ತಾರೋಡಿ ಸುರೇಶ
ಯೋಗಶಾಸ್ತ್ರದಲ್ಲಿ ʻಅನುಭೂತವಿಷಯಾ ಸಂಪ್ರಮೋಷಃ ಸ್ಮೃತಿಃʼ ಅಂದರೆ ಅನುಭವಿಸಿದ್ದ ವಿಷಯವು ಮನಸ್ಸಿನಿಂದ ಮರೆಯಾಗದಿರುವುದು ಸ್ಮೃತಿ ಎಂದಿದ್ದಾರೆ. ಅದು ಬುದ್ಧಿಭೂಮಿಕೆಯಿಂದ ಜಾರಿಹೋದರೆ ವಿಸ್ಮೃತಿ. ಎಲ್ಲರಿಗೂ ಈ ಅನುಭವವು ಇರುವಂತಹದ್ದೇ.
ಸ್ಮೃತಿ ವಿಸ್ಮೃತಿಗಳು ಕೇವಲ ನಮ್ಮ ಬಾಹ್ಯಜೀವನಕ್ಕೆ ಮಾತ್ರ ಸೀಮಿತವಲ್ಲ. ನಮ್ಮ ಪೂರ್ವಜರಾದ ಋಷಿಗಳು, ಸೂಕ್ಷ್ಮ ಮತ್ತು ಪರ ಎಂಬ ಇನ್ನೆರಡು ಅಂತರಂಗದ ಕ್ಷೇತ್ರಗಳನ್ನೂ ತಮ್ಮ ಯೋಗದೃಷ್ಟಿಯಿಂದ ಕಂಡುಕೊಂಡರು. ಆದರೆ, ನಮಗೆ ನಮ್ಮದೇ ಜೀವದ, ಅದಕ್ಕೂ ಮೂಲದಲ್ಲಿರುವ ದೇವನ ಪರಿಚಯವಾಗಲೀ ಇಲ್ಲ. ಅಲ್ಲಿಯ ಪರಮಸುಖವೂ ಇಲ್ಲ. ಅಲ್ಲಿ ವಿಸ್ಮೃತಿ ಉಂಟಾಗಿದೆ. ಜೀವನ ಜೊತೆಯಲ್ಲಿಯೇ ದೇವನು ಬರುತ್ತಿದ್ದರೂ ಮರೆವು ಅಂದರೆ ಅಜ್ಞಾನದ ಆವರಣವು ಮುಚ್ಚಿಬಿಡುತ್ತದೆ.
ಮರೆತಿದ್ದುದನ್ನು ಜ್ಞಾಪಿಸುವವರು ಬೇಕು. ಜೀವನದ ಮಧುರತಮವಾದ ವಸ್ತು ಅದಾಗಿದ್ದಲ್ಲಿ ಅದನ್ನು ಅವಶ್ಯ ನೆನಪಿಸಬೇಕು. ಇಲ್ಲದಿದ್ದರೆ ಜೀವಿಯು ಮೂಲಭೂತ ಹಕ್ಕಾದ ತನ್ನ ಪರಸ್ವರೂಪವನ್ನು ಪಡೆಯದೆ ಜೀವನವನ್ನು ವ್ಯರ್ಥಮಾಡಿಕೊಳ್ಳುವನು. ಅಂತಹ ನೆನಪನ್ನು ಸಹಜವಾಗಿ ಉಂಟುಮಾಡಲು ಸೂಕ್ತವಾದ ಜೀವನ ವಿಧಾನವೊಂದನ್ನು ನಮ್ಮ ಪೂರ್ವಜರಾದ ಋಷಿಗಳು ರೂಪಿಸಿಕೊಟ್ಟರು. ಇದೇ ಸಂಸ್ಕೃತಿ. ಜ್ಞಾನದ ಸವಿಯನ್ನುಂಡವರು ತಾನೇ ಅದನ್ನು ಬೇರೆಯವರಿಗೂ ಉಣಬಡಿಸಬಲ್ಲರು. ಇದರ ಒಂದೆರಡು ಉದಾಹರಣೆಗಳನ್ನು ನೋಡೋಣ:
ಗರ್ಭೋಪನಿಷತ್ತು ಶಿಶುವು ಗರ್ಭದಲ್ಲಿರುವಾಗ, ಅದರ ಅಂತರಂಗದ ಮತ್ತು ಹೊರಗಿನ ಸ್ಥಿತಿಗತಿಗಳು ಹೇಗಿರುತ್ತವೆ ಎಂಬುದನ್ನು ವರ್ಣಿಸಿದೆ. ಮಗುವು ಗರ್ಭದಲ್ಲಿರುವಾಗ ಎರಡೂ ಕೈಗಳನ್ನು ಜೋಡಿಸಿಕೊಂಡು ತೇಲುತ್ತಿರುತ್ತದೆ. ಆ ಸ್ಥಿತಿಯು ಸ್ವಭಾವಸಹಜವಾದ ನಮಸ್ಕಾರ ಮುದ್ರೆ ಎನ್ನಿಸಿಕೊಳ್ಳುತ್ತದೆ. ಸುಖಪ್ರಸವಕ್ಕೂ ಈ ಸ್ಥಿತಿಯು ಅನುಕೂಲ. ಗರ್ಭೋಪನಿಷತ್ತಿನ ಪ್ರಕಾರ ಆ ಜೀವವು ತನ್ನೊಳಗೆ ಪರಮಾತ್ಮಜ್ಯೋತಿಯನ್ನು ನೋಡಿ ಆಸ್ವಾದಿಸುತ್ತಿರುತ್ತದೆ. ಹಾಗಾಗಿ ಆ ಒಳ ನಮಸ್ಕಾರದ ಕ್ರಿಯೆಯನ್ನು ಹೊರಗಿನ ದೈನಂದಿನ ಜೀವನದಲ್ಲೂ ದೇವರಿಗೆ, ಹಿರಿಯರಿಗೆ ನಮಸ್ಕಾರ ಮಾಡಿಸಿ ಅಭ್ಯಾಸಮಾಡಿಸುತ್ತಾರೆ. ಒಬ್ಬರನ್ನೊಬ್ಬರು ಸಂಧಿಸಿದಾಗ ಎಲ್ಲರೊಳಗೂ ಇರುವ ಭಗವಂತನನ್ನು ಸ್ಮರಿಸಿಕೊಂಡು ನಮಸ್ಕರಿಸುತ್ತಾರೆ. ಇದನ್ನು ಮೈಗೂಡಿಸಿಕೊಳ್ಳುವುದರಿಂದ ಪರಮಾತ್ಮಜ್ಯೋತಿಯ ಸ್ಮೃತಿ ಲಭ್ಯವಾಗುತ್ತದೆ ಎನ್ನುವುದು ಇದರ ಹಿಂದಿರುವ ವಿಜ್ಞಾನ. ಗರ್ಭದಲ್ಲಿ ಶಿಶುವಿನ ಈ ಸ್ಥಿತಿಯನ್ನು ಯೋಗಮುದ್ರೆ ಎಂದೇ ಕರೆದಿದ್ದಾರೆ. ಬಹುಮುಖ್ಯವಾದ ವಿಷಯವೆಂದರೆ ಈ ನಮಸ್ಕಾರದ ವಿಧಾನವು ಮನುಷ್ಯಕೃತವಾದದ್ದಲ್ಲ. ಸೃಷ್ಟಿಸಹಜವಾದದ್ದು.
ಪ್ರಸವದ ಕೊಠಡಿಯಲ್ಲಿ ಒಂದು ದೀಪವನ್ನು ಹಚ್ಚಿಡುವ ವಾಡಿಕೆಯುಂಟು. ಇದಕ್ಕೆ ಕಾರಣ, ಗರ್ಭದಲ್ಲಿ ಶಿಶುವು ತನ್ನ ಎಂಟು ಅಥವಾ ಒಂಬತ್ತನೆಯ ತಿಂಗಳಲ್ಲಿ ತನ್ನ ಮೂಲಸ್ವರೂಪವಾದ ಪರಂಜ್ಯೊತಿಯನ್ನು ದರ್ಶನಮಾಡುತ್ತಾ ಸುಖಿಸುವುದಂತೆ. ಆ ಸುಖವು, ಪ್ರಸವವಾದ ಕ್ಷಣವೇ ಪೂರ್ವಕರ್ಮಗಳ ಕಾರಣದಿಂದ, ಮರೆಯಾಗುವುದು. ಅದನ್ನು ನೆನಪಿಸಲು ಅದರ ದೃಷ್ಟಿಗೆ ಬೀಳುವಂತೆ ಒಂದು ತ್ರಿಕೋಣದ ಹಣತೆಯಲ್ಲಿ ಒಳಜ್ಯೋತಿಯನ್ನು ನೆನಪಿಸುವ ದೀಪವನ್ನು ಬೆಳಗುವ ಪದ್ಧತಿಯನ್ನು ಋಷಿಗಳು ತಂದುಕೊಟ್ಟಿದ್ದಾರೆ.
ಇಂತಹ ತುಪ್ಪ,ಇಂತಹ ಕಮಲಸೂತ್ರದ ಬತ್ತಿ, ಇಷ್ಟು ಪ್ರಮಾಣದ ಜ್ವಾಲೆ ಇರಬೇಕು ಎಂದೆಲ್ಲ ನಿಯಮಗಳಿವೆ. ಆಗ ಅದು ಪರಂಜ್ಯೋತಿಯ ಅಭಿಜ್ಞಾನವಾಗಿ ಅದರ ನೆನಪನ್ನು ಕೊಡಬಲ್ಲುದು. ಅಭಿಜಾತಶಿಶುವು ತಂದೆತಾಯಿಯರನ್ನು ಗುರುತಿಸದಿದ್ದರೂ ದೀಪವನ್ನು ನೋಡುತ್ತಾ ನಲಿಯುವುದನ್ನು ಇಂದಿಗೂ ಗಮನಿಸಬಹುದು.
ನಮ್ಮ ಸಂಸ್ಕೃತಿಯಲ್ಲಿ ಸಜ್ಜನರಸಂಗಕ್ಕೆ ವಿಶೇಷ ಮಹತ್ವವಿದೆ. ʻನೇಯಂ ಸಜ್ಜನಸಂಗೇ ಚಿತ್ತಂʼ ಎಂದೆಲ್ಲ ಜ್ಞಾನಿಗಳು ಹಾಡಿದ್ದಾರೆ. ಏಕೆಂದರೆ ಜ್ಞಾನಿಗಳ ಸಹವಾಸ ಅಂತಹದ್ದೇ ಆದ ಮನೋಧರ್ಮವನ್ನುಂಟು ಮಾಡಿ ಸಾಧನೆಗೆ ಸ್ಫೂರ್ತಿಯನ್ನು ನೀಡಿ ತನ್ಮೂಲಕ ವಿಸ್ಮೃತಿಯನ್ನು ಹೋಗಲಾಡಿಸುತ್ತದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ತನ್ನ ಸ್ವರೂಪವನ್ನು ಮರೆತು ಧರ್ಮಾಧರ್ಮಗಳ ಗೊಂದಲಕ್ಕೆ ಬಿದ್ದಾಗ ಅರ್ಜುನನಿಗೆ ಶ್ರೀಕೃಷ್ಣನು ತಿಳಿಹೇಳುತ್ತಾನೆ. ಕೊನೆಯಲ್ಲಿ ನಷ್ಟೋ ʻಮೋಹಃ ಸ್ಮೃತಿರ್ಲಬ್ಧಾ ತ್ವತ್ಪ್ರಸಾದಾನ್ಮಯಾಚ್ಯುತʼ ಎಂದು ನಿವೇದಿಸಿ ತನಗೆ ಪೂರ್ವಸ್ಮೃತಿಯು ಬಂತು ಎಂದು ಅರ್ಜುನನು ತನ್ನನ್ನು ಕರ್ತವ್ಯದಲ್ಲಿ ತೊಡಗಿಸಿಕೊಳ್ಳುತ್ತಾನೆ. ಪಾಲಿಸಬೇಕಾದ ವಿಧಿನಿಷೇಧಗಳ ಪರಿಚಯವನ್ನು ಕೊಟ್ಟು ಭಗವತ್ಸ್ಮರಣೆಯನ್ನು ಉಂಟುಮಾಡುವ ಧರ್ಮಶಾಸ್ತ್ರಗಳನ್ನೂ ಈ ಕಾರಣದಿಂದಲೇ ಸ್ಮೃತಿಗಳು ಎನ್ನುತ್ತಾರೆ.
ಒಟ್ಟಾರೆ ಜ್ಞಾನ ಆನಂದ ಅಮಲತ್ವಗಳೊಂದಿಗೆ ತನ್ನಲ್ಲೇ ತಾನು ಯಾವಾಗಲೂ ಬೆಳಗುತ್ತಿರುವ ಪರಂಜ್ಯೊತಿಯನ್ನು ಹೊಂದಿ ವಿಸ್ಮೃತಿಯಿಂದ ದೂರವಾಗಿ ಮತ್ತೆ ಜನನ-ಮರಣಗಳ ಬಂಧನಕ್ಕೆ ಸಿಗದಂತಾಗುವುದೇ ಸ್ಮೃತಿಯ ಫಲ. ಅದಕ್ಕಾಗಿಯೇ ಸಂಸ್ಕೃತಿ.
– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ
ಇದನ್ನೂ ಓದಿ : Prerane : ವಿದ್ಯಾಭ್ಯಾಸವೋ? ವಿದ್ಯಾಭಾಸವೋ?