತ್ವವನ್ನು ಅರಿತು, ಹೇಗೆ 64 ಕೌಶಲ ವರ್ಗದವರಿಗೆ ಪ್ರೋತ್ಸಾಹ ನೀಡಿ, ಬೆಂಗಳೂರು ಕಟ್ಟಿದರು ಎಂದು ಇಂಗ್ಲಿಷ್‌ನಲ್ಲಿಯೇ ವಿವರಿಸಿದ ಶ್ರೀಗಳು, ಈಗ 500ವರ್ಷಗಳ ಬಳಿಕ ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಯವರೂ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಕೌಶಲದ ಅಗತ್ಯತೆ ಮತ್ತು ಪ್ರಾಮುಖ್ಯತೆಯನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ಕೌಶಲ, ಮರುಕೌಶಲ ಮತ್ತು ಉನ್ನತ ಕೌಶಲ ಎಂಬ ಮೂರು ಪರಿಕಲ್ಪನೆಗಳ ಮೂಲಕ, ಇಲ್ಲಿನ ಮಾನವಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಮಾತುಗಳನ್ನು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿ

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಸ್ಕಿಲ್‌ ವಿಷಯದ ಕುರಿತು ಮಾತನಾಡಲು ಆರಂಭಿಸುತ್ತಿದ್ದಂತೆಯೇ ಬಹಳ ಆಸಕ್ತಿಯಿಂದ ಅವರು ಹೇಳಿದ್ದನ್ನು ಕೇಳಿಸಿಕೊಂಡ ಪ್ರಧಾನಿ ಮೋದಿ, ಅವರ ಮಾತುಗಳಿಗೆ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

“ಯಾರಿಗೆ ಜ್ಞಾನವಿದೆಯೋ ಅವರು ದೇಶವನ್ನು ಆಳಬೇಕುʼʼ ಎಂದು ಪ್ಲೇಟೋ ಹೇಳಿದ್ದ. ಆದರೆ ನರೇಂದ್ರ ಮೋದಿ, ಕೆಂಪೇಗೌಡರು ಜ್ಞಾನದ ಜತೆಗೆ ಕರ್ಮಜ್ಞಾನವೂ ಇರಬೇಕು ಎಂದು ತೋರಿಸಿಕೊಟ್ಟರು. ಕರ್ಮ ಮತ್ತು ಜ್ಞಾನ ಸಮ್ಮಿಳಿತವಾದಾಗಲೇ ದೇಶ ಉದ್ಧಾರವಾಗುತ್ತದೆ ಎಂಬುದನ್ನು ಕೆಂಪೇಗೌಡರು ಮತ್ತು ನರೇಂದ್ರ ಮೋದಿ ಇಬ್ಬರೂ ಸಾಬೀತು ಮಾಡಿದ್ದಾರೆ ಎಂದು ಶ್ರೀಗಳು ಹೇಳಿದಾಗಲೂ ಮೋದಿ ಆಸಕ್ತಿಯಿಂದ ಅವರ ಮಾತುಗಳನ್ನು ಕೇಳಿಸಿಕೊಂಡರು. ಅವರ ಮೆಚ್ಚುಗೆಯ ಮಾತುಗಳಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿದರು.

ಶ್ರೀಗಳು ತಮ್ಮ ಭಾಷಣದ ಕೊನೆಯಲ್ಲಿ ಪ್ರಧಾನಿ ಮೋದಿಯವರಿಗೆ ಸಮಸ್ತ ಕನ್ನಡಿಗರ ಪರವಾಗಿ ಕೃತಜ್ಞತೆ ಸಲ್ಲಿಸಿದಾಗ ಅವರು ಕೈಮುಗಿದು ಶ್ರೀಗಳಿಗೆ ನಮನ ಸಲ್ಲಿಸಿದರು. ಅಲ್ಲದೆ, ತಾವು ಮಾತನಾಡುವಾಗ ಕೂಡ ಒಮ್ಮೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಉಲ್ಲೇಖಿಸಿದರು.

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ತಮ್ಮ ಭಾಷಣದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರನ್ನು ನೆನಪಿಸಿಕೊಂಡಿದ್ದು, ವಿಶೇಷವಾಗಿತ್ತು.

ಇದನ್ನೂ ಓದಿ |Modi In Bengaluru | ರಾಜ್ಯ ಸರ್ಕಾರ ಎಚ್‌.ಡಿ. ದೇವೇಗೌಡರಿಗೆ ಅವಮಾನ ಮಾಡಿದೆ ಎಂದ ಜೆಡಿಎಸ್‌, ಸಾಮಾಜಿಕ ಜಾಲತಾಣದಲ್ಲಿ ಬಿರುಸಿನ ಚರ್ಚೆ

Exit mobile version