Site icon Vistara News

Navratri Special: ಸಂಪತ್ತು ನೆಮ್ಮದಿ ಪ್ರಾಪ್ತಿಗಾಗಿ ನವರಾತ್ರಿಯ ವಿಶೇಷ ಆಚರಣೆಗಳು

durgadevi

:: ಮೇಧಾ ಪ್ರಹ್ಲಾದಾಚಾರ್ಯ ಜೋಶಿ

ಆಶ್ವಯುಜ ಮಾಸದ ನಿಯಾಮಕನು ಯಜ್ಞಾ-ಪದ್ಮನಾಭ. ಆಶ್ವಯುಜ ಅಥವಾ ಆಶ್ವಿಜಮಾಸದ ಶುಕ್ಲಪ್ರತಿಪತ್ ನಿಂದ ನವಮೀಯ ವರೆಗೂ ನವರಾತ್ರಿ ಉತ್ಸವವಿರುತ್ತದೆ. ಈ ನವರಾತ್ರಿಯ ಒಂದೊಂದು ದಿನವೂ ಒಂದೊಂದು ವಿಶೇಷ ಆಚರಣೆಗಳಿಂದ ಕೂಡಿದೆ. ಈ ಒಂಬತ್ತು ದಿನಗಳಲ್ಲಿ ವಿಶೇಷ ದೀಪಾರಾಧನೆ, ಘಟ್ಟಸ್ಥಾಪನೆ, ಶ್ರೀಶ್ರೀನಿವಾಸನ ಪೂಜೆ, ಶ್ರೀವೇದವ್ಯಾಸ ಹಾಗು ಸರಸ್ವತಿಪೂಜೆ, ದುರ್ಗಾಪೂಜೆ, ವೆಂಕಟೇಶ ಮಾಹಾತ್ಮ್ಯೆ ಪಾರಾಯಣ ಹಾಗೂ ಶ್ರವಣ, ನಿತ್ಯದಲ್ಲಿಯೂ ಸಚ್ಛಾಸ್ತ್ರದ ಪಾರಾಯಣ, ಬ್ರಾಹ್ಮಣಸುವಾಸಿನಿಯರಿಗೆ ಭೋಜನಾದಿಗಳನ್ನು ಮಾಡಿಸುವುದು ಹೀಗೆ ನವರಾತ್ರೋತ್ಸವದಲ್ಲಿ ಅನೇಕ ಪೂಜೆ ಆಚರಣೆಗಳನ್ನು ವಿಧಿಸಿದ್ದಾರೆ.

ನವರಾತ್ರಿ

ನವದಿನಗಳು ಎಂದು ಕರೆಯುವ ಬದಲು “ನವರಾತ್ರಿ” ಎಂದೇ ಕರೆಯುವದಕ್ಕೆ ವಿಶೇಷಕಾರಣವಿದೆ. ಆಶ್ವಯುಜಮಾಸದ ಶರತ್ ಋತುವಿನ ಈ ವಿಶೇಷದಿನಗಳಲ್ಲಿ ರಾತ್ರಿಯ ಸ್ವಚ್ಛವಾತಾವರಣ ಹಾಗೂ ಚಂದ್ರಮನ ಚಂದ್ರಿಕೆಯು ವಿಶೇಷತೆಯನ್ನು ಪಡೆದಿದೆ. ಈ ದಿನಗಳಲ್ಲಿ ದುಷ್ಟರ ನಾಶವನ್ನು ಮಾಡುವ ದುರ್ಗೆಯಪೂಜೆ ಇರುತ್ತದೆ. ಹಗಲಿಗಿಂತಲೂ ರಾತ್ರಿಯಲ್ಲಿ ದುಷ್ಟರಬಾಧೆ ಬಹಳ. ಅನ್ಯಾಯ ಅನಾಚಾರಗಳು ರಾತ್ರಿಯಲ್ಲಿಯೇ ಅಧಿಕವಾಗಿರುತ್ತವೆ. ಆದ್ದರಿಂದ ಇಂತಹ ಅನಾಚಾರಿಗಳಾದ ರಾಕ್ಷಸರಿಗೆ ನಕ್ತಂಚರರೆಂದೇ ಹೆಸರು. ರಾಕ್ಷಸರಿಗೆ ಬಲವು ರಾತ್ರಿಯಲ್ಲಿಯೇ ಅಧಿಕವಾಗುತ್ತದೆ. ಆದ್ದರಿಂದಲೇ ಇಂತಹ ನಕ್ತಂಚರರಾದ ರಾಕ್ಷಸರ ಸಂಹರಿಸುವ ದುರ್ಗೆಯ ಆರಾಧನೆ. ಆದ್ದರಿಂದ ಇದು ನವರಾತ್ರಿ.

ಶ್ರೀನಿವಾಸದೇವರ ನವರಾತ್ರಿ

ಯಾವ ಸಂಪ್ರದಾಯಗಳಲ್ಲಿ ಶ್ರೀನಿವಾಸದೇವರು ಕುಲದೈವರಾಗಿರುವರೋ ಅವರ ಮನೆಗಳಲ್ಲಿ ವೇಂಕಟೇಶದೇವರ ನವರಾತ್ರಿ ಇರುತ್ತದೆ. ನಿತ್ಯದಲ್ಲಿಯೂ ಶ್ರೀದೇವಿ ಭೂದೇವಿಸಹಿತ ಶ್ರೀವೇಂಕಟೇಶದೇವರ ಪೂಜೆ ನಡೆಯುತ್ತದೆ. ನಿತ್ಯದಲ್ಲಿಯೂ ಬೇಳೆ ಹೂರಣದಿಂದ ವೇಂಕಟೇಶದೇವರಿಗೆ ಆರತಿ ನೈವೇದ್ಯಗಳು ನಿರಂತರ ಒಂಬತ್ತು ದಿನಗಳ ವರೆಗೂ ನಡೆಯುತ್ತದೆ. ಸಾಯಂಕಾಲದಲ್ಲಿಯೂ ಸಹ ಹಣ್ಣು ತೆಂಗಿನಕಾಯಿ ಇತ್ಯಾದಿಗಳನ್ನು ನಿವೇದಿಸಿ ಮಂಗಳಾರತಿ ನೀರಾಜನಾದಿಗಳನ್ನು ಮಾಡಬೇಕು. ಶ್ರೀನಿವಾಸನ ನವರಾತ್ರಿ ಇದ್ದವರ ಸಂಪ್ರದಾಯಗಳಲ್ಲಿ ಮನೆಯ ಹಿರಿಯ ಪುರುಷರು ಅಥವಾ ಉಪನೀತ ಬಾಲಕರು ಒಂಬತ್ತುದಿನವೂ ಬಿಡದೇ ಬ್ರಾಹ್ಮಣರ ಮನೆಗಳಿಗೆ ಗೋಪಾಳಕ್ಕೆ ಹೋಗುತ್ತಾರೆ. ಹೀಗೆ ಗೋಪಾಳದಿಂದ ಬಂದ ಅಕ್ಕಿ ಬೇಳೆ ಬೆಲ್ಲ ಮುಂತಾದವುಗಳನ್ನು ಬಳಸಿ ದೇವರಿಗೆ ನಿವೇದಿಸುವುದು ವಿಶೇಷ ಪದ್ಧತಿ. ಪ್ರತಿಪತ್ ತಿಥಿಯಿಂದ ದಶಮೀವರೆಗೂ ಪ್ರತಿನಿತ್ಯ ಸಾಯಂಕಾಲ ಶ್ರೀವೆಂಕಟೇಶಕಲ್ಯಾಣ ಶ್ರವಣ ಹಾಗೂ ಪಾರಾಯಣವನ್ನು ಮಾಡಬೇಕು. ಈ ಸಮಯದಲ್ಲಿ ಶ್ರೀಲಕ್ಷ್ಮೀಹೃದಯ ಮತ್ತು ಶ್ರೀನಾರಾಯಣಹೃದಯದ ಸಂಪುಟೀಕರಣವಾಗಿ ಪಾರಾಯಣ ಮಾಡುವುದು ಬಹಳ ವಿಶೇಷ.

ಶ್ರೀ ವೆಂಕಟೇಶ ಕಲ್ಯಾಣ ಶ್ರವಣ

ಆಶ್ವಯುಜ ಮಾಸದ ಪಾಡ್ಯದಿಂದ ಆರಂಭಿಸಿ ದಶಮಿತಿಥಿಯ ವರೆಗೂ ಶ್ರೀವೆಂಕಟೇಶಕಲ್ಯಾಣದ ವಿಶೇಷ ಶ್ರವಣವನ್ನು ಮಾಡಬೇಕು. ವೈಶಾಖಶುದ್ಧ ಪ್ರತಿಪತ್ ನಿಂದ ದಶಮೀವರೆಗೂ ಸಹ ವೆಂಕಟೇಶಕಲ್ಯಾಣ ಪಾರಾಯಣ ಹಾಗೂ ಪ್ರವಚನಗಳು ನಡೆಯುತ್ತವೆ. ಏಕೆಂದರೆ, ವೈಶಾಖಶುದ್ಧ ದಶಮೀದಿನದಂದೇ ಶ್ರೀನಿವಾಸನು ಶ್ರೀಪದ್ಮಾವತಿಯನ್ನು ವಿವಾಹವಾದನು. ವಿವಾಹದ ನಂತರದಲ್ಲಿ ನೂತನ ದಂಪತಿಗಳು ಆರು ತಿಂಗಳ ವರೆಗೂ ಬೆಟ್ಟವನ್ನು ಹತ್ತಲಿಲ್ಲ. ವೈಶಾಖದಿಂದ ಆಶ್ವಯುಜ ಮಾಸದ ವರೆಗೂ ಅಲ್ಲಲ್ಲಿ ವಿಹರಿಸಿ ನಂತರ ಆಶ್ವಯುಜದಲ್ಲಿ ಬೆಟ್ಟವನ್ನು ಹತ್ತುತ್ತಾರೆ. ಹೀಗೆ ವಿವಾಹದ ಆರುತಿಂಗಳ ನಂತರ ಬೆಟ್ಟಕ್ಕೆ ಆಗಮಿಸಿದ ಶ್ರೀನಿವಾಸ ಪದ್ಮಾವತಿಯರನ್ನು ಬ್ರಹ್ಮದೇವರು ರಥದಲ್ಲಿ ಕುಳ್ಳಿರಿಸಿ ಮೆರವಣಿಗೆಯಿಂದ ಸ್ವಾಗತಿಸಿದರು. ಇದೇ ”ಬ್ರಹ್ಮೋತ್ಸವ” ಅಥವಾ ”ಬ್ರಹ್ಮರಥೋತ್ಸವ” ಎಂದು ಪ್ರಸಿದ್ಧವಾಗಿದೆ. ಆದ್ದರಿಂದ ಈ ಆಶ್ವಿಜ ಶುದ್ಧ ಪ್ರತಿಪತ್ ತಿಥಿಯಿಂದ ದಶಮೀತಿಥಿಯವರೆಗೆ ಶ್ರೀನಿವಾಸ ಕಲ್ಯಾಣ ಪಾರಾಯಣ ಹಾಗು ಪ್ರವಚನಗಳನ್ನು ಮಾಡುವುದು ವಿಶೇಷವಾಗಿ ಕಲ್ಯಾಣಪ್ರದವಾಗಿದೆ. ಹೀಗೆ ವೈಶಾಖಮಾಸ ಹಾಗೂ ಆಶ್ವಿಜಮಾಸಗಳಲ್ಲಿ ಪ್ರತಿವರುಷವು ಎರಡು ಬಾರಿ ಶ್ರೀವೇಂಕಟೇಶಕಲ್ಯಾಣದ ಶ್ರವಣ ಮಾಡಬೇಕು.

ಶರನ್ನವರಾತ್ರಿ

ಆಶ್ವಿಜಮಾಸದ ಈ ನವರಾತ್ರೋತ್ಸವ ಶರದ್ ಋತುವಿನಲ್ಲಿಯೇ ಆಚರಿಸುವದರಿಂದ ಶರನ್ನವರಾತ್ರಿ ಎಂದು ಕರೆಯುತ್ತಾರೆ. ಈ ಒಂಬತ್ತು ದಿನಗಳಲ್ಲಿ ದೇವಿಯ ಪೂಜೆ ಬಹಳ ಮಹತ್ತ್ವವನ್ನು ಪಡೆದಿದೆ. ಶರತ್ ಋತುವು ಸ್ವಚ್ಛವಾದ ಆಕಾಶದಲ್ಲಿ ಬೆಳಗುವ ಚಂದ್ರ-ನಕ್ಷತ್ರಗಳಿಂದ ಕೂಡಿರುತ್ತದೆ. ಆಹ್ಲಾದಕರವಾದ ಆಕಾಶವು ಹೇಗೆ ಪ್ರಸನ್ನತೆಯಿಂದ ಕೂಡಿರುತ್ತದೆಯೋ, ಮನಸ್ಸೂ ಸಹ ಪ್ರಸನ್ನತೆಯಿಂದ ಕೂಡಿರುತ್ತದೆ. ಆದ್ದರಿಂದ ಪೂಜೆ ಉಪಾಸನೆ ಪಾರಾಯಣಾದಿಗಳಿಗೆ ಈ ಕಾಲವು ಅತ್ಯಂತ ಪ್ರಶಸ್ತವಾಗಿದೆ. ಕೆಲವು ಬಾರಿ ತಿಥಿಯು ವೃದ್ಧಿಯಾದಾಗ ಅಥವಾ ಹ್ರಾಸವಾದಾಗ ಒಂಬತ್ತುರಾತ್ರಿಗಳು ಲಭಿಸುವುದಿಲ್ಲ. ಆದರೂ ಸಹ ಅದು ”ನವರಾತ್ರಿ” ಎಂದೇ ಪರಿಗಣಿತವಾಗಿದೆ. ಹೀಗೆ ಈ ಶರದೃತುವಿನಲ್ಲಿ ದೇವಿಯ ಪೂಜೆಯನ್ನು ಮಾಡಿದವನಿಗೆ ಎಲ್ಲ ಶೋಕಗಳು ಕಷ್ಟಗಳು ಪರಿಹಾರವಾಗುತ್ತವೆ. ದೇವಿಯು ಶತೃವಿನ ಬಾಧೆಯನ್ನು ನಿವಾರಿಸಿ ಅಭಯವನ್ನು ನೀಡುತ್ತಾಳೆ.

ನವರಾತ್ರಿಯ ನವದುರ್ಗಾ ಪೂಜೆ

ನವರಾತ್ರಿಯಲ್ಲಿ ಭಗವಂತನ ವಿಶೇಷಸನ್ನಿಧಾನವನ್ನು ಹೊಂದಿದ ದುರ್ಗಾದೇವಿಯ ಪೂಜೆಯನ್ನು ಮಾಡಲಾಗುತ್ತದೆ. ದುರ್ಗಾದೇವಿಯನ್ನು ಮೊದಲ ಮೂರು ದಿನಗಳಲ್ಲಿ ”ಮಹಾಕಾಳಿ” ಎಂದು ದೇವಿಯನ್ನು ಪೂಜಿಸುವುದು. ಮಧ್ಯದ ಮೂರುದಿನಗಳಲ್ಲಿ ಮಹಿಷಾಸುರನನ್ನು ಸಂಹರಿಸಿದ ದುರ್ಗೆಯನ್ನು ”ಮಹಾಲಕ್ಷ್ಮೀ” ಎಂಬ ಅನುಸಂಧಾನದಿಂದ ಪೂಜಿಸಬೇಕು. ಕೊನೆಯ ಮೂರುದಿನಗಳಲ್ಲಿ ಬ್ರಹ್ಮಜ್ಞಾನಪ್ರಚೋದಕಳಾದ, ಜ್ಞಾನಪ್ರಚಾರದ ಕಾರ್ಯವನ್ನು ಮಾಡುವ ಮತ್ತು ಮಾಡಿಸುವ ”ಸರಸ್ವತೀದೇವಿ”ಯನ್ನು ಪೂಜಿಸುವುದು.

durga

ದುರ್ಗಾದೇವಿಯು ಮಧು-ಕೈಟಭರನ್ನು, ಮಹಿಷಾಸುರ, ಶುಂಭ-ನಿಶುಂಭ, ಚಂಡ-ಮುಂಡ, ರಕ್ತಬೀಜಾಸುರ ಇವರನ್ನೆಲ್ಲ ಅನೇಕ ರೂಪಗಳಿಂದ ಸಂಹರಿಸಿದ್ದಾಳೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಮಧು-ಕೈಟಭರು ಭಗವಂತನ ಕಿವಿಯ ಕಿಟ್ಟದಿಂದ ಜನಿಸಿದರೆಂದು ಪುರಾಣಗಳು ತಿಳಿಸಿವೆ. ಭಗವಂತನ ಸಚ್ಚಿದಾನಂದಾತ್ಮಕ ದೇಹದಲ್ಲಿ ಬೇಡದ ಪದಾರ್ಥ ಅಥವಾ ಅಶುದ್ಧವಸ್ತುವಿಗೆ ಸ್ಥಾನವೇ ಇಲ್ಲ. ಆದರೂ ಇದೆಲ್ಲ ಭಗವಂತನ ಲೀಲೆಯ ಭಾಗವಷ್ಟೇ. ಭಗವಂತನ ಸಂಕಲ್ಪದಂತೆ ದುರ್ಗಾದೇವಿಯು ಮಧು-ಕೈಟಭರನ್ನು ಸಂಹರಿಸಿದಳು. ಅಜ್ಞಾನವೆಂಬ ಕಲ್ಮಷದಿಂದ ಸಂಶಯ ಮತ್ತು ವಿಪರೀತಜ್ಞಾನವು ಹುಟ್ಟಿದಂತೆ ಈ ಮಧು-ಕೈಟಭರ ಜನನದ ಸಂಕೇತ. ದುರ್ಗಾದೇವಿಯು ಮಧು-ಕೈಟಭರನ್ನು ಸಂಹರಿಸಿದಂತೆ ಎಲ್ಲರ ಅಜ್ಞಾನಗಳ ನಾಶವನ್ನು ಮಾಡಲಿ ಎಂದು ಪ್ರಾರ್ಥಿಸಿ ದುರ್ಗೆಯ ಈ ರೂಪದ ಪೂಜೆ.

ಶುಂಭ-ನಿಶುಂಭರು ಕಾಮ-ಕ್ರೋಧಗಳ ಸಂಕೇತರು. ದುರ್ಗಾದೇವಿಯು ಶುಂಭ-ನಿಶುಂಭರನ್ನು ಸಂಹರಿಸಿದಂತೆ ನಮ್ಮ ದೇಹದಲ್ಲಿರುವ ಕಾಮ-ಕ್ರೋಧಗಳನ್ನು ನಾಶಗೊಳಿಸಲಿ ಎಂದು ಪ್ರಾರ್ಥಿಸಿ ದುರ್ಗೆಯ ಈ ಪೂಜೆಯನ್ನು ಮಾಡಬೇಕು.

ಈ ಶುಂಭ-ನಿಶುಂಭರ ಶಿಷ್ಯರೇ ಚಂಡ-ಮುಂಡರು. ಕಾಮ-ಕ್ರೋಧಗಳನ್ನು ಅನುಸರಿಸಿ ಮದ-ಮಾತ್ಸ್ಯರ್ಯಗಳಿದ್ದಂತೆ ಈ ಚಂಡ-ಮುಂಡರು. ಇಂತಹ ಅಸುರರನ್ನು ಸಂಹರಿಸಿದ ದೇವಿಯು ನಮ್ಮಲ್ಲಿರುವ ಮದ-ಮಾತ್ಸರ್ಯಗಳನ್ನು ನಾಶಗೊಳಿಸಲಿ ಎಂದು ಪ್ರಾರ್ಥಿಸಿ ದೇವಿಯ ಈ ಪೂಜೆಯನ್ನು ಮಾಡಬೇಕು.

ಶುಂಭ-ನಿಶುಂಭರ ಮತ್ತೊಬ್ಬ ಅಸುರ ಶಿಷ್ಯ ರಕ್ತಬೀಜಾಸುರ. ಅವನಿಗೆ ಬ್ರಹ್ಮದೇವರು ಕೊಟ್ಟ ಒಂದು ವರವಿತ್ತು. ಒಂದು ಹನಿ ರಕ್ತವೂ ಅವನ ದೇಹದಿಂದ ಭೂಮಿಯ ಮೇಲೆ ಬಿದ್ದರೆ ಮತ್ತೊಬ್ಬ ರಕ್ತಬೀಜಾಸುರನ ಜನ್ಮವಾಗುತ್ತದೆ ಎಂದು. ಆದ್ದರಿಂದಲೇ ಅವನು ರಕ್ತಬೀಜಾಸುರ. ಕಾಮ-ಕ್ರೋಧಗಳು ಹೇಗೆ ಲೋಭಕ್ಕೆ ಜನ್ಮನೀಡುತ್ತವೋ, ಅಂತಹ ಲೋಭವು ಮತ್ತೆ ಮತ್ತೆ ಹುಟ್ಟತ್ತಲೇ ಹೋಗುತ್ತದೆಯೇ ಹೊರತು ಕೊನೆಕೊಳ್ಳುವುದೇ ಇಲ್ಲ. ಇಂತಹ ಲೋಭಸ್ವರೂಪಿಯಾದ ರಕ್ತಬೀಜಾಸುರನನ್ನು ದುರ್ಗಾದೇವಿಯು ಕಾಳಿಯ ರೂಪದಿಂದ ಸಂಹರಿಸಿದಳು. ಮನುಷ್ಯನ ಸಾಂಸಾರಿಕಲೋಭವನ್ನು ದೇವಿಯು ನಿತ್ಯದಲ್ಲಿ ಸಂಹರಸಲಿ ಎಂದು ಪ್ರಾರ್ಥಿಸಿ ದೇವಿಯ ಈ ಪೂಜೆಯನ್ನು ಮಾಡಬೇಕು.

ಮಹಿಷಾಸುರನೆಂಬ ಒಬ್ಬ ಅಸುರ. ಮಹಿಷಾಸುರ ಎಂದರೆ ಎಮ್ಮೆಯ ರೂಪದಲ್ಲಿರುವ ರಾಕ್ಷಸ. ಮಹಿಷಾಸುರನು ಇಂದ್ರಾದಿಗಳಿಗೆ ಅತಿಯಾದ ತೊಂದರೆ ಕೋಟ್ಟಾಗ ಭಗವಂತನ ಆಜ್ಞೆಯಂತೆ ದುರ್ಗಾದೇವಿಯು ಸಿಂಹವಾಹಿನಿಯಾಗಿ ತ್ರಿಶೂಲದಿಂದ ಮಹಿಷಾಸುರನ ವಧೆಯನ್ನು ಮಾಡುತ್ತಾಳೆ. ಆಗ ದುರ್ಗಾದೇವಿಯು ”ಮಹಿಷಾಸುರಮರ್ದಿನಿ” ”ಸಿಂಹವಾಹಿನೀ” ಎಂದು ಪ್ರಸಿದ್ಧಳಾದಳು. ಎಮ್ಮೆ ಎಂಬುದು ಅಹಂಕಾರದ ಪ್ರತೀಕ. ಎಲ್ಲಿಯ ವರೆಗೂ ಅಹಂಕಾರವಿರುವುದೋ ಅಲ್ಲಿಯ ವರೆಗೂ ಬುದ್ಧಿ-ಮನಸ್ಸುಗಳು ದೇವರೆಡೆಗೆ ಸಾಗುವದೇ ಇಲ್ಲ. ನಮ್ಮಲ್ಲಿರುವ ಅಂತಹ ಮಹಿಷರೂಪದ ಅಹಂಕಾರವನ್ನು ಈ ಸಿಂಹವಾಹಿನಿ ದುರ್ಗೆಯು ನಾಶಗೊಳಿಸಲಿ ಎಂದು ಪ್ರಾರ್ಥಿಸಿ ಈ ಪೂಜೆಯನ್ನು ಮಾಡಬೇಕು.

ಹೀಗೆ ಭಗವಂತನ ವಿಶೇಷ ಸನ್ನಿಧಾನವನ್ನು ಹೊಂದಿ ದುರ್ಗಾದೇವಿಯು ಅನೇಕ ರೂಪಗಳನ್ನು ಧರಿಸಿ ಎಲ್ಲ ದುಷ್ಟ ಅಸುರರ ಸಂಹಾರವನ್ನು ಮಾಡುತ್ತಾಳೆ. ಚಕ್ರವನ್ನು ಕೈಯಲ್ಲಿ ಹಿಡಿದಿರುವ ದುರ್ಗಾದೇವಿಯು ಸಂಸಾರವನ್ನು ಭೇದಿಸಿ ಮೋಕ್ಷಪ್ರದವಾದ ಜ್ಞಾನವನ್ನು ಕೊಡುವುದರ ಸಂಕೇತ. ದುರ್ಗೆಯು ಶಂಖವನ್ನು ಧರಿಸಿರುವುದು ವಿಜಯದ ಸಂಕೇತ. ಶಂಖನಾದ ವಿಜಯದ ಪ್ರತೀಕ. ಸತ್ಕಾರ್ಯಗಳಲ್ಲಿ ಸಜ್ಜನರಿಗೆ ಸದಾ ವಿಜಯವನ್ನು ದಯಪಾಲಿಸುವುಳು. ಅಜ್ಞಾನ ಮತ್ತು ಅಧರ್ಮಗಳನ್ನು ಕತ್ತರಿಸಿ ಸುಜ್ಞಾನವನ್ನು ನೀಡುವದರ ಮೂಲಕ ಧರ್ಮವನ್ನು ಸ್ಥಾಪಿಸುವಳು ಎಂಬುದು ಪರಶುಧಾರಿಯಾದ ದುರ್ಗೆಯ ಸಂಕೇತ. ವಿಪರೀತ ಜ್ಞಾನ ಮತ್ತು ಸಂಶಯಗಳನ್ನು ಹೋಗಲಾಡಿಸುವುದೇ ದುರ್ಗೆ ಧರಿಸಿರುವ ಬಿಲ್ಲು ಬಾಣಗಳ ಸಂಕೇತ. ದುರ್ಗಾದೇವಿಯು ಅಷ್ಟಭುಜಗಳನ್ನು ಹೊಂದಿರುವಳು. ಎಂಟು ಭುಜಗಳೆಂದೆರೆ ಪಂಚಭೂತಗಳು, ಮನಸ್ಸು, ಅಹಂಕಾರ, ಮಹತ್ತತ್ವ ಇವುಗಳ ಸಂಕೇತ. ಭಗವಂತನ ವಿಶೇಷ ಅನುಗ್ರಹದಿಂದ ದುರ್ಗಾದೇವಿಯು ಈ ಎಂಟೂ ತತ್ವಗಳಿಗೆ ನಿಯಾಮಕಳಾಗಿರುವಳು.

ಸ್ತ್ರೀದೇವತೆಗಳಾದ ದುರ್ಗಾ, ಅಂಬಾಭವಾನಿಯ ನವರಾತ್ರಿಯನ್ನು ಆಚರಿಸುವವರು ನವರಾತ್ರಿಯಲ್ಲಿ ದೇವಿಯ ಅನುಗ್ರಹಕ್ಕಾಗಿ ಉಪವಾಸವನ್ನು ಮಾಡುತ್ತಾರೆ. ಪ್ರತಿಪತ್ ತಿಥಿಯಿಂದ ಅಷ್ಟಮೀ ವರೆಗು ಉಪವಾಸವನ್ನು ಮಾಡಿ ಮಹಾನವಮಿಯದಿನ ಪಾರಣೆಯನ್ನು ಮಾಡುವ ಸಂಪ್ರದಾಯವೂ ಕೆಲವರಲ್ಲಿ ಇದೆ. ಇಲ್ಲಿ ಉಪವಾಸವೆಂದರೆ ಏಕಾದಶಿಯಂತೆ ನಿರ್ಜಲ ಉಪವಾಸವಲ್ಲ. ಕಿಂತು ಫಲಾಹಾರವನ್ನು ಸ್ವೀಕರಿಸಿ ಮಾಡುವುದು.

ಕುಮಾರಿಕಾ ಪೂಜೆ

ನವರಾತ್ರಿಯಲ್ಲಿ ಪ್ರತಿನಿತ್ಯವೂ ಕುಮಾರಿಯರ ಪೂಜೆಯನ್ನು ಮಾಡಬೇಕು. ಕುಮಾರಿಯರು ಎಂದರೆ ಎರಡು ವರ್ಷದಿಂದ ಹತ್ತು ವರುಷದ ವರೆಗಿನ ಬಾಲಕಿಯರು. ಕನ್ಯೆ ಎಂದರೆ ರಜಸ್ವಲೆಯರಾಗದಿರುವ ಬಾಲಕಿಯರು. ”ದ್ವಿವರ್ಷಕನ್ಯಾಮಾರಭ್ಯ ದಶವರ್ಷಾವಧಿ ಕ್ರಮಾತ್ ಪೂಜಯೇತ್” ಎಂದು. ಕುಮಾರಿ, ತ್ರಿಮೂರ್ತಿನೀ, ಕಲ್ಯಾಣೀ, ರೋಹಿಣೀ, ಕಾಲೀ, ಚಂಡಿಕಾ, ಶಾಂಭವೀ, ದುರ್ಗಾ, ಭದ್ರಾ ಎಂದು ಒಂಬತ್ತು ದುರ್ಗೆಯ ರೂಪಗಳನ್ನು ಕುಮಾರಿಯರಲ್ಲಿ ಆವಾಹಿಸಿ ಪೂಜಿಸಬೇಕು. ಕುಮಾರಿಯರಿಗೆ ನೂತನವಸ್ತ್ರ, ಅಲಂಕಾರವಸ್ತುಗಳು, ಮತ್ತು ಅನೇಕ ಸಿಹಿ ತಿನಿಸುಗಳನ್ನು ದಾನವಾಗಿ ಕೊಡಬೇಕು. ಇದರಿಂದ ಆಯುಷ್ಯಾಭಿವೃದ್ಧಿಯಾಗುತ್ತದೆ. ಈ ಪೂಜೆದಾನಾದಿಗಳಿಂದ ಅಷ್ಟ ವಸುಗಳು ಮತ್ತು ರುದ್ರಾದಿಗಳನ್ನು ಪೂಜಿಸಿದಂತಾಗುತ್ತದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಒಂಬತ್ತುದಿನಗಳು ಕುಮಾರಿ ಪೂಜೆ ಮಾಡಲು ಸಾಧ್ಯವಾಗದಿದ್ದರೆ, ನವರಾತ್ರಿಯಲ್ಲಿ ಒಂದು ದಿನವಾದರೂ ಒಬ್ಬ ಕನ್ಯೆಯನ್ನು ಪೂಜಿಸಿ ದಾನವನ್ನು ಮಾಡಿ ಭೋಜನವನ್ನು ಮಾಡಿಸಬೇಕು.

ದುಃಖದಾರಿದ್ರ್ಯನಾಶಾಯ ಶತ್ರೂಣಾಂ ನಾಶಹೇತವೇ |
ಆಯುಷ್ಯಬಲವೃದ್ಧ್ಯರ್ಥಂ ಕುಮಾರೀಂ ಪೂಜಯೇನ್ನರಃ||

ಎರಡು ವರ್ಷದ ಕುಮಾರಿಪೂಜೆಯಿಂದ ಆಯುಷ್ಯಾಭಿವೃದ್ಧಿ.
ಮೂರು ವರ್ಷದ ಕುಮಾರಿಪೂಜೆಯಿಂದ ಅಪಮೃತ್ಯುಪರಿಹಾರ.
ನಾಲ್ಕು ವರುಷದ ಕುಮಾರಿಪೂಜೆಯಿಂದ ಆರೋಗ್ಯ, ಪುತ್ರಪ್ರಾಪ್ತಿ, ಧನ-ಧಾನ್ಯಾಭಿವೃದ್ಧಿ.
ಐದು ವರುಷದ ಕುಮಾರಿಪೂಜೆಯಿಂದ ಧನ ಮತ್ತು ಕೀರ್ತಿಯ ಪ್ರಾಪ್ತಿ.
ಆರು ವರ್ಷದ ಕುಮಾರಿಪೂಜೆಯಿಂದ ವಿದ್ಯಾಪ್ರಾಪ್ತಿ ಮತ್ತು ಜಯಲಾಭ.
ಏಳು ವರುಷದ ಕುಮಾರಿಪೂಜೆಯಿಂದ ಯುದ್ಧದಲ್ಲಿ ಜಯಪ್ರಾಪ್ತಿ.
ಎಂಟು ವರುಷದ ಕುಮಾರಿಪೂಜೆಯಿಂದ ಎಲ್ಲ ಮಹಾಪಾಪಗಳ ನಾಶ ಮತ್ತು ಶತೃಭಯನಾಶ.
ಒಂಬತ್ತು ವರುಷದ ಕುಮಾರಿಪೂಜೆಯಿಂದ ಸರ್ವದುಃಖಗಳು ನಾಶವಾಗುತ್ತವೆ.
ಹತ್ತು ವರುಷದ ಕುಮಾರಿಪೂಜೆಯಿಂದ ಸರ್ವವಿಧ ಇಹ-ಪರ ಸೌಖ್ಯಪ್ರಾಪ್ತಿ.

ಹೀಗೆ ನವರಾತ್ರಿಯ ಒಂಬತ್ತು ದಿನಗಳು ಅನುಸಂಧಾನಪೂರ್ವಕವಾಗಿ ಕುಮಾರಿ ಪೂಜೆಯನ್ನು ಮಾಡಬೇಕು.

ದೀಪಾರಾಧನೆ ಹಾಗೂ ಘಟ್ಟಸ್ಥಾಪನೆ

ಶ್ರೀ-ಭೂ-ದುರ್ಗಾ ಹೀಗೆ ಮೂರು ರೂಪಗಳಿಂದ ಲಕ್ಷ್ಮೀದೇವಿಯ ಪೂಜೆಯನ್ನು ಮಾಡುವ ಸಂಪ್ರದಾಯವು ನವರಾತ್ರಿಯಲ್ಲುಂಟು. ದೀಪವು ಜ್ಞಾನದ ಪ್ರತೀಕ. ಶ್ರೀರೂಪದ ಲಕ್ಷ್ಮೀದೇವಿಯು ಜ್ಞಾನಕ್ಕೆ ಅಭಿಮಾನಿನೀ. ಆದ್ದರಿಂದ ಎರಡು ದೀಪಗಳನ್ನು ಪ್ರಜ್ವಲಿಸಬೇಕು. ಒಂದು ಘೃತದೀಪ. ಇನ್ನೊಂದು ತೈಲದೀಪ (ಎಳ್ಳೆಣ್ಣೆದೀಪ.). ಇವುಗಳನ್ನು ನಂದಾದೀಪ ಅಥವಾ ಅಖಂಡದೀಪ ಎಂದು ಕರೆಯುತ್ತಾರೆ. ದೀಪದ ಸ್ತಂಭಗಳಿಗೆ ಕೆಮ್ಮಣ್ಣು, ಸುಣ್ಣವನ್ನು ಲೇಪಿಸಬೇಕು. ದೇವರ ಬಲಭಾಗದಲ್ಲಿ ದೀಪಸ್ತಂಭಗಳನ್ನು ಸ್ಥಾಪಿಸಬೇಕು. ಮಂತ್ರಗಳಿಂದ ದೀಪಗಳಲ್ಲಿ ದೇವತೆಗಳನ್ನು ಆವಾಹಿಸಿ ಹೂವಿನಿಂದ ಅಲಂಕರಿಸಿ ಗೆಜ್ಜೆವಸ್ತ್ರ, ಅರಿಷಿನ ಕುಂಕುಮಗಳಿಂದ ಪೂಜಿಸಬೇಕು. ದೀಪಸ್ತಂಭದ ಅಗ್ರದಲ್ಲಿ ಸಪ್ತವಿಂಶತಿ (ಇಪ್ಪತ್ತೇಳು) ಕೃತ್ತಿಕಾದಿ ನಕ್ಷತ್ರದೇವತೆಗಳ, ದೀಪಪ್ರಜ್ವಲಿಸುವ ನಾಲೆಯಲ್ಲಿ ವಾಸುಕಿದೇವತೆ, ದೀಪಸ್ತಂಭ ಪಾದದಲ್ಲಿ ಚಂದ್ರಾರ್ಕಾದಿ ದೇವತೆಗಳ ಸನ್ನಿಧಾನವಿರುತ್ತದೆ ಎಂದು ಚಿಂತಿಸಿ ಪೂಜಿಸಬೇಕು. ನಂತರದಲ್ಲಿ ದೀಪಪ್ರಜ್ವಾಲನೆಯನ್ನು ಮಾಡಬೇಕು. ಪ್ರಾತಃ ಮಧ್ಯಾಹ್ನ ಸಾಯಂಕಾಲ ಹೀಗೆ ಮೂರು ಸಮಯದಲ್ಲಿಯೂ ದೀಪಗಳಿಗೆ ಎಣ್ಣೆ ತುಪ್ಪಗಳನ್ನು ಹಾಕುತ್ತಿರಬೇಕು. ದೀಪವನ್ನು ಮಡಿಯಿಂದಲೇ ಮುಟ್ಟಬೇಕು. ದೀಪಗಳನ್ನು ಮುಟ್ಟುವವರು ಬಹಳ ಅನುಷ್ಠಾನವನ್ನು, ನಿಯಮಗಳನ್ನು ಪಾಲಿಸಬೇಕು. ಒಂಬತ್ತು ದಿನಗಳು ಬ್ರಹ್ಮಚರ್ಯದಿಂದ ಇರಬೇಕು. ಹೊರಗಡೆಗೆ ಎಲ್ಲಿಯೂ ಯಾವುದೇ ಆಹಾರವನ್ನು ಸ್ವೀಕರಿಸಬಾರದು. ಹಾಸಿಗೆ ಅಥವಾ ಮಂಚವನ್ನು ತ್ಯಜಿಸಿ ಚಾಪೆಯ ಮೇಲೆ ಮಲಗಬೇಕು. ಈ ಒಂಬತ್ತು ದಿನಗಳಲ್ಲಿ ಪಾದರಕ್ಷೆಗಳನ್ನು ಧರಿಸಬಾರದು. ಶಕ್ತಿ ಇದ್ದವರು ಅವರ ಅನೂಲಕ್ಕೆ ತಕ್ಕಂತೆ ಮತ್ತು ಆರೋಗ್ಯಕ್ಕೆ ತಕ್ಕಂತೆ ನಿಯಮಗಳನ್ನು ಪಾಲಿಸಬೇಕು.

ಆಶ್ವಯುಜ ಮಾಸದ ಪ್ರತಿಪತ್ ತಿಥಿಯಿಂದ ನವಮೀವರೆಗು ಮಾಡುವ ಪೂಜೆಯನ್ನು ”ನವರಾತ್ರೋತ್ಸವ” ಎಂದು ಕರೆಯುತ್ತಾರೆ. ತೃತೀಯಾದಿಂದ ನವಮೀವರೆಗಿನ ಆಚರಣೆಗೆ ”ಸಪ್ತರಾತ್ರೋತ್ಸವ” ಎನ್ನುತ್ತಾರೆ. ಪಂಚಮೀಯಿಂದ ನವಮೀವರೆಗಿನ ಆಚರಿಸುವ ಉತ್ಸವವನ್ನು ”ಪಂಚರಾತ್ರೋತ್ಸವ”ವೆಂದು ಕರೆಯುತ್ತಾರೆ. ಹಾಗೆಯೇ ಸಪ್ತಮೀ ಅಷ್ಟಮೀ ನವಮೀ ಈ ಮೂರದಿನಗಳ ಕಾಲ ಮಾಡುವ ಉತ್ಸವವನ್ನು ”ತ್ರಿರಾತ್ರೋತ್ಸವ”ವೆಂದು ಕರೆಯುತ್ತಾರೆ.

ಶ್ರೀ ವೇದವ್ಯಾಸ ಹಾಗೂ ಸರಸ್ವತೀಪೂಜೆ

ನವರಾತ್ರಿಯ ಕಾಲದಲ್ಲಿ ಮೂಲಾನಕ್ಷತ್ರವಿರುವ ದಿನದಂದು ಶ್ರೀವೇದವ್ಯಾಸ ದೇವರ ಮತ್ತು ಸರಸ್ವತ್ಯಾದಿ ದೇವತೆಗಳನ್ನು ಪೂಜಿಸಬೇಕು. ಪೀಠದ ಮೇಲೆ ಸಚ್ಛಾಸ್ತ್ರಗ್ರಂಥಗಳನ್ನಿಟ್ಟು ಸಾಲಿಗ್ರಾಮ ಪ್ರತಿಮಾದಿಳನ್ನಿಟ್ಟು ಜ್ಞಾನಾಭಿಮಾನಿಯಾದ ಸರಸ್ವತಿಯನ್ನು ಪೂಜಿಸಬೇಕು. ಸ್ಥಾಪಿಸಿದ ಗ್ರಂಥಗಳಲ್ಲಿ ಶ್ರೀಕಪಿಲ, ದತ್ತಾತ್ರೇಯ, ಹಯಗ್ರೀವ, ರಾಮ, ಕೃಷ್ಣ, ಪರಶುರಾಮ, ನರಸಿಂಹ, ನಾರಾಯಣ, ಶ್ರೀವೇದವ್ಯಾಸ ಹೀಗೆ ಭಗದ್ರೂಪಗಳನ್ನು ಧ್ಯಾನಾವಾಹನಾದಿಗಳಿಂದ ಪೂಜಿಸಬೇಕು. ನಂತರ ಶ್ರೀ ಭೂ ದುರ್ಗೆಯ ರೂಪಗಳನ್ನು ಆವಾಹಿಸಬೇಕು. ನಂತರ ಮುಖ್ಯಪ್ರಾಣದೇವರನ್ನು, ನಂತರ ಸರಸ್ವತಿ ಭಾರತಿಯರನ್ನು, ಆವಾಹಿಸಬೇಕು. ತದನಂತರ ಶೇಷ, ರುದ್ರ, ಗೌರಿ, ವಿನಾಯಕ ಈ ದೇವತೆಗಳನ್ನು ಆವಾಹನೆ ಮಾಡಿ ಪೂಜಿಸಬೇಕು. ಶ್ರೀಮನ್ಮಧ್ವಾಚಾರ್ಯರು, ಪದ್ಮನಾಭತೀರ್ಥರು, ಶ್ರೀಮಜ್ಜಯತೀರ್ಥರು, ಶ್ರೀವ್ಯಾಸರಾಜರು, ಶ್ರೀರಾಘವೇಂದ್ರತೀರ್ಥರು ಇವರೇ ಮುಂತಾದ ಗುರುಗಳನ್ನು ಗ್ರಂಥಗಳಲ್ಲಿ ಆವಾಹಿಸಿ ಪೂಜಿಸಬೇಕು. ಸರಸ್ವತೀ ಆವಾಹನೆ ದಿನದಿಂದ ಪ್ರತಿನಿತ್ಯ ಸಾಯಂಕಾಲವೂ ಸಹ ಪಂಚೋಪಚಾರಪೂಜೆಯನ್ನು ಸಮರ್ಪಿಸಬೇಕು. ಈ ಸಂದರ್ಭದಲ್ಲಿ ಶಾಸ್ತ್ರಪಾಠ ವ್ಯಾಖ್ಯಾನಗಳನ್ನು ಮಾಡದೇ ಕೇವಲ ಜಪ ಹಾಗೂ ಪಾರಾಯಣವನ್ನು ಮಾತ್ರ ವಿಷೇವಾಗಿ ಮಾಡಬೇಕು.

ಈ ದಿನಗಳಲ್ಲಿ ಬ್ರಹ್ಮಾದಿಗಳೂ ಸಹ ಜ್ಞಾನಪ್ರದನಾದ, ಮುಖ್ಯಪ್ರಾಣನಿಗೂ ಈಶನಾದ, ಸತ್ಯಾ, ಈಶಾನ, ಅನುಗ್ರಹಾ ಎಂಬ ಭಗವಂತನ ಶಕ್ತಿಗಳೇ ”ಸರಸ್ವತೀ” ಎನಿಸಿವೆ. ಮಾನವರು ತಾವೇ ಸರ್ವೋತ್ತಮರೆಂಬ ಅಹಂಕಾರದಿಂದ ಅಜ್ಞಾನವನ್ನು ಹೊಂದಿ ಅಸತ್ಯಮಾರ್ಗವನ್ನು ಅವಲಂಬಿಸುತ್ತಿರುವರು. ”ಸರಸ್ವತೀ”ಶಬ್ದವಾಚ್ಯವಾದ ಭಗವಂತನ ಈ ಮೂರು ಶಕ್ತಿಗಳ ಪೂಜೆಯಿಂದ ಎಲ್ಲರ ಅಹಂಕಾರ ಅಜ್ಞಾನ ವಿಪರೀತಜ್ಞಾನಗಳು ನಷ್ಟವಾಗಿ ದೇವರ ಸರ್ವೋತ್ತಮತ್ವದ ಸುಜ್ಞಾನವು ಲಭಿಸುತ್ತದೆ. ರಾತ್ರೀದೇವತೆಯ ಜ್ಞಾನ ಕಿರಣಗಳಿಂದ ಅಜ್ಞಾನವು ನಾಶವಾಗುತ್ತದೆ ಎಂದು ರಾತ್ರಿಸೂಕ್ತವು ವರ್ಣಿಸುತ್ತದೆ. ”ಪಾವಕಾನಃ ಸರಸ್ವತೀ ಎಂದು ಸರಸ್ವತೀಸೂಕ್ತವು ವರ್ಣಿಸುತ್ತದೆ. ಸರಸ್ವತೀ ಎಂಬ ಶಕ್ತಿಯು ನಮ್ಮ ಅಜ್ಞಾವನ್ನು ಕಳೆದು ಪವಿತ್ರರನ್ನಾಗಿ ಮಾಡಿ ಸುಜ್ಞಾನದ ಪ್ರಚೋದನೆಯನ್ನು ಮಾಡುತ್ತಾ ಮತಿಪ್ರೇರಕಳಾಗಿರುವಳು. ”ಚೋದಯಿತ್ರೀ ಸೂನೃತಾನಾಂ ಚೇತಂತೀ ಸುಮತೀನಾಂ”.
ಶ್ರವಣಾ ನಕ್ಷತ್ರದಂದು ಸ್ಥಾಪಿತ ಶ್ರೀವೇದವ್ಯಾಸ ಹಾಗೂ ಸಕಲ ದೇವತೆಗಳನ್ನು ವಿಸರ್ಜಿಸಬೇಕು.

ನವರಾತ್ರಿಯ ವಿಶೇಷ ಪಾರಾಯಣಗಳು

ನವರಾತ್ರಿಯಲ್ಲಿ ಚತುರ್ವೇದ ಪಾರಾಯಣಕ್ಕೆ ವಿಶೇಷಫಲವಿದೆ. ಚತುರ್ವೇದ ಪಾರಾಯಣ ಅಶಕ್ಯವಾದಾಗ ವೇದಸಮಾನವಾದ ಭಾಗವತ ಪಾರಾಯಣವನ್ನಾದರೂ ಮಾಡಬೇಕು. ಶ್ರೀಸೂಕ್ತ, ರಾತ್ರೀಸೂಕ್ತ, ಸರಸ್ವತೀಸೂಕ್ತ, ದುರ್ಗಾಸ್ತೋತ್ರ, ಚಂಡೀಶತಕ, ದುರ್ಗಾಸಪ್ತಶತೀ ಇವುಗಳ ಪಾರಾಯಣವಿಶೇಷವಾಗಿ ಮಾಡಬೇಕು. ಶ್ರೀವೆಂಕಟೇಶ ಕಲ್ಯಾಣದ ಪಾರಾಯಣ ಬಹಳ ವಿಶೇಷ ಮತ್ತು ಎಲ್ಲರೂ ಮಾಡಲೇಬೇಕಾದ ಪಾರಾಯಣ. ಶ್ರೀಲಕ್ಷ್ಮೀಹೃದಯ ಮತ್ತು ಶ್ರೀನಾರಾಯಣ ಹೃದಯದ ಸಂಪುಟೀ ಕರಣ ಪಾರಾಯಣ ಮಾಡಬೇಕು. ಮೊದಲನೇ ದಿನದಿಂದ ಆರಂಭಿಸಿ ಮುಂದಿನ ದಿನಗಳಲ್ಲಿ ಪಾರಾಯಣದ ಸಂಖ್ಯೆಯನ್ನು ದಿನಗಳ ಸಂಖ್ಯೆಗೆ ಅನುಗುಣವಾಗಿ ವರ್ಧಿಸಬೇಕು. ಮೊದಲನೇ ದಿಂದಂದು ಒಂದು ಬಾರಿಸಂಪುಟೀಕರಣ, ಎರಡನೇ ದಿನದಂದು ಎರಡು ಬಾರಿ ಸಂಪುಟೀಕರಣ ಹೀಗೆ ದಶಮೀಯ ವರೆಗೆ ಹತ್ತು ಬಾರಿ ಸಂಪುಟೀಕರಣಪಾರಾಯಣಮಾಡಿ ದೇವರಿಗೆ ಅರ್ಪಿಸಬೇಕು. ಈ ಪಾರಾಯಣದಿಂದ ವಿಶೇಷವಾಗಿ ಸಂಪತ್ತು ಅಭಿವೃದ್ಧಿಯಾಗುತ್ತದೆ ಎಂದು ಪಂಚರಾತ್ರಾಗಮದಲ್ಲಿ ತಿಳಿಸಲಾಗಿದೆ. ಸ್ತ್ರೀಯರು ವಿಶೇಷವಾಗಿ ಶ್ರೀವೇಂಕಟೇಶಪಾರಿಜಾತ ಮತ್ತು ಶ್ರೀಲಕ್ಷ್ಮೀಶೋಭಾನದ ಪಾರಾಯಣ ಮಾಡುವದರಿಂದ ವಿಶೇಷ ಸೌಭಾಗ್ಯ ಸಂಪತ್ತು ಪ್ರಾಪ್ತಿಯಾಗುವುದು. ಸ್ರ್ತೀಯರು ಶ್ರೀವಾದಿರಾಜರು ರಚಿಸಿದ ಲಕ್ಷ್ಮೀಹೃದಯನ್ನು, ಶ್ರೀವಿಜಯದಾಸ ವಿರಚಿತ ದುರ್ಗಾಸುಳಾದಿಯನ್ನು ವಿಶೇಷವಾಗಿ ಪಠಿಸಬೇಕು. ಶ್ರೀವೇಂಕಟೇಶಸ್ತೋತ್ರವನ್ನು ಆಬಾಲವೃದ್ಧರು ಪಠಿಸಬೇಕು.

ನವರಾತ್ರಿಯಲ್ಲಿ ಸ್ತ್ರೀಯರು ಮಾಡುವ ದಾನಗಳು

ನವರಾತ್ರಿಯಲ್ಲಿ ಸ್ತ್ರೀಯರು ಮುತ್ತೈದೆಯರಿಗೆ ಅಲಂಕಾರದ ವಸ್ತುಗಳು, ಕೇಶಾಲಂಕಾರದ ವಸ್ತುಗಾಳು, ಮಾಂಗಲ್ಯ, ಕಾಲುಂಗುರ, ನೂತನವಸ್ತ್ರ, ಮತ್ತು ತುಳಸೀಸಸಿ ಇವಗಳ ದಾನವನ್ನು ಮಾಡಬೇಕು. ”ನಾರಿಕೇಲಫಲಾದೀನಿ ನವಕಂ ನವಕಂ ಪ್ರಿಯೇ”- ನಿತ್ಯದಲ್ಲಿಯೂ ಒಂಬತ್ತು ತೆಂಗಿನಕಾಯಿಗಳನ್ನು ಬ್ರಾಹ್ಮಣರಿಗೆ ದಾನಕೊಡಬೇಕು. ನಿತ್ಯವೂ ಒಂಬತ್ತು ತೆಂಗಿನಕಾಯಿಯನ್ನು ಕೊಡಲು ಅಶಕ್ಯವಾದರೆ ಒಂಬತ್ತು ಕದಲೀಫಲ(ಬಾಳೆಹಣ್ಣು)ಗಳನ್ನು ದಾನಕೊಡಬೇಕು. ಹೀಗೆ ಈ ಅಲಂಕಾರಿಕ ವಸ್ತುಗಳು ಮತ್ತು ನಾರಿಕೇಲದಾನದಿಂದ ವಿಶೇಷ ಸೌಮಾಂಗಲ್ಯ ಮತ್ತು ಸೌಖ್ಯಪ್ರಾಪ್ತಿಯನ್ನು ತಿಳಿಸಿದ್ದಾರೆ.

ಮಹಾನವಮೀ

ನವರಾತ್ರಿಯ ಒಂಬತ್ತನೇ ದಿನವಾದ ನವಮೀಯನ್ನು ಮಹಾನವಮೀ ಅಥವಾ ಮಾರನವಮೀ ಎಂದು ಕರೆಯುತ್ತಾರೆ. ಅಂದು ಆಯುಧಪೂಜೆಯನ್ನು ಮಾಡಬೇಕು. ಆನೆ, ಕುದುರೆ, ವಾಹನ, ಯಂತ್ರಗಳು, ಶಸ್ತ್ರಾಸ್ತ್ರ ಎಲ್ಲದರ ಪೂಜೆಯನ್ನು ಮಾಡಬೇಕು. ಅಷ್ಟೇ ಅಲ್ಲದೇ ತರಕಾರಿ ಹೆಚ್ಚುವ ಇಳಿಗೆ ಮಣೆ, ಕತ್ತಿ, ಚಾಕು, ಹಾರಿ, ಮೊದಲಾದವುಗಳನ್ನೂ ಪೂಜಿಸಬೇಕು.

ದ್ವಾಪರಯುಗದಲ್ಲಿ ಹನ್ನೆರಡು ವರುಷ ವನವಾಸ ಮುಗಿಸಿ ಅಜ್ಞಾತವಾಸಕ್ಕೆ ತೆರಳುವ ಮುನ್ನ ಪಾಂಡವರು ತಮ್ಮ ಆಯುಧಗಳನ್ನು ಶಮೀವೃಕ್ಷ(ಬನ್ನಿವೃಕ್ಷ)ದ ಮೇಲೆ ಇರಿಸಿ ತೆರಳಿದ್ದರು. ಅಜ್ಞಾತವಾಸವನ್ನು ಮುಗಿಸಿ ಬಂದ ನಂತರ ಶಮೀವೃಕ್ಷದ ಮೇಲಿಟ್ಟಿರುವ ಆಯುಧಗಳನ್ನು ಇದೇ ನವಮಿಯಂದು ಇಳಿಸಿ ಪೂಜಿಸಿದರು. ಆದ್ದರಿಂದ ಅಂದಿನ ದಿನ ಆಯುಧಪೂಜೆಯನ್ನು ಮಾಡುವ ಸಂಪ್ರದಾಯವು ನಡೆದು ಬಂದಿದೆ.

ಈ ದಿನದ ಇನ್ನೊಂದು ಪೌರಾಣಿಕ ಹಿನ್ನೆಲೆ- ದುರ್ಗಾದೇವಿಯು ಚಾಮುಂಡಿಯಾಗಿ ಅಷ್ಟಭುಜಧಾರಿಣೀ ಎನಿಸಿ ಮಹಿಷಾಸುರನನ್ನು ಸಂಹರಿಸುತ್ತಾಳೆ. ಸಂಹರಿಲು ಬಳಸಿದ ಆಯುಧಗಳನ್ನೆಲ್ಲ ಭೂಮಿಯ ಮೇಲೆಯೇ ಬಿಟ್ಟು ಅದೃಶ್ಯಳಾಗುತ್ತಾಳೆ. ದುಷ್ಟರನ್ನು ಸಂಹರಿಸಿದ ಆಯುಧಗಳನ್ನು ಭಕ್ತರು ಪೂಜಿಸಿದರು. ಅದೇ ಮುಂದೆ ಆಯುಧಪೂಜೆಯ ದಿನವೆನಿಸಿತು.

ವಿಜಯದಶಮೀ

ಅಧರ್ಮದ ವಿರುದ್ಧ ಧರ್ಮದ ಜಯ. ದೈತ್ಯರ ವಿರುದ್ಧ ದೇವತೆಗಳ ಜಯ. ಇದರ ಸಾಂಕೇತಿಕ ದಿನವೇ ವಿಜಯದಶಮೀ.

ಶ್ರೀರಾಮನ ವಿಜಯ

ಸೀತಾಮಾತೆಯನ್ನು ರಾವಣನ ಲಂಕೆಯಿಂದ ಬಿಡಿಸಿಕೊಂಡು ಬರಲು ನಡೆದ ಘೋರಯುದ್ಧದಲ್ಲಿ ಶ್ರೀರಾಮಚಂದ್ರನು ರಾವಣನನ್ನು ಸಂಹರಿಸುತ್ತಾನೆ. ಕಾಮುಕನ ಮೇಲೆ ಮರ್ಯಾದಾ ಪುರುಷೋತ್ತಮನ ಜಯವನ್ನು ಬಿಂಬಿಸುವುದೇ ವಿಜಯದಶಮೀ. ಶ್ರೀರಾಮಚಂದ್ರನ ವಿಜಯದ ದ್ಯೋತಕವಾಗಿ ಇಂದಿಗೂ ಎಲ್ಲೆಡೆ ವಿಜಯದಶಮಿಯಂದು ರಾವಣನ ಪ್ರತಿಕೃತಿಯನ್ನು ದಹಿಸುತ್ತಾರೆ. ದಶಶಿರನನ್ನು ರಾಮನು ಸಂಹರಿಸಿದ ದಿನ ”ದಶ-ಹರ” ಅಥವಾ ”ದಸರಾ” ಎಂದು ಕರೆಯಲ್ಪಟ್ಟಿತು.

ಪಾಂಡವರ ವನವಾಸ ಅಂತ್ಯ

ಹನ್ನೆರಡು ವರುಷ ವನವಾಸ ಹಾಗು ಒಂದು ವರುಷ ಅಜ್ಞಾತವಾಸವನ್ನು ಮುಗಿಸಿ ನವಮೀ ದಿನ ತಮ್ಮ ಶಸ್ತ್ರಗಳನ್ನೆಲ್ಲ ಶಮೀವೃಕ್ಷದಿಂದ ಇಳಿಸಿಕೊಂಡು, ದಶಮಿಯ ದಿನ ವನವಾಸಾಂತ್ಯಗೊಳಿಸಿ ಮರಳಿದರು. ದುರ್ಯೋಧನಾದಿಗಳು ವಿರಾಟ್ ರಾಜನ ಗೋವುಗಳನ್ನು ಕಟ್ಟಿಹಾಕುತ್ತಾರೆ. ಪಾಂಡವರು ತಾವು ದುರ್ಯೋಧನಾದಿಗಳನ್ನು ಜಯಿಸಿ ಗೋವುಗಳನ್ನು ಬಿಡಿಸಿ ವಿರಾಟ್ ರಾಜನಗೆ ಮರಳಿಸುತ್ತಾರೆ. ಅಂದಿನ ದಿನವೇ ವಿಜಯದಶಮೀ ದಿನ ಎಂದು ಆಚರಿಸಲಾಗುತ್ತಿದೆ. ಹೀಗೆ ಇದು ಶ್ರೀಕೃಷ್ಣನ ಪ್ರಿಯರಾದ ಪಾಂಡವರ ವಿಜಯದ ದಿನ. ಅಂದಿನ ದಿನ ಶಮೀವೃಕ್ಷದ ಅಂತರ್ಯಾಮಿಯಾದ ಶ್ರೀಲಕ್ಷ್ಮೀನರಸಿಂಹದೇವರನ್ನು ಪೂಜಿಸಬೇಕು. ಗುರುಹಿರಿಯರಿಗೆ ಬನ್ನಿಯ ಪತ್ರಗಳನ್ನು ಸಮರ್ಪಿಸಿ ಆಶೀರ್ವಾದಪಡೆಯಬೇಕು. ಪರಸ್ಪರ ಬನ್ನಿಯನ್ನು ವಿನಿಮಯ ಮಾಡಿಕೊಳ್ಳಬೇಕು.

ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ|
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶನೀ||

ಎಂಬ ಶ್ಲೋಕವನ್ನು ಹೇಳಿ ಬನ್ನಿಯನ್ನು ವಿನಿಮಯ ಮಾಡಬೇಕು.

ಶ್ರೀ ಮಧ್ವ ಜಯಂತೀ

ಶ್ರೀರಾಮನ ಸೇವಕರಾದ ಹನುಮಂತದೇವರು, ಶ್ರೀಕೃಷ್ಣನ ಭಕ್ತರಾದ ಭೀಮಸೇನದೇವರು ನಂತರದಲ್ಲಿ ಶ್ರೀವೇದವ್ಯಾಸರ ಶಿಷ್ಯರಾಗಿ ದ್ವೈತದುಂಧುಭಿ ಮೊಳಗಿಸಿದ ಶ್ರೀಮನ್ಮಧ್ವಾಚಾರ್ಯರ ಅವತರಾದ ದಿನವೇ ವಿಜಯದಶಮೀ. ಕುಮತಗಳ ಭಂಜಿಸಿ ಸುಮತವನ್ನು ಸ್ಥಾಪಿಸಿ ವಿಜಯಿಗಳಾದ ಶ್ರೀಮನ್ಮಧ್ವಾಚಾರ್ಯರ ಜಯಂತಿಯ ದಿನ.

ಇದನ್ನೂ ಓದಿ: Navaratri Saffron Colour Outfit Tips: ನವರಾತ್ರಿ ಮೊದಲ ದಿನ ಕೇಸರಿ ಎಥ್ನಿಕ್‌ವೇರ್‌ ಧರಿಸುತ್ತಿದ್ದೀರಾ? ಇಲ್ಲಿದೆ ಸ್ಟೈಲಿಂಗ್‌ ಐಡಿಯಾ

Exit mobile version