Site icon Vistara News

Nag Panchami : ಹಾವಿನ ಡಾಕ್ಟ್ರ ಮನೆಯಲ್ಲಿ ಹಾವಿಗೇ ಪೂಜೆ; ಜಲಾಭಿಷೇಕ, ಆರತಿಗೆ ಫುಲ್‌ ಖುಷ್‌!

Cobras worshipped

ಉಡುಪಿ: ನಾಡಿನಾದ್ಯಂತ ನಾಗರ ಪಂಚಮಿಯನ್ನು (Nag Panchami) ಭಕ್ತಿ, ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ಕೆಲವು ಕಡೆ ಹುತ್ತಕ್ಕೆ, ಕೆಲವು ಕಡೆ ನಾಗನ ಕಲ್ಲಿಗೆ ಹಾಲು ಎರೆದು ಜನರು ಭಕ್ತಿಯಿಂದ ನಡೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವು ಕಡೆ ನಿಜ ನಾಗರನಿಗೇ ಹಾಲು ಎರೆಯಲಾಗುತ್ತಿದೆ. ಮದುವೆಯಾಗಿ ಹೋದ ಮಗಳು ಮನೆಗೆ ಬರುವ ಹಬ್ಬವಾಗಿ, ಒಂದಿಡೀ ಕುಟಂಬ ಒಂದೇ ಕಡೆ ನಾಗರಪಂಚಮಿ (Nagara Panchami) ಆಚರಿಸುವ ಬಾಂಧವ್ಯವಾಗಿ ಎಲ್ಲೆಡೆ ಹಬ್ಬದ ಆಚರಣೆ ನಡೆದಿದೆ. ಈ ನಡುವೆ ಉಡುಪಿ ಜಿಲ್ಲೆಯ (Udupi district) ಕಾಪುವಿನ ಮನೆಯೊಂದರಲ್ಲಿ ನಿಜ ನಾಗರನಿಗೆ ಪ್ರೀತಿಯ ಪೂಜೆ (Pooja to real Cobras) ನಡೆದಿದೆ, ಜತೆಗೆ ಹಾವುಗಳು ಕೂಡಾ ಯಾವುದೇ ಕಿರಿಕಿರಿ ಇಲ್ಲದೆ ಪೂಜೆಯನ್ನು ಸ್ವೀಕರಿಸಿವೆ. ಹೀಗೆ ಪೂಜೆ ಮಾಡಿದ್ದು ಒಬ್ಬ ಹಾವಿನ ಡಾಕ್ಟರ್‌!

ಕಾಪು ತಾಲೂಕು ಮಜೂರಿನಲ್ಲಿರುವ ಗೋವರ್ಧನ ಭಟ್ (Kapu Govardhan Bhat) ಮನೆಯಲ್ಲಿ ಕಾಪುವಿನಲ್ಲಿ ಜೀವಂತ ಹಾವಿಗೆ ಪೂಜೆ ನಡೆದಿದೆ. ಹಾವುಗಳಿಗೆ ಚಂದ ಚಂದದ ಹೂವುಗಳ ಮೂಲಕ ಅಲಂಕಾರ ಮಾಡಿ ಖುಷಿಪಡಿಸಿದ್ದಾರೆ. ಹಾವುಗಳನ್ನು ಹೂವಿನ ಅಲಂಕಾರದಲ್ಲಿ ಕೂರಿಸಿ ಆರತಿ ಬೆಳಗಿ ಭಕ್ತಿಯನ್ನು ಸಮರ್ಪಿಸಿದ್ದಾರೆ.

ಗೋವರ್ಧನ ಭಟ್‌ ಅವರು ಎರಡು ನಾಗರ ಹಾವುಗಳನ್ನು ಒಂದು ದೊಡ್ಡ ಕಡಾಯಿಯಲ್ಲಿ ಕೂರಿಸಿ ಜಲಾಭಿಷೇಕ ಮಾಡಿದ್ದಾರೆ. ಗೋವರ್ಧನ ಭಟ್‌ ಅವರು ಜಲಾಭಿಷೇಕ ಮಾಡಿದರೂ, ಆರತಿ ಬೆಳಗಿದರೂ ಈ ಹಾವುಗಳು ಯಾವುದೇ ರೀತಿಯಲ್ಲೂ ಪ್ರತಿಭಟಿಸದೆ ಖುಷಿ ಖುಷಿಯಾಗಿ ಪೂಜೆ ಸ್ವೀಕರಿಸಿವೆ.

ಗೋವರ್ಧನ ಭಟ್‌ರಿಗೂ ಹಾವುಗಳಿಗೂ ಅವಿನಾಭಾವ ಸಂಬಂಧ

ಗೋವರ್ಧನ ಭಟ್‌ ಅವರು ಪುರೋಹಿತರಾಗಿರುವ ಜತೆಗೇ ಕಾಪು ಭಾಗದಲ್ಲಿ ಹಾವಿನ ಡಾಕ್ಟರ್‌ ಎಂದೇ ಹೆಸರು ಪಡೆದವರು. ಕಳೆದ 20 ವರ್ಷಗಳಿಂದ ಗಾಯಾಳು ನಾಗರ ಹಾವುಗಳನ್ನು ರಕ್ಷಣೆ ಮಾಡಿ ಚಿಕಿತ್ಸೆ ಕೊಡುವ ಕೆಲಸ ಮಾಡುತ್ತಿದ್ದರು.

ಜೀವನ್ಮರಣ ಸ್ಥಿತಿಯಲ್ಲಿರುವ ನಾಗರ ಹಾವುಗಳನ್ನು ಕೂಡಾ ಚಿಕಿತ್ಸೆ ನೀಡಿ ಬದುಕಿಸಿದ ಕೀರ್ತಿ ಭಟ್‌ ಅವರಿಗಿದೆ. ಹೀಗೆ ಗುಣಮುಖವಾದ ಹಾವುಗಳನ್ನು ಮತ್ತೆ ಅವರು ಕಾಡಿಗೆ ಬಿಡುತ್ತಾರೆ. ಈಗ ಪೂಜೆಗೆ ಒಳಗಾದ ನಾಗರ ಹಾವುಗಳು ಕೂಡಾ ಗಾಯಗೊಂಡು ಭಟ್‌ ಅವರ ಮನೆಯಲ್ಲಿ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡವುಗಳು.

ಪೂಜೆಯ ಬಳಿಕ ಕಾಡಿಗೆ ಹೊರಟ ನಾಗರ ಹಾವುಗಳು

ಭಟ್‌ ಅವರ ಮನೆಯಲ್ಲೇ ಹಲವು ದಿನಗಳಿಂದ ಇದ್ದು ಅವರ ಚಿಕಿತ್ಸೆಯಿಂದ ಗುಣಮುಖವಾಗಿರುವುದರಿಂದ ಇವುಗಳಿಗೆ ಯಾವುದೇ ರೀತಿಯ ಹೆದರಿಕೆ ಇಲ್ಲ. ನೀರು ಹಾಕಿದರೂ ಖುಷಿಯಿಂದ ಮೈಯೊಡ್ಡಿವೆ. ಆರತಿ ಬೆಳಗಿದರೂ ಅವು ಅಲುಗಾಡದೆ ನಿಂತಿವೆ.

ಗೋವರ್ಧನ್‌ ಭಟ್‌ ಮತ್ತು ಅವರ ಸಹಾಯಕರು ಕೂಡಾ ಯಾವುದೇ ಭಯವಿಲ್ಲದೆ ಎದುರಲ್ಲೇ ಹಾವನ್ನು ಇಟ್ಟುಕೊಂಡು ಪೂಜೆ ಮಾಡಿದ್ದು ಕಂಡುಬಂತು. ಹೀಗೆ ಪೂಜೆ ಮಾಡಿದ ಹಾವುಗಳನ್ನು ಗೋವರ್ಧನ ಭಟ್‌ ಅವರು ಇನ್ನು ಕಾಡಿಗೆ ಬಿಡಲಿದ್ದಾರೆ.

ಮೈಸೂರಿನಲ್ಲೂ ನಾಗರಪಂಚಮಿ ಸಂಭ್ರಮ

ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬವಾಗಿರುವ ನಾಗರಪಂಚಮಿಯನ್ನು ಮೈಸೂರಿನಲ್ಲೂ ಶ್ರದ್ದಾ ಭಕ್ತಿಗಳೊಂದಿಗೆ ಆಚರಿಸಲಾಗಿದೆ. ದೇಗುಲಗಳ ಅಶ್ವತ್ಥ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿರುವ ನಾಗರಕಲ್ಲುಗಳಿಗೆ ಹಾಲೆರೆದು ಪೂಜೆ ಸಲ್ಲಿಸಲಾಗುತ್ತಿದೆ ಮತ್ತೆ ಕೆಲವೆಡೆ ಹುತ್ತಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದ್ದಾರೆ ಜನರು.

ಇದನ್ನೂ ಓದಿ : Nag Panchami 2023: ನಾಗರ ಪಂಚಮಿ ದಿನ ಜೀವಂತ ಹಾವಿಗೆ ಹಾಲು ಕುಡಿಸಬಹುದೆ?

Exit mobile version