ರಾಮನವಮಿ ಎಂದರೆ ಪಾನಕ. ಪಾನಕ ಎಂದರೆ ರಾಮನವಮಿ! ಹೌದು. ಪಾನಕ ಕುಡಿಯಬೇಕು ಎನಿಸಿದಾಗ ರಾಮನವಮಿಯ ನೆನಪಾಗುವುದುಂಟು. ಯಾಕೆಂದರೆ, ರಾಮನವಮಿ ಬಂದಾಕ್ಷಣ ದೇವಸ್ಥಾನಗಳಲ್ಲಿ, ರಾಮ ಮಂದಿರಗಳಲ್ಲಿ, ನಮ್ಮ ಮನೆಗಳಲ್ಲಿ, ನೆಂಟರಿಷ್ಟರ ಮನೆಗಳಲ್ಲಿ ಪಾನಕದ ಮಳೆಯಾಗುತ್ತದೆ. ಚಳಿಗಾಲ ಮುಗಿದು ಬೇಸಗೆ ಬರುವಾಗ ಸೂರ್ಯನ ಝಳ ಮೈಯನ್ನು ತಾಕುವಾಗ ರಾಮನವಮಿಯ ನೆಪದಲ್ಲಿ ಸಿಗುವ ಈ ಪಾನಕ ಕುಡಿದರೆ ಆಹಾ ಎಂಬ ಸ್ವರ್ಗ ಸುಖ. ದಕ್ಷಿಣ ಭಾರತದೆಲ್ಲೆಡೆ, ರಾಮನವಮಿಯ ದಿನದಂದು ಸಿಗುವ ಈ ಸಿಹಿ ಖಾರದ ಈ ಪಾನಕ ಮಾಡುವುದು ಕೂಡಾ ಕಲೆಯೇ. ಬೇರೆ ಶರಬತ್ತುಗಳಿಗಿಂತ ಕೊಂಚ ಭಿನ್ನವಾಗಿ ಕಾಣುವ ಈ ಪಾನಕ ನಮ್ಮ ಹಿರಿಯರು ನಮಗೆ ದಾಟಿಸಿ ಹೋದ ಒಂದು ಅದ್ಭುತ ಪಾನೀಯ. ಹಬ್ಬಗಳ ನೆಪದಲ್ಲಾದರೂ ಇಂತಹ ದೇಸೀ ಪಾನೀಯಗಳನ್ನು ನಾವು ಕುಡಿಯಬೇಕು!
ಪಾನಕ ಸಂಸ್ಕೃತ ಮೂಲದಿಂದ ಬಂದ ಶಬ್ದ. ಅಂದರೆ, ಸಿಹಿಯಾದ ಪಾನೀಯ ಎಂದು ಅರ್ಥ. ಪಾನಕ ದೇಹವನ್ನು ತಂಪು ಮಾಡುವ ಪಾನೀಯವಾದ್ದರಿಂದ ರಾಮನವಮಿ ಬೇಸಿಗೆಯಲ್ಲಿ ಬರುವುದರಿಂದ ದೇಹಕ್ಕೆ ತಂಪು ಎಂಬ ಅರ್ಥದಲ್ಲಿ ರಾಮನವಮಿಯ ದಿನ ಇದನ್ನು ತಯಾರಿಸುವ ಸಂಪ್ರದಾಯ ಬಂದಿದೆ ಎಂಬ ಮಾತಿದೆ. ಪಾನಕದಲ್ಲೂ ಬಹಳ ವಿಧಗಳಿವೆ. ನಿಂಬೆಹಣ್ಣು ಹಿಂಡಿದ ಪಾನಕ, ಒಣ ಶುಂಠೀ ಹಾಕಿದ ಪಾನಕ, ತುಳಸಿ ಹಾಗೂ ಜೇನು ತುಪ್ಪ ಹಾಕಿದ ಪಾನಕ ಎಂಬಿತ್ಯಾದಿ ಬಗೆಗಳು ಸ್ಥಳದಿಂದ ಸ್ಥಳಕ್ಕೆ ಬದಲಾದರೂ ಹೆಸರು ಮಾತ್ರ ಬದಲಾಗುವುದಿಲ್ಲ.
ಪಾನಕ ಮಾಡಲು ಹಿಂದಿನ ಕಾಲದ ಹಿರಿಯರು ಬೇಕು. ಅವರ ಕೈಯಲ್ಲರಳಿದ ಪಾನಕದ ರುಚಿಯೇ ಬೇರೆ. ಅಜ್ಜಿಯರು ಒಂದು ಕಾಲದಲ್ಲಿ ಈ ಪಾನಕವನ್ನು ಹೇಗೆ ತಯಾರಿಸುತ್ತಿದ್ದರು ಹಾಗೂ ಅದೇ ಹಳೇ ಕಾಲದ ಪಾನಕದ ಶೈಲಿಯನ್ನು ಇಲ್ಲಿ ಇಂದು ತಿಳಿಸಲಾಗಿದೆ.
ಹೀಗೆ ಮಾಡಿ: ಎರಡು ಕಪ್ ನೀರು, ನಾಲ್ಕೈದು ಚಮಚ ತುರಿದ ಬೆಲ್ಲ, ಒಂದು ಚಿಟಿಕೆ ಏಲಕ್ಕಿ, ಒಂದು ಚಿಟಿಕೆ ಒಣ ಶುಂಠಿ ಪುಡಿ, ಎರಡು ಚಿಟಿಕೆ ಕರಿಮೆಣಸಿನ ಪುಡಿ ಇಷ್ಟಿದ್ದರೆ ಪಾನಕ ಮಾಡಬಹುದು. ಮೊದಲು ನೀರಿಗೆ ಬೆಲ್ಲದ ಹುಡಿ ಹಾಕಿ ಚೆನ್ನಾಗಿ ಕಲಕಿ. ಬೆಲ್ಲ ಕರಗಿದ ಮೇಲೆ ಅದಕ್ಕೆ ಏಲಕ್ಕಿ, ಶುಂಠಿ ಪುಡಿ, ಹಾಗೂ ಕರಿಮೆಣಸಿನ ಪುಡಿ ಸೇರಿಸಿ. ಕುಟ್ಟಣಿಯಲ್ಲಿ ಕುಟ್ಟಿ ಪುಡಿ ಮಾಡಿದ ಪುಡಿಯಾದರೆ ರುಚಿ ಹೆಚ್ಚು. ಹಿಂದಿನ ಕಾಲದಲ್ಲಿ ಇಂತಹ ಮಸಾಲೆ ಪುಡಿಗಳನ್ನೆಲ್ಲ ಹಿರಿಯರು, ಅಜ್ಜಿಯರು ಮನೆಯಲ್ಲೇ ಕುಟ್ಟಣಿಯಲ್ಲಿ ಕುಟ್ಟಿ ಪುಡಿ ಮಾಡಿ ಬೇಕಾದ ಅಡುಗೆಗೆ ಬಳಸುತ್ತಿದ್ದರು. ಅದಕ್ಕಾಗಿಯೇ, ಕೈಯಲ್ಲೇ ಮಾಡಿದ ಪುಡಿಗಳು ಆಹಾರದ ರುಚಿ ಹಾಗೂ ಘಮವನ್ನು ಹೆಚ್ಚಿಸುತ್ತಿದ್ದವು. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಶುಂಠಿ ಹಾಗೂ ಕರಿಮೆಣಸಿನ ಖಾರ ಬೆಲ್ಲದ ಜೊತೆಗೆ ಚೆನ್ನಾಗಿ ಹೊಂದಿಕೊಂಡು ಸಿಹಿ ಖಾರದ ಪಾನಕ ಸಿದ್ಧ. ಏಲಕ್ಕಿಯ ಘಮ ಇದಕ್ಕೆ ಅಪೂರ್ವ ಸ್ವಾದವನ್ನೂ ನೀಡುತ್ತದೆ. ನಿಂಬೆಹಣ್ಣು ಬೇಕಾದವರು, ಅರ್ಧ ನಿಂಬೆಹಣ್ಣನ್ನೂ ಇದಕ್ಕೆ ಹಿಂಡಿಕೊಳ್ಳಬಹುದು. ಈ ಪಾನಕವನ್ನು ದೇವರ ಮುಂದೆ ನೈವೇದ್ಯ ರೂಪದಲ್ಲಿ ಇಟ್ಟು, ಪೂಜೆಯ ನಂತರ ಪ್ರತಿಯೊಬ್ಬರೂ ಹಂಚಿಕೊಂಡು ಕುಡಿಯುವುದೇ ರಾಮನವಮಿಯ ಖುಷಿಗಳಲ್ಲೊಂದು.
ಇದನ್ನೂ ಓದಿ: Ram Navami 2023 : ರಘುಕುಲತಿಲಕ ಶ್ರೀರಾಮನ ಪೂಜಿಸುವ ಮಹಾಪರ್ವ ರಾಮನವಮಿ