Site icon Vistara News

Top 10 Ganesh Temple In India: ಒಮ್ಮೆ ನೋಡಲೇಬೇಕಾದ ದೇಶದ ಪ್ರಸಿದ್ಧ ಗಣೇಶ ಮಂದಿರಗಳಿವು

Top 10 Ganesh Temple In India

ಗಣಪತಿ ಹಬ್ಬ ಇನ್ನೇನು ಬಂದೇಬಿಟ್ಟಿತು. ಗಣಪತಿಯನ್ನು (Top 10 Ganesh Temple In India) ಪ್ರತಿಷ್ಠಾಪಿಸಿ, ಪೂಜಿಸಲೆಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಹಲವರು ತಮ್ಮ ಪ್ರೀತಿಯ ಗಣಪತಿಯ ಆಗಮನಕ್ಕೆಂದು ಭರ್ಜರಿ ತಯಾರಿಯನ್ನೇ ನಡೆಸಿಕೊಳ್ಳುತ್ತಿದ್ದಾರೆ. ಅಂದ ಹಾಗೆ ನಮ್ಮ ದೇಶದಲ್ಲಿ ಆದಿ ಪೂಜಿತನಾಗಿರುವ ಗಣೇಶನಿಗೆಂದು ಲಕ್ಷಾಂತರ ದೇವಸ್ಥಾನಗಳಿವೆ. ಅದರಲ್ಲಿ ಅತ್ಯಂತ ಪ್ರಸಿದ್ಧವಾದ ಕೆಲವು ಗಣಪತಿ ದೇವಸ್ಥಾನಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸಿದ್ಧಿವಿನಾಯಕ ದೇವಸ್ಥಾನ, ಮುಂಬೈ

ಈ ದೇವಸ್ಥಾನ ಮಹಾರಾಷ್ಟ್ರದ ರಾಜಧಾನಿ ಮುಂಬೈನ ಪ್ರಭಾದೇವಿಯಲ್ಲಿದೆ. ಈ ಮಂದಿರಕ್ಕೆ ಸುಮಾರು 200 ವರ್ಷಗಳಷ್ಟು ಇತಿಹಾಸವಿದೆ. ಈ ದೇಗುಲದಲ್ಲಿ ಗಣೇಶನ ಅಕ್ಕಪಕ್ಕದಲ್ಲಿ ರಿದ್ಧಿ ಮತ್ತು ಸಿದ್ಧಿ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ನಿತ್ಯ ಸಹಸ್ರಾರು ಭಕ್ತರು ಈ ಮಂದಿರಕ್ಕೆ ಭೇಟಿ ನೀಡುತ್ತಾರೆ. ಇಲ್ಲಿಗೆ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಆಗಾಗ ಭೇಟಿ ನೀಡುತ್ತಿರುತ್ತಾರೆ.
ದೇಗುಲದ ಸಮಯ
ಬೆಳಗ್ಗೆ 5ರಿಂದ ರಾತ್ರಿ 9

ಗಣಪತಿಪುಲೆ ದೇವಸ್ಥಾನ, ರತ್ನಗಿರಿ

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಗಣಪತಿಪುಲೆ ದೇವಸ್ಥಾನವಿದೆ. ಈ ದೇವಸ್ಥಾನವನ್ನು 400 ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ಈ ದೇವಸ್ಥಾನ ಪಶ್ಚಿಮ ದಿಕ್ಕಿಗೆ ಮುಖ ಮಾಡಿದ್ದು, ಗಣಪತಿ ದೇವರು ಪಶ್ಚಿಮ ಘಟ್ಟವನ್ನು ಕಾಪಾಡುತ್ತಿದ್ದಾರೆ ಎಂದು ನಂಬಲಾಗಿದೆ. ಈ ದೇವಸ್ಥಾನಕ್ಕೆ ಹಿಂದೆ ಹಸಿರಿನ ಬೆಟ್ಟಗಳನ್ನು ನೀವು ಕಾಣಬಹುದು. ದೇಗುಲದಲ್ಲಿ ಮುಂಜಾನೆ 5, ಮಧ್ಯಾಹ್ನ 12 ಮತ್ತು ಸಂಜೆ 7 ಗಂಟೆಗೆ ಮಹಾ ಮಂಗಳಾರತಿ ನಡೆಸಲಾಗುತ್ತದೆ.
ದೇಗುಲದ ಸಮಯ
ಬೆಳಗ್ಗೆ 5ರಿಂದ ರಾತ್ರಿ 9

Ganesha Temple, Gangtok, Sikkim

ಕಾಣಿಪಾಕಂ ವಿನಾಯಕ ದೇವಸ್ಥಾನ, ಚಿತ್ತೂರು

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಹುದಾ ನದಿ ದಡದಲ್ಲಿ ಕಾಣಿಪಾಕಂ ವಿನಾಯಕ ದೇವಸ್ಥಾನವಿದೆ. ಈ ದೇಗುಲವನ್ನು 11ನೇ ಶತಮಾನದ ಆರಂಭದಲ್ಲಿ ಚೋಳರ ರಾಜ ಕಟ್ಟಿದ್ದರು ಎಂದು ಹೇಳಲಾಗಿದೆ. ಈ ದೇವಸ್ಥಾನದ ಮೂರ್ತಿಯ ಎತ್ತರ ಕ್ರಮೇಣವಾಗಿ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ನಂಬುತ್ತಾರೆ. ಇದು ದೇಶದ ಅತ್ಯಂತ ಸುಂದರವಾದ ಗಣಪತಿ ದೇವಾಲಯಗಳಲ್ಲಿ ಒಂದು ಎಂದು ಬಣ್ಣಿಸಲಾಗಿದೆ.
ದೇಗುಲದ ಸಮಯ
ಬೆಳಗ್ಗೆ 5ರಿಂದ ರಾತ್ರಿ 9

ಮೋತಿ ಡುಂಗ್ರಿ ಗಣೇಶ ದೇವಸ್ಥಾನ, ಜೈಪುರ

ಈ ದೇವಸ್ಥಾನವನ್ನು ಜೈಪುರದ ಮೋತಿ ಡುಂಗ್ರಿಯ ಬೆಟ್ಟಗಳ ನಡುವೆ 17ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಸೀಥ್‌ ಜೈರಾಮ್‌ ಪೈಲ್ವಾನ್‌ ಮತ್ತು ಮಹಂತ್‌ ಶಿವ್‌ ನಾರಾಯಣ್ ಅವರು ಈ ದೇವಸ್ಥಾನವನ್ನು ನಿರ್ಮಿಸಿದರು. ಈ ದೇಗುಲ ನಿರ್ಮಾಣಕ್ಕೆ ನಾಲ್ಕು ವರ್ಷಗಳ ತಗುಲಿತು. 1761ರಲ್ಲಿ ದೇವಸ್ಥಾನ ಸಂಪೂರ್ಣವಾಗಿ ನಿರ್ಮಾಣವಾಯಿತು.
ದೇವಸ್ಥಾನದ ಸಮಯ
ಮುಂಜಾನೆ 4.30ರಿಂದ ಮಧ್ಯಾಹ್ನ 11.30
ಸಂಜೆ 5.45ರಿಂದ ರಾತ್ರಿ 9.00

ಮನಕುಲ ವಿನಯಗರ್ ದೇವಸ್ಥಾನ, ಪುದುಚೆರಿ

ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಪುದುಚೆರಿಯಲ್ಲಿ ಮನಕುಲ ವಿನಯಗರ್ ದೇವಸ್ಥಾನವಿದೆ. ಈ ಪ್ರದೇಶದಲ್ಲಿ ಇದನ್ನು ಅತ್ಯಂತ ಹಳೆಯ ದೇವಸ್ಥಾನ ಎಂದು ಕರೆಯಲಾಗುತ್ತದೆ. ಇದಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆ. ಈ ದೇವಸ್ಥಾನದಲ್ಲಿ ನೃತ್ಯದ ಭಂಗಿಯಲ್ಲಿರುವ ಗಣೇಶನ ಮೂರ್ತಿಯಿರುವುದು ವಿಶೇಷ.
ದೇವಸ್ಥಾನದ ಸಮಯ
ಮುಂಜಾನೆ 5.45ರಿಂದ ಮಧ್ಯಾಹ್ನ 12.30
ಸಂಜೆ 4ರಿಂದ ರಾತ್ರಿ 9.30

ರಣಥಂಬೋರ್‌ ಗಣೇಶ ದೇಗುಲ, ರಾಜಸ್ಥಾನ

ರಾಜಸ್ಥಾನದಲ್ಲಿನ ಪ್ರಸಿದ್ಧ ಗಣೇಶ ದೇವಸ್ಥಾನವೆಂದರೆ ಅದು ರಣಥಂಬೊರ್ ಗಣೇಶ ದೇವಸ್ಥಾನ. ಕ್ರಿ.ಶ.1300ರಲ್ಲಿ ರಾಜ ಹಮ್ಮೀರ ಈ ದೇವಸ್ಥಾನವನ್ನು ನಿರ್ಮಿಸಿದನು. ಈ ದೇವಸ್ಥಾನಕ್ಕೆ ತೆರಳಬೇಕೆಂದರೆ ನೀವು 250 ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕು. ಈ ದೇವಸ್ಥಾನಕ್ಕೆ ಪ್ರಪಂಚದಾದ್ಯಂತದಿಂದ ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ. ನೋಡಲೇಬೇಕಾದ ಅಪರೂಪದ ದೇವಸ್ಥಾನ ಇದು.
ದೇವಸ್ಥಾನದ ಸಮಯ
ಬೆಳಗ್ಗೆ 6ರಿಂದ ರಾತ್ರಿ 8

Ganesha Temple, Gangtok, Sikkim

ರಾಕ್‌ಫೋರ್ಟ್‌ ಉಚ್ಚಿ ಪಿಲ್ಲಯಾರ್‌ ಕೊಯ್ಲ್‌ ದೇವಸ್ಥಾನ, ತಮಿಳುನಾಡು

ತಮಿಳುನಾಡಿನ ತಿರುಚಿ ಜಿಲ್ಲೆಯ ರಾಕ್‌ಫೋರ್ಟ್‌ನಲ್ಲಿ ಈ ದೇವಸ್ಥಾನ ಕಾಣಸಿಗುತ್ತದೆ. ಈ ದೇವಸ್ಥಾನವನ್ನು 7ನೇ ಶತಮಾನದಲ್ಲಿ ಪಲ್ಲವರು ನಿರ್ಮಿಸಿದರು. ಈ ದೇವಸ್ಥಾನವು 273 ಅಡಿ ಎತ್ತರದ ಕಲ್ಲಿನ ಮೇಲಿದೆ. 437 ಮೆಟ್ಟಿಲುಗಳನ್ನು ಹತ್ತಿ ದೇವಸ್ಥಾನ ತಲುಪಬೇಕು. ಇಲ್ಲಿ ನೂರು ಕಂಬಗಳಿರುವ ದೊಡ್ಡ ಸಭಾಂಗಣವೂ ಇದ್ದು, ತಮಿಳುನಾಡಿನಾದ್ಯಂತ ಈ ದೇಗುಲಕ್ಕೆ ಭಕ್ತರಿದ್ದಾರೆ.
ದೇಗುಲದ ಸಮಯ
ಬೆಳಗ್ಗೆ 5.30ರಿಂದ ಮಧ್ಯಾಹ್ನ 12
ಸಂಜೆ 4ರಿಂದ ರಾತ್ರಿ 9

ಸಾಸಿವೆಕಾಳು ಮತ್ತು ಕಡಲೆಕಾಳು ಗಣೇಶ ದೇವಸ್ಥಾನ, ಹಂಪಿ

ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾದ ಹಂಪಿಯಲ್ಲಿ ಸಾಸಿವೆಕಾಳು ಮತ್ತು ಕಡಲೆಕಾಳು ಗಣೇಶನ ದೇವಸ್ಥಾನವಿದೆ. ಇಲ್ಲಿನ ಗಣೇಶ ದೇವಸ್ಥಾನವನ್ನು ಕ್ರಿ.ಶ. 1500ರಲ್ಲಿ ನಿರ್ಮಿಸಲಾಯಿತು. ಇದರಲ್ಲಿ ಅತಿ ಎತ್ತರದ ಗಣೇಶನ ಮೂರ್ತಿಯಿದ್ದು, ಯುನೆಸ್ಕೋ ಈ ಸ್ಥಳವನ್ನು ವಿಶ್ವ ಪಾರಂಪರಿಕ ಸ್ಥಳ ಎಂದು ಗುರುತಿಸಿದೆ. ವಿಜಯನಗರ ಸಾಮ್ರಾಜ್ಯದ ರಾಜ ನರಸಿಂಹ 2 ಈ ದೇಗುಲವನ್ನು ನಿರ್ಮಿಸಿದನು ಎಂಬ ದಾಖಲೆ ಇದೆ.
ದೇವಸ್ಥಾನದ ಸಮಯ
ಬೆಳಗ್ಗೆ 6ರಿಂದ ಸಂಜೆ 6

ಕರ್ಪಗ ವಿನಯಗರ ದೇವಸ್ಥಾನ, ಪಿಳ್ಳಯಾರ್‌ಪಟ್ಟಿ, ತಮಿಳುನಾಡು

ತಮಿಳುನಾಡಿನ ಪಿಳ್ಳಯಾರ್‌ಪಟ್ಟಿಯಲ್ಲಿ ಈ ದೇವಸ್ಥಾನವಿದೆ. ಈ ದೇಗುಲವನ್ನು ಏಳನೇ ಶತಮಾನದಲ್ಲಿ ನಿರ್ಮಿಸಲಾಯಿತು. 1600 ವರ್ಷಗಳ ಇತಿಹಾಸವಿರುವ ಈ ದೇವಸ್ಥಾನದಲ್ಲಿ ಅತ್ಯದ್ಭುತ ಶಿಲ್ಪಕಲೆಯನ್ನು ನೀವು ಕಾಣಬಹುದು. ಇಲ್ಲಿ ಗಣೇಶನ ಮೂರ್ತಿ ಉತ್ತರ ದಿಕ್ಕಿಗೆ ಮುಖ ಮಾಡಿದೆ. ದೇಶದ ಅಪರೂಪದ ದೇವಸ್ಥಾನಗಳಲ್ಲಿ ಇದೂ ಒಂದು.
ದೇವಸ್ಥಾನದ ಸಮಯ
ಬೆಳಗ್ಗೆ 6ರಿಂದ ಮಧ್ಯಾಹ್ನ 12
ಸಂಜೆ 4ರಿಂದ ರಾತ್ರಿ 8

ಗಣೇಶ ದೇವಸ್ಥಾನ, ಗ್ಯಾಂಕ್ಟಕ್‌, ಸಿಕ್ಕಿಂ

ಸಿಕ್ಕಿಂನ ಗ್ಯಾಂಕ್ಟಕ್‌ನಲ್ಲಿ ವಿಶೇಷ ಗಣೇಶ ದೇವಸ್ಥಾನವಿದೆ. ಈ ದೇವಸ್ಥಾನವನ್ನು 1953ರಲ್ಲಿ ನಿರ್ಮಿಸಲಾಯಿತು. ಈ ದೇವಸ್ಥಾನದಿಂದ ಕಾಂಚನಜುಂಗ ಬೆಟ್ಟ ಮತ್ತು ಗ್ಯಾಂಕ್ಟಕ್‌ ನಗರದ ಸುಂದರ ದೃಶ್ಯವನ್ನು ನೋಡಬಹುದು. ಇದು ಅತ್ಯಂತ ಸುಂದರವಾದ ದೇಗುಲಗಳಲ್ಲಿ ಒಂದು ಎಂದೂ ಕರೆಸಿಕೊಂಡಿದೆ.
ದೇವಸ್ಥಾನದ ಸಮಯ
ಬೆಳಗ್ಗೆ 9ರಿಂದ ಸಂಜೆ 5

ಇದನ್ನೂ ಓದಿ: Famous Ganesha Temples: ಭಕ್ತರ ಮನಸ್ಸಿಗೆ ನೆಮ್ಮದಿ ನೀಡುವ ತಾಣ, ಕರ್ನಾಟಕದ ಪ್ರಮುಖ ಗಣಪತಿ ದೇವಸ್ಥಾನಗಳಿವು

Exit mobile version