Site icon Vistara News

Mysore dasara : ದಸರಾ ಎಂಬ ನಾಡಹಬ್ಬದಲಿ ಚಿನ್ನದ ಅಂಬಾರಿ, ಜಂಬೂ ಸವಾರಿ; ನೋಡ ಬನ್ನಿ ಮೈಸೂರು ನಗರಿ!

Mysore Dasara

ಬೆಂಗಳೂರು: ನಾಡಹಬ್ಬ ಮೈಸೂರು ದಸರಾ (Mysore dasara) ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿದೆ. ಇದರ ಸಂಭ್ರಮವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ಪ್ರತಿ ನವರಾತ್ರಿ (Navratri Festival) ಹಾಗೂ ವಿಜಯದಶಮಿಯ (Vijayadashami Festival) ಅಷ್ಟೂ ದಿನ ಮೈಸೂರು (Mysore City) ಝಗಮಗಿಸಲಿದೆ. ವಿದ್ಯುತ್‌ ದೀಪಾಲಂಕಾರದಿಂದ ಹಿಡಿದು ಇಡೀ ನಗರವೇ ಸಿಂಗಾರಗೊಂಡು ಕಣ್ಮನ ಸೆಳೆಯುತ್ತವೆ. ಇನ್ನು ದಸರೆಯ ಇತಿಹಾಸವನ್ನು ನೋಡುವುದಾದರೆ 1610ರಲ್ಲಿ ಆರಂಭ ಮಾಡಲಾಯಿತು. ಶ್ರೀರಂಗಪಟ್ಟಣದ ಕಾವೇರಿ ನದಿಯ ಉತ್ತರ ದಿಕ್ಕಿನ ಗೌರಿಕಡುವೆಯಲ್ಲಿ ಎಂಬಲ್ಲಿ ದಸರಾಕ್ಕೆ ಚಾಲನೆ ನೀಡಲಾಗಿತ್ತು. ಅಂಬಾರಿ ಹೊರುವ ಪದ್ಧತಿಗೆ ಚಾಲನೆ ಸಿಕ್ಕಿದ್ದೂ ಸಹ ಆಗಿನಿಂದಲೇ ಆಗಿದೆ.

ಮೈಸೂರನ್ನು ಮಹಿಷಾಸುರನಿಂದ ರಕ್ಷಿಸಿ, ಆತನನ್ನು ಸಂಹಾರ ಮಾಡಿದ ದಿನವನ್ನು ವಿಜಯದಶಮಿ ಎಂದು ಆಚರಿಸುತ್ತಾ ಬರಲಾಗಿದ್ದು, ಅಂದು ಜಂಬೂ ಸವಾರಿ ಮೂಲಕ ಆನೆ ಮೇಲೆ 750 ಕೆಜಿ ತೂಕದ ಸ್ವರ್ಣಖಚಿತ ಅಂಬಾರಿಯಲ್ಲಿ ದೇವಿಯ ಪ್ರತಿಮೆಯನ್ನು ಇಟ್ಟು ಅರಮನೆಯಿಂದ ಬನ್ನಿ ಮಂಟಪದವರೆಗೆ ರಾಜ ಬೀದಿಯಲ್ಲಿ ಮೆರವಣಿಗೆ ನಡೆಸಲಾಗುವುದು.

Mysore Dasara

ವಿಜಯನಗರ ಸಾಮ್ರಾಜ್ಯದಿಂದ ಬಂತು ಆಚರಣೆ

ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣ ದೇವರಾಯನ ಕಾಲದಲ್ಲಿ ವಿಜಯದಶಮಿಯನ್ನು ಪ್ರಾರಂಭಿಸಲಾಯಿತು. ಈ ವೇಳೆ ಶೌರ್ಯ – ಪರಾಕ್ರಮಗಳ ಪ್ರದರ್ಶನ, ಕಲೆ – ಸಾಹಿತ್ಯಗಳಿಗೆ ವೇದಿಕೆ, ಸಂಗೀತ – ನೃತ್ಯ ಮತ್ತು ಸಂಸ್ಕೃತಿ ಪ್ರದರ್ಶನಕ್ಕೆ ಅವಕಾಶ ಸೇರಿದಂತೆ ಹತ್ತು ದಿನಗಳ ಕಾಲ ಅದ್ಧೂರಿಯಾಗಿ ಆಚರಣೆ ನಡೆಸುತ್ತಾ ಬರಲಾಗಿತ್ತು. ಅವರ ತರುವಾಯ ಮೈಸೂರಿನಲ್ಲಿ ರಾಜಾ ಒಡೆಯರ್‌ ಅವರು ದಸರಾವನ್ನು ಶ್ರೀರಂಗಪಟ್ಟಣದಲ್ಲಿ ಆರಂಭಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಅಂದರೆ 1799ರಲ್ಲಿ ಒಡೆಯರು ತಮ್ಮ ಕೇಂದ್ರ ಸ್ಥಾನವನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಿಕೊಂಡರು. ನಂತರದ ದಸರಾ ಆಚರಣೆಗಳು ಮೈಸೂರಿನಲ್ಲಿ ಪ್ರಾರಂಭವಾದವು.

Mysore Dasara

ಜಂಬೂ ಸವಾರಿ ಎಂಬ ಆಕರ್ಷಣೆ

ಜಂಬೂ ಸವಾರಿ ಆರಂಭಕ್ಕೆ ಮುನ್ನ ಶುಭ ಕುಂಭ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಮೊದಲು ಪೂಜೆ ಸಲ್ಲಿಸಲಾಗುತ್ತದೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಆಸೀನಳಾಗಿರುವ ತಾಯಿ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಲಾಗುತ್ತದೆ. ಆ ಬಳಿಕ 24 ಕುಶಾಲ ತೋಪುಗಳ ಗೌರವವನ್ನು ಸಮರ್ಪಣೆ ಮಾಡಲಾಗುತ್ತದೆ. ಅಲ್ಲಿಂದ ಅರಮನೆ ಆವರಣದಲ್ಲಿ ವಿಜಯದಶಮಿಯ ಅತ್ಯಾಕರ್ಷಕ ಮೆರವಣಿಗೆಗೆ ಚಾಲನೆ ದೊರೆಯುತದೆ. ಜಂಬೂಸವಾರಿಯು ಅರಮನೆ ಆವರಣದಿಂದ ಬನ್ನಿ ಮಂಟಪದವರೆಗೆ ನಡೆಯುತ್ತದೆ.

ಗಮನ ಸೆಳೆಯುವ ಸ್ತಬ್ಧಚಿತ್ರಗಳ ಪ್ರದರ್ಶನ

ಅಂಬಾರಿ ಹೊತ್ತ ಬಲರಾಮನ ಜತೆಗೆ ಪೊಲೀಸ್ ಬ್ಯಾಂಡ್‌ನ ಆಕರ್ಷಕ ತಾಳ ವಾದ್ಯ ಕಳೆಗಟ್ಟಲಿದೆ. ಅಲ್ಲದೆ, ಕಂಸಾಳೆ ಕುಣಿತ, ಕಲಾತಂಡಗಳ ನೃತ್ಯ ಪ್ರದರ್ಶನಗಳ ಜತೆಗೆ ಸ್ತಬ್ಧ ಚಿತ್ರಗಳು ಎಲ್ಲರ ಗಮನ ಸೆಳೆಯುತ್ತದೆ. ಇದರ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿರುತ್ತಾರೆ.

ಇದನ್ನೂ ಓದಿ: Yuva Dasara: ಜಯನಗರದಲ್ಲಿ ಅ.15 ರಿಂದ 24 ರವರೆಗೆ ʼಯುವ ದಸರಾʼ

750 ಕೆ.ಜಿ. ತೂಕದ ಚಿನ್ನದ ಅಂಬಾರಿ

ದಸರಾ ಹಬ್ಬದ ಜಂಬೂ ಸವಾರಿಯಲ್ಲಿ ಪ್ರಮುಖ ಆಕರ್ಷಣೆಯೇ 750 ಕೆಜಿ ತೂಕದ ಚಿನ್ನದ ಅಂಬಾರಿ. ಈ ಚಿನ್ನದ ಅಂಬಾರಿಗೂ ಒಂದು ಇತಿಹಾಸ ಇದೆ. ಇದು ಮೂಲತಃ ಮಹಾರಾಷ್ಟ್ರದ ದೇವಗಿಯಲ್ಲಿ ಇತ್ತು ಎಂದು ಇತಿಹಾಸ ಹೇಳುತ್ತದೆ. ದೇವಗಿರಿ ಆಡಳಿತ ಮುಕ್ತಾಯದ ವೇಳೆ ಅಲ್ಲಿನ ರಾಜ ಮುಮ್ಮಡಿ ಸಿಂಗ ನಾಯಕ ಎನ್ನುವವರಿಗೆ ಹಸ್ತಾಂತರ ಮಾಡುತ್ತಾರೆ. ಮುಮ್ಮಡಿ ಸಿಂಗ ನಾಯಕ ಬಳ್ಳಾರಿ ಬಳಿಯ ರಾಮದುರ್ಗ ಕೋಟೆಗೆ ತಂದು ಸುರಕ್ಷಿತವಾಗಿಡುತ್ತಾರೆ. ಇವರ ಮಗ ಕಂಪಿಲರಾಯ ಕುಮ್ಮಟದುರ್ಗವನ್ನು ರಾಜಧಾನಿಯಾಗಿ ಮಾಡಿಕೊಂಡಾಗ ಅಲ್ಲಿಗೆ ಇದನ್ನು ಒತ್ತುತ್ತಾನೆ. ಅಲ್ಲಿ ಶ್ರೀ ದುರ್ಗಾದೇವಿಯನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಈ ಪೂಜೆಯನ್ನು ಮಗ ಯುವರಾಜ ಸಹ ಮುಂದುವರಿಸುತ್ತಾನೆ.

1327ರಲ್ಲಿ ದೆಹಲಿ ಸುಲ್ತಾನರು ದಾಳಿಗೆ ಕಂಪಿಲ ರಾಜ್ಯ ನಾಶವಾಗುತ್ತದೆ. ಆಗ ಭಂಡಾರ ಸಂರಕ್ಷಣೆ ಮಾಡುತ್ತಿದ್ದ ಹಕ್ಕಬುಕ್ಕರು ಈ ಅಂಬಾರಿಯನ್ನು ಹುತ್ತವೊಂದರಲ್ಲಿ ಮುಚ್ಚಿಟ್ಟು ತಲೆಮರೆಸಿಕೊಳ್ಳುತ್ತಾರೆ. 1336ರ ವೇಳೆಗೆ ದೆಹಲಿ ಸುಲ್ತಾನರ ಸಾಮ್ರಾಜ್ಯ ಪತನವಾದ ಬಳಿಕ ಹಕ್ಕನು ರಾಜ್ಯ ಸ್ಥಾಪನೆಗೆ ಮುಂದಾಗುತ್ತಾನೆ. ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿ ವಿಜಯನಗರ ಸಾಮ್ರಾಜ್ಯವನ್ನು ರಾಜಧಾನಿಯನ್ನಾಗಿ ಮಾಡುತ್ತಾನೆ. ಬುಕ್ಕನು ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ಎರಡನೇ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾನೆ. ಅಲ್ಲಿಗೆ ಈ ಅಂಬಾರಿಯನ್ನು ಸ್ಥಳಾಂತರಿಸುತ್ತಾನೆ.

ಸಂಗಮ, ಸಾಳವ, ತುಳು ಹಾಗೂ ಅರವಿಡು ಎನ್ನುವ ನಾಲ್ಕು ವಂಶಗಳು ವಿಜಯನಗರ ಸಾಮ್ರಾಜ್ಯವನ್ನು ಆಳ್ವಿಕೆ ಮಾಡುತ್ತವೆ. ವಿಜಯನಗರ ಸಾಮ್ರಾಜ್ಯ ಪತನಗೊಂಡಾಗ ಅಂಬಾರಿಯನ್ನು ಸಂರಕ್ಷಣೆಗಾಗಿ ಆಂಧ್ರದ ಪೆನಗೊಂಡಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಅಲ್ಲಿಂದ ಕೆಲವು ವರ್ಷಗಳ ಬಳಿಕ ಶ್ರೀರಂಗಪಟ್ಟಣಕ್ಕೆ ಬರುತ್ತದೆ. ಇಲ್ಲಿಂದ ಮೈಸೂರಿಗೆ ಆಸ್ಥಾನ ಸ್ಥಳಾಂತರವಾದಾಗ ಚಿನ್ನದ ಅಂಬಾರಿ ಮೈಸೂರಿಗೆ ಬರುತ್ತದೆ.

ಜಂಬೂ ಸವಾರಿ ಆನೆಗಳು ಇವು

ಜಂಬೂ ಸವಾರಿ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಈ ಬಾರಿ ಜಂಬೂ ಸವಾರಿಗೆ 14 ಆನೆಗಳನ್ನು ಆಯ್ಕೆ ಮಾಡಲಾಗಿದೆ. ಅಭಿಮನ್ಯು ಚಿನ್ನದ ಅಂಬಾರಿಯನ್ನು ಹೊರುತ್ತಿದ್ದು, ತಂಡ ಕ್ಯಾಪ್ಟನ್‌ ಆಗಿದ್ದಾನೆ. ವಿಜಯ, ವರಲಕ್ಷ್ಮಿ, ಅರ್ಜುನ, ಧನಂಜಯ, ಮಹೇಂದ್ರ, ಭೀಮ, ಗೋಪಿ, ಪ್ರಶಾಂತ್, ಸುಗ್ರೀವ, ಕಂಜನ್, ರೋಹಿತ್, ಲಕ್ಷ್ಮಿ, ಹಿರಣ್ಯ ಆನೆಗಳು ಸಾಥ್‌ ನೀಡಲಿವೆ.

Mysore Dasara

ಅರಮನೆಯಲ್ಲಿ ಮೇಳೈಸುವ ಕಾರ್ಯಕ್ರಮಗಳು

ದಸರಾ ವೇಳೆ ಇಡೀ ಮೈಸೂರು ನಗರು ದೀಪಗಳು ಸೇರಿದಂತೆ ಅಲಂಕಾರಗಳಿಂದ ಕಂಗೊಳಿಸುತ್ತಿರುತ್ತದೆ. ಅರಮನೆ ಹಾಗೂ ಸುತ್ತಮುತ್ತಲ ಪ್ರಮುಖ ಕಟ್ಟಡಗಳು ದೀಪಗಳಿಂದ ಹೊಳೆಯುತ್ತಿರುತ್ತವೆ. ಇನ್ನು ಅರಮನೆ ಆವರಣದಲ್ಲಿ ಕ್ರೀಡೆ, ಕುಸ್ತಿ, ಕವಿಗೋಷ್ಠಿ, ಆಹಾರೋತ್ಸವ, ಚಲನಚಿತ್ರೋತ್ಸವದಂತಹ ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಮೂಲಕ ಕಲೆ – ಸಾಹಿತ್ಯಗಳಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಕಲಾವಿದರನ್ನು ಗುರುತಿಸುವ ಗೌರವಿಸುವ ಕೆಲಸ ಆಗುತ್ತದೆ.

ಹೇಗಿರಲಿದೆ ಖಾಸಗಿ ದರ್ಬಾರ್‌?

ಇನ್ನು ದಸರೆ ವೇಳೆ ರಾಜಮನತನದಿಂದ ಕೆಲವು ಆಚರಣೆಗಳು ನಡೆಯುತ್ತವೆ. ಅದು ಅವರ ಖಾಸಗಿ ಕಾರ್ಯಕ್ರಮವಾಗಿರುತ್ತದೆ. ಇನ್ನು ರಾಜಮನೆತನಕ್ಕೆ ಖಾಸಗಿ ದರ್ಬಾರ್‌ ಬಹಳ ವಿಶೇಷವಾಗಿರುತ್ತದೆ. ಇದಕ್ಕೆಂದೇ ಅರಮನೆಯಲ್ಲಿ ದರ್ಬಾರ್ ಹಾಲ್ ಇದೆ. ಈ ಖಾಸಗಿ ದರ್ಬಾರ್‌ಗೆ ಸಾಮಾನ್ಯರಿಗೆ ಪ್ರವೇಶ ಇಲ್ಲ. ಯಾರನ್ನು ಕರೆಯಬೇಕು? ಬಿಡಬೇಕು ಎಂಬುದು ಸಂಪೂರ್ಣ ರಾಜಮನೆತನದ ನಿರ್ಧಾರವಾಗಿರುತ್ತದೆ. ಹೀಗಾಗಿ ಅವರ ಆಪ್ತ ವಲಯದವರಿಗೆ ಮಾತ್ರವೇ ಇಲ್ಲಿ ಅವಕಾಶ.

ರಾಜಪೋಷಾಕಿನಲ್ಲಿ ಮಿಂಚುವ ರಾಜ!

ಖಾಸಗಿ ದರ್ಬಾರ್‌ನಲ್ಲಿ ರಾಜನೇ ಪ್ರಮುಖ. ಇಲ್ಲಿ ರಾಜರಾದವರು ಅಂದರೆ ಈಗ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರೇಷ್ಮೆ, ರತ್ನಖಚಿತ ರಾಜಪೋಷಾಕನ್ನು ಧರಿಸಿರುತ್ತಾರೆ. ಮಹಾರಾಜರ ಗತ್ತು ಮತ್ತು ಗಾಂಭೀರ್ಯದೊಂದಿಗೆ ಸಿಂಹಾಸನವನ್ನು ಏರಿ ತಮ್ಮ ಬಲಗೈ ಎತ್ತಿ ಸೆಲ್ಯೂಟ್ ಮಾಡಿ ಆಸೀನರಾಗುತ್ತಾರೆ. ಅಲ್ಲಿಂದ ಖಾಸಗಿ ದರ್ಬಾರ್‌ ಆರಂಭವಾಗುತ್ತದೆ.

ಆಗ ಹೊಗಳು ಭಟರು ರಾಜಾಧಿರಾಜ … ರಾಜ ಮಾರ್ತಾಂಡ … ಶ್ರೀಮನ್ಮಹಾರಾಜ … ಬಹುಪರಾಕ್ … ಬಹುಪರಾಕ್ … ಎಂದು ಉದ್ಘೋಷಗಳನ್ನು ಕೂಗುತ್ತಾರೆ. ಪಾಡ್ಯದ ದಿನ ಮಾತ್ರ ಬೆಳಗ್ಗೆ ನಡೆಯುವ ಈ ಖಾಸಗಿ ದರ್ಬಾರ್‌ ಉಳಿದ ದಿನ ಸಂಜೆಗೆ ನಡೆಯುತ್ತದೆ. ದ್ವಾರಪಾಲಕರು, ಪರಾಕ್‌ ಹೇಳುವವರು, ಒಡೆಯರ್ ಆಪ್ತ ಸಿಬ್ಬಂದಿ, ರಾಜದಂಡ ಹಿಡಿದ ಆಸ್ಥಾನ ಅಧಿಕಾರಿಗಳು, ರಾಜಪುರೋಹಿತರು, ವಿದ್ವಾಂಸರು, ಒಡೆಯರ್ ವಂಶಸ್ಥರು, ಬಂಧುಮಿತ್ರರು ಮಾತ್ರ ಇಲ್ಲಿರುತ್ತಾರೆ.

Mysore Dasara

ರಾಜಪರಿವಾರದವರಿಗೆ ಕಾಣಿಕೆ ಸಮರ್ಪಣೆ

ಪ್ರತಿದಿನ ಖಾಸಗಿ ದರ್ಬಾರ್‌ಗೆ ಮುಂಚೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳಿಗೆ ಅಲಂಕಾರ ಮಾಡಿಡಲಾಗುತ್ತದೆ. ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಅರಮನೆಯೊಳಗೆ ಇವುಗಳ ಪ್ರವೇಶವಾದ ಬಳಿಕ ಖಾಸಗಿ ದರ್ಬಾರ್ ಆರಂಭವಾಗುತ್ತದೆ. ಇಲ್ಲಿ ಸಿಂಹಾಸನಾರೂಢರಾದ ಯದುವೀರ್ ಒಡೆಯರ್‌ಗೆ ದೇವಾಲಯಗಳಿಂದ ಆಗಮಿಸಿದ ಪುರೋಹಿತರು ಪ್ರಸಾದ ಮತ್ತು ಮಂತ್ರಪುಷ್ಪ ಹಾಗೂ ಮಂಗಳಾಕ್ಷತೆ ನೀಡುವುದು, ನಜರ್ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತದೆ. ನಂತರ ಯದುವೀರ್ ಒಡೆಯರ್ ಸಿಂಹಾಸನದಲ್ಲಿ ಕುಳಿತುಕೊಂಡು ರಾಜಪರಿವಾರದ ಮಂದಿಗೆ ಕಾಣಿಕೆ ನೀಡುತ್ತಾರೆ.

ದರ್ಬಾರ್ ಸಂದರ್ಭ 108 ಸಲ ದೇವಿ ಭಾಗವತ ಪಠಣ, 10 ಮಂದಿ ವೇದಮೂರ್ತಿಗಳಿಂದ ಸಪ್ತಶತಿ ಪಠಣ, ನವಮಿಯ ರಾತ್ರಿ ಅಲಮೇಲಮ್ಮನ ದೇವಸ್ಥಾನದಲ್ಲಿ ಪೂಜೆ, ಆಯುಧಶಾಲೆಯಲ್ಲಿ ಆಯುಧಪೂಜೆ, ವಿಜಯದಶಮಿಯ ದಿನ ಜಟ್ಟಿಗಳ ವಜ್ರಮುಷ್ಠಿ ಕಾಳಗ, ಇದೇ ದಿನ ಶಮೀಪೂಜೆ ಮುಂತಾದ ಧಾರ್ಮಿಕ ಕಾರ್ಯಗಳನ್ನು ಶ್ರದ್ಧಾಭಕ್ತಿಗಳಿಂದ ನಡೆಸಿ ಸಮಾಪ್ತಿಗೊಳಿಸಲಾಗುತ್ತದೆ.

ರಾಜ ಯಧುವೀರ್‌ ಒಡೆಯರ್ ದಿನಚರಿ ಹೇಗಿರಲಿದೆ?

ನವರಾತ್ರಿಯ ಮೊದಲನೆಯ ದಿನವಾದ ಪಾಡ್ಯದಂದು ಮಹಾರಾಜರು ಬೆಳಗ್ಗೆ ಎದ್ದು ಎಣ್ಣೆ ಶಾಸ್ತ್ರ ಮಾಡುತ್ತಾರೆ. ಕೊನೆಗೆ ಅರಮನೆಗೆ ಕರೆಸಿಕೊಂಡಿರುವ ಕ್ಷೌರಿಕರಿಂದ ಚೌಲ ಶಾಸ್ತ್ರ ನೆರವೇರಿಸಿ ಮಂಗಳ ಸ್ನಾನ ಮಾಡುತ್ತಾರೆ. ಬಳಿಕ ಮಹಾರಾಜರಿಗೆ ಮುತ್ತೈದೆಯರು ಮತ್ತು ಪುರೋಹಿತ ಮನೆತನದ ಸ್ತ್ರೀಯರಿಂದ ಆರತಿ ಸೇವೆ ಇರುತ್ತದೆ. ಅಲ್ಲಿಂದ ಚಾಮುಂಡಿತೊಟ್ಟಿಗೆ ಭೇಟಿ ನೀಡುವ ಮಹಾರಾಜ ಗಣಪತಿಗೆ ಪೂಜೆ ಮಾಡಿ ಅಲ್ಲಿ ಕಳಶ ಪೂಜೆ, ಕಂಕಣ ಪೂಜೆಯನ್ನು ನೆರವೇರಿಸುತ್ತಾರೆ. ತಮ್ಮ ಕುಲದೇವತೆ ಚಾಮುಂಡಿ ಸನ್ನಿಧಿಯಲ್ಲಿ ಕಂಕಣ ಧರಿಸುತ್ತಾರೆ. ಅವರ ಧರ್ಮಪತ್ನಿ ಮಹಾರಾಣಿ ಸಹ ಕಂಕಣವನ್ನು ಧರಿಸುತ್ತಾರೆ. ಅಲ್ಲಿಂದ ವ್ರತಗಳಿಗೆ ಚಾಲನೆ ಸಿಗುತ್ತದೆ.

ಇದನ್ನೂ ಓದಿ: Dasara Tour: ದಸರಾ ರಜೆಯಲ್ಲಿ ಪ್ರವಾಸ ಮಾಡ್ತೀರಾ? ಕೆಎಸ್‌ಟಿಡಿಸಿ ಟೂರ್‌ ಪ್ಯಾಕೇಜ್‌ ಹೀಗಿದೆ

ದುರ್ಗಾ ಮಾತೆಯ ಸ್ವರೂಪಗಳಾದ ಬ್ರಹ್ಮಿಣಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಮಹೇಶ್ವರಿ, ದುರ್ಗಾ, ಕಾಳಿ, ಚಂಡಿಕೆ ಹೀಗೆ ಎಲ್ಲ ಶಕ್ತಿದೇವತೆಗಳನ್ನೂ ಆರಾಧಿಸಲಾಗುತ್ತದೆ. ಶಿವಸನ್ನಿಧಿ, ಕೃಷ್ಣಸನ್ನಿಧಿ, ಚಾಮುಂಡಿ ಸನ್ನಿಧಿ ಮುಂತಾದ ದೇವರ ಸನ್ನಿಧಿಗಳಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ದೇವೀ ಭಾಗವತ ಪಾರಾಯಣ, ರಾಮಾಯಣ ಪಾರಾಯಣ ನಡೆಯುತ್ತದೆ.

ಬಳಿಕ ಗಣಪತಿ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ನವಗ್ರಹ ಪೂಜೆ, ಬ್ರಹ್ಮ, ವಿಷ್ಣು, ಮಹೇಶ್ವರ, ಮಹಾಕಾಳಿ, ಮಹಾಸರಸ್ವತಿ, ಮಹಾಲಕ್ಷ್ಮಿ ಪೂಜೆಗಳು ನಡೆದು ಅಷ್ಟೋತ್ತರ ಸೇವೆ ನಡೆಯುತ್ತದೆ.

ಮಹಿಷಾಸುರ ಸಂಹಾರ

ಚಂಡಿಕಾಹೋಮ, ಬಲಿ, ಮಹಿಷವಧೆ, ಶಮೀವೃಕ್ಷ ಪೂಜೆ ಸೇರಿ ಪೂಜಾವಿಧಿಗಳನ್ನು ನಡೆಸಲಾಗುತ್ತದೆ. ಇನ್ನು ದೇವೀ ಭಾಗವತವನ್ನು ಪಾರಾಯಣ ಮಾಡುವಾಗ ಮಹಿಷಾಸುರನನ್ನು ಸಾಂಕೇತಿಕವಾಗಿ ಸಂಹರಿಸಲಾಗುತ್ತದೆ. ಇದಕ್ಕಾಗಿ ಮರದಿಂದ ಮಹಿಷಾಸುರನ ಪ್ರತಿಕೃತಿಯನ್ನು ತಯಾರಿಸಿ ಅದಕ್ಕೆ ಕುಂಕುಮದ ರಕ್ತವರ್ಣವನ್ನು ಸುರಿಯಲಾಗುತ್ತದೆ. ಅಲ್ಲಿಗೆ ಮಹಿಷಾಸುರನ ಸಂಹಾರವಾಗುತ್ತದೆ.

ಗೊಂಬೆಗಳಿಗೆ ಪೂಜೆ

ಯದುವೀರ್ ಒಡೆಯರ್ ದರ್ಬಾರಿಗೆ ಬರುವುದಕ್ಕೂ ಮೊದಲು ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಅವರು ಪತಿಯ ಪಾದಪೂಜೆ ಮಾಡಿ ಹಣೆಗೆ ತಿಲಕ ಇಡುವ ಪದ್ಧತಿಯನ್ನು ನಡೆಸಿಕೊಂಡು ಬರಲಾಗಿದೆ. ಹತ್ತು ದಿನವೂ ಇದೇ ಪದ್ಧತಿ ನಡೆಯಲಿದೆ. ಈ ಎಲ್ಲ ವಿಧಿ-ವಿಧಾನ ಪೂಜೆಗಳ ದಂತದ ಗೊಂಬೆಗಳಿಗೆ ಆರತಿ ಮಾಡಲಾಗುತ್ತದೆ.

Mysore Dasara

ಈ ಬಾರಿಯ ದಸರಾ ಟೈಂಟೇಬಲ್‌ ಹೀಗಿದೆ!

15-10-2023 ಭಾನುವಾರ ಶರನ್ನವರಾತ್ರಿ ಪ್ರಾರಂಭ: ಬೆಳಗ್ಗೆ 10.15 ರಿಂದ 10.36 ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಪೂಜೆ ನಡೆಯಲಿದೆ. ಇನ್ನು ಅಂದು ಸಂಜೆ 6.30 ರಿಂದ 7.15ರ ಶುಭಮೇಷ ಲಗ್ನದಲ್ಲಿ ಅರಮನೆಯಲ್ಲಿ ಪೂಜೆಗಳು ಆರಂಭವಾಗಲಿವೆ.

ಶುಕ್ರವಾರ (20-10-2023): ಕಾತ್ಯಾಯಿನೀ – ಮೂಲ ನಕ್ಷತ್ರದಲ್ಲಿ ಸರಸ್ವತಿ ಪೂಜೆ ಆರಂಭವಾಗುತ್ತದೆ. ಶ್ರವಣ ನಕ್ಷತ್ರದ ದಿನ ಅಂದರೆ 24-10-2023ರ ಮಂಗಳವಾರ ವಿಸರ್ಜನೆ ನಡೆಯಲಿದೆ.

21-10-2023 ಶನಿವಾರ: ಕಾಳರಾತ್ರಿ, ಮಹಿಷಾಸುರ ಸಂಹಾರ ನಡೆಯಲಿದೆ.

23-10-2023 ಸೋಮವಾರ: ಆಯುಧ ಪೂಜೆ ನಡೆಯಲಿದೆ.

ಇದನ್ನೂ ಓದಿ: Mysore Dasara : ದಸರಾ ಹಬ್ಬಕ್ಕಾಗಿ ವಿಶೇಷ ರೈಲುಗಳ ಸಂಚಾರ

ವಿಜಯದಶಮಿ ವಿಶೇಷ

24-10-2023ರ ಮಂಗಳವಾರದಂದು ವಿಜಯದಶಮಿ ನಡೆಯಲಿದೆ. ಅಂದು ಮಧ್ಯಾಹ್ನ 1.46 ರಿಂದ 2:08 ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಂದಿ ಧ್ವಜ ಪೂಜೆ ನಡೆಯಲಿದೆ. ಮಧ್ಯಾಹ್ನ 4.40 ರಿಂದ 5.00ರ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿಯಿಂದ ಮತ್ತು ಗಣ್ಯರಿಂದ ಅಂಬಾರಿಯಲ್ಲಿರುವ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ನಡೆಯಲಿದೆ. ನಂತರ ಜಂಬೂ ಸವಾರಿ ಪ್ರಾರಂಭವಾಗಲಿದೆ. ಭಾನುವಾರ (ಅಕ್ಟೋಬರ್‌ 26) ಚಾಮುಂಡಿ ಬೆಟ್ಟದಲ್ಲಿ ಶ್ರೀಚಾಮುಂಡೇಶ್ವರಿ ರಥೋತ್ಸವ ನಡೆಯಲಿದೆ.

Exit mobile version