Site icon Vistara News

Hanuman birth place: ಹನುಮ ಹುಟ್ಟಿದ್ದು ಯಾವ ಸ್ಥಳದಲ್ಲಿ?

Indian Railway sends notice to lord Hanuman Chalisa: Significance and importance Of Reciting Hanuman Chalisa in kannada Hanuman for land encroachment

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆ ರಾಮಮಂದಿರದ ಗರ್ಭಗುಡಿಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ನಡುವೆ, ಹನುಮನ ಜನ್ಮ ಸ್ಥಳ ಕುರಿತ ಚರ್ಚೆಯೂ ಈಗ ಮುನ್ನೆಲೆಗೆ ಬಂದಿದೆ.

ಹನುಮ ಜನ್ಮ ಸ್ಥಳ ಕುರಿತು ಚರ್ಚಿಸುವ ಸಲುವಾಗಿ ಮಹಾಂತ ಶ್ರೀ ಮಂಡಲಾಚಾರ್ಯ ಪೀಠಾಧೀಶ್ವರ ಸ್ವಾಮಿ ಅನಿಕೇತ್ ಶಾಸ್ತ್ರಿ ದೇಶಪಾಂಡೆ ಮಹಾರಾಜ್ ಅವರು ಮೇ 31ರಂದು ನಾಸಿಕ್‌ನಲ್ಲಿ ಧರ್ಮ ಸಂಸದ್ ಕರೆದಿದ್ದರು. ಆದರೆ, ಹನುಮಂತನ ಜನ್ಮಸ್ಥಳ ವಿವಾದಕ್ಕೆ ತೆರೆ ಎಳೆಯಲು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಎರಡು ಗುಂಪುಗಳ ಸಾಧುಗಳು ಆಸನ ವ್ಯವಸ್ಥೆ ಮತ್ತು ಇತರ ವಿಷಯಗಳ ತಗಾದೆ ಎತ್ತಿದ ಬಳಿಕ ಪೊಲೀಸರು ಮಧ್ಯೆ ಪ್ರವೇಶಿಸಿ ಸಭೆಯನ್ನು ಬರ್ಖಾಸ್ತುಗೊಳಿಸಿದರು.

ಹಂಪಿಯ ಅಂಜನಾದ್ರಿ ಬೆಟ್ಟ

ಗಮನಾರ್ಹ ಸಂಗತಿ ಏನೆಂದರೆ, ಕರ್ನಾಟಕದ ಸಂತರೊಬ್ಬರು ಹನುಮಂತ ಜನಿಸಿದ್ದು ನಾಸಿಕ್‌ನ ಆಂಜನೇರಿಯಲ್ಲಿ ಅಲ್ಲ, ಕರ್ನಾಟಕದ ಕಿಷ್ಕಿಂಧೆಯಲ್ಲಿ ಎಂದು ಪ್ರತಿಪಾದಿಸಿದ್ದಾರೆ. ವಾಲ್ಮೀಕಿ ರಾಮಾಯಣವನ್ನು ಉಲ್ಲೇಖಿಸಿ ಕಿಷ್ಕಿಂಧೆಯ ಮಹಂತ್ ಗೋವಿಂದ್ ದಾಸ್ ಕೂಡ, ಭಗವಾನ್ ಹನುಮಂತನು ಕಿಷ್ಕಿಂಧೆಯಲ್ಲಿ ಜನಿಸಿದನೆಂದು ಪ್ರತಿಪಾದಿಸಿದ್ದಾರೆ.

ರಾಮಾಯಣದಲ್ಲಿ ಮಹರ್ಷಿ ವಾಲ್ಮೀಕಿ ಅಂಜನೇರಿಯಲ್ಲಿ ಹನುಮಂತನು ಜನಿಸಿದನೆಂದು ಎಲ್ಲಿಯೂ ಬರೆದಿಲ್ಲ. ಜನ್ಮಸ್ಥಳವು ಯಾವಾಗಲೂ ಒಂದೇ ಆಗಿರುತ್ತದೆ ಎಂದವರು ವಾದಿಸಿದ್ದಾರೆ.

ಕಾಶಿಯ ಜ್ಞಾನವಾಪಿ ಮತ್ತು ಮಂಗಳೂರಿನ ಮಳಲಿ ಮಸೀದಿ-ಮಂದಿರ ವಿವಾದವೂ ಸೇರಿದಂತೆ ಇನ್ನೂ ಹಲವಾರು ಧಾರ್ಮಿಕ ಸ್ಥಳಗಳ ವಿವಾದಗಳಿವೆ. ಅವುಗಳ ಕುರಿತ ವಿವಾದಗಳ ಮಾಹಿತಿ ಇಲ್ಲಿದೆ.

ಇನ್ನಷ್ಟು ಓದಿಗಾಗಿ : 31 ಅಡಿ ಎತ್ತರದ ಬೃಹತ್‌ ಹನುಮಾನ್‌ ವಿಗ್ರಹ ಪ್ರತಿಷ್ಠಾಪನೆಗೆ ಸಿದ್ಧ

ಜ್ಞಾನವಾಪಿ ಮಸೀದಿ ವಿವಾದ

ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಸ್ಥಳೀಯ ಅರ್ಚಕರು 1991ರಲ್ಲಿ ಜ್ಞಾನವಾಪಿ ಸಂಕೀರ್ಣದಲ್ಲಿ ಪೂಜೆ ಮಾಡಲು ಅನುಮತಿ ಕೋರಿ ಅರ್ಜಿಗಳ ಗುಚ್ಛ ಸಲ್ಲಿಸಿದ್ದರು. 17ನೇ ಶತಮಾನದಲ್ಲಿ ಕಾಶಿ ವಿಶ್ವನಾಥ ಮಂದಿರದ ಒಂದು ಭಾಗವನ್ನು ಕೆಡವಿ ಮೊಘಲ್ ದೊರೆ ಔರಂಗಜೇಬನ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿತ್ತು ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

ವಾರಾಣಸಿ ಜ್ಞಾನವಾಪಿ ಮಸೀದಿ

2019ರಲ್ಲಿ ಇಡೀ ಜ್ಞಾನವಾಪಿ ಮಸೀದಿ ಸಂಕೀರ್ಣದ ಪುರಾತತ್ವ ಸಮೀಕ್ಷೆ ನಡೆಸಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದರು. ಎರಡು ವರ್ಷಗಳ ನಂತರ, ಸೆಪ್ಟೆಂಬರ್ 2021ರಲ್ಲಿ ಅಲಹಾಬಾದ್ ಹೈಕೋರ್ಟ್ ಜ್ಞಾನವಾಪಿ ಮಸೀದಿಯಲ್ಲಿ ಎಎಸ್‌ಐನ ಪುರಾತತ್ವ ಸಮೀಕ್ಷೆಯನ್ನು ತಡೆಹಿಡಿಯಿತು.

ವಾರಾಣಸಿ ನ್ಯಾಯಾಲಯವು ಆಗಸ್ಟ್ 2021ರಲ್ಲಿ ದೆಹಲಿ ಮೂಲದ ಐವರು ಮಹಿಳೆಯರು ಆ ಸ್ಥಳದಲ್ಲಿ ಪೂಜೆಗೆ ಅವಕಾಶ ನೀಡುವಂತೆ ಆದೇಶಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ವಿವಾದಿತ ಸೈಟ್‌ನ ವೀಡಿಯೊ ಸಮೀಕ್ಷೆಗೆ ಆದೇಶ ನೀಡಿತು. ದೆಹಲಿಯ ನಿವಾಸಿ ರಾಖಿ ಸಿಂಗ್ ಮತ್ತು ಇತರ ನಾಲ್ವರು ತಮ್ಮ ವಕೀಲ ಹರಿಶಂಕರ್ ಜೈನ್ ಮೂಲಕ ಈ ಅರ್ಜಿ ಸಲ್ಲಿಸಿದ್ದರು.

ಮಸೀದಿಯೊಳಗೆ ಶಿವಲಿಂಗವೊಂದು ಪತ್ತೆಯಾಗಿದೆ ಎಂದು ಹಿಂದೂ ಕಕ್ಷಿದಾರರು ಹೇಳಿದಾಗ ದೇಶಾದ್ಯಂತ ಭಾರಿ ಸಂಚಲನ ಉಂಟಾಯಿತು

ಇದನ್ನೂ ಓದಿ: Explainer: ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳಿಗೆ ಅಡ್ಡಿಯಾಗುತ್ತಾ ಪೂಜಾ ಸ್ಥಳಗಳ ಕಾಯಿದೆ ?

ಮಳಲಿ ಮಸೀದಿಯಲ್ಲಿ ‘ದೇವಾಲಯ’ದಂತಹ ರಚನೆ…

ಕರ್ನಾಟಕದ ಮಂಗಳೂರಿನ ಹೊರವಲಯದಲ್ಲಿರುವ ಮಳಲಿ ಜುಮಾ ಮಸೀದಿಯೊಳಗೆ ದೇವಾಲಯದಂತಹ ವಾಸ್ತುಶಿಲ್ಪ ರಚನೆ ಪತ್ತೆಯಾಗಿದ್ದು ಗಮನ ಸೆಳೆದಿದೆ.

ಮಳಲಿ ವಿವಾದಿತ ತಾಣ

ಮಳಲಿ ಗ್ರಾಮದ ಹಳೆಯ ಮಸೀದಿಯ ಕೆಳಭಾಗದಲ್ಲಿ ಏಪ್ರಿಲ್ 21 ರಂದು ಮಸೀದಿಯ ನವೀಕರಣ ಕಾರ್ಯದ ಸಮಯದಲ್ಲಿ ಹಿಂದೂ ದೇವಾಲಯದಂತಹ ವಾಸ್ತುಶಿಲ್ಪದ ವಿನ್ಯಾಸವನ್ನು ಪತ್ತೆ ಹಚ್ಚಲಾಯಿತು. ಆದಾಗ್ಯೂ, ಮಸೀದಿಯು ಒಂದು ಕಾಲದಲ್ಲಿ ದೇವಾಲಯವಾಗಿತ್ತೇ ಎಂದು ಕಂಡುಹಿಡಿಯಲು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮೇ 25ರಂದು ಮಳಲಿಯಲ್ಲಿ ತಾಂಬೂಲ ಪ್ರಶ್ನೆಯನ್ನು ನಡೆಸುವುದರೊಂದಿಗೆ ವಿಷಯವು ತೀವ್ರ ಸ್ವರೂಪ ಪಡೆಯಿತು.

ನಂತರ ವಿಎಚ್‌ಪಿ ಮಂಗಳೂರಿನ ಸಿವಿಲ್ ಕೋರ್ಟ್‌ಗೆ ತೆರಳಿ ಮಸೀದಿಯ ಸರ್ವೆಗಾಗಿ ನ್ಯಾಯಾಲಯದ ಆಯುಕ್ತರನ್ನು ನೇಮಿಸುವಂತೆ ಕೋರಿತು. ಆದರೆ ಅಸ್ಸೈಯದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ಆಡಳಿತವು ಬೇಡಿಕೆಯನ್ನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿತು. ನ್ಯಾಯಾಲಯವು ಮಂಗಳವಾರ ಎರಡೂ ಕಡೆಯ ವಿಚಾರಣೆ ನಡೆಸಿದ್ದು, ಇಂದು ಆಕ್ಷೇಪಣೆಗಳ ವಿಚಾರಣೆ ನಡೆಯಲಿದೆ.

ಮಥುರಾದಲ್ಲಿ ಕೃಷ್ಣ ಜನ್ಮಭೂಮಿ

ಮಥುರಾ ನ್ಯಾಯಾಲಯವು ಈ ತಿಂಗಳ ಆರಂಭದಲ್ಲಿ ‘ಕೃಷ್ಣ ಜನ್ಮಭೂಮಿ’ ಅಥವಾ ಭಗವಾನ್ ಕೃಷ್ಣನ ಜನ್ಮಸ್ಥಳದ ಬಳಿಯಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಒತ್ತಾಯಿಸುವ ಮೊಕದ್ದಮೆ ವಿಚಾರಣೆ ನಡೆಸಲು ಅನುಮತಿ ನೀಡಿತು. ಶಾಹಿ ಈದ್ಗಾ ಮಸೀದಿಯನ್ನು ಕೃಷ್ಣ ಜನ್ಮಭೂಮಿ ಭೂಮಿಯಿಂದ ತೆಗೆದುಹಾಕುವಂತೆ ಕೋರಿ ಮೊಕದ್ದಮೆ ಹೂಡಲು ಅನುಮತಿ ನೀಡಿದ ತೀರ್ಪು ಮಸೀದಿ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆಗೆ ದಾರಿ ಮಾಡಿಕೊಟ್ಟಿತು.

ಮಥುರಾ ಶ್ರೀಕೃಷ್ಣ ದೇವಾಲಯ ಮತ್ತು ಮಸೀದಿ

ಶ್ರೀ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿವಾದ ಪ್ರಕರಣದಲ್ಲಿ ಅರ್ಜಿದಾರರು ಶ್ರೀ ಕೃಷ್ಣ ಜನ್ಮಭೂಮಿಯ 13.37 ಎಕರೆ ಜಮೀನಿನ ಮಾಲೀಕತ್ವವನ್ನು ಕೋರಿದ್ದಲ್ಲದೆ, ಅಲ್ಲಿ ನಿರ್ಮಿಸಲಾದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಲು ಕೋರಿದ್ದಾರೆ. ವಿವಾದಿತ ಸ್ಥಳವನ್ನು ಅಗೆಯಲು ಮತ್ತು ಉತ್ಖನನದ ತನಿಖೆಯ ವರದಿಯನ್ನು ಸಲ್ಲಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Explainer: ಕಾಶಿ ಮಾದರಿ ಸಮೀಕ್ಷೆಯತ್ತ ಮಥುರಾ ಶ್ರೀ ಕೃಷ್ಣ ಜನ್ಮಭೂಮಿ ?

ಕುತಾಬ್ ಮಿನಾರ್ ಮರುನಾಮಕರಣ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಕಳೆದ ವಾರ ಕುತಾಬ್ ಮಿನಾರ್ ಪ್ರಕರಣದ ಕುರಿತು ದೆಹಲಿ ನ್ಯಾಯಾಲಯಕ್ಕೆ ತನ್ನ ಉತ್ತರವನ್ನು ಸಲ್ಲಿಸಿದ್ದು, ಸ್ಥಳದಲ್ಲಿ ದೇವಾಲಯವನ್ನು ಪುನರುಜ್ಜೀವನಗೊಳಿಸಬೇಕೆಂಬ ಮನವಿಯನ್ನು ವಿರೋಧಿಸಿತು.

ಕುತುಬ್‌ ಮಿನಾರ್

ಕುತಾಬ್ ಮಿನಾರ್ 1914 ರಿಂದ ಸಂರಕ್ಷಿತ ಸ್ಮಾರಕವಾಗಿದ್ದು, ಅದರ ರಚನೆಯನ್ನು ಈಗ ಬದಲಾಯಿಸಲು ಸಾಧ್ಯವಿಲ್ಲ ಎಂದು ಎಎಸ್ಐ ಹೇಳಿದೆ. “ಸಂರಕ್ಷಿತ” ಸ್ಥಾನಮಾನವನ್ನು ನೀಡುವ ಸಮಯದಲ್ಲಿ ಅಂತಹ ಆಚರಣೆಯು ಪ್ರಚಲಿತದಲ್ಲಿರದ ಸ್ಮಾರಕದಲ್ಲಿ ಆರಾಧನೆಯ ಪುನರಾರಂಭವನ್ನು ಅನುಮತಿಸಲಾಗದು” ಎಂದು ಎಎಸ್‌ಐ ಹೇಳಿದೆ.

ಎಎಸ್‌ಐನ ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಅವರು ಸೂರ್ಯನ ದಿಕ್ಕನ್ನು ಅಧ್ಯಯನ ಮಾಡಲು ರಾಜಾ ವಿಕ್ರಮಾದಿತ್ಯ ನಿರ್ಮಿಸಿದ ರಚನೆಯಿದು. ಇದರ ನಿರ್ಮಿಸಿದ್ದು ಕುತುಬ್ ಅಲ್-ದೀನ್ ಐಬಕ್ ಅಲ್ಲ ಎಂದು ಪ್ರತಿಪಾದಿಸಿದ ನಂತರ ವಿವಾದವು ಭುಗಿಲೆದ್ದಿದೆ.

ಈ ಮಧ್ಯೆ, ಸಂಸ್ಕೃತಿ ಸಚಿವಾಲಯವು ತನ್ನ ಉತ್ಖನನ ವರದಿಯನ್ನು ಸಲ್ಲಿಸುವಂತೆ ಎಎಸ್‌ಐಗೆ ಕೇಳಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯವು ಕುತುಬ್ ಮಿನಾರ್ ಸಂಕೀರ್ಣದಲ್ಲಿ ವಿಗ್ರಹಗಳ ಉತ್ಖನನ ಮತ್ತು ವಿಗ್ರಹಗಳ ಪ್ರತಿಮಾ ಚಿತ್ರಣ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಿದೆ.

ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಶನಿವಾರ ವಿಶ್ವ ಪರಂಪರೆಯ ಸ್ಮಾರಕಕ್ಕೆ ಭೇಟಿ ನೀಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಚಿವಾಲಯದ ಅಧಿಕಾರಿಗಳು “ವಾಸ್ತವಗಳನ್ನು ತಿಳಿಯುವುದಕ್ಕಾಗಿ’ ಉತ್ಖನನ ಮಾಡಲು ಎಎಸ್‌ಐಗೆ ಸೂಚಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಮಹಾಕಾಲ್ ಮಾನವ್ ಸೇವಾ ಮತ್ತು ಇತರ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲ್ಪಟ್ಟ ಕುತುಬ್ ಮಿನಾರ್‌ನಲ್ಲಿ ಭಾರೀ ಪೊಲೀಸ್ ನಿಯೋಜನೆಯ ಮಧ್ಯೆ, ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದ್ದರು. ಪ್ರಾಚೀನ ಸ್ಮಾರಕಕ್ಕೆ ‘ವಿಷ್ಣು ಸ್ತಂಭ’ ಎಂದು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಔರಂಗಜೇಬ್ ಸಮಾಧಿಗೆ ಎಐಎಂಐಎಂ ನಾಯಕನ ಭೇಟಿಯ ತಗಾದೆ…

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಔರಂಗಜೇಬ್ ಸಮಾಧಿಗೆ ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿ ಭೇಟಿ ಮತ್ತು ಅದರ ನಂತರದ ರಾಜಕೀಯ ಕೆಸರೆರಚಾಟದ ಬಳಿಕ ಆ ಪ್ರದೇಶದ ಮಸೀದಿ ಸಮಿತಿಯು ಸ್ಥಳಕ್ಕೆ ಜನರ ಪ್ರವೇಶ ನಿರ್ಬಂಧಿಸಲು ಪ್ರಯತ್ನಿಸಿತು. ನಂತರ ಐದು ದಿನಗಳ ಕಾಲ ಸಮಾಧಿಯನ್ನು ಮುಚ್ಚುವಂತೆ ಪುರಾತತ್ವ ಇಲಾಖೆ ಈ ತಿಂಗಳ ಆರಂಭದಲ್ಲಿ ಆದೇಶ ನೀಡಿತ್ತು.

ಎಐಎಂಐಎಂ ನಾಯಕರ ಭೇಟಿಯ ಬಳಿಕ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ವಕ್ತಾರ ಗಜಾನನ ಕಾಳೆ ಅವರು, ಆ ಸಮಾಧಿಯನ್ನೇ ನಾಶಪಡಿಸಬೇಕು ಎಂದು ಆಗ್ರಹಿಸಿದ್ದರು.

ಅಕ್ಬರುದ್ದೀನ್ ಓವೈಸಿ ಈ ಸಮಾಧಿಗೆ ಭೇಟಿ ನೀಡಿದ್ದಕ್ಕೆ ಆಡಳಿತಾರೂಢ ಶಿವಸೇನೆ ಮತ್ತು ಬಿಜೆಪಿ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು.

Exit mobile version