Site icon Vistara News

Tulsi Puja 2022 | ಇಂದು ಉತ್ಥಾನ ದ್ವಾದಶಿ; ತುಳಸಿಯ ಮಹಿಮೆಯ ಬಲ್ಲಿರೇನು?

Tulsi Puja 2022

ಈ ಲೇಖನವನ್ನು ಇಲ್ಲಿ ಕೇಳಿ

https://vistaranews.com/wp-content/uploads/2022/11/tulasi-habba.ogg

ಡಾ. ಗಣಪತಿ ಆರ್. ಭಟ್
ಪ್ರಕೃತಿಯಿಲ್ಲದೇ ನಾವಿಲ್ಲ. ಪ್ರಕೃತಿಗೂ ಮನುಷ್ಯನಿಗೂ ಇರುವ ಅವಿನಾಭಾವ ಸಂಬಂಧವನ್ನು ಮನಗಂಡು ನಮ್ಮ ಪ್ರಾಚೀನರು ಪ್ರಕೃತಿ ಆರಾಧನೆಯನ್ನು ಆರಂಭಿಸಿದರು. ನೆಲ, ನೀರು, ಗಾಳಿ, ವೃಕ್ಷ ಎಲ್ಲದರಲ್ಲಿಯೂ ದೇವರನ್ನು ಕಂಡರು. ಅಂಥಹ ಪ್ರಕೃತಿಯ ಆರಾಧನೆಯ ಸಾಲಿಗೆ ಸೇರುವುದು ತುಳಸಿ ಪೂಜೆ ಅಥವಾ ತುಳಸಿ ವಿವಾಹ (Tulsi Puja 2022). ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯ ದಿನ ಮನೆ ಮನೆಗಳಲ್ಲಿ ತುಳಸಿಕಟ್ಟೆಯನ್ನು ಅಲಂಕರಿಸಿ ತುಳಸಿಯ ಮದುವೆ ಮಾಡುವುದು ವಾಡಿಕೆ.

ಈ ದಿನವನ್ನು ಉತ್ಥಾನ ದ್ವಾದಶಿ ಎಂತಲೂ ಕರೆಯಲಾಗುತ್ತದೆ. ನಾಲ್ಕು ತಿಂಗಳುಗಳ ಕಾಲ ಕ್ಷೀರಸಾಗರದಲ್ಲಿ ಶೇಷಶಯನನಾಗಿದ್ದ ವಿಷ್ಣುವು ಇಂದೇ ನಿದ್ರಾವಸ್ಥೆಯಿಂದ ಎದ್ದು ಭಕ್ತರಿಗೆ ದರ್ಶನ ನೀಡುವನು ಎಂಬ ಪ್ರತೀತಿ ಇದೆ. ವಿಷ್ಣು ಪ್ರಿಯೆ ಎನಿಸಿದ ತುಳಸಿಯನ್ನು ಇಂದೇ ಆರಾಧಿಸುವುದರಲ್ಲಿಯೂ ಸಾಕಷ್ಟು ವಿಶೇಷತೆಗಳಿವೆ.

ತುಳಸಿ ಎಂದರೆ ಕೇವಲ ಸಸ್ಯವಲ್ಲ. ಧಾರ್ಮಿಕ ಶ್ರದ್ಧೆಯುಳ್ಳವರಿಗೆ ನಿತ್ಯದರ್ಶನವೀಯುವ ಮನೆಯ ಮುಂದಣ ದೇವತೆ. ಕೃಷ್ಣನ ಪ್ರಿಯಸಖಿ ಎಂಬ ಕಾರಣಕ್ಕಾಗಿ ಕೃಷ್ಣೋಪಾಸಕರಿಗೆಲ್ಲ ಪರಮಾಪ್ತೆಯಾಕೆ. ತುಳಸಿಯ ಸೇವನೆಯಿಂದ ಶರೀರಕ್ಕೆ ಆಗುವ ಲಾಭವೂ ಅಷ್ಟಿಷ್ಟಲ್ಲ. ಆಸ್ತಿಕರೆಲ್ಲರೂ ದಿನದ ಸ್ವಲ್ಪ ಸಮಯವಾದರೂ ತುಳಸಿಗಾಗಿ ವ್ಯಯಿಸುತ್ತಾರೆ. ನಿತ್ಯವೂಸೂರ್ಯ ರಶ್ಮಿಯು ತುಳಸಿಯನ್ನು ತಾಕಿಕೊಂಡೇ ಮನೆಯ ಒಳಗೆ ಪಸರಿಸಬೇಕೆಂಬ ಭಾವನೆ ಅನೇಕರದ್ದು.

ತುಳಸಿಗಿದೆ ನಾನಾ ಹೆಸರುಗಳು
ಪದ್ಮಪುರಾಣ, ಸ್ಕಂದಪುರಾಣ, ವಿಷ್ಣುಧರ್ಮೋತ್ತರ ಪುರಾಣ, ದೇವೀ ಭಾಗವತ ಹೀಗೇ ನಾನಾ ಪುರಾಣಗಳಲ್ಲಿ ತುಳಸಿಯ ಕುರಿತಾದ ಕಥೆಗಳು, ಮಹಾತ್ಮೆ ವರ್ಣಿತವಾಗಿವೆ. ಬ್ರಹ್ಮವೈವರ್ತಪುರಾಣದಲ್ಲಿ ‘ಯಸ್ಯಾಃ ದೇವ್ಯಾಸ್ತುಲಾ ನಾಸ್ತಿ ವಿಶ್ವೇಷು ನಿಖಿಲೇಷು ಚ ತುಲಸೀ ತೇನ ವಿಖ್ಯಾತಾ’ಎಂಬುದಾಗಿ ವಿಶ್ವದ ಸಕಲ ವೃಕ್ಷಗಳ ಪೈಕಿ ಇದಕ್ಕೆ ಸರಿಸಮಾನವಾದ ಇನ್ನೊಂದು ಸಸ್ಯವಿಲ್ಲ ಎನ್ನಲಾಗಿದೆ. ಆಕಾರಣಕ್ಕಾಗಿಯೇ ಇದು ‘ತುಲಸೀ’ ಎಂಬ ಹೆಸರಿನಿಂದಕರೆಯಲ್ಪಟ್ಟಿತು.

ಇನ್ನು ಋಷಿಮುನಿಗಳಿಗೆ ಅತ್ಯಂತ ಸಂತಸವನ್ನು ಉಂಟು ಮಾಡುವವಳು ಎಂಬ ಕಾರಣಕ್ಕೆ ತುಳಸಿಯನ್ನು ನಂದಿನೀ ಎಂದು ಕರೆಯಲಾಗುತ್ತದೆ. ವೃಂದಾವನದಲ್ಲಿ ಕೃಷ್ಣನಿಂದ ಬೆಳೆಸಲ್ಪಟ್ಟವಳು ಹಾಗಾಗಿ ಅವಳಿಗೆ “ವೃಂದಾವನೀ” ಎಂಬ ಹೆಸರಿದೆ. ಕೃಷ್ಣನ ಪ್ರೀತಿಪಾತ್ರಳು ಎಂಬ ಕಾರಣಕ್ಕೆ ಕೃಷ್ಣಜೀವನೀ ಎಂಬ ಹೆಸರು ಬಂತು. ಎಲ್ಲ ಹೂವುಗಳ ಸಾರವನ್ನು ಧರಿಸಿರುವಕಾರಣಕ್ಕೆ ಪುಷ್ಪಸಾರಾ ಎಂಬುದಾಗಿಯೂ, ವಿಶ್ವವನ್ನು ಪವಿತ್ರಗೊಳಿಸುತ್ತಾಳೆ ಎಂಬ ಕಾರಣಕ್ಕಾಗಿ ವಿಶ್ವಪಾವನೀ ಎಂಬ ಹೆಸರೂ ತುಳಸಿಗೆ ಇದೆ.

Tulsi Puja 2022

ತುಳಸಿ ಕುರಿತ ಪೌರಾಣಿಕ ಕಥೆಗಳು
ತುಳಸಿಯ ಜನ್ಮ ವೃತ್ತಾಂತದ ಕುರಿತಾಗಿ ನಾನಾ ಬಗೆಯ ಕಥಾನಕಗಳಿವೆ. ಪೂರ್ವದಲ್ಲಿ ಅವಳು ವೃಂದಾ ಎಂಬ ಹೆಸರಿನ ಸಾಧ್ವಿಯಾಗಿದ್ದಳು. ಜಲಂಧರನೆಂಬ ಅಸುರನ ಪತ್ನಿಯಾಗಿದ್ದರೂ ವಿಷ್ಣುಭಕ್ತಳೂ, ಪತಿವ್ರತಾ ಶಿರೋಮಣಿಯೂ ಆಗಿದ್ದಳೆಂಬುದು ಗೊತ್ತಾಗುತ್ತದೆ. ಅವಳ ಪಾತಿವ್ರತ್ಯದಿಂದಾಗಿ ಜಲಂಧರನು ಏಷ್ಟೇ ಪಾಪಕೃತ್ಯ ಎಸಗಿದರೂ ಅವನಿಗೆ ಸಾವು ಬರುತ್ತಿರಲಿಲ್ಲ. ದೇವತೆಗಳೆಲ್ಲ ಮೊರೆಹೋಗಲು, ಜಲಂಧರನನ್ನು ಕೊಲ್ಲುವುದಕ್ಕೋಸ್ಕರ ವಿಷ್ಣುವು ವೃಂದೆಯ ಪತಿ ವ್ರತಾಧರ್ಮಕ್ಕೆ ಭಂಗತರುತ್ತಾನೆ. ಇದರಿಂದ ಕುಪಿತಳಾದ ಅವಳು ವಿಷ್ಣುವಿಗೆ ಶಿಲೆಯಾಗೆಂದು ಶಾಪ ನೀಡುತ್ತಾಳೆ. ಆ ಪ್ರಕಾರ ವಿಷ್ಣುವು ಶಾಲಗ್ರಾಮ ಶಿಲೆಯ ರೂಪದಲ್ಲಿ ಪೂಜಿತನಾಗುತ್ತಾನೆ. ವಿಷ್ಣುವೂ ಕೂಡ ಅವಳಿಗೆ ಆ ಶಾಲಗ್ರಾಮದ ಪೂಜೆಗೆ ಅರ್ಹಳಾಗುವಂತೆ ಮಾಡುತ್ತಾನೆ. ಹಾಗೆ ಜನಿಸಿದವಳೇ ತುಳಸಿ.

ಇನ್ನೊಂದು ಕಥೆಯ ಪ್ರಕಾರ ಸುರಾಸುರರುಕ್ಷೀರ ಸಾಗರವನ್ನು ಮಥನ ಮಾಡಿದಾಗ ಕೊನೆಯಲ್ಲಿ ಅಮೃತವು ಹುಟ್ಟಿತು. ಅದನ್ನು ಪಡೆದುಕೊಳ್ಳಲು ವಿಷ್ಣುವು ಸಾಹಸವನ್ನು ಮಾಡಬೇಕಾಯಿತು. ಅಮೃತ ಕಲಶವು ಆತನ ಕೈಗೆ ಸಿಕ್ಕಾಗ ಉಂಟಾದ ಆನಂದಭಾಷ್ಪದ ಒಂದು ಹನಿ ಅದೇ ಕಲಶದಲ್ಲಿ ಬಿದ್ದು ತುಳಸಿಯು ಹುಟ್ಟಿತು.

ವಿಷಯವೇನೇ ಇರಲಿ, ತುಳಸಿಯು ಒಂದು ಚಿಕ್ಕ ಸಸ್ಯ ಪ್ರಬೇಧವಾದರೂ ಅದರ ಮಹತ್ವವನ್ನು ಅರಿತು ನಮ್ಮವರು ಅದಕ್ಕೆ ಇಷ್ಟೊಂದು ಪ್ರಾಧಾನ್ಯತೆಯನ್ನು ಕೊಟ್ಟಿರುವುದು ಗೊತ್ತಾಗುತ್ತದೆ.

ತುಲಸಿಯ ಮಹಿಮೆ ಬಲ್ಲಿರೇನು?
ಪುರಾಣಗಳಲ್ಲಿ ತುಳಸಿಯನ್ನು ಪಾಪನಾಶಿನಿ, ಸುಖದಾಯಿನಿ, ಪುಣ್ಯಪ್ರದಾಯಿನಿ ಇಂಬಿತ್ಯಾದಿಯಾಗಿ ವರ್ಣಿಸಲಾಗಿದೆ. ಯಾರು ತುಲಸಿದಳದಿಂದ ಶ್ರೀವಿಷ್ಣುವನ್ನು ಪೂಜಿಸುತ್ತಾರೋ, ಅವರಿಗೆ ಸದ್ಗತಿ ಸಿಗುತ್ತದೆ. ಎಲ್ಲಿ ತುಳಸಿಯು ಇರುತ್ತದೆಯೋ ಅಲ್ಲಿ ಕೃಷ್ಣನು ಸದಾ ವಾಸವಾಗಿರುತ್ತಾನೆ ಎಂಬುದಾಗಿ ಪದ್ಮಪುರಾಣದಲ್ಲಿ ಹೇಳಲಾಗಿದೆ.

ಪ್ರತಿನಿತ್ಯ ತುಳಸಿಯ ದರ್ಶನಮಾಡುವುದರಿಂದ ಕೋಟಿಗೋವುಗಳನ್ನು ದಾನ ಮಾಡಿದ ಪುಣ್ಯ ಪ್ರಾಪ್ತವಾಗುತ್ತದೆ. ದೇವಾನು ದೇವತೆಗಳೆಲ್ಲ ತುಳಸಿಯ ಮಹತ್ವ ಅರಿತಿದ್ದರು. ಕೃಷ್ಣನು ಲೋಕಹಿತಕ್ಕಾಗಿ ಗೋಮತಿ ತೀರದಲ್ಲಿ ತುಳಸಿಯನ್ನು ನೆಟ್ಟನು. ಸಕಲ ಕಷ್ಟಗಳನ್ನು ಕಳೆಯುವ ಶಕ್ತಿ ಉಳ್ಳ ತುಳಸಿಯನ್ನು ವಸಿಷ್ಠರ ವಚನಾನುಸಾರ ರಾಮನು ಸರಯೂ ನದಿಯ ತಟದಲ್ಲಿ ನೆಟ್ಟನು. ತನ್ಮೂಲಕ ಅಸುರರನ್ನು ಸಂಹರಿಸುವ ಶಕ್ತಿಯನ್ನು ಪಡೆದನು. ಸೀತೆಯೂ ಕೂಡ ಅಶೋಕ ವನದಲ್ಲಿ ತುಳಸಿಯನ್ನು ನೆಡುವುದರ ಮೂಲಕ ತನ್ನ ಗಂಡನಾದ ರಾಮನನ್ನು ಪುನಃ ಸೇರಿದಳು. ಪಾರ್ವತಿಯೂ ಕೂಡ ತುಳಸಿ ಗಿಡವನ್ನು ನೆಟ್ಟ ಪುಣ್ಯದಿಂದಲೇ ಪರಶಿವನನ್ನು ವರಿಸಿದಳು ಎಂಬುದಾಗಿ ತುಳಸಿಯ ಮಹಿಮೆಯನ್ನು ಪುರಾಣ ಕಾವ್ಯಗಳಲ್ಲಿ ಬಣ್ಣಿಸಲಾಗಿದೆ.

ಬಹೂಪಯೋಗಿ ತುಳಸಿ
ಧಾರ್ಮಿಕಆಚರಣೆಯ ವಿಧಿ ವಿಧಾನಗಳಲ್ಲಿ ತುಳಸಿಗೆ ಮಹತ್ವದ ಸ್ಥಾನವಿದೆ. ಕೃಷ್ಣನ ಪೂಜೆಯಲ್ಲಿ ಮತ್ತು ಶಾಲಗ್ರಾಮದ ಪೂಜೆಯಲ್ಲಿ ತುಳಸಿಯೇ ಶ್ರೇಷ್ಠ. ತೀರ್ಥದಲ್ಲಿ ತುಳಸಿಯ ದಳವನ್ನು ಸೇರಿಸಲಾಗುತ್ತದೆ. ನೈವೇದ್ಯ ಮಾಡುವಾಗಲೂ ತುಳಸಿ ಜಲದಿಂದಲೇ ಪರಿಸಿಂಚನ ಮಾಡಲಾಗುವುದು. ದಾನದ ಸಂದರ್ಭದಲ್ಲಿಯೂ ತುಳಸಿ ನೀರನ್ನು ದಾನದ ವಸ್ತುವಿನ ಮೇಲೆ ಬಿಡಲಾಗುತ್ತದೆ. ಅಂತ್ಯೇಷ್ಟಿಯ ಸಮಯದಲ್ಲಿಯೂ ತುಳಸಿಯ ಕಾಷ್ಟವನ್ನು ಸಮರ್ಪಿಸಲಾಗುತ್ತದೆ.

Tulsi Puja 2022

ತುಳಸಿಯ ಧಾರ್ಮಿಕ ಲಾಭಗಳು ಒಂದೆಡೆಯಾದರೆ,ಇನ್ನೊಂದೆಡೆ ಅದನ್ನು ನೆಟ್ಟು ಬೆಳಸುವ ಮೂಲಕ ಆರೋಗ್ಯಾತ್ಮಕ ಲಾಭಗಳನ್ನೂ ಪಡೆಯಬಹುದಾಗಿದೆ. ತುಳಸಿಯನ್ನು ನಮ್ಮ ವಾಸಸ್ಥಳದ ಸುತ್ತಮುತ್ತ ಬೆಳಸಿದರೆ ರೋಗ ಕಾರಕ ಜಂತುಗಳು ನಾಶವಾಗಿ ವಾತಾವರಣವು ಪರಿಶುದ್ಧವಾಗಿರುತ್ತದೆ. ಪ್ರಾಣವಾಯುವನ್ನು ಹೇರಳವಾಗಿ ನೀಡುವ ಸಸ್ಯ ಇದಾಗಿದ್ದು, ಪ್ರತಿನಿತ್ಯ ತುಳಸಿ ಕಟ್ಟೆಯನ್ನು ಸುತ್ತುವ ಮೂಲಕ ಅದರ ಲಾಭವನ್ನು ಪಡೆದುಕೊಳ್ಳಬಹುದು.

ಆಯುರ್ವೇದದ ಚಿಕಿತ್ಸೆಗಳಲ್ಲಿ ಜೊತೆಗೆ ಮನೆಮದ್ದುಗಳಲ್ಲಿಯೂ ತುಳಸಿಯು ಹೆಚ್ಚಾಗಿ ಬಳಕೆಯಾಗುತ್ತದೆ. ತುಳಸಿ ಕಷಾಯವು ನೆಗಡಿ, ಶೀತ, ಕೆಮ್ಮುಗಳನ್ನು ನಿವಾರಿಸುತ್ತದೆ. ಉದುರಿದ ತುಳಸಿಯ ಎಲೆಯು ಮಣ್ಣಿನೊಂದಿಗೆ ಬೆರೆತು ಚರ್ಮವ್ಯಾಧಿಯ ಔಷಧಿಯಾಗಿ ಮಾರ್ಪಡುತ್ತದೆ. ಅಷ್ಟೇ ಅಲ್ಲದೆ ಬೊಜ್ಜು ನಿವಾರಣೆ, ವಾಂತಿ, ಸಂಧಿವಾತ ಇತ್ಯಾದಿ ತೊಂದರೆಗಳಲ್ಲಿಯೂ ತುಳಸಿಯನ್ನು ಔಷಧಿಯಾಗಿ ಬಳಸುತ್ತಾರೆ. ಗಾಯಗಳಿಗೆ ಕೀವಾಗದಂತೆ ತಡೆಯಲು ತುಳಸಿ ರಸವನ್ನು ಮತ್ತು ಕಡ್ಡಿಯನ್ನು ಬಳಸಲಾಗುತ್ತದೆ. ಸಾಬೂನು ಹಾಗೂ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿಯೂ ತುಳಸಿಯು ಬಳಕೆಯಾಗುತ್ತದೆ.

ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಿಂದ ಹುಣ್ಣಿಮೆಯವರೆಗೂ ಯಾವುದೇ ದಿನವು ತುಳಸಿ ಪೂಜೆಗೆ ಪ್ರಸಕ್ತವಾಗಿರುತ್ತದೆ. ತುಲಸಿಯಷ್ಟೇ ಧಾರ್ಮಿಕವಾಗಿ ಹಾಗೂ ಔಷಧದ ದೃಷ್ಟಿಯಿಂದ ಮಹತ್ವ ಹೊಂದಿರುವ ಬೆಟ್ಟದ ನೆಲ್ಲಿಕಾಯಿಯ ಟೊಂಗೆಯನ್ನೂ ತುಳಸಿಯ ಜೊತೆಗೆ ಇರಿಸಿ ಪೂಜಿಸಬೇಕು. ನಿತ್ಯವೂ ತುಳಸಿಯನ್ನು ಉಪಾಸಿಸುವುದರ ಜೊತೆಗೆ ಈ ಪರ್ವಕಾಲದಲ್ಲಿ ತುಳಸಿಯನ್ನು ಆರಾಧಿಸುವ ಮೂಲಕ ತುಳಸಿಯ ನಿತ್ಯೋಪಯೋಗಿ ಗುಣವನ್ನು ಅರಿಯೋಣ. ಅದರ ಲಾಭವನ್ನು ನಮ್ಮದಾಗಿಸಿಕೊಳ್ಳೋಣ.

(ಲೇಖಕರು ಸಂಸ್ಕೃತ ಪ್ರಾಧ್ಯಾಪಕರು)

ಇದನ್ನೂ ಓದಿ | Tulsi Puja 2022 | ಉತ್ಥಾನ ದ್ವಾದಶಿಯಂದು ತುಳಸಿಯೊಂದಿಗೆ ನೆಲ್ಲಿಗಿಡಕ್ಕೇಕೆ ಪೂಜೆ?

Exit mobile version