Site icon Vistara News

Nagara Panchami 2023: ಸಾಲು ಸಾಲು ಹಬ್ಬಗಳ ಜೊತೆಗೆ ಬಂದ ʻನಾಡಿಗೆ ದೊಡ್ಡʼ ನಾಗರ ಪಂಚಮಿ!

Nagara Panchami 2023

ನಾಗರ ಪಂಚಮಿ ನಾಡಿಗೆ ದೊಡ್ಡದು ಎಂಬ ಹಾಡಿನಂತೆ ಹಿಂದೂಗಳ ದೊಡ್ಡ ಹಬ್ಬಗಳಲ್ಲಿ (hindu festivals) ಒಂದಾದ ನಾಗರ ಪಂಚಮಿ (Nagara Panchami 2023) ಬಂದಿದೆ. ಕರ್ನಾಟಕ ಸೇರಿದಂತೆ ದೇಶದ ಉದ್ದಗಲಕ್ಕೂ ನಾಗದೇವರನ್ನು ಈ ಹಬ್ಬದ ದಿನದಂದು ವಿಶೇಷವಾಗಿ ಪೂಜಿಸುವ ಸಂಪ್ರದಾಯ ಇದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯ ದಿನವನ್ನೇ ನಾಗರ ಪಂಚಮಿಯನ್ನಾಗಿ ಆಚರಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ (Shravana masa 2023) ನಾಗರ ಪಂಚಮಿ ಬಂತೆಂದರೆ ಸಾಲು ಸಾಲು ಹಬ್ಬಗಳು (shravana masa festivals) ಆರಂಭವಾಗುತ್ತದೆ. ವರಮಹಾಲಕ್ಷ್ಮಿ ಹಬ್ಬ, ಓಣಂ, ಕೃಷ್ಣ ಜನ್ಮಾಷ್ಠಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ, ಹೀಗೆ ಒಂದೇ ಎರಡೇ, ಒಂದಾದ ಮೇಲೊಂದು ಹಬ್ಬಗಳ ಸಂಭ್ರಮ ಇನ್ನು ಹಿಂದೂಗಳ ಪಾಲಿಗೆ!

ಹಿಂದೂಗಳ ನಂಬಿಕೆಯಂತೆ, ಪುರಾಣಗಳಲ್ಲಿರುವ ಉಲ್ಲೇಖದಂತೆ ಭೂಮಿಯನ್ನು ತನ್ನ ಹೆಡೆಯಲ್ಲಿ ಧರಿಸಿರುವವನೇ ಆದಿಶೇಷ. ಹಾಗಾಗಿ ನಾಗನೆಂದರೆ ಉತ್ತಮ ಫಲಗಳನ್ನು ನೀಡುವ ದೇವರು ಎಂಬ ನಂಬಿಕೆ ಈ ನೆಲದ್ದು. ಸಂತಾನ ಪ್ರಾಪ್ತಿಗಾಗಿಯೂ ನಾಗದೇವರನ್ನು ನಂಬಿ ಬೇಡುವ ಪದ್ಧತಿ ತಲೆತಲಾಂತರಗಳಿಂದ ಬಂದಿದೆ. ನಾಗರ ಪಂಚಮಿಯ ಈ ದಿನ ಶೇಷನಾಗ ಹಾಗೂ ಮಹಾವಿಷ್ಣುವನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ. ನಾಗಬನ, ನಾಗನ ಕಲ್ಲು ಅಥವಾ ನಾಗದೇವರ ಮೂರ್ತಿಯಿರುವ ಜಾಗಗಳಿಗೆ ಹಿಂದೂಗಳು ಹೋಗಿ ಹಾಲೆರೆದು, ಕಲ್ಲಿಗೆ ಅಭಿಷೇಕ ಮಾಡಿ ಅರಿಶಿನ ಬಳಿದು ಪೂಜೆ ಮಾಡಿ ಅರಳು, ಹಾಲನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ನವನಾಗಗಳ ಆಕೃತಿಯನ್ನು ಮಣೆಯ ಮೇಲೆ ಅರಿಶಿನದಿಂದ ಬರೆದು ಪೂಜೆ ಮಾಡುವ ಪದ್ಧತಿಯೂ ಇದೆ. ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ತೆರಳಿ ನಾಗನಿಗೆ ವಿಶೇಷ ಪೂಜೆ, ನಾಗದೋಷಗಳ ನಿವಾರಣೆಯನ್ನು ಮಾಡಿ ನಾಗದೇವರ ಕೃಪೆಗೆ ಪಾತ್ರರಾಗುವ ಆಚರಣೆಗಳನ್ನೂ ಜನರು ಮಾಡುತ್ತಾರೆ. ದಕ್ಷಿಣ ಕನ್ನಡ, ಮಲೆನಾಡು ಕರಾವಳಿಯ ಭಾಗಗಳಲ್ಲಿ ನಾಗಬನಗಳಿದ್ದು, ಅಲ್ಲಿ ಜನರು ನಾಗ ತಂಬಿಲವನ್ನೂ ಮಾಡುವ ಸಂಪ್ರದಾಯವಿದೆ. ಪಾಯಸ, ಸಿಹಿತಿನಿಸುಗಳನ್ನು ಮಾಡಿ ನೈವೇದ್ಯ ಮಾಡಿ ಪ್ರಸಾದವಾಗಿ ಹಂಚಲಾಗುತ್ತದೆ.

ಈ ಹಬ್ಬವನ್ನು ಈ ಮಾಸದಲ್ಲಿ ಆಚರಿಸುವುದಕ್ಕೂ ಅದರದ್ದೇ ಆದ ವೈಶಿಷ್ಠ್ಯವಿದೆ. ಹಲವಾರು ಕಥೆಗಳು ನಾಗರ ಪಂಚಮಿಯ ದಿನಕ್ಕೆ ಥಳುಕು ಹಾಕಿಕೊಂಡಿವೆ. ಅಭಿಮನ್ಯುವಿನ ಮಗ ಅಂದರೆ ಅರ್ಜುನನ ಮೊಮ್ಮಗ ಪರೀಕ್ಷಿತನು ಒಂದು ದಿನ ಕಾಡಿನಲ್ಲಿ ಶಮಿಕರ ಆಶ್ರಮಕ್ಕೆ ಬಂದಾಗ ಶಮಿಕರು ಆಳವಾದ ಧ್ಯಾನದಲ್ಲಿದ್ದರಂತೆ. ರಾಜ ತನಗೆ ಬಾಯಾರಿಕೆಯಾಗಿದೆ ಎಂದು ನಾಲ್ಕು ಬಾರಿ ನೀರು ಕೇಳಿದರೂ ಧ್ಯಾನದಲ್ಲಿದ್ದ ಋಷಿಗೆ ಕೇಳಿಸುವುದಿಲ್ಲ. ಇದರಿಂದ ಕೋಪಗೊಂಡ ರಾಜನು ಶಮಿಕರ ಕೊರಳಿಗೆ ಅಲ್ಲೇ ಸತ್ತು ಬಿದ್ದ ಹಾವೊಂದನ್ನು ನೇತು ಹಾಕಿ ಹೋಗುತ್ತಾನೆ. ಹೊರಗೆ ಹೋಗಿ ಮರಳಿ ಬಂದಾಗ ತನ್ನ ತಂದೆಯ ಕೊರಳಲ್ಲಿದ್ದ ಸತ್ತ ಹಾವನ್ನು ನೋಡಿ ಋಷಿಪುತ್ರ ಶೃಂಗಿ ಕೋಪೋದ್ರಿಕ್ತಗೊಂಡು, ʻಹೀಗೆ ಅವಮಾನ ಮಾಡಿದಾತ ಏಳು ದಿನಗಳೊಳಗಾಗಿ ಹಾವು ಕಚ್ಚಿ ಸಾಯಲಿʼ ಎಂದು ಶಾಪ ಕೊಡುತ್ತಾನೆ. ಶಾಪದಿಂದ ಪಾರಾಗಲು ರಾಜ ಅರಮನೆಯೊಳಗೆ ಯಾರೂ ಪ್ರವೇಶಿಸಲು ಸಾಧ್ಯವಾಗದಷ್ಟು ಬಂದೋಬಸ್ತ್‌ ಮಾಡಿದರೂ ಹಣ್ಣಿನ ಬುಟ್ಟಿಯೊಳಗೆ ಹುಳದ ರೂಪದಲ್ಲಿ ಪ್ರವೇಶಿಸುವ ತಕ್ಷಕನು ರಾಜನಿಗೆ ಕಚ್ಚಿ, ಪರೀಕ್ಷಿತನು ಮರಣ ಹೊಂದುತ್ತಾನೆ. ತನ್ನ ತಂದೆ ಪರೀಕ್ಷಿತ ಸಾವಿಗೆ ಕಾರಣವಾದ ಸರ್ಪ ಸಂಕುಲವನ್ನೆಲ್ಲ ನಾಶ ಮಾಡುವುದಾಗಿ ಪ್ರತಿಜ್ಞೆ ತೊಟ್ಟ ಜನಮೇಜಯ ರಾಜ ಸರ್ಪಯಜ್ಞ ಆರಂಭಿಸುತ್ತಾನೆ. ಆದರೆ ಹಿರಿಯರಿಂದ ಪ್ರಾಣಿ ಹಿಂಸೆ ಮಹಾ ಪಾಪ ಎಂದು ಬುದ್ಧಿವಾದ ಕೇಳಿದ ಮೇಳೆ, ತನ್ನ ಮನಸ್ಸು ಬದಲಾಯಿಸಿ ಸರ್ಪಯಾಗವನ್ನು ಜನಮೇಜಯ ನಿಲ್ಲಿಸಲು ನಿಶ್ಚಯಿಸುತ್ತಾನೆ. ಹೀಗೆ ಸರ್ಪಯಾಗವನ್ನು ನಿಲ್ಲಿಸಿದ ದಿನ ಶ್ರಾವಣ ಶುಕ್ಲ ಪಂಚಮಿ ಎಂಬ ನಂಬಿಕೆಯಿದೆ. ಅದೇ ದಿನವೇ ನಾಗರ ಪಂಚಮಿಯಾಯಿತು ಎಂಬ ಪ್ರತೀತಿಯೂ ಇದೆ.

ಪುರಾಣದ ಹಲವು ಕಥೆಗಳಲ್ಲೂ, ನಾಗರ ಪಂಚಮಿಗೆ ವಿಶೇಷ ಮಹತ್ವವಿದೆ. ಶ್ರೀಕೃಷ್ಣನು ಯಮುನಾ ನದಿಯಲ್ಲಿ ವಾಸವಿದ್ದ ಕಾಳಿಂಗ (ಕಾಲಿಯಾ) ಎಂಬ ವಿಷಸರ್ಪವನ್ನು ಮೆಟ್ಟಿ ನಿಂತು ಜನರಿಗೆ ಅಭಯ ನೀಡಿದ ದಿನವೂ ಇದೇ ಅಂತೆ. ಕಾಳಿಂಗ ಮರ್ದನ ಮಾಡಿದ ಶ್ರೀಕೃಷ್ಣನ ರೂಪವನ್ನು ನೋಡಿದ ಸರ್ಪವು ಜನರಿಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ವಚನ ನೀಡಿದ ದಿನ ಶ್ರಾವಣ ಶುಕ್ಲ ಪಂಚಮಿ ಎಂದು ಪುರಾಣ ಹೇಳುತ್ತದೆ. ಇದಷ್ಟೇ ಅಲ್ಲ, ಸತ್ಯೇಶ್ವರಿ ಎಂಬಾಕೆಯೊಬ್ಬಳು ತನ್ನ ಮೃತನಾದ ಸಹೋದರನನ್ನು ನೆನೆದು ನಾಗರ ಪಂಚಮಿಯ ದಿನ ಉಪವಾಸವನ್ನು ಮಾಡಿದ್ದರಿಂದ, ನಾಗರ ಪಂಚಮಿಯನ್ನು ಇಂದಿಗೂ ಭ್ರಾತೃತ್ವದ ಸಂಕೇತವಾಗಿ ಸಹೋದರನ ಒಳ್ಳೆಯದಕ್ಕಾಗಿ ಸಹೋದರಿಯರು ಉಪವಾಸ ಮಾಡಿ ಬೇಡಿಕೊಳ್ಳುವ ಸಂಪ್ರದಾಯವೂ ಇದೆ.

nagara panchami and other monsoon festivals

ಇಲ್ಲಿಗೇ ಮುಗಿಯಲಿಲ್ಲ. ಹೇಳಿ ಕೇಳಿ, ಶ್ರಾವಣ ಮಾಸವೆಂದರೆ ಮಳೆಗಾಲ. ಮಳೆಗಾಲದಲ್ಲಿ ಹಾವಿನ ಭಯ ಇದ್ದದ್ದೇ. ರೈತಾಪಿ ವರ್ಗದ ಬೆಳೆಗಳನ್ನು ಹಾಳು ಮಾಡುವ ಹುಳಹುಪ್ಪಟೆ, ಕೀಟ, ಇಲಿ ಇತ್ಯಾದಿಗಳನ್ನು ತಿನ್ನುವ ಹಾವುಗಳು ರೈತನ ಮಿತ್ರನಂತೆ. ಅಷ್ಟೇ ಅಲ್ಲ, ನಮ್ಮೆಲ್ಲರನ್ನು ಚೆನ್ನಾಗಿಟ್ಟಿರು ಎಂದು ಪ್ರಕೃತಿಯ ಭಾಗವಾಗಿರುವ ಹಾವಿಗೆ ನಮಿಸುವ, ಹಾವಿನಿಂದ ರಕ್ಷಣೆಯನ್ನು ಬೇಡುವ ಹಬ್ಬವಿದು. ಆದರೆ, ನಾಗರ ಪಂಚಮಿಯ ಸಂದರ್ಭ ಜನರು, ತಪ್ಪು ಕಲ್ಪನೆಗಳಿಂದ ಜೀವಂತ ಹಾವಿಗೂ ಹಾಲೆರೆದು, ಅರಿಶಿನ ಹಚ್ಚಿದ್ದರಿಂದ ಹಾವು ಮರಣ ಹೊಂದಿದಂತಹ ಘಟನೆಗಳೂ ಈ ಹಿಂದೆ ನಡೆದಿವೆ. ಆದ್ದರಿಂದ ಆಚರಣೆಗಳ ನೆಪದಲ್ಲಿ, ಹಾವುಗಳ ಪ್ರಾಣಕ್ಕೆ ಕುತ್ತು ಬರುವ ಕೃತ್ಯಗಳನ್ನು ಮಾಡದಿರಿ. ಹಾವುಗಳು ನಮ್ಮ ಜೀವ ಸಂಕುಲದ ಸರಪಳಿಯ ಅವಿಭಾಜ್ಯ ಅಂಗ ಎಂಬುದನ್ನೂ ನೆನಪಿಟ್ಟು ಮನಸಾರೆ, ಭಕ್ತಿ ಪ್ರೀತಿಯಿಂದ ಅವುಗಳ ಒಳಿತಿಗಾಗಿ ಪ್ರಾರ್ಥಿಸಿ!

ಇದನ್ನೂ ಓದಿ: Nag Panchami 2023: ನಾಗರ ಪಂಚಮಿ ದಿನ ಜೀವಂತ ಹಾವಿಗೆ ಹಾಲು ಕುಡಿಸಬಹುದೆ?

Exit mobile version