ಬೆಂಗಳೂರು: ಯಾವುದೇ ದೇಶ ತನ್ನ ಸ್ವಾಭಿಮಾನ ಹಾಗೂ ಸಾರ್ವಭೌಮತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದನ್ನು ಭಾರತದಿಂದ ಕಲಿಯಬೇಕು ಎಂದು ಪಾಕಿಸ್ತಾನ(Pakistan) ಪ್ರಧಾನಿ ಇಮ್ರಾನ್ ಖಾನ್ ಹೇಳಿರುವುದು ವಿವಿಧ ರೀತಿಯ ಚರ್ಚೆಗಳಿಗೆ ಗ್ರಾಸವಾಗಿದೆ.
ತಮ್ಮ ಸರ್ಕಾರವನ್ನು ಉರುಳಿಸಲು ಅಂತಾರಾಷ್ಟ್ರೀಯ ಕೈಗಳ ಹುನ್ನಾರವಿದೆ ಎಂದು ಹಿಂದಿನಿಂದಲೂ ಹೇಳುತ್ತ ಬಂದಿರುವ ಇಮ್ರಾನ್ ಖಾನ್, ತಮ್ಮ ದೇಶದ ಸ್ವಾರ್ಥ ರಾಜಕಾರಣಿಗಳು ಸರ್ಕಾರವನ್ನು ಕೆಡವಲು ಮುಂದಾಗಿದ್ದಾರೆ ಎನ್ನುತ್ತಿದ್ದರು. ಪಾಕಿಸ್ತಾನ ಸಂಸತ್ತಿನಲ್ಲಿ ಪ್ರತಿಪಕ್ಷ ಮಂಡಿಸಿರುವ ಅವಿಶ್ವಾಸ ನಿರ್ಣಯದ ಮತದಾನ ಶನಿವಾರ ಆಗಬೇಕಿತ್ತು. ಈ ನಡುವೆ ಪಾಕಿಸ್ತಾನ ಸುಪ್ರೀಂಕೋರ್ಟ್ ಈ ಪ್ರಕ್ರಿಯೆಯನ್ನು ವಿಚಾರಣೆ ನಡೆಸಬೇಕು ಎಂಬ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಶುಕ್ರವಾರ ಇಮ್ರಾನ್ ಮಾತನಾಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ರಷ್ಯಾ ವಿರುದ್ಧ ಪಾಕಿಸ್ತಾನ ಮಾತನಾಡಬೇಕು ಎಂದು ಯೂರೋಪಿಯನ್ ದೇಶಗಳು ಒತ್ತಡ ಹೇರುತ್ತಿದ್ದವು. ನಾನು ರಷ್ಯಾಕ್ಕೆ ಭೇಟಿ ನೀಡಿದ್ದು ಅಮೆರಿಕಕ್ಕೆ ಇಷ್ಟವಾಗಲಿಲ್ಲ. ಅಮೆರಿಕದ ಜನಪ್ರತಿನಿಧಿಯೊಬ್ಬನಂತೂ ಇಮ್ರಾನ್ ಖಾನ್‌ರನ್ನು ಅಧಿಕಾರದಿಂದ ಕಿತ್ತೊಗೆದರೆ ಮಾತ್ರವೇ ಪಾಕಿಸ್ತಾನವನ್ನು ಅಮೆರಿಕ ಕ್ಷಮಿಸಲಿದೆ ಎಂದಿದ್ದರು. ಪಾಕಿಸ್ತಾನದ ಮೇಲೆ ಹೇರಿದಂತೆಯೇ, ರಷ್ಯಾ ವಿರುದ್ಧ ಮಾತನಾಡಬೇಕೆಂದು ಯೋರೋಪಿಯನ್ ದೇಶಗಳು ಭಾರತದ ಮೇಲೆ ಒತ್ತಡ ಹೇರುವ ಧೈರ್ಯ ಮಾಡಲಿಲ್ಲ. ಏಕೆಂದರೆ ಭಾರತ ಸಾರ್ವಭೌಮ ದೇಶ. ನಮ್ಮ ವಿದೇಶಾಂಗ ನೀತಿಗಳೂ ಸಾರ್ವಭೌಮತೆಯನ್ನು ಕಾಯ್ದುಕೊಳ್ಳಬೇಕು ಎಂದಿದ್ದಾರೆ.
ಆಮದು ಸರ್ಕಾರ ಬೇಕಿಲ್ಲ
ಇನ್ನೇನು ಅಧಿಕಾರದಲ್ಲಿ ಉಳಿಯುವುದಿಲ್ಲ ಎನ್ನುವುದನ್ನು ಅರಿತಿರುವ ಪಾಕಿಸ್ತಾನ ಪ್ರಧಾನಿ, ತುಸು ಮುಕ್ತವಾಗಿಯೇ ಅಮೆರಿಕ ಹಾಗೂ ದೇಶದೊಳಗಿನ ಅವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಪಾಕಿಸ್ತಾನದಲ್ಲಿನ ಆಮದು ಸರ್ಕಾರದ ಭಾಗವಾಗಲು ಬಯಸುವುದಿಲ್ಲ. ವಿದೇಶಗಳು ಪಾಕಿಸ್ತಾನವನ್ನು ಒರೆಸಿ ಬಿಸಾಡುವ ಕರಪತ್ರಗಳ (Tissue Paper) ರೀತಿ ಬಳಸುವುದನ್ನು ಬಿಡಬೇಕು. ಪಾಕಿಸ್ತಾನದ ಜನತಾ ನ್ಯಾಯಾಲಯ ಈಗ ನಡೆಯುತ್ತಿರುವುದೆಲ್ಲವನ್ನೂ ಗಮನಿಸಬೇಕು. ನಾನು ಜನರ ಬಳಿಯಲ್ಲೇ ನ್ಯಾಯ ಕೇಳಲು ಹೋಗುತ್ತೇನೆ ಎಂದಿದ್ದಾರೆ.
ತೆಗಳುವಾಗಲೂ ಭಾರತದ ಉದಾಹರಣೆ
ಇಮ್ರಾನ್ ಹೇಳಿಕೆಗೆ ಭಾರತದಲ್ಲಿ ಸ್ವಾಗತ ವ್ಯಕ್ತವಾಗಿದೆ. ಬದ್ಧ ಧ್ವೇಷ ಹೊಂದಿರುವ ರಾಷ್ಟ್ರ ಎಂದೇ ಪರಿಗಣಿತವಾಗುವ ಪಾಕಿಸ್ತಾನದ ಪ್ರಧಾನಿಯೊಬ್ಬರು ಭಾರತವನ್ನು ಹೊಗಳುವುದು ಅನೇಕರಲ್ಲಿ ಅಚ್ಚರಿಯನ್ನೂ ಉಂಟು ಮಾಡಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವೈ. ಸತ್ಯಕುಮಾರ್ ಟ್ವೀಟ್ ಮಾಡಿ, ಇಂತಹ ಬದಲಾವಣೆಯನ್ನು ಪ್ರತಿಪಕ್ಷಗಳು ಜೀರ್ಣಿಸಿಕೊಳ್ಳುವುದು ಅಸಾಧ್ಯ ಎಂದಿದ್ದಾರೆ.
ಇದೇ ವೇಳೆ ಪಾಕಿಸ್ತಾನದಲ್ಲಿ ಇಮ್ರಾನ್ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿದೆ. ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಜ್(PML-N) ಪಕ್ಷದ ಉಪಾಧ್ಯಕ್ಷೆ ಹಾಗೂ ಮಾಜಿ ಪ್ರಧಾನಿ ನವಾಜ್ ಷರೀಫ್ ಪುತ್ರಿ ಮರಿಯಮ್ ನವಾಜ್ ಷರೀಫ್, ಭಾರತವನ್ನು ಕಂಡರೆ ಅಷ್ಟೊಂದು ಪ್ರೀತಿಯಿದ್ದರೆ ಅವರು ಭಾರತಕ್ಕೆ ಹಿಂದಿರುಗಿ ಹೋಗಲಿ, ಪಾಕಿಸ್ತಾನವನ್ನು ತೊರೆಯಲಿ ಎಂದಿದ್ದಾರೆ. ಆದರೆ ಅಚ್ಚರಿಯೆಂದರೆ, ಮರಿಯಂ ಸಹ ಭಾರತದ ಉದಾಹರಣೆಯನ್ನೇ ನೀಡಿದ್ದಾರೆ. ಸದನದಲ್ಲಿ ಬಹುಮತ ಕಡಿಮೆಯಿದೆ ಎಂದು ತಿಳಿದ ಕೂಡಲೆ ಪ್ರಧಾನ ಮಂತ್ರಿ ಸ್ಥಾನಕ್ಕೆ ಅಟಲ್ ಬಿಹಾರಿ ವಾಜಪೇಯಿ ರಾಜೀನಾಮೆ ನೀಡಿದ್ದರು. ಅದೇ ರೀತಿ ಇಮ್ರಾನ್ ಖಾನ್ ಸಹ ನಡೆದುಕೊಳ್ಳಲಿ. ಅದನ್ನು ಬಿಟ್ಟು ಈ ರೀತಿ ಯೋಜನೆಗಳು ಬೇಕಿಲ್ಲ ಎಂದು ಹರಿಹಾಯ್ದಿದ್ದಾರೆ.