ನವರಾತ್ರಿಯ (Navaratri 2023) ಆಚರಣೆಯಲ್ಲಿ ಕರ್ನಾಟಕದ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಪದ್ಧತಿಯೆಂದರೆ ಗೊಂಬೆ ಕೂರಿಸುವುದು. ಪಟ್ಟದ ಗೊಂಬೆಗಳಿಂದ ಆರಂಭವಾಗಿ ಕಣ್ಮನ ಸೆಳೆಯುವಂಥ ಗೊಂಬೆ ಅಲಂಕಾರ ಮಾಡುವುದರ ಜೊತೆಗೆ, ಗೊಂಬೆ ನೋಡುವುದಕ್ಕೆ ಬಂದವರಿಗೆಲ್ಲಾ ಗೊಂಬೆ ತಿಂಡಿ ನೀಡುವ ಪದ್ಧತಿಯೂ ಇದೆ. ನವರಾತ್ರಿಯ ಗೊಂಬೆಗಳನ್ನು ನೋಡುವುದಕ್ಕೆಂದೇ ಗೊಂಬೆಗಳಂತೆ ಅಲಂಕರಿಸಿಕೊಂಡ ಮಕ್ಕಳು ಮನೆಮನೆಯ ಬಾಗಿಲು ತಟ್ಟುವ ಸಂಪ್ರದಾಯ ಈಗೆಲ್ಲ ಮರೆಯಾಗಿದೆ. ಆದರೂ, ಗೊಂಬೆ ದರ್ಶನಕ್ಕೆಂದು ಭೇಟಿ ನೀಡುವ ಬಂಧು-ಮಿತ್ರರಿಗೆ ಗೊಂಬೆ ತಿಂಡಿ ಕೊಡುವ ಪದ್ಧತಿ ಪೂರ್ಣ ಮರೆಯಾಗಿಲ್ಲ. ನವರಾತ್ರಿಯ ಒಂಬತ್ತು ದಿನಗಳು ವ್ರತ, ಉಪವಾಸ ಮಾಡುವ ಸಂಪ್ರದಾಯವೂ ಇದೆ. ಹೀಗೆ ಉಪವಾಸದಲ್ಲಿರುವವರು ಈರುಳ್ಳಿ, ಬೆಳ್ಳುಳ್ಳಿ ರಹಿತವಾದ ಅಡುಗೆ ಮಾಡುವುದು ಸಾಮಾನ್ಯ. ಹೀಗೆ ನವರಾತ್ರಿಯ ಆಚರಣೆಗೆ ಪೂರಕವಾಗುವಂಥ, ಗೊಂಬೆ ತಿಂಡಿಗಳಿಗೆ ಒದಗುವಂಥ, ಉಪವಾಸಕ್ಕೂ ಸಲ್ಲುವಂತೆ, ಒಂಬತ್ತು ದಿನಕ್ಕೆ ಒಂಬತ್ತು ಸಾಂಪ್ರದಾಯಿಕ ಪಾಕಗಳು ಇಲ್ಲಿವೆ.
ತೆಂಗಿನಕಾಯಿ ಬರ್ಫಿ
ಹೆಚ್ಚು ಹೊತ್ತು ಬೇಡದೆ, ದಿಢೀರನೆ ಮಾಡಲಾಗುವ ಸಿಹಿ ಖಾದ್ಯವಿದು. ಇದಕ್ಕೆ ಬೇಕಾಗುವ ವಸ್ತುಗಳು: ತೆಂಗಿನಕಾಯಿ ತುರಿ- 3 ಕಪ್, ಸಕ್ಕರೆ- 3 ಕಪ್, ಗೋಧಿ ಹಿಟ್ಟು- 2 ಚಮಚ, ತುಪ್ಪ- ಸ್ವಲ್ಪ, ಗೋಡಂಬಿ ಮತ್ತು ಏಲಕ್ಕಿ- ಸ್ವಲ್ಪ
ವಿಧಾನ: ಸಕ್ಕರೆ ಮುಳುಗುವಷ್ಟು ನೀರು ಹಾಕಿ ಪಾಕಕ್ಕಿಡಿ. ಮೂರೆಳೆ ಪಾಕ ಬರುತ್ತಿದ್ದಂತೆಯೇ ಇದಕ್ಕೆ ತೆಂಗಿನ ತುರಿ ಸೇರಿಸಿ, ಈ ಮಿಶ್ರಣ ಗಟ್ಟಿಯಾಗುತ್ತಿದ್ದಂತೆ ತುಪ್ಪ ಸೇರಿಸಿ ಮಗುಚುತ್ತಾ ಬನ್ನಿ, ಮಿಶ್ರಣ ಗಟ್ಟಿಯಾಗದಿದ್ದರೆ 2 ಚಮಚ ಗೋದಿಹಿಟ್ಟು ಸೇರಿಸಿ ಮಗುಚಿ. ಮಿಶ್ರಣ ತಳ ಬಿಡುವ ಮುನ್ನ ಗೋಡಂಬಿ, ಏಲಕ್ಕಿ ಪುಡಿ ಸೇರಿಸಿಕೊಳ್ಳಿ. ಇದಕ್ಕೆ ತುಪ್ಪ ಸವರಿದ ತಟ್ಟೆಗೆ ಹಾಕಿಕೊಂಡು ಮಟ್ಟ ಮಾಡಿಕೊಳ್ಳಿ. ಕೊಂಚ ಗಟ್ಟಿಯಾಗುತ್ತಿದ್ದಂತೆ ಬೇಕಾದ ಆಕಾರಕ್ಕೆ ಕತ್ತರಿಸಿ.
ಡ್ರೈ ಫ್ರೂಟ್ಸ್ ಲಡ್ಡು
ಇದನ್ನು ಮಾಡಿ ಡಬ್ಬಿ ತುಂಬಿಟ್ಟುಕೊಂಡರೆ, ನವರಾತ್ರಿಯ ಗೊಂಬೆ ತಿಂಡಿ ಮತ್ತು ಉಪವಾಸಕ್ಕೂ ಸಲ್ಲುವಂಥ ಆರೋಗ್ಯಕರ ತಿನಿಸಿದು. ಬೇಕಾಗುವ ವಸ್ತುಗಳು: ಗೋಡಂಬಿ- 50 ಗ್ರಾಂ, ಖರ್ಜೂರ- 50 ಗ್ರಾಂ, ಒಣದ್ರಾಕ್ಷಿ- 50 ಗ್ರಾಂ, ಪಿಸ್ತಾ- 50 ಗ್ರಾಂ, ಗಸಗಸೆ- 3 ಚಮಚ, ಏಲಕ್ಕಿ- ಸ್ವಲ್ಪ, ಬೆಲ್ಲ- 200 ಗ್ರಾಂ, ಒಣಕೊಬ್ಬರಿ- ಕಾಲು ಗಿಟುಕು
ವಿಧಾನ: ಎಲ್ಲಾ ಬೀಜ ಮತ್ತು ಒಣಹಣ್ಣುಗಳನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಎಲ್ಲವನ್ನೂ ಪ್ರತ್ಯೇಕವಾಗಿ ಬಿಸಿ ಮಾಡಿಕೊಳ್ಳಿ. ಬೆಲ್ಲವನ್ನು ಹದ ಪಾಕ ಮಾಡಿಕೊಳ್ಳಿ; ತೀರ ಗಟ್ಟಿಯೂ ಬೇಡ, ಎಳೆಪಾಕವೂ ಬೇಡ. ಪಾಕ ಬಂದ ನಂತರ ಹುರಿದಿಟ್ಟ ಎಲ್ಲಾ ವಸ್ತುಗಳನ್ನು ಒಟ್ಟಿಗೆ ಸೇರಿಸಿ ಮಗುಚಿಕೊಳ್ಳಿ. ಈ ಮಿಶ್ರಣ ಬೆಚ್ಚಗಿದ್ದಾಗಲೇ ಉಂಡೆ ಮಾಡಿ.
ಗಸಗಸೆ ಪಾಯಸ
ಹೊಟ್ಟೆಯನ್ನು ತಂಪಾಗಿಸಿ, ಸೊಂಪಾಗಿ ನಿದ್ದೆ ಬರಿಸುವಂಥ ಗಸಗಸೆ ಪಾಯಸವನ್ನು ಮಾಡುವುದು ಕಷ್ಟವಲ್ಲ. ಬೇಕಾಗುವ ವಸ್ತುಗಳು: ಗಸಗಸೆ- 1 ಕಪ್, ಅಕ್ಕಿ- 1 ಚಮಚ, ತೆಂಗಿನ ಕಾಯಿ- 1, ಏಲಕ್ಕಿ- ಸ್ವಲ್ಪ, ಬೆಲ್ಲ- 2 ಕಪ್
ವಿಧಾನ: ಗಸೆಗಸೆಯನ್ನು ಚೆನ್ನಾಗಿ ಹುರಿದುಕೊಳ್ಳಿ. ಅಕ್ಕಿಯನ್ನು ಎರಡು ತಾಸು ನೆನೆಸಿಡಿ. ಅಚ್ಚು ಬೆಲ್ಲವಾದರೆ ಪುಡಿ ಮಾಡಿಕೊಳ್ಳಿ. ತೆಂಗಿನ ಕಾಯಿ ತುರಿದು, ಮಿಕ್ಸಿಗೆ ಹಾಕಿ, ಅದರ ಹಾಲು ಹಿಂಡಿ ಇರಿಸಿಕೊಳ್ಳಿ. ಈಗ ಹುರಿದ ಗಸಗಸೆ, ಏಲಕ್ಕಿ, ನೆನೆಸಿ ಅಕ್ಕಿಯನ್ನು ಕಾಯಿ ಹಾಲಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಅಗತ್ಯವಿದ್ದರೆ ನೀರು ಸೇರಿಸಿ. ರುಬ್ಬಿದ ಈ ಮಿಶ್ರಣವನ್ನು ಬಾಣಲೆಗೆ ಹಾಕಿ ಕುದಿಸಿ. ಕುದಿ ಬರುವ ಮುನ್ನವೇ ಬೆಲ್ಲ ಸೇರಿಸಿ. ಬೆಲ್ಲ ಸೇರಿಸಿದ ಮೇಲೆ ಮಿಶ್ರಣ ಕುದಿಯಲಿ. ಇದೀಗ ಪಾಯಸದಂಥ ಖಾದ್ಯ ಸಿದ್ಧವಾಗುತ್ತದೆ. ಗಸಗಸೆಯನ್ನು ಖೀರಿನಂತೆ ಕುಡಿಯುವುದು ಇಷ್ಟವೆಂದರೆ ಕುದಿಯುವಾಗಲೇ ಅಗತ್ಯವಿದ್ದಷ್ಟು ಹಾಲು ಸೇರಿಸಿ.
ಬೆಲ್ಲದನ್ನ
ದಸರೆಯ ಅತ್ಯಂತ ಸಾಂಪ್ರದಾಯಿಕ ಸಿಹಿಯಿದು. ಇದನ್ನು ಸಕ್ಕರೆಯಲ್ಲಿಯೂ ತಯಾರಿಸಬಹುದಾದರೂ ಬೆಲ್ಲದ್ದೇ ರುಚಿ ಮತ್ತು ಆರೋಗ್ಯಕ್ಕೆ ಶ್ರೇಷ್ಠ. ಬೇಕಾಗುವ ವಸ್ತುಗಳು: ಅಕ್ಕಿ- 1/2 ಕಪ್, ಬೆಲ್ಲ- 1/2 ಕಪ್, ತೆಂಗಿನಕಾಯಿ ತುರಿ- 1/2 ಕಪ್, ಉಪ್ಪು- ಚಿಟಿಕೆ, ದ್ರಾಕ್ಷಿ, ಗೋಡಂಬಿ, ತುಪ್ಪ, ಏಲಕ್ಕಿ- ಸ್ವಲ್ಪ. ಬೆಲ್ಲದ ಪಾಕಕ್ಕೆ ಸ್ವಲ್ಪ ನೀರು.
ವಿಧಾನ: ತೀರಾ ಮೆತ್ತಗೂ ಅಲ್ಲದ, ಅಗುಳಾಗೂ ಇರದಂತೆ ಅನ್ನ ಮಾಡಿಟ್ಟುಕೊಳ್ಳಿ. ಬೆಲ್ಲವನ್ನು ಪಾಕಕ್ಕಿಡಿ. ಎಳೆಪಾಕ ಬರುತ್ತಿದ್ದಂತೆ ಇದಕ್ಕೆ ಅನ್ನವನ್ನು ಸೇರಿಸಿ. ಕೆಲವು ಕ್ಷಣಗಳ ನಂತರ ತೆಂಗಿನ ತುರಿಯನ್ನು ಸೇರಿಸಿ, ಈ ಮಿಶ್ರಣವನ್ನು ಮಗುಚುತ್ತಾ ಇರಿ. ತಳ ಹಿಡಿಯದಂತೆ ತುಪ್ಪ ಸೇರಿಸಿಕೊಳ್ಳಿ. ಪಾಕ ಹದವಾಗುವುದರೊಳಗೆ ಏಲಕ್ಕಿ ಪುಡಿ ಸೇರಿಸಿ. ಕೊನೆಯಲ್ಲಿ ಹುರಿದಿಟ್ಟುಕೊಂಡ ದ್ರಾಕ್ಷಿ, ಗೋಡಂಬಿ ಸೇರಿಸಿ.
ಕಾಯಿ ಹೋಳಿಗೆ/ ಒಬ್ಬಟ್ಟು
ಕಣಕಕ್ಕೆ ಬೇಕಾಗುವ ವಸ್ತುಗಳು: ತೌಡಿಲ್ಲದ ಗೋದಿಹಿಟ್ಟು ಅಥವಾ ಮೈದಾ- 2 ಕಪ್, ಎಣ್ಣೆ- 6 ಚಮಚ, ಅರಿಶಿನ- 1/2 ಚಮಚ, ನೀರು ಮತ್ತು ಉಪ್ಪು. ಹೂರಣಕ್ಕೆ ಬೇಕಾಗುವ ವಸ್ತುಗಳು: ತೆಂಗಿನ ಕಾಯಿ ತುರಿ- 2 ಕಪ್, ಬೆಲ್ಲದ ಪುಡಿ- 2 ಕಪ್, ಏಲಕ್ಕಿ – 20.
ವಿಧಾನ: ಮೊದಲಿಗೆ ಕಣಕ ಮಾಡಿಕೊಳ್ಳೋಣ. ಎಲ್ಲಾ ವಸ್ತುಗಳನ್ನು ಸೇರಿಸಿ ಚಪಾತಿ ಹಿಟ್ಟಿಗಿಂತ ಮೃದುವಾಗಿ ಕಲೆಸಿಕೊಳ್ಳಿ. ಮೇಲಿನಿಂದ ನಾಲ್ಕಾರು ಚಮಚ ಎಣ್ಣೆ ಹಾಕಿ, ಚೆನ್ನಾಗಿ ನಾದಿ. ಇದನ್ನು ಮುಚ್ಚಿ, ಬದಿಗಿರಿಸಿ. ಈಗ ಹೂರಣ ಸಿದ್ಧಪಡಿಸೋಣ. ತೆಂಗಿನತುರಿ, ಬೆಲ್ಲ ಮತ್ತು ಏಲಕ್ಕಿಯನ್ನು ಮಿಕ್ಸಿ ಅಥವಾ ಗ್ರೈಂಡರ್ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅಗತ್ಯವಿದ್ದಷ್ಟೇ ನೀರು ಹಾಕಿ. ರುಬ್ಬಿದ ಮಿಶ್ರಣವನ್ನು ಬಾಣಲೆಗೆ ಸ್ವಲ್ಪ ಕಾಯಿಸಿ, ನೀರಿನಂಶವೆಲ್ಲಾ ಹೋಗಿ, ಉಂಡೆ ಮಾಡಲು ಬರುವಷ್ಟು ಕಣಕ ಗಟ್ಟಿಯಾಗಲಿ. ತೀರಾ ಕಾಯಿಸಿದರೆ ಪಾಕ ಹೆಚ್ಚಾದೀತು, ಎಚ್ಚರ. ಮಿಶ್ರಣ ಬೆಚ್ಚಗಿರುವಾಗಲೇ ಬೇಕಾದಷ್ಟು ದೊಡ್ಡ ಉಂಡೆ ಮಾಡಿಕೊಳ್ಳಿ. ಕಣಕವನ್ನೂ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಕಣಕವನ್ನು ಅಂಗೈಯಲ್ಲೇ ಅಗಲವಾಗಿ ತಟ್ಟಿಕೊಂಡು, ನಡುವೆ ಹೂರಣದ ಉಂಡೆಯನ್ನಿಟ್ಟು ಕಣಕದೊಳಗೆ ತುಂಬಿಸಿ, ಹಿಟ್ಟು ಹಾಕಿ ಲಟಿಸಿ. ಹೊಂಬಣ್ಣ ಬರುವವರೆಗೆ ತವೆಯಲ್ಲಿ ಬೇಯಿಸಿ. ತಾಜಾ ತುಪ್ಪದೊಂದಿಗೆ ಬಡಿಸಿ.
ಅನಾನಸ್ ಪಾಯಸ
ಹಬ್ಬವೆಂದ ಮೇಲೆ ತರಹೇವಾರಿ ಪಾಯಸಗಳನ್ನು ಮಾಡುವುದು ಸಾಮಾನ್ಯ. ಬಾಯಿ ಚಪ್ಪರಿಸುವಂಥ ಮತ್ತೊಂದು ಸಹಿ ಖಾದ್ಯ ಇಲ್ಲಿದೆ. ಬೇಕಾಗುವ ವಸ್ತುಗಳು: ಅನಾನಸ್ ಹಣ್ಣು- 1 ಕಪ್ ಸಣ್ಣಗೆ ಹೆಚ್ಚಿದ್ದು, ಅಕ್ಕಿ ಹಿಟ್ಟು- 2 ಚಮಚ, ತೆಂಗಿನಕಾಯಿ ಹಾಲು- 2 ಕಪ್, ಬೆಲ್ಲ- 1 ಕಪ್, ತುಪ್ಪ- ಸ್ವಲ್ಪ, ಚಿಟಿಕೆ ಉಪ್ಪು, ದ್ರಾಕ್ಷಿ, ಗೋಡಂಬಿ- ಸ್ವಲ್ಪ
ವಿಧಾನ: ಬೆಲ್ಲವನ್ನು ನೀರಲ್ಲಿ ಕರಗಿಸಿಟ್ಟುಕೊಳ್ಳಿ. ಅಕ್ಕಿಹಿಟ್ಟನ್ನು ಸ್ವಲ್ಪ ನೀರಲ್ಲಿ ಕಲಕಿ ಪೇಸ್ಟ್ ಮಾಡಿಕೊಳ್ಳಿ. ಅನಾನಸ್ ಹೋಳುಗಳನ್ನು ತುಪ್ಪದಲ್ಲಿ ಬಾಡಿಸಿಕೊಳ್ಳಿ. ಇದಕ್ಕೆ ಬೆಲ್ಲದ ನೀರನ್ನು ಸೇರಿಸಿ ಕುದಿಸಿ. ಅನಾನಸ್ ಹೋಳುಗಳು ಪೂರ್ಣ ಮೆತ್ತಗಾಗಲಿ. ಇದಕ್ಕೆ ತೆಂಗಿನ ಹಾಲು ಮತ್ತು ಅಕ್ಕಿ ಹಿಟ್ಟಿನ ಮಿಶ್ರಣ ಸೇರಿಸಿ ಕುದಿಸಿ. ಇದು ಪಾಯಸದ ಹದಕ್ಕೆ ಬರುತ್ತಿದ್ದಂತೆ, ಹುರಿದಿಟ್ಟುಕೊಂಡ ಗೋಡಂಬಿ, ದ್ರಾಕ್ಷಿಗಳನ್ನು ಸೇರಿಸಿ.
ಚಟ್ಟಂಬಡೆ
ಹಬ್ಬವೆಂದರೆ ಬರೀ ಸಿಹಿಯನ್ನೇ ತಿನ್ನಬೇಕೆಂದಿಲ್ಲ. ಬಾಯಿಗೆ ಸ್ವಲ್ಪ ಖಾರವೂ ಬೇಕಲ್ಲ. ಹಾಗಾಗಿ ಸಾಂಪ್ರದಾಯಿಕ ಚಟ್ಟಂಬಡೆ ಇಲ್ಲಿದೆ. ಬೇಕಾಗುವ ವಸ್ತುಗಳು: ಕಡಲೆ ಬೇಳೆ- 1/2 ಕಪ್, ಎಲೆಕೋಸು- 1/2 ಹೆಚ್ಚಿದ್ದು, ಹಸಿಮೆಣಸಿನಕಾಯಿ- 2, ಕರಿಬೇವಿನ ಸೊಪ್ಪು- ಸ್ವಲ್ಪ, ಕೊತ್ತಂಬರಿ ಸೊಪ್ಪು- ಸ್ವಲ್ಪ, ಇಂಗು- ದೊಡ್ಡ ಚಿಟಿಕೆ, ಸಬ್ಬಸಿಗೆ ಸೊಪ್ಪು- ಅರ್ಧ ಕಟ್ಟು, ಸಣ್ಣಗೆ ಹೆಚ್ಚಿದ್ದು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕರಿಯಲು ಎಣ್ಣೆ
ಮಾಡುವ ವಿಧಾನ: ಕಡಲೆ ಬೇಳೆಯನ್ನು 4 ತಾಸು ನೆನೆಸಿಡಿ. ನೆನೆದ ಬೇಳೆಯನ್ನು ನೀರು ಬಸಿದು ಬೇರೆ ನೀರು ಹಾಕದೆ ತರಿಯಾಗಿ ರುಬ್ಬಿಕೊಳ್ಳಿ. ಎಣ್ಣೆಯ ಹೊರತಾಗಿ ಉಳಿದೆಲ್ಲಾ ವಸ್ತುಗಳನ್ನು ಕಡಲೆಬೇಳೆಯ ಹಿಟ್ಟಿಗೆ ಹಾಕಿ ಚೆನ್ನಾಗಿ ಕೈಯಾಡಿಸಿ. ಈ ಹಿಟ್ಟನ್ನು ಸಣ್ಣ ಉಂಡೆಗಳಾಗಿ ಮಾಡಿ, ಅಂಗೈಯಲ್ಲಿ ತಟ್ಟಿ ಚಟ್ಟೆಯಾಗಿಸಿ ಕಾದ ಎಣ್ಣೆಯಲ್ಲಿ ಕೆಂಪಾಗುವವರೆಗೆ ಕರಿಯಿರಿ
ಸೀಮೆಅಕ್ಕಿಯ/ ಸಬ್ಬಕ್ಕಿ ಖಿಚಡಿ
ಉಪವಾಸದ ದಿನಗಳಲ್ಲಿ ಸೀಮೆ ಅಕ್ಕಿಯ ಬಳಕೆ ದೇಶದೆಲ್ಲೆಡೆ ವ್ಯಾಪಕವಾಗಿದೆ. ಅದನ್ನು ಕರಿದು ವಡೆ ಮಾಡುವುದಕ್ಕಿಂತಲೂ ಬೇಯಿಸಿ ಖಿಚಡಿ ಮಾಡುವುದು ಆರೋಗ್ಯಕರ ಆಯ್ಕೆ ಎನಿಸುತ್ತದೆ. ಬೇಕಾಗುವ ವಸ್ತುಗಳು: ಸೀಮೆ ಅಕ್ಕಿ- 1 ಕಪ್, ಶೇಂಗಾ- ಕಾಲು ಕಪ್ (ಹುರಿದು ತರಿಯಾಗಿ ಒಡೆದುಕೊಂಡಿದ್ದು), ತುಪ್ಪ- 3 ಚಮಚ, ಒಗ್ಗರಣೆಗೆ- ಜೀರಿಗೆ, ಸಾಸಿವೆ, ಕರಿಬೇವಿನ ಎಲೆಗಳು, ಹಸಿ ಮೆಣಸಿನ ಕಾಯಿ- 2, ರುಚಿಗೆ ಉಪ್ಪು, ಕೊತ್ತಂಬರಿ ಸೊಪ್ಪು- ಸ್ವಲ್ಪ, ನಿಂಬೆಹಣ್ಣು- 1
ವಿಧಾನ: ಸೀಮೆ ಅಕ್ಕಿಯನ್ನು ಚೆನ್ನಾಗಿ ತೊಳೆದು, ಅಕ್ಕಿಯ ಮೇಲೆ ಅರ್ಧ ಇಂಚು ನೀರು ನಿಲ್ಲುವಂತೆ ಒಂದು ತಾಸು ನೆನೆಸಿಡಿ. ಒಂದು ತಾಸಿನ ಬಳಿಕ ಸೀಮೆ ಅಕ್ಕಿಯಲ್ಲಿ ಉಳಿದಿರುವ ನೀರನ್ನು ಬಸಿದಿಡಿ. ಒಗ್ಗರಣೆಗೆ ಬಾಣಲೆ ಇಟ್ಟು ತುಪ್ಪ ಹಾಕಿ. ಒಗ್ಗರಣೆಯ ಪರಿಕರಗಳನ್ನು ಒಂದೊಂದೇ ಹಾಕಿ. ಶೇಂಗಾ ಪುಡಿಯನ್ನು ಒಗ್ಗರಣೆಗೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಸೀಮೆ ಅಕ್ಕಿಯನ್ನು ಬಾಣಲೆಗೆ ಹಾಕಿ ಸ್ವಲ್ಪ ಹೊತ್ತು ಕೈಯಾಡಿ. ಒಗ್ಗರಣೆಯೆಲ್ಲಾ ಅದಕ್ಕೆ ಸರಿಯಾಗಿ ಹಿಡಿದ ಮೇಲೆ ಕಡೆಯಲ್ಲಿ ನಿಂಬೆರಸ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕೈಯಾಡಿಸಿ.
ಇದನ್ನೂ ಓದಿ: Navaratri: ರಾಜ್ಯದ ವಿವಿಧೆಡೆ ನವರಾತ್ರಿ ಉತ್ಸವಕ್ಕೆ ಚಾಲನೆ; ದೇವಾಲಯಗಳಲ್ಲಿ ವಿಶೇಷ ಪೂಜೆ