Site icon Vistara News

Varamahalakshmi Festival: ವ್ರತಗಳಲ್ಲೇ ಶ್ರೇಷ್ಠ ಈ ವರಮಹಾಲಕ್ಷ್ಮಿ ಹಬ್ಬ: ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ!

Varamahalakshmi Festival

ಶ್ರಾವಣ ಮಾಸದ (Shravana masa 2023) ಸಂಭ್ರಮ ಎಂದಿನಂತೆ ವರಮಹಾಲಕ್ಷ್ಮಿ ಹಬ್ಬವನ್ನೂ (varamahalakshmi festival) ಹೊತ್ತು ತಂದಿದೆ. ಹಿಂದೂಗಳ (hindu festival) ಪವಿತ್ರ ಮಾಸವೆಂದೇ ಕರೆಯಲ್ಪಡುವ ಶ್ರಾವಣ ಮಾಸದಲ್ಲಿ ನಾಗರ ಪಂಚಮಿಯಿಂದ ಮೊದಲ್ಗೊಂಡು ಆರಂಭವಾಗುವ ಹಬ್ಬಗಳ ಪೈಕಿ ಎರಡನೇ ಶುಕ್ರವಾರ ಬರುವ ವರಮಹಾಲಕ್ಷ್ಮಿ ಹಬ್ಬ (Varamahalaxmi Vratham) ಕೂಡಾ ಹಿಂದೂಗಳಿಗೆ ಅಷ್ಟೇ ಮಹತ್ವವಾದ ಹಬ್ಬ. ಮುಖ್ಯವಾಗಿ ಮುತ್ತೈದೆಯರಿಗೆ ಇದು ಅತ್ಯಂತ ವಿಶೇಷ. ಸಕಲ ಇಷ್ಟಾರ್ಥ ಸಿದ್ಧಿಗಾಗಿ ಮಾಡುವ ಈ ವ್ರತ, ವ್ರತಗಳಲ್ಲೇ ಅತ್ಯಂತ ಶ್ರೇಷ್ಠವೆಂಬ ನಂಬಿಕೆಯೂ ಹಿಂದೂಗಳಲ್ಲಿದೆ.

ಒಮ್ಮೆ, ಕೈಲಾಸ ಪರ್ವತದಲ್ಲಿ ಶಿವ ನಡೆಸುವ ಸಭೆಯಲ್ಲಿ ಪಾರ್ವತಿಯು ಶಿವನನ್ನು ಉದೇಶಿಸಿ, ಮಹಿಳೆಯರು ಯಾವ ವ್ರತವನ್ನು ಮಾಡಿದರೆ ಸಕಲ ಇಷ್ಟಾರ್ಥಗಳೂ ಪ್ರಾಪ್ತಿಯಾಗುತ್ತದೆ ಎಂದು ಕೇಳಿದಳಂತೆ. ಆಗ, ಶಿವನು ವರಮಹಾಲಕ್ಷ್ಮಿ ವ್ರತದ ಕಥೆಯನ್ನು ಉಲ್ಲೇಖಿಸಿದನಂತೆ. ಈ ಕಥೆಯ ಪ್ರಕಾರ, ಹಿಂದೆ ಚಾರುಮತಿ ಎಂಬಾಕೆಯೊಬ್ಬಳು ಅತ್ಯಂತ ಶ್ರದ್ಧೆ ಭಕ್ತಿಯಿಂದ ತನ್ನ ಅತ್ತೆ ಮಾವಂದಿರ ಸೇವೆ ಮಾಡುತ್ತಿದ್ದಳಂತೆ. ಆದಕೆ ಭಕ್ತಿ ಹಾಗೂ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಕನಸಿನಲ್ಲಿ ಒಲಿದ ಲಕ್ಷ್ಮಿಯು ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಾನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುತ್ತೇನೆ ಎಂದಳಂತೆ. ಅದೇ ಕಾರಣದಿಂದ ಚಾರುಮತಿಯು ಶ್ರಾವಣ ಮಾಸದ ಹುಣ್ಣಿಗೂ ಮೊದಲ ಶುಕ್ರವಾರ ವರಮಹಾಲಕ್ಷ್ಮಿಯನ್ನು ಆರಾಧಿಸುತ್ತಾಳೆ ಎಂಬುದು ಈ ಹಬ್ಬದ ಹಿನ್ನೆಲೆ ಎಂಬ ನಂಬಿಕೆ.

ಇಷ್ಟೇ ಅಲ್ಲ, ಇನ್ನೂ ಒಂದು ಕಥೆಯು ಈ ಹಬ್ಬದ ಹಿನ್ನೆಲೆಯನ್ನು ತಿಳಿಸುತ್ತದೆ. ಅಮೃತವನ್ನು ಪಡೆಯಲು ದೇವತೆಗಳೂ ದಾನವರೂ, ಮಂದಾರ ಪರ್ವತವನ್ನೇ ಕಡೆಗೋಲಾಗಿ ಮಾಡಿ ಅದಕ್ಕೆ ವಾಸುಕಿಯನ್ನು ಸುತ್ತಿ ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಫಳಪಳಿಸುತ್ತಾ ಉದ್ಭವಿಸಿದಾಕೆ ಲಕ್ಷ್ಮಿ. ಸಕಲ ಇಷ್ಟಾರ್ಥಗಳನ್ನೂ ನೆರವೇರಿಸುವ ಈ ಲಕ್ಷ್ಮಿಯನ್ನು ಪ್ರತಿ ವರ್ಷವೂ ಶ್ರಾವಣದಲ್ಲಿ ಪೂಜಿಸುವುದರಿಂದ ಆಕೆಯ ಕೃಪೆಗೆ ಪಾತ್ರರಾಗುವ ನಂಬಿಕೆಯೂ ಇಲ್ಲಿಂದಲೇ ಬಂದಿದೆ.

ಆಚರಣೆ ಹೀಗೆ: ಹೆಂಗಳೆಯು ಆಚರಿಸುವ ಈ ಹಬ್ಬಕ್ಕೆ ಬೆಳಗ್ಗೆ ಬೇಗನೆ ಎದ್ದು ಶುಚಿರ್ಭೂತರಾಗಿ ಮನೆಯನ್ನು ಶುದ್ಧಮಾಡಿ, ತಳಿರು ತೋರಣಗಳಿಂದ ಅಲಂಕರಿಸಿ, ರಂಗೋಲಿ ಹಾಕಿ ಮಡಿ ತೊಟ್ಟು ದೇವರಿಗೆ ನೈವೇದ್ವವನ್ನು ತಯಾರಿಸಲಾಗುತ್ತದೆ. ಲಕ್ಷ್ಮಿ ಎಂದರೆ ಶುದ್ಧತೆಯ ಸಂಕೇತ. ಹೀಗಾಗಿ ಲಕ್ಷ್ಮಿಗೆ ಕೆಂಪು ಅಂಚಿನ ಹೊಸ ಬಿಳಿ ಸೀರೆ ಉಡಿಸಿ ಅಲಂಕಾರ ಮಾಡುವುದು ಈ ಹಬ್ಬದ ಪದ್ಧತಿ. ಬ್ರಾಹ್ಮೀ ಲಗ್ನದಲ್ಲಿಯೇ ಮುಂಜಾನೆ ಲಕ್ಷ್ಮಿಯನ್ನು ಪ್ರತಿಷ್ಠಾಪನೆ ಮಾಡುವುದು ಕ್ರಮ. ಉಳ್ಳವರು ಒಡವೆಗಳನ್ನೂ ಇಟ್ಟು ಸಿಂಗಾರ ಮಾಡುತ್ತಾರೆ. ಆದರೆ, ಲಕ್ಷ್ಮಿಯನ್ನು ಮೆಚ್ಚಿಸಲು ಬೆಳ್ಳಿ ಚಿನ್ನಗಳ ಅಗತ್ಯವೇನೂ ಇಲ್ಲ, ಭಕ್ತಿಯಿಂದ ತಮ್ಮ ಶಕ್ತಿಗನುಸಾರವಾಗಿ ಪೂಜಿಸಿದರೆ ಸಾಕು.

ಮುಖ್ಯವಾಗಿ ಈ ಹಬ್ಬವನ್ನು ಎರಡು ಬಗೆಯಲ್ಲಿ ಆಚರಿಸಲಾಗುತ್ತದೆ. ಕೆಲವರು ತಮ್ಮ ಮನೆಯ ಲಕ್ಷ್ಮೀ ವಿಗ್ರಹಕ್ಕೆ ಪೂಜೆ ಮಾಡಿ ಹಬ್ಬ ಆಚರಿಸಿದರೆ, ಇನ್ನೂ ಕೆಲವರು ವ್ರತವನ್ನು ಕೈಗೊಂಡು ಲಕ್ಷ್ಮಿಯನ್ನು ಆರಾಧಿಸುತ್ತಾರೆ. ಲಕ್ಷ್ಮಿಗಾಗಿ ಬಗೆಬಗೆಯ ಹೂವುಗಳನ್ನು ಮೊದಲೇ ಕೊಂಡು ತಂದು ಸಿಂಗಾರ ಮಾಡಲಾಗುತ್ತದೆ. ಲಕ್ಷ್ಮಿಗೆ ಕಮಲದ ಹೂವುಗಳು ಹಾಗೂ ಬಿಲ್ವದೆಲೆಯೆಂದರೆ ಪ್ರೀತಿಯಾದ್ದರಿಂದ ವ್ರತ ಮಾಡುವವರು ಕಮಲ ಹೂವುಗಳನ್ನೂ, ಬಿಲ್ವವನ್ನೂ ಇಟ್ಟು ಭಕ್ತಿಯಿಂದ ಅರ್ಚನೆ ಮಾಡುತ್ತಾರೆ. ಹೀಗೆ ಮಾಡುವ ಪೂಜೆ ಗೋಧೂಳಿ ಲಗ್ನದಲ್ಲಾದರೆ ಅತ್ಯಂತ ಶ್ರೇಷ್ಠ ಎಂಬ ನಂಬಿಕೆಯಿದೆ.

ಇನ್ನು ಲಕ್ಷ್ಮಿಗೆ ಪ್ರಿಯವಾದ ತಿನಿಸುಗಳನ್ನು ಮಾಡುವುದೂ ಕೂಡಾ ಹಬ್ಬದ ಮುಖ್ಯ ಕೆಲಸಗಳಲ್ಲಿ ಒಂದು. ಕಡಲೇಬೇಳೆಯೆಂದರೆ ಲಕ್ಷ್ಮಿಗೆ ಇಷ್ಟ ಎಂಬ ನಂಬಿಕೆಯಿರುವುದರಿಂದ ಕಡಲೆಬೇಳೆಯ ಹಯಗ್ರೀವ, ಪಾಯಸ, ಹೋಳಿಗೆ ಇತ್ಯಾದಿಗಳನ್ನೆಲ್ಲ ತಯಾರಿಸಿ ನೈವೇದ್ಯಕ್ಕೆ ಇಡುವುದು ಆ ದಿನದ ಮುಖ್ಯ ಕೆಲಸಗಳಲ್ಲಿ ಒಂದು. ವ್ರತದಲ್ಲಿ ಮೊದಲು ವಿಘ್ನನಿವಾರಕ ಗಣಪನನ್ನು ಪ್ರಾರ್ಥಿಸಿ ವರಲಕ್ಷ್ಮಿ ವ್ರತವನ್ನು ಆರಂಭಿಸುವುದು ವಾಡಿಕೆ.

ಅಕ್ಕಪಕ್ಕದ ಮನೆ ಹಾಗೂ ಆಪ್ತ ಮುತ್ತೈದೆಯರನ್ನು ಕರೆಸಿ ಅವರಿಗೆ ಅರಿಶಿನ ಕುಂಕುಮದ ಜೊತೆಗೆ ಬಾಗಿನ ಕೊಡುವುದು ಕೂಡಾ ಈ ಹಬ್ಬದ ವಿಶೇಷ. ಮದುವೆಯಾದ ಹೆಣ್ಣು ಮಕ್ಕಳು ಮದುವೆಯಾದ ವರ್ಷದಿಂದ ಐದು ವರ್ಷ ಅಥವಾ ಒಂಭತ್ತು ವರ್ಷಗಳ ಕಾಲ ಈ ವ್ರತವನ್ನು ತಪ್ಪದೆ ಪ್ರತಿ ವರ್ಷವೂ ಮಾಡಿಕೊಂಡು ಬರುವುದು ಅತ್ಯಂತ ಒಳ್ಳೆಯದು ಎಂಬ ನಂಬಿಕೆಯೂ ಇದೆ. ಅಂದಹಾಗೆ, ಇದನ್ನು ಮಹಿಳೆಯರು ಮಾತ್ರ ಮಾಡಬೇಕು ಎಂದೇನೂ ಇಲ್ಲ, ಪುರುಷರೂ ಮಾಡಬಹುದು. ದಂಪತಿಗಳು ಜೊತೆಯಾಗಿ ಸೇರಿ ಮಾಡಿದರೆ ಇನ್ನೂ ಒಳ್ಳೆಯದು.

ಇದನ್ನೂ ಓದಿ: varamahalakshmi festival : ವರಮಹಾಲಕ್ಷ್ಮಿ ಹಬ್ಬಕ್ಕೆ ದುಬಾರಿಯಾಯ್ತು ಹೂವು, ಹಣ್ಣಿನ ದರ

Exit mobile version