Site icon Vistara News

Prerane : ಅರ್ಥವು ಅನರ್ಥವೇ? ಈ ಬಗ್ಗೆ ಶಂಕರಭಗವತ್ಪಾದರು ಹೇಳಿದ್ದಾದರೂ ಏನು?

shankaracharya and money

#image_title

ಕೆ.ಎಸ್.ರಾಜಗೋಪಾಲನ್
“ಅರ್ಥ” ಎಂಬ ಪದಕ್ಕೆ ನಾನಾರ್ಥಗಳುಂಟು. ಅದರಲ್ಲಿ ಲೌಕಿಕವಾದ ಸುಖಕ್ಕೆ ಸಾಧನವಾದ “ಧನ” ಎಂಬರ್ಥವೂ ಉಂಟು. ಇಂತಹ “ಅರ್ಥ”ದ ಬಗ್ಗೆ ಸ್ವಲ್ಪ ಚಿಂತನೆಯನ್ನು ಮಾಡೋಣ.

ಲೌಕಿಕ ಸುಖವನ್ನು ಬಯಸುವವನಿಗೆ ಅರ್ಥವು ಅನಿವಾರ್ಯವೇ ಸರಿ! “ಧನಮೂಲಮಿದಮ್ ಜಗತ್”, “ದುಡ್ಡೇ ದೊಡ್ಡಪ್ಪ” ಎಂಬ ಮಾತುಗಳು ಎಲ್ಲರಿಗೂ ತಿಳಿದದ್ದೇ. ಹಣವಂತರ ಪ್ರಭಾವವನ್ನು ಗಮನಿಸಿ ಹಣದ ಮಹಿಮೆಯನ್ನು ಹಾಡಿ ಹೊಗಳುವ ಹತ್ತಾರು ಸುಭಾಷಿತಗಳಿವೆ.

ಆಗಾಗ್ಗೆ ಕೆಲವು ಸಂತರು ಹಾಗೂ ದಾರ್ಶನಿಕರು, ಮನುಷ್ಯನು ಹಣದ ಹಿಂದೆ ಹೋಗಿ ಎಷ್ಟೆಲ್ಲ ಪಾಡು ಪಡುವನೆಂದು
ಮನಗಂಡು, “ಹಣವನ್ನು ದೂರವಿಡಿ” ಎನ್ನುತ್ತಾ ಹಣವನ್ನು ಜರೆದಿರುವುದೂ ಉಂಟು. ಹಣವನ್ನು ತೆಗಳುವ ಸುಭಾಷಿತಗಳೂ ಲಭ್ಯ. ಹಣದ ಬಗ್ಗೆ ಪ್ರಶಂಸೆ, ನಿಂದನೆ…ಎರಡನ್ನೂ ಓದುವ ನಮಗೆ ಅರ್ಥದ ಬಗ್ಗೆ ಜಿಜ್ಞಾಸೆ ಹುಟ್ಟುವುದು ಸಹಜವೇ. ಶಂಕರಭಗವತ್ಪಾದರು ತಮ್ಮ ಭಜಗೋವಿಂದ ಸ್ತೋತ್ರದಲ್ಲಿ “ಏಕೆ ದುಡ್ಡಿನ ಚಿಂತೆ?” ಎಂದು ಕಳಕಳಿಯಿಂದ ಕೇಳುತ್ತಾರೆ. (ಕಾತೇ ಕಾಂತಾ? ಧನಗತ ಚಿಂತಾ?) ಮತ್ತೊಂದೆಡೆಯಲ್ಲಿ ಹೀಗೆ ಎಚ್ಚರಿಸುತ್ತಾರೆ.

“ಹಣವು ಎಂದೆಂದಿಗೂ ಅನರ್ಥಕರವೇ ಎಂದು ಭಾವಿಸು. ಅದರಿಂದ ಎಳ್ಳೆನಿತು ಸುಖವಿಲ್ಲ. ಇದು ದಿಟ. ಮಗನ ದೆಸೆಯಿಂದಲೂ ಹಣವಂತರಿಗೆ ಭೀತಿ… ಇದೇ ಎಲ್ಲೆಡೆಯಲ್ಲಿಯೂ ಇರುವ ಪ್ರಕೃತಿನಿಯಮ (ʻʻಅರ್ಥಮನರ್ಥಂ ಭಾವಯ ನಿತ್ಯಂ, ನಾಸ್ತಿ ತತಃ ಸುಖಲೇಶಃ ಸತ್ಯಂI ಪುತ್ರಾದಪಿ ಧನಭಾಜಾಂ ಭೀತಿಃ, ಸರ್ವತ್ರೈಷಾ ವಿಹಿತಾ ರೀತಿಃII) ಧನಾರ್ಜನೆಯಲ್ಲೇ ಮುಳುಗಿಹೋದವರನ್ನು ಹೀಗೆ ಎಚ್ಚರಿಸಿದ ಶಂಕರರು ಅರ್ಥದ ಬಗೆಗೆ ನಮ್ಮ ನಿಲುವು ಹೇಗಿರಬೇಕೆಂದು ಸ್ಪಷ್ಟಪಡಿಸಿದ್ದಾರೆ. ಈ ಅಂಶವನ್ನು ವಿವರಿಸುತ್ತಾ ಶ್ರೀರಂಗಮಹಾಗುರುಗಳು ಹೀಗೆ ನುಡಿದಿದ್ದಾರೆ; “ಶಂಕರರು ಲೋಕಜೀವನದ ಬಗ್ಗೆ ನಿರಾಸೆಯನ್ನು ತೋರಿಸಲಿಲ್ಲ; ಭೌತಿಕ ಜೀವನವನ್ನೂ ಬೇಡವೆನ್ನಲಿಲ್ಲ. ಭೌತಿಕಜೀವನವನ್ನು ಮಾಡು. ಜೀವನಕ್ಕೆ ಬೇಕಾದ ಉದ್ಯೋಗವನ್ನೂ ಮಾಡು. “ಮೂಢ ಜಹೀಹಿ ಧನಾಗಮತೃಷ್ಣಾಂ, ಕುರು ಸದ್ಬುದ್ಧಿಂ ಮನಸಿವಿತೃಷ್ಣಾಂ, ಯಲ್ಲಭಸೇ ನಿಜಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಮ್”.

ಜೀವನದಲ್ಲಿ ಧನವು ಬೇಕು. ಆದರೆ ಧನದ ಅರ್ಥವು ದಾಹ ಹುಟ್ಟಬಾರದು. “ದೊಡ್ಡದಾಹ” (ಮರಣಕಾಲದಲ್ಲಿ ಬರುವ ಬಾಯಾರಿಕೆ) ವಾಗಿಬಿಟ್ಟರೆ ಎಷ್ಟು ನೀರು ಸುರಿದರೂ ಅದು ಅಡಗುವುದಿಲ್ಲ. ಆ ರೀತಿಯಾದ ಧನದಾಹ ಬೇಡ. “ಬಾಯಾರಿತು, ಒಂದು ಲೋಟ ನೀರು ಕುಡಿದೆ” ಎಂದು ಅಷ್ಟರಲ್ಲಿ ನಿಲ್ಲಲಿ. ಹಾಗೆ ದಾಹರಹಿತವಾದ ಸದ್ಬುದ್ಧಿಯನ್ನು ಬೆಳೆಸಿಕೊಳ್ಳೀಪ್ಪಾ. ನಿನ್ನ ವೃತ್ತಿಗೆ ಅನುಗುಣವಾದ ಕರ್ಮದಿಂದ ನೀನೇನನ್ನು ಪಡೆಯುವಿಯೋ ಅದರಲ್ಲಿ ನಿನಗೆ ಬೇಕಾದ ರೀತಿ ಸಂತೋಷಪಡು.[ಎನ್ನುತ್ತಾರೆ] ಹೀಗೆ, ಶಂಕರರು ಭೌತಿಕಜೀವನವನ್ನು ಬೇಡವೆನ್ನದೆ, ಅದನ್ನು ಒಂದು ಹತೋಟಿಯಲ್ಲಿಟ್ಟುಕೊಳ್ಳುವಂತೆ ಆದೇಶವಿತ್ತಿದ್ದಾರೆ”. (ಅಮರವಾಣೀ-7-235).

ಮನುಷ್ಯನು ತಾನು ಗಳಿಸಿದ ಹಣವೆಲ್ಲವನ್ನೂ ದಾನಮಾಡಿಬಿಡಬೇಕೆಂದು ಯಾವ ಋಷಿಯೂ ಹೇಳಿಲ್ಲ. ನ್ಯಾಯವಾದ ಮಾರ್ಗದಿಂದ ಸಂಪಾದಿಸಿದ ಹಣವನ್ನು ಕೇವಲ ಸ್ವಾರ್ಥಕ್ಕಾಗಿ ಬಳಸದೇ, ತನ್ನ ಕುಟುಂಬಕ್ಕಾಗಿ ಇಷ್ಟು, ತನ್ನ ಸಮಾಜಕ್ಕಿಷ್ಟು, ತನ್ನನ್ನು ಆಶ್ರಯಿಸಿದವರಿಗಿಷ್ಟು, ಭಗವತ್ಕಾರ್ಯಕ್ಕಿಷ್ಟು, ಎಂದು ಅರ್ಥವಿಭಾಗವನ್ನು ಮಾಡಿಕೊಂಡೇ ಹಣವನ್ನು ವ್ಯಯಮಾಡಬೇಕೆನ್ನುತ್ತದೆ, ಆರ್ಷನೋಟ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಶ್ರೀರಂಗಮಹಾಗುರುಗಳು ಒಮ್ಮೆ ತಮ್ಮ ಆಪ್ತರೊಡನೆ ಶ್ರೀರಂಗಪಟ್ಟಣಕ್ಕೆ ಭೇಟಿಕೊಟ್ಟಾಗ, ಭಗವತ್ಪ್ರಸಾದವನ್ನು
ಕಾವೇರಿಯಲ್ಲಿದ್ದ ಮೀನುಗಳಿಗೂ ಕೊಟ್ಟು, ನಂತರ ತಾವು ಸ್ವೀಕರಿಸಿದ್ದನ್ನು ಭಕ್ತರು ನೆನಪಿಸಿಕೊಳ್ಳುತ್ತಾರೆ (ಯೋಗೇಶ್ವರ ಶ್ರೀರಂಗ 319). ಹೀಗೆ, ಮನುಷ್ಯನು ಅರ್ಥವಿಭಾಗವನ್ನು ಮಾಡುವಾಗ, ಸುತ್ತಲಿನ ಪಶುಪಕ್ಷಿಪ್ರಾಣಿಗಳನ್ನೂ ಮರೆಯುವಂತಿಲ್ಲ. ಶ್ರೀರಂಗಮಹಾಗುರುಗಳು ಒಮ್ಮೆ ಈ ಸುಂದರ ನೋಟವನ್ನು ದಯಪಾಲಿಸಿದ್ದರು. “ಅರ್ಥವು ಅನರ್ಥವಾಗದೇ, ಪರಮಾರ್ಥದಲ್ಲಿ ನಿಂತು ಸಾರ್ಥಕವಾಗುವ ಪಕ್ಷೇ ಅದನ್ನು ಕ್ಷಣಕ್ಷಣದಲ್ಲಿಯೂ ನಾವು ಸಂಪಾದಿಸಲು ಉದ್ಯಮಿಸುತ್ತೇವೆ” (ಶ್ರೀರಂಗ ವಚನಾಮೃತ 1-59). ಧನದಾಹವಿಲ್ಲದೆ, ನ್ಯಾಯವಾದ ವೃತ್ತಿಯಿಂದ ಗಳಿಸಿದ ಅರ್ಥವು ಸದ್ವಿನಿಯೋಗವಾದಾಗ, ಅದು ಅನರ್ಥವಾಗದೇ, ಜೀವನ ಸಾರ್ಥಕವಾಗುವುದರಲ್ಲಿ ಸಹಕಾರಿಯಾಗುತ್ತದೆ.

– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ : Prerane : ವಿದ್ಯಾಭ್ಯಾಸವೋ? ವಿದ್ಯಾಭಾಸವೋ?

Exit mobile version