ಧಾರ್ಮಿಕ
Prerane : ಸ್ಮೃತಿ, ವಿಸ್ಮೃತಿ, ಸಂಸ್ಕೃತಿ; ಇವುಗಳ ನಡುವಿನ ಸಂಬಂಧವೇನು?
“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮ ಚಿಂತಕರು ಇಲ್ಲಿ ಬರೆಯುತ್ತಿದ್ದಾರೆ. ಸ್ಮೃತಿ, ವಿಸ್ಮೃತಿ, ಸಂಸ್ಕೃತಿ ಇವುಗಳ ನಡುವಿನ ಸಂಬಂಧಗಳ ಕುರಿತ ಲೇಖನ ಇಲ್ಲಿದೆ.
ತಾರೋಡಿ ಸುರೇಶ
ಯೋಗಶಾಸ್ತ್ರದಲ್ಲಿ ʻಅನುಭೂತವಿಷಯಾ ಸಂಪ್ರಮೋಷಃ ಸ್ಮೃತಿಃʼ ಅಂದರೆ ಅನುಭವಿಸಿದ್ದ ವಿಷಯವು ಮನಸ್ಸಿನಿಂದ ಮರೆಯಾಗದಿರುವುದು ಸ್ಮೃತಿ ಎಂದಿದ್ದಾರೆ. ಅದು ಬುದ್ಧಿಭೂಮಿಕೆಯಿಂದ ಜಾರಿಹೋದರೆ ವಿಸ್ಮೃತಿ. ಎಲ್ಲರಿಗೂ ಈ ಅನುಭವವು ಇರುವಂತಹದ್ದೇ.
ಸ್ಮೃತಿ ವಿಸ್ಮೃತಿಗಳು ಕೇವಲ ನಮ್ಮ ಬಾಹ್ಯಜೀವನಕ್ಕೆ ಮಾತ್ರ ಸೀಮಿತವಲ್ಲ. ನಮ್ಮ ಪೂರ್ವಜರಾದ ಋಷಿಗಳು, ಸೂಕ್ಷ್ಮ ಮತ್ತು ಪರ ಎಂಬ ಇನ್ನೆರಡು ಅಂತರಂಗದ ಕ್ಷೇತ್ರಗಳನ್ನೂ ತಮ್ಮ ಯೋಗದೃಷ್ಟಿಯಿಂದ ಕಂಡುಕೊಂಡರು. ಆದರೆ, ನಮಗೆ ನಮ್ಮದೇ ಜೀವದ, ಅದಕ್ಕೂ ಮೂಲದಲ್ಲಿರುವ ದೇವನ ಪರಿಚಯವಾಗಲೀ ಇಲ್ಲ. ಅಲ್ಲಿಯ ಪರಮಸುಖವೂ ಇಲ್ಲ. ಅಲ್ಲಿ ವಿಸ್ಮೃತಿ ಉಂಟಾಗಿದೆ. ಜೀವನ ಜೊತೆಯಲ್ಲಿಯೇ ದೇವನು ಬರುತ್ತಿದ್ದರೂ ಮರೆವು ಅಂದರೆ ಅಜ್ಞಾನದ ಆವರಣವು ಮುಚ್ಚಿಬಿಡುತ್ತದೆ.
ಮರೆತಿದ್ದುದನ್ನು ಜ್ಞಾಪಿಸುವವರು ಬೇಕು. ಜೀವನದ ಮಧುರತಮವಾದ ವಸ್ತು ಅದಾಗಿದ್ದಲ್ಲಿ ಅದನ್ನು ಅವಶ್ಯ ನೆನಪಿಸಬೇಕು. ಇಲ್ಲದಿದ್ದರೆ ಜೀವಿಯು ಮೂಲಭೂತ ಹಕ್ಕಾದ ತನ್ನ ಪರಸ್ವರೂಪವನ್ನು ಪಡೆಯದೆ ಜೀವನವನ್ನು ವ್ಯರ್ಥಮಾಡಿಕೊಳ್ಳುವನು. ಅಂತಹ ನೆನಪನ್ನು ಸಹಜವಾಗಿ ಉಂಟುಮಾಡಲು ಸೂಕ್ತವಾದ ಜೀವನ ವಿಧಾನವೊಂದನ್ನು ನಮ್ಮ ಪೂರ್ವಜರಾದ ಋಷಿಗಳು ರೂಪಿಸಿಕೊಟ್ಟರು. ಇದೇ ಸಂಸ್ಕೃತಿ. ಜ್ಞಾನದ ಸವಿಯನ್ನುಂಡವರು ತಾನೇ ಅದನ್ನು ಬೇರೆಯವರಿಗೂ ಉಣಬಡಿಸಬಲ್ಲರು. ಇದರ ಒಂದೆರಡು ಉದಾಹರಣೆಗಳನ್ನು ನೋಡೋಣ:
ಗರ್ಭೋಪನಿಷತ್ತು ಶಿಶುವು ಗರ್ಭದಲ್ಲಿರುವಾಗ, ಅದರ ಅಂತರಂಗದ ಮತ್ತು ಹೊರಗಿನ ಸ್ಥಿತಿಗತಿಗಳು ಹೇಗಿರುತ್ತವೆ ಎಂಬುದನ್ನು ವರ್ಣಿಸಿದೆ. ಮಗುವು ಗರ್ಭದಲ್ಲಿರುವಾಗ ಎರಡೂ ಕೈಗಳನ್ನು ಜೋಡಿಸಿಕೊಂಡು ತೇಲುತ್ತಿರುತ್ತದೆ. ಆ ಸ್ಥಿತಿಯು ಸ್ವಭಾವಸಹಜವಾದ ನಮಸ್ಕಾರ ಮುದ್ರೆ ಎನ್ನಿಸಿಕೊಳ್ಳುತ್ತದೆ. ಸುಖಪ್ರಸವಕ್ಕೂ ಈ ಸ್ಥಿತಿಯು ಅನುಕೂಲ. ಗರ್ಭೋಪನಿಷತ್ತಿನ ಪ್ರಕಾರ ಆ ಜೀವವು ತನ್ನೊಳಗೆ ಪರಮಾತ್ಮಜ್ಯೋತಿಯನ್ನು ನೋಡಿ ಆಸ್ವಾದಿಸುತ್ತಿರುತ್ತದೆ. ಹಾಗಾಗಿ ಆ ಒಳ ನಮಸ್ಕಾರದ ಕ್ರಿಯೆಯನ್ನು ಹೊರಗಿನ ದೈನಂದಿನ ಜೀವನದಲ್ಲೂ ದೇವರಿಗೆ, ಹಿರಿಯರಿಗೆ ನಮಸ್ಕಾರ ಮಾಡಿಸಿ ಅಭ್ಯಾಸಮಾಡಿಸುತ್ತಾರೆ. ಒಬ್ಬರನ್ನೊಬ್ಬರು ಸಂಧಿಸಿದಾಗ ಎಲ್ಲರೊಳಗೂ ಇರುವ ಭಗವಂತನನ್ನು ಸ್ಮರಿಸಿಕೊಂಡು ನಮಸ್ಕರಿಸುತ್ತಾರೆ. ಇದನ್ನು ಮೈಗೂಡಿಸಿಕೊಳ್ಳುವುದರಿಂದ ಪರಮಾತ್ಮಜ್ಯೋತಿಯ ಸ್ಮೃತಿ ಲಭ್ಯವಾಗುತ್ತದೆ ಎನ್ನುವುದು ಇದರ ಹಿಂದಿರುವ ವಿಜ್ಞಾನ. ಗರ್ಭದಲ್ಲಿ ಶಿಶುವಿನ ಈ ಸ್ಥಿತಿಯನ್ನು ಯೋಗಮುದ್ರೆ ಎಂದೇ ಕರೆದಿದ್ದಾರೆ. ಬಹುಮುಖ್ಯವಾದ ವಿಷಯವೆಂದರೆ ಈ ನಮಸ್ಕಾರದ ವಿಧಾನವು ಮನುಷ್ಯಕೃತವಾದದ್ದಲ್ಲ. ಸೃಷ್ಟಿಸಹಜವಾದದ್ದು.
ಪ್ರಸವದ ಕೊಠಡಿಯಲ್ಲಿ ಒಂದು ದೀಪವನ್ನು ಹಚ್ಚಿಡುವ ವಾಡಿಕೆಯುಂಟು. ಇದಕ್ಕೆ ಕಾರಣ, ಗರ್ಭದಲ್ಲಿ ಶಿಶುವು ತನ್ನ ಎಂಟು ಅಥವಾ ಒಂಬತ್ತನೆಯ ತಿಂಗಳಲ್ಲಿ ತನ್ನ ಮೂಲಸ್ವರೂಪವಾದ ಪರಂಜ್ಯೊತಿಯನ್ನು ದರ್ಶನಮಾಡುತ್ತಾ ಸುಖಿಸುವುದಂತೆ. ಆ ಸುಖವು, ಪ್ರಸವವಾದ ಕ್ಷಣವೇ ಪೂರ್ವಕರ್ಮಗಳ ಕಾರಣದಿಂದ, ಮರೆಯಾಗುವುದು. ಅದನ್ನು ನೆನಪಿಸಲು ಅದರ ದೃಷ್ಟಿಗೆ ಬೀಳುವಂತೆ ಒಂದು ತ್ರಿಕೋಣದ ಹಣತೆಯಲ್ಲಿ ಒಳಜ್ಯೋತಿಯನ್ನು ನೆನಪಿಸುವ ದೀಪವನ್ನು ಬೆಳಗುವ ಪದ್ಧತಿಯನ್ನು ಋಷಿಗಳು ತಂದುಕೊಟ್ಟಿದ್ದಾರೆ.
ಇಂತಹ ತುಪ್ಪ,ಇಂತಹ ಕಮಲಸೂತ್ರದ ಬತ್ತಿ, ಇಷ್ಟು ಪ್ರಮಾಣದ ಜ್ವಾಲೆ ಇರಬೇಕು ಎಂದೆಲ್ಲ ನಿಯಮಗಳಿವೆ. ಆಗ ಅದು ಪರಂಜ್ಯೋತಿಯ ಅಭಿಜ್ಞಾನವಾಗಿ ಅದರ ನೆನಪನ್ನು ಕೊಡಬಲ್ಲುದು. ಅಭಿಜಾತಶಿಶುವು ತಂದೆತಾಯಿಯರನ್ನು ಗುರುತಿಸದಿದ್ದರೂ ದೀಪವನ್ನು ನೋಡುತ್ತಾ ನಲಿಯುವುದನ್ನು ಇಂದಿಗೂ ಗಮನಿಸಬಹುದು.
ನಮ್ಮ ಸಂಸ್ಕೃತಿಯಲ್ಲಿ ಸಜ್ಜನರಸಂಗಕ್ಕೆ ವಿಶೇಷ ಮಹತ್ವವಿದೆ. ʻನೇಯಂ ಸಜ್ಜನಸಂಗೇ ಚಿತ್ತಂʼ ಎಂದೆಲ್ಲ ಜ್ಞಾನಿಗಳು ಹಾಡಿದ್ದಾರೆ. ಏಕೆಂದರೆ ಜ್ಞಾನಿಗಳ ಸಹವಾಸ ಅಂತಹದ್ದೇ ಆದ ಮನೋಧರ್ಮವನ್ನುಂಟು ಮಾಡಿ ಸಾಧನೆಗೆ ಸ್ಫೂರ್ತಿಯನ್ನು ನೀಡಿ ತನ್ಮೂಲಕ ವಿಸ್ಮೃತಿಯನ್ನು ಹೋಗಲಾಡಿಸುತ್ತದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ತನ್ನ ಸ್ವರೂಪವನ್ನು ಮರೆತು ಧರ್ಮಾಧರ್ಮಗಳ ಗೊಂದಲಕ್ಕೆ ಬಿದ್ದಾಗ ಅರ್ಜುನನಿಗೆ ಶ್ರೀಕೃಷ್ಣನು ತಿಳಿಹೇಳುತ್ತಾನೆ. ಕೊನೆಯಲ್ಲಿ ನಷ್ಟೋ ʻಮೋಹಃ ಸ್ಮೃತಿರ್ಲಬ್ಧಾ ತ್ವತ್ಪ್ರಸಾದಾನ್ಮಯಾಚ್ಯುತʼ ಎಂದು ನಿವೇದಿಸಿ ತನಗೆ ಪೂರ್ವಸ್ಮೃತಿಯು ಬಂತು ಎಂದು ಅರ್ಜುನನು ತನ್ನನ್ನು ಕರ್ತವ್ಯದಲ್ಲಿ ತೊಡಗಿಸಿಕೊಳ್ಳುತ್ತಾನೆ. ಪಾಲಿಸಬೇಕಾದ ವಿಧಿನಿಷೇಧಗಳ ಪರಿಚಯವನ್ನು ಕೊಟ್ಟು ಭಗವತ್ಸ್ಮರಣೆಯನ್ನು ಉಂಟುಮಾಡುವ ಧರ್ಮಶಾಸ್ತ್ರಗಳನ್ನೂ ಈ ಕಾರಣದಿಂದಲೇ ಸ್ಮೃತಿಗಳು ಎನ್ನುತ್ತಾರೆ.
ಒಟ್ಟಾರೆ ಜ್ಞಾನ ಆನಂದ ಅಮಲತ್ವಗಳೊಂದಿಗೆ ತನ್ನಲ್ಲೇ ತಾನು ಯಾವಾಗಲೂ ಬೆಳಗುತ್ತಿರುವ ಪರಂಜ್ಯೊತಿಯನ್ನು ಹೊಂದಿ ವಿಸ್ಮೃತಿಯಿಂದ ದೂರವಾಗಿ ಮತ್ತೆ ಜನನ-ಮರಣಗಳ ಬಂಧನಕ್ಕೆ ಸಿಗದಂತಾಗುವುದೇ ಸ್ಮೃತಿಯ ಫಲ. ಅದಕ್ಕಾಗಿಯೇ ಸಂಸ್ಕೃತಿ.
– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ
ಇದನ್ನೂ ಓದಿ : Prerane : ವಿದ್ಯಾಭ್ಯಾಸವೋ? ವಿದ್ಯಾಭಾಸವೋ?
ಕರ್ನಾಟಕ
New Parliament Building : ನೂತನ ಸಂಸತ್ ಭವನ ಉದ್ಘಾಟನೆಗೆ ಶೃಂಗೇರಿ ಪುರೋಹಿತರು
ನೂತನ ಸಂಸತ್ ಭವನ: ಭಾನುವಾರ ನಡೆಯಲಿರುವ ನೂತನ ಸಂಸತ್ ಭವನದ ಉದ್ಘಾಟನೆಗೆ ಸಂಬಂಧಿಸಿದ ಪೂಜಾ ಕಾರ್ಯಕ್ರಮಗಳ ಸಾರಥ್ಯವನ್ನು ಶೃಂಗೇರಿಯ ಋತ್ವಿಜರು ವಹಿಸಿದ್ದಾರೆ.
ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಸಾರಥ್ಯದಲ್ಲಿ ನಿರ್ಮಾಣಗೊಂಡಿರುವ ನೂತನ ಸಂಸತ್ ಭವನ (New Parliament Building) ಉದ್ಘಾಟನೆ ಭಾನುವಾರ (ಮೇ 28) ಅದ್ಧೂರಿಯಾಗಿ ಮತ್ತು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ವಿಶೇಷವೆಂದರೆ ಸಂಸತ್ ಭವನದಲ್ಲಿ ನಡೆಯಲಿರುವ ಉದ್ಘಾಟನೆ ಸಂಬಂಧಿತ ಪೂಜಾ ಕೈಂಕರ್ಯಗಳನ್ನು (Pooja programmes) ನಡೆಸುವ ಜವಾಬ್ದಾರಿ ಹೊತ್ತಿರುವವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ (Shringeri) ಪುರೋಹಿತರು.
ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುವುದಕ್ಕಾಗಿ ಶೃಂಗೇರಿಯ ಪುರೋಹಿತರ ತಂಡ ಆಗಲೇ ದಿಲ್ಲಿ ತಲುಪಿಸಿದ್ದು ಶನಿವಾರ ಸಂಜೆಯಿಂದಲೇ ಕಾರ್ಯಕ್ರಮಗಳು ನಡೆಯಲಿವೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಈ ಭವನವನ್ನು ಉದ್ಘಾಟಿಸಲಿದ್ದು, ಅದಕ್ಕೆ ಸಂಬಂಧಿಸಿದ ಪೂಜೆಗಳನ್ನು ಶೃಂಗೇರಿಯ ವೇದಪಾರಂಗತ ಪುರೋಹಿತರಾದ ಸೀತಾರಾಮ ಶರ್ಮ, ಶ್ರೀರಾಮ ಶರ್ಮ ಹಾಗೂ ಲಕ್ಷ್ಮೀಶ ತಂತ್ರಿ ಅವರು ನೆರವೇರಿಸಲಿದ್ದಾರೆ.
ಶನಿವಾರದಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭವಾಗಿವೆ. ಶನಿವಾರ ರಾತ್ರಿ ವಾಸ್ತು ಹೋಮ ನಡೆಯಲಿದ್ದು, ಭಾನುವಾರ ಬೆಳಗ್ಗೆ ಗಣಪತಿ ಹೋಮ ನಡೆಯಲಿದೆ.
ಅಡಿಗಲ್ಲು ಕಾರ್ಯಕ್ರಮದಲ್ಲೂ ಶೃಂಗೇರಿಯ ಪುರೋಹಿತರಿಂದಲೇ ಪೂಜೆ
2020ರಲ್ಲಿ ಸಂಸತ್ ಭವನಕ್ಕೆ ಅಡಿಗಲ್ಲು ಇಡುವ ಸಂದರ್ಭದಲ್ಲಿ ನಡೆದ ಪೂಜೆಯನ್ನೂ ಶೃಂಗೇರಿಯ ಪುರೋಹಿತರೇ ನಡೆಸಿದ್ದರು. ಆರು ಜನ ಪುರೋಹಿತರಿಂದ ಭೂಮಿ ಪೂಜೆ ನೆರವೇರಿಸಲಾಗಿತ್ತು.
2020ರ ಡಿಸೆಂಬರ್ 10ರಂದು ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶೃಂಗೇರಿ ಮಠದ ವೈದಿಕ ಪಂಡಿತರಾದ ವೇದಬ್ರಹ್ಮ ಡಾ. ಟಿ. ಶಿವಕುಮಾರ ಶರ್ಮಾ, ವೇದ ಬ್ರಹ್ಮ ಶ್ರೀ ಲಕ್ಷ್ಮೀನಾರಾಯಣ ಸೋಮಯಾಜಿ, ವೇದಬ್ರಹ್ಮ ಶ್ರೀ ಗಣೇಶ ಸೋಮಯಾಜಿ, ನಾಗರಾಜ ಅಡಿಗ, ಋಗ್ವೇದ ಪ್ರಾಧ್ಯಾಪಕರಾಗಿರುವ ರಾಘವೇಂದ್ರ ಭಟ್, ಋಷ್ಯಶೃಂಗ ಭಟ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಬಾರಿ ಏನೇನು ಕಾರ್ಯಕ್ರಮವಿರುತ್ತದೆ?
ನೂತನ ಸಂಸತ್ ಭವನದ ಉದ್ಘಾಟನೆ ಭಾನುವಾರ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲನೆ ಹಂತದಲ್ಲಿ, ಸಂಸತ್ತಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿಯ ಮೇಲಾವರಣದೊಳಗೆ ನಡೆಯುವ ಧಾರ್ಮಿಕ ಕ್ರಿಯೆಯೊಂದಿಗೆ ಸಮಾರಂಭವು ಪ್ರಾರಂಭವಾಗುತ್ತದೆ. ಈ ವೇಳೆ, ಪ್ರಧಾನಿ ಮೋದಿ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಸೇರಿದಂತೆ ಹಿರಿಯ ಸಚಿವರು ಭಾಗವಹಿಸಲಿದ್ದಾರೆ.
ಬಳಿಕ ಲೋಕಸಭೆ ಮತ್ತು ರಾಜ್ಯಸಭೆ ಆವರಣಗಳನ್ನು ಗಣ್ಯರು ಪರಿಶೀಲಿಸಿದ ಬಳಿಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಲೋಕಸಭೆ ಸ್ಪೀಕರ್ ಪೀಠದ ಮುಂದೆ ಪವಿತ್ರ ರಾಜದಂಡವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಪ್ರತಿಷ್ಠಾಪನೆಯನ್ನು ತಮಿಳುನಾಡಿನಿಂದ ಆಗಮಿಸಿದ ಪುರೋಹಿತರೇ ಮಾಡಲಿದ್ದು, ರಾಜದಂಡವನ್ನು ವಿನ್ಯಾಸ ಮಾಡಿದ ಮೂಲ ಅಕ್ಕಸಾಲಿಗ ಕೂಡ ಈ ವೇಳೆ ಹಾಜರು ಇರಲಿದ್ದಾರೆ. ಮೊದಲನೆ ಹಂತದ ಈ ಕಾರ್ಯಕ್ರಮವು ಬೆಳಗ್ಗೆ 9.30ಕ್ಕೆ ಮುಕ್ತಾಯವಾಗಲಿದೆ.
ಮಧ್ಯಾಹ್ನದ ವೇಳೆ ಎರಡನೇ ಹಂತದ ಕಾರ್ಯಕ್ರಮಗಳು ನಡೆಯಲಿವೆ. ಈ ವೇಳೆ ನಾಯಕರು ಮಾತನಾಡಲಿದ್ದಾರೆ. ಮೊದಲಿಗೆ ರಾಜ್ಯಸಭೆಯ ಡೆಪ್ಯುಟಿ ಚೇರ್ಮನ್ ಹರಿವಂಶ್ ಅವರು, ರಾಜ್ಯಸಭಾ ಚೇರ್ಮನ್ ಆಗಿರುವ ಉಪರಾಷ್ಟ್ರಪತಿಗಳ ಲಿಖಿತ ಸಂದೇಶವನ್ನು ಓದಲಿದ್ದಾರೆ. ಇದೇ ವೇಳೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳುಹಿಸಿರುವ ಲಿಖಿತ ಸಂದೇಶವನ್ನೂ ಓದಲಾಗುತ್ತದೆ.
ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಲೋಕಸಭೆ ಪ್ರಧಾನ ಕಾರ್ಯದರ್ಶಿ ಅವರು ವಂದನಾರ್ಪಣೆ ಮಾಡುವುದರೊಂದಿಗೆ ಉದ್ಘಾಟನಾ ಕಾರ್ಯಕ್ರಮವು ಸಂಪನ್ನಗೊಳ್ಳಲಿದೆ.
ಇದನ್ನೂ ಓದಿ: New Parliament: ಹೊಸ ಸಂಸತ್ ಭವನದ ವಿಡಿಯೊ ಹಂಚಿಕೊಂಡು, ವಿಶೇಷ ಮನವಿ ಮಾಡಿದ ಪ್ರಧಾನಿ ಮೋದಿ
ಕರ್ನಾಟಕ
Thaileshwara Ganigara Mutt: ಗಾಣಿಗ ಮಹಾಸಂಸ್ಥಾನವನ್ನು ಉಳಿಸಿ ಬೆಳೆಸಬೇಕಿದೆ: ಜಯೇಂದ್ರ ಪುರಿ ಸ್ವಾಮೀಜಿ
Thaileshwara Ganigara Mutt: ಸಾಮಾಜಿಕ ಕಾರ್ಯಗಳಿಗಾಗಿ ಸಂಪಾದನೆಯ ಶೇ. 10ರಷ್ಟನ್ನು ಮಠಕ್ಕೆ ಮೀಸಲಿಡುವ ಜತೆಗೆ ಜನ ಬೆಂಬಲವನ್ನೂ ನೀಡಬೇಕು ಎಂದು ಕೈಲಾಸಾಶ್ರಮದ ಜಯೇಂದ್ರ ಪುರಿ ಸ್ವಾಮೀಜಿ ಕರೆ ನೀಡಿದ್ದಾರೆ.
ಬೆಂಗಳೂರು: ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠವನ್ನು (Thaileshwara Ganigara Mutt) ಗಾಣಿಗ ಸಮುದಾಯದ ಎಲ್ಲರೂ ಸೇರಿ ಉಳಿಸಿ ಬೆಳೆಸಬೇಕಿದೆ ಎಂದು ಕೈಲಾಸಾಶ್ರಮದ ಜಯೇಂದ್ರ ಪುರಿ ಸ್ವಾಮೀಜಿ ಕರೆ ನೀಡಿದರು.
ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ನಗರೂರಿನ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಪೂರ್ಣಾನಂದಪುರಿ ಸ್ವಾಮೀಜಿ ಅವರ ಪೀಠಾರೋಹಣದ ಮೊದಲ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿದರು.
ಗಾಣಿಗ ಜನಾಂಗಕ್ಕೆ ಈವರೆಗೂ ಗುರುಪೀಠ ಇರಲಿಲ್ಲ. ಪೂರ್ಣಾನಂದಪುರಿ ಸ್ವಾಮೀಜಿ ಅವರ ಶ್ರಮದ ಫಲವಾಗಿ ಪೀಠ ಸ್ಥಾಪನೆಯಾಗಿದೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಜನಾಂಗದವರ ಮೇಲಿದೆ. ಪೂರ್ಣಾನಂದಪುರಿ ಸ್ವಾಮೀಜಿ ಅವರು ಪೂರ್ವಾಶ್ರಮದ ಎಲ್ಲವನ್ನೂ ತ್ಯಾಗ ಮಾಡಿ, ತಮಗೆ ಬರುವ ಪಿಂಚಣಿ ಹಣವನ್ನೂ ಮಠ ನಡೆಸಲು ಮೀಸಲಿಟ್ಟಿದ್ದಾರೆ. ವೃದ್ಧಾಪ್ಯದಲ್ಲಿ ಬೇರೆಯವರ ಆಸರೆ ಬೇಕಿರುತ್ತದೆ. ಆದರೆ, ಇವರು ಇಳಿ ವಯಸ್ಸಿನಲ್ಲಿಯೂ ಗಾಣಿಗ ಜನಾಂಗಕ್ಕೆ ಆಸರೆಯಾಗಿದ್ದಾರೆ. ಸಾಮಾಜಿಕ ಕಾರ್ಯಗಳಿಗಾಗಿ ಸಂಪಾದನೆಯ ಶೇ 10ರಷ್ಟನ್ನು ಮಠಕ್ಕೆ ಮೀಸಲಿಡುವ ಜತೆಗೆ ಜನ ಬೆಂಬಲವನ್ನೂ ನೀಡಬೇಕು ಎಂದು ಗಾಣಿಗರಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ | Prerane : ಭಾರತದ ಆತ್ಮ; ಅಧ್ಯಾತ್ಮ
ಪೂರ್ಣಾನಂದಪುರಿ ಸ್ವಾಮೀಜಿ ಮಾತನಾಡಿ, ಗಾಣಿಗರಿಗೆ ಗುರುಪೀಠ ಸ್ಥಾಪನೆಯ ನನ್ನ ಗುರಿ ಈಡೇರಿದೆ. ಬಡವರಿಗೆ, ಅನಾಥರಿಗೆ ಉಚಿತ ವಸತಿ ಹಾಗೂ ಶಿಕ್ಷಣ ನೀಡಲು ಶಾಲೆ ತೆರೆಯಲಾಗುತ್ತಿದ್ದು, ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಕಟ್ಟಡ ಪೂರ್ಣಗೊಳ್ಳಲು ದಾನಿಗಳು ಸಹಕರಿಸಬೇಕು. ಇದು ನನಗಾಗಿ ಅಲ್ಲ, ಸಮಾಜಕ್ಕಾಗಿ ಎಂದರು.
ತೊಗಟವೀರ ಕ್ಷತ್ರಿಯ ನೇಕಾರ ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ಮಾತನಾಡಿ, ವ್ಯಕ್ತಿ ಏನನ್ನಾದರೂ ಮಾಡುತ್ತಿದ್ದಾನೆ ಎಂದರೆ ಅಸೂಯೆ ಪಡದೆ ಪ್ರೋತ್ಸಾಹಿಸಬೇಕು. ಗುರುಗಳಿಂದ ಸಂಸ್ಕಾರ ಪಡೆದಾಗ ಬೆಳಕು ಮೂಡುತ್ತದೆ ಎಂದರು.
ಇದನ್ನೂ ಓದಿ | Navavidha Bhakti : ಎಲ್ಲ ಕರ್ಮಗಳೂ ಸೇವೆಯೇ ಆಗಬಹುದು!
ಕಾಂಗ್ರೆಸ್ ಮುಖಂಡ ವಿ.ಆರ್. ಸುದರ್ಶನ್ ಮಾತನಾಡಿ, ನಿವೃತ್ತಿಯಾದವರು ಮಠದ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಕೋಲಾರದ ಜ್ಯೋತಿ ಎಜುಕೇಷನಲ್ ಟ್ರಸ್ಟ್ ಮೂಲಕ ಪ್ರತಿವರ್ಷ ಮಠಕ್ಕೆ 1 ಲಕ್ಷ ರೂ. ದೇಣಿಗೆ ನೀಡಲಾಗುವುದು ಎಂದು ಘೋಷಿಸಿದರು.
ದೇಶ
Tirupati Temple : ತಿರುಪತಿಯಲ್ಲಿ ದರ್ಶನಕ್ಕೆ 40 ಗಂಟೆ ತಗಲುತ್ತಿರುವುದರಿಂದ ಹೊಸ ನಿಯಮ ಜಾರಿ, ಇಲ್ಲಿದೆ ಡಿಟೇಲ್ಸ್
Tirupati Temple ತಿರುಪತಿಯಲ್ಲಿ ಸಾಮಾನ್ಯ ಭಕ್ತರಿಗೆ ದೇವರ ದರ್ಶನಕ್ಕೆ 40 ಗಂಟೆ ತಗಲುತ್ತಿರುವ ಹಿನ್ನೆಲೆಯಲ್ಲಿ ಹೊಸ ನಿಯಮಗಳನ್ನು ಟಿಟಿಡಿ ಜಾರಿಗೆ ತಂದಿದೆ. ಅದರ ವಿವರ ಇಲ್ಲಿದೆ.
ತಿರುಪತಿ: ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ( Tirupati Temple) ದೇವರ ದರ್ಶನಕ್ಕೆ ತಗಲುವ ಸಮಯ 40 ಗಂಟೆಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಕಾಯುವಿಕೆಯ ಸಮಯವನ್ನು ತಗ್ಗಿಸಿ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡಲು ತಿರುಮಲ ತಿರುಪತಿ ದೇವಸ್ಥಾನಮ್ (Tirumala Tirupati Devasthanam-TTD) ಹೊಸ ನಿಯಮಗಳನ್ನು ಘೋಷಿಸಿದೆ. ಅದರ ವಿವರ ನೋಡೋಣ.
ಬೇಸಗೆಯ ಅವಧಿಯಾಗಿರುವ ಕಾರಣ ಹಾಗೂ ಕೋವಿಡ್ ನಿರ್ಬಂಧಗಳು ಸಡಿಲವಾಗಿ ಮೂರು ವರ್ಷ ಸಮೀಪಿಸಿರುವ ಹಿನ್ನೆಲೆಯಲ್ಲಿ ತಿರುಪತಿಗೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ 2023 ಜೂನ್ 30 ರ ತನಕ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಟಿಟಿಡಿ ಚೇರ್ಮನ್ ವೈ.ವಿ ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.
ಟಿಟಿಡಿ ಪ್ರಕಾರ ತಿರುಪತಿಯಲ್ಲಿ ಟೋಕನ್ ರಹಿತ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ 30-40 ಗಂಟೆ ಬೇಕಾಗುತ್ತದೆ. ಹೀಗಾಗಿ ವಿಐಪಿ ಬ್ರೇಕ್ ದರ್ಶನ್ ಮತ್ತು ಆರ್ಜಿತ ಸೇವೆಗಳಲ್ಲಿ ಕೆಲ ಬದಲಾವಣೆ ತರಲಾಗಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಸುಪ್ರಭಾತ ಸೇವೆಯಲ್ಲಿ ವಿವೇಚನಾ ಕೋಟಾ (discretionary quota) ಅನ್ನು ಹಿಂತೆಗೆದುಕೊಳ್ಳಲಾಗಿದೆ. ಇದರಿಂದ ಸಾಮಾನ್ಯ ಭಕ್ತರಿಗೆ ದೇವರ ದರ್ಶನಕ್ಕೆ ತಗಲುವ ಸಮಯದಲ್ಲಿ 20 ನಿಮಿಷ ಉಳಿತಾಯವಾಗಲಿದೆ.
ಅದೇ ರೀತಿ ತಿರುಪ್ಪವಾಡ ಸೇವೆಯನ್ನು ಗುರುವಾರ ನಡೆಸಲು ಟಿಟಿಡಿ ನಿರ್ಧರಿಸಿದೆ. ಇದರಿಂದ 30 ನಿಮಿಷ ಸಮಯ ಉಳಿತಾಯವಾಗಲಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಐಪಿ ರೆಕಮಂಡೇಶನ್ ಲೆಟರ್‌ಗಳನ್ನೂ ಟಿಟಿಡಿ ಸ್ವೀಕರಿಸದಿರಲು ನಿರ್ಧರಿಸಿದೆ. ಆದರೆ ಸೆಲ್ಫ್-ವಿಐಪಿಗಳಿಗೆ ಮಾತ್ರ ಬ್ರೇಕ್ ದರ್ಶನ್‌ಗೆ ಅನುಮತಿ ನೀಡಲಾಗಿದೆ. ಎಲ್ಲ ಭಕ್ತರು, ವಿಐಪಿಗಳು ಸಹಕರಿಸಬೇಕು ಎಂದು ಟಿಟಿಡಿ ಕೋರಿದೆ.
ಟಿಟಿಡಿ ಪ್ರಕಾರ ವೆಂಕಟೇಶ್ವರನ ಸನ್ನಿಧಿಯಲ್ಲಿ ನಿತ್ಯ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರು ಪ್ರಧಾನ ಪೂಜೆಗಳು ನಡೆಯುತ್ತವೆ. ರಾತ್ರಿಯ ಪೂಜೆಯಲ್ಲಿ ಅರ್ಚಕರು, ಪರಿಚಾರಕರು, ಆಚಾರ್ಯರು ಮಾತ್ರ ಭಾಗವಹಿಸುತ್ತಾರೆ. ಉಳಿದ ಪೂಜೆಗಳನ್ನು ಎಲ್ಲ ಭಕ್ತಾದಿಗಳೂ ವೀಕ್ಷಿಸಬಹುದು.
ಇದನ್ನೂ ಓದಿ: Tirupati Temple: ಮಾರ್ಚ್ 1ರಿಂದ ತಿರುಪತಿ ದೇಗುಲದಲ್ಲಿ ಫೇಸ್ ರಿಕಗ್ನೇಷನ್ ವ್ಯವಸ್ಥೆ
ಧಾರ್ಮಿಕ
Navavidha Bhakti : ಎಲ್ಲ ಕರ್ಮಗಳೂ ಸೇವೆಯೇ ಆಗಬಹುದು!
ಭಕ್ತಿಯ ಸ್ವರೂಪವನ್ನು ಒಂಬತ್ತು ರೀತಿಯಲ್ಲಿ ವಿಂಗಡಿಸಲಾಗಿದೆ. ಈ ಸ್ವರೂಪಗಳನ್ನು ಪರಿಚಯಿಸುವ ʻನವವಿಧ ಭಕ್ತಿʼ (Navavidha Bhakti) ಲೇಖನ ಮಾಲೆಯ ಹನ್ನೊಂದನೇ ಲೇಖನ ಇಲ್ಲಿದೆ. ಇಂದು ದಾಸ್ಯಭಕ್ತಿಯ ಕುರಿತು ವಿವರಿಸಲಾಗಿದೆ.
ಡಾ. ಸಿ. ಆರ್. ರಾಮಸ್ವಾಮಿ
ದಾಸ್ಯ ಭಕ್ತಿ – 2 ( ದಾಸ್ಯ ಭಕ್ತಿಯ ಮೊದಲ ಭಾಗವನ್ನು ಓದಲು ಇಲ್ಲಿ ಕ್ಲಿಕ್ (Click Here) ಮಾಡಿ)
ದಾಸ್ಯ ಭಾವವು ಪೂಜೆಗೆ ಮಾತ್ರ ಸೀಮಿತವಾದದ್ದಲ್ಲ. ಇನ್ನೂ ವಿಸ್ತಾರವಾಗಿದೆ. ಇಂತಹ ಸೇವಾಕಾರ್ಯಕ್ಕೆ ಉತ್ತಮ ಉದಾಹರಣೆ ಹನುಮಂತ. ಪ್ರತಿಯೊಂದು ಹಂತದಲ್ಲೂ ರಾಮನ ಸ್ಮರಣೆಯೇ, ರಾಮನ ಸಂತೋಷವೇ ಅವನ ಉದ್ದೇಶವಾಗಿತ್ತು. ಮಹಾಬಲಶಾಲಿ, ವೀರ್ಯವಂತ; ಜೊತೆಗೆ ಬುದ್ಧಿವಂತ, ವಾಗ್ಮಿ. ರಾವಣನ ಮುಂದೆ ದೂತನಾಗಿಯೂ, ಸುಗ್ರೀವನಲ್ಲಿ ಮಂತ್ರಿಯಾಗಿಯೂ, ಯುದ್ಧದಲ್ಲಿ ವೀರನಾಗಿಯೂ ವರ್ತಿಸುತ್ತಾನೆ. ಜ್ಞಾನದಲ್ಲಿಯೂ ಶ್ರೇಷ್ಠ. ಆತ್ಮಜ್ಞಾನ ಸಂಪನ್ನ. ಪರಮಭಕ್ತ-ಭಾಗವತ. ಅಣಿಮಾದಿ ಅಷ್ಟಸಿದ್ಧಿಗಳೂ ಅವನ ವಶದಲ್ಲಿದ್ದುವು. ಇಷ್ಟೆಲ್ಲಾ ಶಕ್ತಿಗಳನ್ನೂ ರಾಮಕಾರ್ಯಕ್ಕಾಗಿಯೇ ಬಳಸುತ್ತ ರಾಮಸೇವೆಯನ್ನು ಮಾಡುತ್ತಿದ್ದ ಅಪ್ರತಿಮ ದಾಸನು.
ಅಷ್ಟೆಲ್ಲಾ ಶಕ್ತಿಯಿಲ್ಲದವರೂ ಇರುವಷ್ಟರಲ್ಲಿಯೇ ಭಗವಂತನ ಸೇವೆ ಮಾಡಬಹುದು. ಶ್ರೀಮದ್ರಾಮಾಯಣದಲ್ಲಿ ಸಮುದ್ರ-ಸೇತುವೆಯ ನಿರ್ಮಾಣ ಸಮಯದಲ್ಲಿ ಅಳಿಲೂ, ಸೇವೆ ಮಾಡಿದ ಕಥೆ ಪ್ರಸಿದ್ಧವಾಗಿದೆ. ಅಳಿಲು, ನೀರಿನಲ್ಲಿ ಮುಳುಗಿ, ಮರಳಲ್ಲಿ ಹೊರಳಾಡಿ, ತನ್ನ ಮೈಗೆ ಅಂಟಿದ ಮರಳನ್ನು ಸೇತುವೆ ಕಟ್ಟಿದ ಜಾಗದಲ್ಲಿ ಉದುರಿಸಿತು ಅಷ್ಟೆ. ಹೀಗೆ ಉದುರಿಸಿದ ಮರಳಿನಿಂದ ಸೇತುವೆ ಕಟ್ಟಲಾದೀತೇ! ವಿಚಾರಕ್ಕಿಂತ ಇದರ ಹಿಂದಿರುವ ಭಕ್ತಿಭಾವ-ಸೇವಾಭಾವ ಎಂತಹುದ್ದು! “ಅಳಿಲಸೇವೆ”ಯು ನಿಜವಾದ ಘಟನೆಯೋ ಅಥವಾ ಕವಿಕಲ್ಪನೆಯೋ ನಾವರಿಯೆವು. ಆದರೆ ಇದರಿಂದ ನಮ್ಮಲ್ಲಿ ಸಂತೋಷ-ಉತ್ಸಾಹ-ಭಕ್ತಿಭಾವಗಳು ಮೂಡಿಬರುವುದರಲ್ಲಿ ಸಂಶಯವಿಲ್ಲ. ಅಂತಹ ಉತ್ಸಾಹ-ಭರಿತವಾದ ಪೂರ್ಣಶಕ್ತಿಪ್ರಯೋಗದ “ಅಳಿಲುಸೇವೆ”ಯೂ ಶ್ರೀರಾಮನಿಗೆ ಪ್ರಿಯವಾದದ್ದು.
ಕ್ರಿಯೆಗಳೆಲ್ಲವೂ ಸೇವೆಯಾಗುವುದು ಹೇಗೆ?
ಸೇವೆಯ ವಿಸ್ತೃತರೂಪದ ಬಗೆಗೆ ಶ್ರೀರಂಗಮಹಾಗುರುಗಳು ದಯಪಾಲಿಸಿದ ನೋಟವನ್ನು ಗಮನಿಸುವುದಾದರೆ; ವೃಕ್ಷದಿಂದ ಫಲವನ್ನು ಪಡೆದು ಸಂತೋಷಿಸುವುದೇ ವೃಕ್ಷವನ್ನು ಬೆಳಸುವುದರ ಉದ್ದೇಶ. ಗಿಡಕ್ಕೆ ನೀರು-ಗೊಬ್ಬರಗಳನ್ನು ಹಾಕುವುದು, ಅಗತ್ಯವಿದ್ದಲ್ಲಿ ಔಷಧಿ ಹೊಡೆಯುವುದು, ಸೊಂಪಾಗಿ ಬೆಳೆಯಲು ಕಾಲಕಾಲಕ್ಕೆ ಕತ್ತರಿಸುವುದು ಇತ್ಯಾದಿಗಳೆಲ್ಲವೂ ಫಲದ ಕಡೆಗೆ ಗಮನವಿಟ್ಟು ಮಾಡುವ ಕ್ರಿಯೆಗಳೇ.
ಎಲೆಯಲ್ಲಿನ ಸಣ್ಣ-ಸಣ್ಣ ನರಗಳಿಂದ ಹಿಡಿದು ಗಿಡದಲ್ಲಿರುವ ಪ್ರತಿಯೊಂದು ಭಾಗದೊಡನೆಯೂ ಸಂಬಂಧವನ್ನು ಹೊಂದಿರುವ ಬೇರು, ಇಡೀ ವೃಕ್ಷವನ್ನು ರಕ್ಷಿಸುವ-ಪೋಷಿಸುವ ಭಾಗವಾಗಿದೆ. ಆದ್ದರಿಂದಲೇ ನೀರು-ಗೊಬ್ಬರಗಳನ್ನು ಮೇಲೆ ಇರುವ ಕಾಯಿ-ಹೂವಿಗೆ ಹಾಕದೆ, ಕೆಳಗಿರುವ ಬೇರಿಗೇ ಹಾಕುತ್ತೇವೆ. ಆದ್ದರಿಂದ ಬೇರಿಗೆ ಮಾಡುವ ‘ಸೇವಾಕಾರ್ಯ’ ಇಡೀ ವೃಕ್ಷಕ್ಕೇ ಮಾಡುವ ಸೇವೆಯಾಗುತ್ತದೆ. ಬೇರು ತನ್ನಲ್ಲಿಗೆ ಬಂದ ನೀರು-ಗೊಬ್ಬರಗಳನ್ನು ತಾನು ಇಟ್ಟುಕೊಳ್ಳದೆ ಇಡೀ ವೃಕ್ಷಕ್ಕೆ ಒದಗಿಸಿ ಫಲವನ್ನು ನೀಡುತ್ತದೆ. ಮೂಲ ಉದ್ದೇಶಕ್ಕೆ ಪೋಷಕವಾದ ಕೆಲಸಗಳೆಲ್ಲವೂ ಸೇವೆಯೇ. ಅಂತೆಯೇ ಅದಕ್ಕೆ ವಿರೋಧವಾದವುಗಳಾವುವೂ ಸೇವೆಯಾಗುವುದಿಲ್ಲ.
ನಮ್ಮ ದೇಹವೂ ಒಂದು ವೃಕ್ಷವೇ. ಇದರಲ್ಲಿ ಇಂದ್ರಿಯ-ಮನಸ್ಸು-ಬುದ್ಧಿಗಳ ಮೂಲಕ ಮಾಡುವ ಕ್ರಿಯೆಗಳೆಲ್ಲವೂ ಮಹಾಫಲವನ್ನು ಹೊಂದಲನುಗುಣವಾಗಿದ್ದರೆ ಇವೆಲ್ಲವೂ ಸೇವೆಯೇ ಆಗುತ್ತವೆ. ಜೀವ-ದೇವರ ಸಂಯೋಗವೇ (ಭಗವಂತನಲ್ಲಿ ಒಂದಾಗಿ ಸೇರಿಕೊಳ್ಳುವುದೇ) ಈ ವೃಕ್ಷದಿಂದ ದೊರೆಯುವ ಮಹಾಫಲ. ಅದಕ್ಕೆ ಪೋಷಕವಾದ ಕ್ರಿಯೆಗಳೆಲ್ಲವೂ ಸೇವಾಕಾರ್ಯಗಳೇ. ಭಗವಂತನ ಪ್ರೀತ್ಯರ್ಥವಾದದ್ದೆಲ್ಲವೂ ಸೇವೆಯೇ. ಆದರೆ ಭಗವಂತನ ಪ್ರೀತಿ-ಅಪ್ರೀತಿಗಳ ತಿಳಿವಳಿಕೆಯನ್ನು ಭಗವಂತನನ್ನು ಚೆನ್ನಾಗಿ ಅರಿತ ಜ್ಞಾನಿಗಳಿಂದ, ಋಷಿಗಳಿಂದ ತಿಳಿಯಬೇಕು.
ಭಗವತ್ಪ್ರೀತಿಕರವಾಗಿ ಮಾಡಿದಾಗ ಧನಸಹಾಯ, ಔಷಧಿಸಹಾಯ ಮುಂತಾದ ಎಲ್ಲಾ ಸಮಾಜಸೇವಾರೂಪವಾದ (social service) ಕ್ರಿಯೆಗಳನ್ನೂ ಸೇವಾಕಾರ್ಯವಾಗಿ ಪರಿವರ್ತಿಸಬಹುದು. ಕೇವಲ ಆರಾಧನೆಯನ್ನಷ್ಟೇ ಸೇವಾಕಾರ್ಯ ಎಂದೆಣಿಸಬಾರದು.
ಆಂಜನೇಯ, ಪ್ರತಿ ಹೆಜ್ಜೆಯಲ್ಲಿಯೂ ರಾಮನನ್ನೇ ಭಾವಿಸುತ್ತ ಸೇವೆ ಸಲ್ಲಿಸಿದನೆಂಬುದನ್ನು ಗಮನಿಸಬಹುದು. ಇಂದ್ರಜಿತ್ತನು ಪ್ರಯೋಗಿಸಿದ ಬ್ರಹ್ಮಾಸ್ತ್ರದಿಂದ ರಾಮಲಕ್ಷ್ಮಣರು ಮೂರ್ಛೆ ಹೋದಾಗ ಹಿಮಾಲಯದಿಂದ ಸಂಜೀವಿನಿಪರ್ವತದಲ್ಲಿರುವ ಮೂಲಿಕೆ ತರಲು ಹೋಗಿ ಆ ಬೆಟ್ಟವನ್ನೇ ಹೊತ್ತುತಂದ ಕಥೆ ಪ್ರಸಿದ್ಧ. ಅಷ್ಟು ಬಲಶಾಲಿಯೂ, ವಾಯುಪುತ್ರನೂ ಆದವನು ವಾಯುವೇಗದಲ್ಲಿ ಬಂದುಸೇರಿದನು. ಅದರಿಂದಲೇ ರಾಮಲಕ್ಷ್ಮಣರ ಜೀವ ಉಳಿಯಿತು. ಇನ್ನು ಸೀತೆಯನ್ನು ರಕ್ಷಿಸಿದ ವಿಷಯ ಪ್ರಸಿದ್ಧವಾದದ್ದು. ಒಂದು ನಿಮಿಷ ತಡವಾಗಿದ್ದರೂ ಅಶೋಕವನದಲ್ಲಿದ್ದ ಸೀತೆಯು ರಾವಣನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತದಲ್ಲಿದ್ದಳು. ಅದೇ ಸಮಯದಲ್ಲಿ ಆಂಜನೇಯನು ರಾಮನ ವರ್ಣನೆಯನ್ನು ಮಾಡಿ ಅವಳಿಗೆ ಸಂತೋಷವನ್ನುಂಟುಮಾಡಿ ಸೀತೆಯನ್ನೂ ಬದುಕಿಸಿದನು ಎನ್ನಬಹುದು.
ಹದಿನಾಲ್ಕುವರ್ಷ ಮುಗಿಯುತ್ತಲೇ ಪ್ರಾಯೋಪವೇಶಕ್ಕೆ ಅನುವು ಮಾಡಿಕೊಳ್ಳುತ್ತಿದ್ದ ಭರತನಿಗೆ ರಾಮನ ಆಗಮನದ ಸುದ್ದಿಯನ್ನು ತಿಳಿಸಿ ಆಂಜನೇಯ ಭರತನಿಗೂ ಸೇವೆ ಮಾಡುತ್ತಾನೆ ಎಂಬುದಾಗಿ ವಾಲ್ಮೀಕಿ ಮಹರ್ಷಿಯು ಸಂತೋಷವಾಗಿ ನುಡಿಯುತ್ತಾರೆ. ಇಷ್ಟೆಲ್ಲ ಸೇವೆಯ ಮಧ್ಯದಲ್ಲಿ ವಿರಾಮ ದೊರೆತಾಗ ಕಲ್ಲುಬಂಡೆಯ ಮೇಲೆ ಕುಳಿತು ರಾಮನಾಮವನ್ನು ಜಪಿಸುತ್ತಾ ರಾಮಧ್ಯಾನದಲ್ಲಿ ನಿರತನಾಗಿರುವವನು ಹನುಮಂತ.
ಮಹಾಪರಾಕ್ರಮಿಯೂ ಜಿತೇಂದ್ರಿಯನೂ ಆದ ಲಕ್ಷ್ಮಣನು ಸ್ವಂತ ಸುಖವೆಲ್ಲವನ್ನೂ ತ್ಯಜಿಸಿ ಶ್ರೀರಾಮನ ಸೇವೆಗಾಗಿ ಅರಣ್ಯಕ್ಕೆ ತೆರಳಿದ ವೃತ್ತಾಂತ ಸುಪ್ರಸಿದ್ಧ. ಹಗಲಿರುಳೆನ್ನದೇ ಅರಣ್ಯದಲ್ಲಿ ಅನವರತವೂ ಹದಿನಾಲ್ಕು ವರ್ಷ ನಿದ್ರೆಯನ್ನೇ ವರ್ಜಿಸಿ ಸೀತಾರಾಮರ ಸೇವೆಯಲ್ಲಿಯೇ ನಿರತನಾಗಿದ್ದ ಸೇವಕ, ಅಪೂರ್ವತ್ಯಾಗಿ ಲಕ್ಷ್ಮಣ, ದಾಸ್ಯಕ್ಕೆ ಮಾದರಿಯೆನಿಸಿಕೊಳ್ಳುತ್ತಾನೆ.
ಭಗವಂತನಲ್ಲಿ ದಾಸ್ಯಭಾವವಿರುವಂತೆಯೇ ಪರಮಭಾಗವತರಿಗೆ-ಭಗವಂತನ ಭೃತ್ಯರಿಗೆ ಸೇವೆಮಾಡಿದರೂ ಭಗವಂತನಿಗೇ ತಲಪುತ್ತದೆ. ಅದರ ಪರಂಪರೆ ಹೇಗೆಂದರೆ ‘ತ್ವದ್ಭೃತ್ಯ ಭೃತ್ಯ ಪರಿಚಾರಕ ಭೃತ್ಯ-ಭೃತ್ಯ ಭೃತ್ಯಸ್ಯ-ಭೃತ್ಯ ಇತಿ ಮಾಂ ಸ್ಮರ ಲೋಕನಾಥ’ ಎಂದು ಕುಲಶೇಖರ ಆಳ್ವಾರರು ಕೊಂಡಾಡುತ್ತಾರೆ. “ಭಗವಂತ, ನನ್ನನ್ನು ಹೇಗೆ ತಿಳಿಯಬೇಕೆಂದರೆ ನಿನ್ನ ಭೃತ್ಯ(ಸೇವಕ), ನಿನ್ನ ಭೃತ್ಯರಿಗೆ ಭೃತ್ಯರಿಗೆ…. ಹೀಗೆ ಐದು ಆರು ಪರಂಪರೆ ದಾಟಿನಿಂತು ನಿನ್ನ ಸೇವೆ ಮಾಡುವ ದಾಸ ಎಂದು ತಿಳಿಯಬೇಕು” ಎನ್ನುತ್ತಾರೆ. “ದಾಸ-ದಾಸ-ದಾಸರ ದಾಸ್ಯವ ಕೊಡೋ….” ಗೀತವೂ ಇದನ್ನೇ ಪುನರುಕ್ತಿಗೊಳಿಸುತ್ತದೆಯಲ್ಲವೇ?
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಒಂದು ಎಂಜಿನ್ ಹಿಂದೆ ಹದಿನೈದು ಬೋಗಿಗಳಿದ್ದರೂ ಕೊನೆಯ ಬೋಗಿಗೂ ಎಂಜಿನ್ನಿಗೂ ಕೊಂಡಿಯ ಮೂಲಕ ಸಂಬಂಧ ಇದ್ದೇ ಇರುತ್ತದೆ (ಕೊಂಡಿ ಕಳಚಿಕೊಳ್ಳದಿದ್ದರೆ!) ಅಂತೆಯೇ ಆ ಭೃತ್ಯರೆಲ್ಲರೂ ದಾಸ್ಯಭಾವದ ಕೊಂಡಿಯನ್ನು ಭದ್ರವಾಗಿ ಹಿಡಿದಿರುವುದರಿಂದ ಕೊನೆಯ ಭೃತ್ಯರಿಗೂ ಭಗವಂತನ ದಾಸ್ಯಸಂಬಂಧ ಇರುತ್ತದೆ. ಆದ್ದರಿಂದ ಭಗವದ್ಭಕ್ತರಲ್ಲಿ ದಾಸ್ಯಭಾವವಿರುವುದೂ ಆಷ್ಟೇ ಶ್ರೇಷ್ಠವಾದದ್ದು. ದಾಸ್ಯವನ್ನೇ ವೃತ್ತಿಯನ್ನಾಗಿಟ್ಟು ಭಗವಂತನ ಮಹಿಮೆಯನ್ನು ಮನೆಮನೆಗೂ ತಲುಪಿಸಿ ಸ್ಫೂರ್ತಿಯನ್ನು ತುಂಬುತ್ತಿದ್ದ ಪುರಂದರದಾಸರು-ಕನಕದಾಸರು ಮುಂತಾದ ದಾಸಶ್ರೇಷ್ಠರನ್ನು ಸ್ಮರಿಸೋಣ.
– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ, ಬೆಂಗಳೂರು
ಇದನ್ನೂ ಓದಿ: Navavidha Bhakti : ನಮಸ್ಕಾರ ಕೂಡ ಭಕ್ತಿಯ ಒಂದು ಪ್ರಕಾರ!
-
ಕರ್ನಾಟಕ24 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ23 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ22 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ18 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕ್ರಿಕೆಟ್13 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
ಕರ್ನಾಟಕ14 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
ದೇಶ6 hours ago
New Parliament Building: ಇಂದು ಹೊಸ ಸಂಸತ್ ಭವನ ಉದ್ಘಾಟನೆ; ಹೇಗೆ ನಡೆಯಲಿದೆ ಕಾರ್ಯಕ್ರಮ?
-
ಕರ್ನಾಟಕ13 hours ago
DA Hike: ಶೇ.4 ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ; ಸಿಎಂ ಸಿದ್ದರಾಮಯ್ಯಗೆ ಸರ್ಕಾರಿ ನೌಕರರ ಅಭಿನಂದನೆ