Vistara Explainer : ರಾಮನ ಜನ್ಮಭೂಮಿಯ ವಿವಾದ ಮುಕ್ತಾಯಗೊಂಡಿದ್ದು, ರಾಮ ಮಂದಿರ ಜನವರಿಯಲ್ಲಿ ಉದ್ಘಾಟನೆಯಾಗಲಿದೆ. ಇನ್ನೀಗ ಕೃಷ್ಣನ ಜನ್ಮಭೂಮಿಯ ವಿಚಾರ ಮುನ್ನೆಲೆಗೆ ಬಂದಿದೆ. ಅದುವೇ ಮಥುರಾದಲ್ಲಿರುವ ಶಾಹಿ ಈದ್ಗಾ ಮಸೀದಿ. ಅಲ್ಲಿ ಮೊದಲು ಕೃಷ್ಣ ಜನ್ಮಭೂಮಿ ದೇಗುಲವಿತ್ತು ಎಂಬುದು ಭಾರತದ ಬಹುಸಂಖ್ಯಾತ ಹಿಂದೂಗಳ ವಾದ. ಔರಂಗಜೇಬನ ಕಾಲದಲ್ಲಿ ಅಲ್ಲಿದ್ದ ದೇಗುಲವನ್ನು ನಿರ್ನಾಮ ಮಾಡಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ವಿಚಾರ ಈಗ ಕೋರ್ಟ್ ಮೆಟ್ಟಿಲೇರಿದ್ದು, ದೇವಸ್ಥಾನಕ್ಕೆ ಹೊಂದಿಕೊಂಡಿರುವ ಶಾಹಿ ಈದ್ಗಾ ಮಸೀದಿಯ ವ್ಯಾಪ್ತಿಯಲ್ಲಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಮೀಕ್ಷೆ ನಡೆಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಈ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂಬುದಾಗಿ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಾಗಿ ಅಲ್ಲಿ ಸಮೀಕ್ಷೆ ನಡೆಸುವುದು ಖಚಿತವಾಗಿದೆ.
Krishna Janmasthan must be legally reclaimed and rebuilt, its decapitated idols exhumed from the steps of the Jahanara mosque and reestablished and consecrated.
— Anand Ranganathan (@ARanganathan72) December 14, 2023
Here I recount its history and explain why, of all the disputed sites, Mathura is the easiest to adjudicate on. pic.twitter.com/gCVaRS6jsw
17ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆಳ್ವಿಕೆಯಲ್ಲಿ ನಿರ್ಮಿಸಲಾದ ಈ ಮಸೀದಿಯನ್ನು ಕೃಷ್ಣ ಜನ್ಮಸ್ಥಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಶಾಹಿ ಈದ್ಗಾ ಮಸೀದಿಯ ವಿವಾದ ಕುರಿತು ಮಥುರಾ ಹಾಗೂ ಅಲಹಾಬಾದ್ ಹೈಕೋರ್ಟ್ನಲ್ಲಿ ಮೊಕದ್ದಮೆಗಳಿವೆ. ಅಂತೆಯೇ ಡಿಸೆಂಬರ್ ಆರಂಭದಲ್ಲಿ, ಅಲಹಾಬಾದ್ ಹೈಕೋರ್ಟ್, ಶಾಹಿ ಈದ್ಗಾ ಮಸೀದಿ ಸಂಕೀರ್ಣದ ಪರಿಶೀಲನೆಗಾಗಿ ಮಾಡಿದ್ದ ಮನವಿಯನ್ನು ಒಪ್ಪಿಕೊಂಡಿತ್ತು.
Supreme Court refuses to stay Allahabad High Court’s December 14 order which allowed the primary survey of the Shahi Idgah complex adjacent to the Shri Krishna Janmabhoomi Temple in Uttar Pradesh's Mathura by a court-monitored three-member team of advocate commissioners. pic.twitter.com/YWt2IiDooj
— ANI (@ANI) December 15, 2023
ಶಾಹಿ ಮಸೀದಿ ಈದ್ಗಾವನ್ನು ಸ್ಥಳಾಂತರಿಸುವಂತೆ ಕೋರಿ ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಮತ್ತು ಇತರರ ಸಿವಿಲ್ ಹಿರಿಯ ವಿಭಾಗ (III) ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ನ 13.37 ಎಕರೆ ಭೂಮಿಯ ಒಂದು ಭಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದು ಅರ್ಜಿದಾರರ ವಾದವಾಗಿದೆ. ಒಟ್ಟಿನಲ್ಲಿ ಇದೀಗ ವಿವಾದ ದಿನದಿಂದ ಕೌತುಕ ಮೂಡಿಸುತ್ತಿದೆ. ಒಟ್ಟಿನಲ್ಲಿ ಈ ಪ್ರಕರಣ ಏನು, ವಿವಾದದ ಮೂಲ ಏನು ಎಂಬುದ ಮಾಹಿತಿ ಇಲ್ಲಿದೆ.
ಏನಿದು ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿವಾದ?
ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ದೊರೆ ಔರಂಗಜೇಬನ ಆದೇಶದ ಮೇರೆಗೆ ಕೃಷ್ಣ ಜನ್ಮಸ್ಥಾನದಲ್ಲಿ ನಿರ್ಮಿಲಾಗಿದೆ. ಭಗವಾನ್ ಕೃಷ್ಣನ ಜನ್ಮಸ್ಥಳದಲ್ಲಿದ್ದ ದೇವಾಲಯವನ್ನು ನೆಲಸಮಗೊಳಿಸಿದ ನಂತರ 17ನೇ ಶತಮಾನದ ಮೊಘಲ್ ಆಡಳಿತ ಅವಧಿಯಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಸ್ಥಳೀಯ ನ್ಯಾಯಾಲಯವು ಪರಿಶೀಲನೆಗೆ ಒಪ್ಪಿಕೊಂಡಿದೆ. ಆದರೆ ಮಸೀದಿಗೆ ಸಂಬಂಧಪಟ್ವರು ಹೈಕೋರ್ಟ್ನಲ್ಲಿ ಆಕ್ಷೇಪ ಸಲ್ಲಿಸಿದ್ದಾರೆ.
ಇದನ್ನೂ ಓದಿ : Krishna Janmabhoomi: ಮಥುರಾ ಶಾಹಿ ಈದ್ಗಾ ಸರ್ವೆಗೆ ತಡೆ ಹಾಕಲು ನಿರಾಕರಿಸಿದ ಸುಪ್ರೀಂ ಕೋರ್ಟ್
ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಪ್ರಕರಣವು ಎರಡನೇ ದೇವಾಲಯ-ಮಸೀದಿ ವಿವಾದವಾಗಿದೆ. ಸಮೀಕ್ಷೆ ನಡೆಸಲು ಹೈಕೋರ್ಟ್ ಇತ್ತೀಚೆಗೆ ಅನುಮತಿ ನೀಡಿದೆ. ಶ್ರೀ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿಗೆ ಸಂಬಂಧಪಟ್ಟು ಮಥುರಾ ನ್ಯಾಯಾಲಯದಲ್ಲಿ ಈವರೆಗೆ ಒಂಬತ್ತು ಪ್ರಕರಣಗಳು ದಾಖಲಾಗಿವೆ. ಕತ್ರ ಕೇಶವ್ ದೇವ್ ದೇವಾಲಯಕ್ಕೆ ಸೇರಿರುವ 13.77 ಎಕರೆ ಭೂಮಿಯಿಂದ ಮಸೀದಿಯನ್ನು ತೆರವುಗೊಳಿಸಬೇಕು ಎಂಬುದೇ ಎಲ್ಲ ಅರ್ಜಿಗಳಲ್ಲಿರುವ ಮನವಿಯಾಗಿದೆ.
ಏನಿದು ಸಮೀಕ್ಷೆ?
ಮಥುರಾದ ಶಾಹಿ ಈದ್ಗಾ ಸಂಕೀರ್ಣದ ಬಗ್ಗೆ ವೈಜ್ಞಾನಿಕ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮೋದನೆ ನೀಡಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ನಡೆಸಿದ ರೀತಿಯಲ್ಲಿಯೇ ಈ ಸಮೀಕ್ಷೆಯನ್ನು ನಡೆಯಲಿದೆ. ನ್ಯಾಯಾಲಯವು ಅಡ್ವೊಕೇಟ್ ಕಮಿಷನರ್ ನೇಮಿಸಿದೆ. ಜತೆಗೆ ಶಾಹಿ ಈದ್ಗಾ ಮಸೀದಿ ಸಂಕೀರ್ಣದ ಸಮೀಕ್ಷೆಗೆ ತಾತ್ವಿಕ ಅನುಮೋದನೆ ನೀಡಿದೆ. ಸಮೀಕ್ಷೆಗಾಗಿ ವಕೀಲರ ಆಯೋಗದ ವಿಧಾನಗಳನ್ನು ಡಿಸೆಂಬರ್ 18ರಂದು ನಿರ್ಧರಿಸಲಾಗಿದೆ.
ವಿವಾದದ ಮೂಲಕ ಎಲ್ಲಿದೆ?
ಮಥುರಾದಲ್ಲಿನ ಮೊದಲ ದೇವಾಲಯವನ್ನು 2,000 ವರ್ಷಗಳ ಹಿಂದೆ, ಕ್ರಿಸ್ತ ಶಕ 1ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಭಗವಾನ್ ಕೃಷ್ಣನ ಜನ್ಮಸ್ಥಳವೆಂದು ನಂಬಲಾದ ಕೃಷ್ಣ ಜನ್ಮಸ್ಥಾನ ಸ್ಥಳವು ನಗರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಪ್ರಮುಖ ಕೇಂದ್ರವಾಗಿದೆ. ಉಪಖಂಡದಾದ್ಯಂತದ ಬೃಹತ್ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತಿದೆ.
ಕ್ರಿಸ್ತ ಶಕ 1017 ಅಥವಾ 1018ರಲ್ಲಿ ಪರ್ಷಿಯನ್ ಘಜ್ನಿ ಸಾಮ್ರಾಜ್ಯದ ಘಜ್ನಿ ಮಹಮದ್ ಮತ್ತು ದೆಹಲಿ ಸುಲ್ತಾನ್ ಸಿಕಂದರ್ ಲೋಧಿ (1458-1517) ಆಳ್ವಿಕೆಯ ಸಮಯದಲ್ಲಿ ಮಥುರಾದ ದೇವಾಲಯಗಳ ಮೇಲೆ ಹಲವಾರು ಬಾರಿ ದಾಳಿ ನಡೆಸಲಾಗಿದೆ. ಆದಾಗ್ಯೂ ಅಕ್ಬರನ ಆಳ್ವಿಕೆಯಲ್ಲಿ (1556-1605), ಮಥುರಾದಲ್ಲಿನ ವಿವಿಧ ವೈಷ್ಣವ ಪಂಥಗಳ ದೇವಾಲಯಗಳಿಗೆ ಭೂಮಿ ಮತ್ತು ಕಂದಾಯ ಅನುದಾನಗಳನ್ನು ನೀಡಲಾಗಿದೆ ಎಂಬುದನ್ನು ಇತಿಹಾಸಕಾರರು ದಾಖಲಿಸಿದ್ದಾರೆ.
ಮೊಘಲ್ ದೊರೆ ಜಹಾಂಗೀರ್‌ನ ಸಾಮಂತ ರಾಜ್ಯವಾಗಿದ್ದ ಓರ್ಚಾ ಸಾಮ್ರಾಜ್ಯದ ರಜಪೂತ ಆಡಳಿತಗಾರ 1618 ರಲ್ಲಿ ಕತ್ರ ಕೇಶವದೇವ್ ದೇವಾಲಯವನ್ನು ನಿರ್ಮಿಸಿದ್ದ. ಆ ದೇಗುಲದ ಬಗ್ಗೆಯೇ ಈಗ ಹುಡುಕಾಟ ನಡೆದಿದೆ. 1669ರಲ್ಲಿ ಔರಂಗಜೇಬ್ ತನ್ನ ಸಾಮ್ರಾಜ್ಯದಾದ್ಯಂತದ ಇದ್ದ ಎಲ್ಲಾ ಹಿಂದೂ ಶಾಲೆಗಳು ಮತ್ತು ದೇವಾಲಯಗಳನ್ನು ನಾಶಪಡಿಸುವ ಬಗ್ಗೆ ರಾಜ ಆದೇಶವನ್ನು ಹೊರಡಿಸಿದ್ದ. ಈ ಫರ್ಮಾನ್ ನೀಡಿದ ವೇಳೆಯಲ್ಲಿಯೇ ಕಾಶಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯವನ್ನು ಸಹ ನಾಶಪಡಿಸಿದ್ದ. ಅದೇ ರೀತಿ 1670ರಲ್ಲಿ ಔರಂಗಜೇಬ್ ಮಥುರಾದ ದೇಗುಲ ಕೆಡವಿ ಮಸೀದಿ ಕಟ್ಟಿದ್ದ.
ಬ್ರಿಟಿಷ್ ಆಳ್ವಿಕೆಯಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಕತ್ರ ಕೇಶವದೇವ್ ಟ್ರಸ್ಟ್ಗೆ 13.37 ಎಕರೆ ಭೂಮಿಯನ್ನು ವಾರಣಾಸಿಯ ಶ್ರೀಮಂತ ಬ್ಯಾಂಕರ್ ರಾಜಾ ಪಟ್ನಿಮಾಲ್ ಅವರಿಗೆ ಹರಾಜು ಹಾಕಿತು. ಈ 13.37 ಎಕರೆ ಭೂಮಿಯಲ್ಲಿ ಶಾಹಿ ಈದ್ಗಾ ಮಸೀದಿ ಕಟ್ಟಲಾಗಿದೆ ಎಂದು ಹಿಂದೂಗಳು ಹೇಳುತ್ತಿದ್ದಾರೆ.
ರಾಜಾ ಪಟ್ನಿಮಾಲ್ ವಂಶಸ್ಥರು 1944ರಲ್ಲಿ ಕೈಗಾರಿಕೋದ್ಯಮಿ ಜುಗಲ್ ಕಿಶೋರ್ ಬಿರ್ಲಾ ಅವರಿಗೆ ಭೂಮಿಯನ್ನು ಮಾರಾಟ ಮಾಡಿದರು. ನಂತರ 1951ರಲ್ಲಿ, ಬಿರ್ಲಾ ಅವರು ಈ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲು ಅನುಕೂಲವಾಗುವಂತೆ ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಅನ್ನು ರಚಿಸಿದ್ದರು. ದೇವಾಲಯದ ನಿರ್ಮಾಣವು 1953ರಲ್ಲಿ ಪ್ರಾರಂಭವಾಯಿತು ಮತ್ತು 1983ರಲ್ಲಿ ಪೂರ್ಣಗೊಂಡಿತು. ನಂತರ ದೇವಾಲಯವು ಶಾಹಿ ಈದ್ಗಾ ಮಸೀದಿಯ ಪಕ್ಕದಲ್ಲಿಯೇ ಬೃಹತ್ ಆಗಿ ನಿರ್ಮಾಣಗೊಂಡಿತು.
ಮೊದಲ ಅರ್ಜಿಯಿಂದ ಹಿಡಿದು ಪ್ರಸ್ತುತ ಸ್ಥಿತಿಯವರೆಗಿನ ಹಿನ್ನೋಟ
- ಸೆಪ್ಟೆಂಬರ್ 2020ರಲ್ಲಿ, ಲಖನೌ ಮೂಲದ ವಕೀಲೆ ರಂಜನಾ ಅಗ್ನಿಹೋತ್ರಿ ಮತ್ತು ಇತರ ಆರು ಜನರು ಕತ್ರ ಕೇಶವ್ ದೇವ್ ದೇವಾಲಯದ ಅದೇ ಸಂಕೀರ್ಣದಲ್ಲಿರುವ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಯನ್ನು ಕೋರಿ ಅರ್ಜಿ ಸಲ್ಲಿಸಿದ್ದರು.
- ಕೃಷ್ಣ ಪರಮಾತ್ಮ ಜನಿಸಿದನೆಂದು ನಂಬಲಾದ ಜೈಲು (‘ಕಾಗಾಗಾರ್’ ) ಮಸೀದಿಯ ನಿರ್ಮಾಣದ ಕೆಳಗೆ ಇದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. 17ನೇ ಶತಮಾನದ ಮಸೀದಿಯನ್ನು ತೆಗೆದುಹಾಕುವಂತೆ ಕೋರಲಾಗಿದೆ.
- ಅರ್ಜಿದಾರರು ಮಥುರಾ ಮೂಲದವರಲ್ಲ, ಅವರಿಗೆ ಕೇಳುವ ಹಕ್ಕಿಲ್ಲ ಮತ್ತು ಕೃಷ್ಣ ಪರಮಾತ್ಮನ ವಂಶದವರಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಲಾಯಿತು. ಶಾಹಿ ಈದ್ಗಾ 1968ರಲ್ಲಿ ರಾಜಿ ಮಾಡಿಕೊಂಡಿದ್ದು ಇದನ್ನು ನ್ಯಾಯಾಲಯದ ಆದೇಶದ ಮೂಲಕ ಮುಕ್ತಾಯಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿತ್ತು.
- ಮೇ 2022ರಲ್ಲಿ ಮಥುರಾ ಜಿಲ್ಲಾ ನ್ಯಾಯಾಲಯವು ಈ ತೀರ್ಪನ್ನು ರದ್ದುಗೊಳಿಸಿತು. ನಂತರ ಜಿಲ್ಲಾ ನ್ಯಾಯಾಲಯದಲ್ಲಿ ಪರಿಷ್ಕೃತ ಅರ್ಜಿ ಸಲ್ಲಿಸಲಾಯಿತು.
- ಈ ವರ್ಷದ ಮೇ ತಿಂಗಳಲ್ಲಿ ಅಲಹಾಬಾದ್ ಹೈಕೋರ್ಟ್ ಮಥುರಾ ನ್ಯಾಯಾಲಯದಲ್ಲಿ ಬಾಕಿ ಇರುವ ಶ್ರೀ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಯನ್ನು ತನ್ನ ಬಳಿಗೆ ವರ್ಗಾಯಿಸಿಕೊಂಡಿತು.
- ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆ ಅರ್ಜಿಯನ್ನು ಪುರಸ್ಕರಿಸುವಂತೆ ಮಥುರಾ ಸಿವಿಲ್ ನ್ಯಾಯಾಧೀಶರಿಗೆ ನಿರ್ದೇಶನ ನೀಡುವಂತೆ ಕೋರಿ ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ್ ಟ್ರಸ್ಟ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಜುಲೈನಲ್ಲಿ ವಜಾಗೊಳಿಸಿತ್ತು.
- ಕೃಷ್ಣ ಜನ್ಮಭೂಮಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಒಟ್ಟುಗೂಡಿಸುವಂತೆ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಸಮುದಾಯದವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
- 2020ರಿಂದ ಶ್ರೀ ಕೃಷ್ಣ ಜನ್ಮಭೂಮಿ ಕುರಿತು ಬಗ್ಗೆ ಮಥುರಾ ನ್ಯಾಯಾಲಯಗಳಲ್ಲಿ ಕನಿಷ್ಠ ಒಂದು ಡಜನ್ ಪ್ರಕರಣಗಳು ದಾಖಲಾಗಿವೆ.
- ಸೆಪ್ಟೆಂಬರ್ನಲ್ಲಿ ಕೃಷ್ಣ ಜನ್ಮಭೂಮಿ ಸ್ಥಳದ ಶಾಹಿ ಈದ್ಗಾ ಮಸೀದಿಯ ವೈಜ್ಞಾನಿಕ ಸಮೀಕ್ಷೆಯನ್ನು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಕಳೆದ ವಾರ, ಅಲಹಾಬಾದ್ ಹೈಕೋರ್ಟ್ ಸಮೀಕ್ಷೆಗೆ ಅನುಮತಿ ನೀಡಿತು. ಮಸೀದಿ ಆವರಣದ ಸಮೀಕ್ಷೆಯ ಮೇಲ್ವಿಚಾರಣೆಗಾಗಿ ವಕೀಲ ಆಯುಕ್ತರನ್ನು ನೇಮಿಸಲು ಒಪ್ಪಿಕೊಂಡಿತು.
- ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಶಾಹಿ ಈದ್ಗಾದ ಸಮೀಕ್ಷೆಗೆ ಅನುಮತಿ ನೀಡಿದ ಅಲಹಾಬಾದ್ ಹೈಕೋರ್ಟ್ ನಿರ್ಧಾರಕ್ಕೆ ತಡೆ ನೀಡುವಂತೆ ಮುಸ್ಲಿಮ್ ಸಮುದಾಯದವರು ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತು.. ಆದೇಶವನ್ನು ಮೇಲ್ಮನವಿಯ ಮೂಲಕ ಪ್ರಶ್ನಿಸುವಂತೆ ಹೇಳಿತು.