Site icon Vistara News

ಮಾನವ ಹಕ್ಕು ಮಂಡಳಿಯಿಂದ ರಷ್ಯಾ ಅಮಾನತು: ವಿಶ್ವಸಂಸ್ಥೆಯ ಮತದಾನದಿಂದ ಹೊರಗುಳಿದ ಭಾರತ

ಬೆಂಗಳೂರು: ಉಕ್ರೇನ್‌ ಮೇಲೆ ಸತತ ದಾಳಿ ನಡೆಸುತ್ತಿರುವ ರಷ್ಯಾವನ್ನು ವಿಶ್ವದ ಇತರೆ ದೇಶಗಳಿಂದ ಪ್ರತ್ಯೇಕಿಸುವ ಅಮೆರಿಕದ ಉದ್ದೇಶ ಮತ್ತೊಂದು ಹಂತದ ಸಫಲತೆ ಕಂಡಿದ್ದು, ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯಿಂದ (UNHRC) ರಷ್ಯಾವನ್ನು ಅಮಾನತುಗೊಳಿಸಲಾಗಿದೆ. ಗುರುವಾರ ಸಭೆ ಸೇರಿದ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯು(UNGA), ಉಕ್ರೇನ್‌ನ ಬುಚಾದಲ್ಲಿ ರಷ್ಯಾ ನಡೆಸಿರುವ ನಾಗರಿಕರ ಹತ್ಯೆಯನ್ನು ಖಂಡಿಸುವ ಸಲುವಾಗಿ UNHRCಯಿಂದ ರಷ್ಯಾವನ್ನು ಹೊರಹಾಕುವ ಪ್ರಸ್ತಾವದ ಪರ ಬಹುಮತದ ತೀರ್ಮಾನ ಕೈಗೊಂಡಿತು.

ನಾರ್ಥ್‌ ಅಟ್ಲಾಂಟಿಕ್‌ ಟ್ರೀಟಿ ಆರ್ಗನೂಸೇಷನ್‌(NATO) ಸೇರ್ಪಡೆ ಆಗಬೇಕೆಂದು ಉಕ್ರೇನ್‌ ಉದ್ದೇಶಿಸಿತ್ತು. ತನ್ನ ನೆರೆಯ ದೇಶದಲ್ಲಿ ನ್ಯಾಟೊ ಮೂಲಕ ಅಮೆರಿಕ ತನ್ನ ಸೇನಾ ನೆಲೆಯನ್ನು ವಿಸ್ತರಿಸಿಕೊಳ್ಳುವ, ಆಮೂಲಕ ಭೌಗೋಳಿಕ ರಾಜಕಾರಣದಲ್ಲಿ ತನ್ನ ಪ್ರಾಬಲ್ಯ ಕುಗ್ಗುವ ಅಪಾಯವನ್ನರಿತ ರಷ್ಯಾ 2022ರ ಫೆಬ್ರುವರಿ 24ರಿಂದ ಯುದ್ಧ ಘೋಷಿಸಿದೆ. ಪ್ರಾರಂಭದಲ್ಲಿ ಸೇನಾ ನೆಲೆಗಳ ಮೇಲಷ್ಟೆ ನಡೆಯುತ್ತಿದ್ದ ರಷ್ಯಾ ದಾಳಿ ಕೆಲ ಸಮಯದ ನಂತರ ನಾಗರಿಕ ವಸತಿ ಪ್ರದೇಶಗಳಲ್ಲೂ ನಡೆಯುತ್ತಿದೆ.

ಇದೇ ಸಂದರ್ಭದಲ್ಲಿ ಸುಮಾರು 36 ಸಾವಿರ ಜನಸಂಖ್ಯೆಯಿರುವ ಬುಚಾ ನಗರವನ್ನೂ ರಷ್ಯಾ ವಶಪಡಿಸಿಕೊಂಡಿತ್ತು. ಆದರೆ ಯುದ್ಧ ದೀರ್ಘಕಾಲ ನಡೆಯುತ್ತಿರುವುದರಿಂದ ಕೆಲ ತನ್ನ ವಶದಲ್ಲಿದ್ದ ಕೆಲ ಪ್ರದೇಶಗಳಿಂದ ರಷ್ಯಾ ಹಿಂದೆ ಸರಿದ ಸ್ಥಳಗಳಲ್ಲಿ ಬುಚಾ ಸಹ ಸೇರಿತ್ತು. ರಷ್ಯಾ ಪಡೆಗಳು ವಾಪಸಾದ ನಂತರ ಬುಚಾ ನಗರದ ಬೀದಿಗಳಲ್ಲಿ, ರಸ್ತೆಗಳಲ್ಲಿ ಹೆಣಗಳು ದೊರಕಿದ್ದವು. ಕೈ ಕಟ್ಟಿರುವ, ಅಂಗಾಂಗಗಳನ್ನು ಊನಗೊಳಿಸಿರುವ, ಅತ್ಯಾಚಾರವೆಸಗಿರುವ ಸ್ಥಿತಿಯಲ್ಲಿದ್ದ ಶವಗಳ ಚಿತ್ರಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದವು.

ಅದಾಗಲೇ ರಷ್ಯಾ ವಿರುದ್ಧ ಕತ್ತಿ ಮಸೆಯುತ್ತಿದ್ದ ಅಮೆರಿಕದ ಬತ್ತಳಿಕೆಗೆ ಹೊಸ ಆಯುಧವೊಂದು ಸಿಕ್ಕಂತಾಯಿತು. ಈಗಾಗಲೆ ರಷ್ಯಾ ವಿರುದ್ಧ ಅನೇಕ ಆರ್ಥಿಕ ನಿರ್ಬಂಧಗಳನ್ನು ವಿಧಿಸಿರುವ ಅಮೆರಿಕ ಇದೀಗ ಬುಚಾ ಘಟನೆಯನ್ನಾಧರಿಸಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪದಲ್ಲಿ ರಷ್ಯಾ ವಿರುದ್ಧ ಮತ್ತೊಂದು ಹಂತದ ಸಮರವನ್ನು ಸಾರಿದೆ. UNHRCಯಿಂದ ರಷ್ಯಾವನ್ನು ಹೊರಹಾಕುವುದೇ ಸರಿಯಾದ ನಿರ್ಧಾರ ಎಂದು ವಿಶ್ವಸಂಸ್ಥೆ ಮೂಲಕ ಒತ್ತಡ ಹೇರುತ್ತಿದೆ. ಇದಕ್ಕೆ ಅನುಗುಣವಾಗಿ ಗುರುವಾರ ಸಭೆ ಸೇರಿದ UNGA, ರಷ್ಯಾವನ್ನು UNHRCಯಿಂದ ಹೊರಹಾಕುವ ಪ್ರಸ್ತಾವನೆಯನ್ನು ಮಂಡಿಸಿತು. ಭಾರತ ಸೇರಿ 58 ದೇಶಗಳು ಈ ಪ್ರಸ್ತಾವನೆಯ ಕುರಿತು ಮತದಾನದಿಂದ ಹೊರಗುಳಿದವು. ಇಷ್ಟರ ನಂತರವೂ ಪ್ರಸ್ತಾವನೆಯ ಪರ 94 ಹಾಗೂ ವಿರುದ್ಧ 24 ಮತಗಳು ಚಲಾವಣೆಯಾಗಿ, ರಷ್ಯಾವನ್ನು ಅಮಾನತು ಮಾಡುವ ಪ್ರಸ್ತಾವನೆಗೆ ಜಯ ಸಿಕ್ಕಿದೆ.

ಈ ಮೂಲಕ ಅಮೆರಿಕ ಕೈ ಮೇಲಾಗಿದೆ. ರಷ್ಯಾವನ್ನು ಮಂಡಳಿಯಿಂದ ಸಂಪೂರ್ಣ ಹೊರ ಹಾಕಲು ಮೂರನೇ ಎರಡರಷ್ಟು ಸದಸ್ಯರ ಬಲ ಬೇಕು. ಇದೀಗ ಗುರುವಾರದ ಮತದಾನದ ಆಧಾರದಲ್ಲಿ ರಷ್ಯಾ ಸಂಪೂರ್ಣವಾಗಿ ಸದಸ್ಯತ್ವವನ್ನು ಕಳೆದುಕೊಳ್ಳುವುದಿಲ್ಲ. ಬದಲಿಗೆ ಮಂಡಳಿ ಸಭೆಯಲ್ಲಿ ಭಾಗವಹಿಸುವ ಹಾಗೂ ಮತದಾನ ಮಾಡುವ ಅಧಿಕಾರವನ್ನು ಮಾತ್ರ ಕಳೆದುಕೊಳ್ಳಲಿದೆ.

ಮತ್ತಷ್ಟು ಓದು: ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿದ್ದೇಕೆ?

ಭಾರತದ ನಿರ್ಧಾರ ಸರಿಯಿದೆ

ಮೇಲ್ನೋಟಕ್ಕೆ ಯುದ್ಧವು ಉಕ್ರೇನ್‌ ಹಾಗೂ ರಷ್ಯಾ ವಿರುದ್ಧ ನಡೆಯುತ್ತಿರುವಂತೆ ಕಂಡುಬಂದರೂ ಅಸಲಿಗೆ ಇದು ರಷ್ಯಾ ಹಾಗೂ ಅಮೆರಿಕ ನಡುವಿನ ಕಾಳಗ ಎಂಬುದು ವಿಶ್ವಕ್ಕೇ ಅರಿವಾಗಿದೆ. ಈ ಕಾಳಗದಲ್ಲಿ ತನ್ನ ಜತೆಯಲ್ಲೇ ನಿಲ್ಲಬೇಕು, ರಷ್ಯಾವನ್ನು ವಿರೋಧಿಸಿ ಏಕಾಂಗಿಯಾಗಿಸಬೇಕು ಎಂದು ಎಲ್ಲ ದೇಶಗಳ ಮೇಲೆ ವಿವಿಧ ರೀತಿಯ ಒಯತ್ತಡ ಹೇರುತ್ತಿದೆ. ಉಕ್ರೇನ್‌ ಮೇಲಿನ ದಾಳಿ ಆರಂಭವಾದ ನಂತರದಲ್ಲಿ ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಇಲ್ಲಿವರೆಗೆ 10 ಪ್ರಸ್ತಾವನೆಗಳನ್ನು ಮಂಡಿಸಲಾಗಿದೆ. ಎಲ್ಲ ಪ್ರಸ್ತಾವನೆಗಳಿಂದಲೂ ಭಾರತ ಹೊರಗುಳಿದಿದ್ದು, ಇದೀಗ ವಿಶ್ವ ಸಂಸ್ಥೆಯ ಮಾನವ ಹಕ್ಕು ಮಂಡಳಿಯಿಂದ ಹೊರಹಾಕುವ ಪ್ರಸ್ತಾವನೆಯಲ್ಲೂ ಇದನ್ನೇ ಪುನರಾವರ್ತಿಸಿದೆ.

ಭಾರತದ ಜತೆಗೆ ಮತದಾನದಿಂದ ಹೊರಗುಳಿದ ದೇಶಗಳ ಪೈಕಿ ಬ್ರಜಿಲ್‌, ದಕ್ಷಿಣ ಆಫ್ರಿಕಾ, ಮೇಕ್ಸಿಕೊ, ಈಜಿಪ್ಟ್‌, ಸೌದಿ ಅರೇಬಿಯಾ, ಯುಎಇ, ಜೋರ್ಡನ್‌, ಕತಾರ್‌, ಕುವೈತ್‌, ಇರಾಕ್‌, ಪಾಕಿಸ್ತಾನ, ಸಿಂಗಾಪುರ, ಥೈಲೆಂಡ್‌, ಮಲೇಷ್ಯಾ, ಇಂಡೋನೇಷ್ಯಾ ಮುಂತಾದ ದೇಶಗಳಿವೆ. ಪ್ರಸ್ತಾವನೆಯ ವಿರುದ್ಧ ಚೀನಾ, ಕ್ಯೂಬಾ, ಉತ್ತರ ಕೊರಿಯಾ, ಇರಾನ್‌, ಸಿಇಯಾ, ವಿಯೆಟ್ನಾಮ್‌ ಮುಂತಾದ ದೇಶಗಳು ಮತ ಚಲಾಯಿಸಿವೆ. ಭಾರತವು ತನ್ನ ಪರ ನಿಲ್ಲದಿದ್ದರೆ ಅಥವಾ ರಷ್ಯಾ ಪರ ವಹಿಸಿದರೆ “ಪರಿಣಾಮವನ್ನು ಎದುರಿಸಬೇಕಾಗುತ್ತದೆ” ಎಂದು ಅಮೆರಿಕ ನೇರವಾಗಿ ಹಾಗೂ ಪರೋಕ್ಷವಾಗಿ ಎಚ್ಚರಿಕೆಯನ್ನೂ ನೀಡಿದೆ. ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣವನ್ನು ವಿರೋಧಿಸುವ ವಿಷಯದಲ್ಲಿ ಭಾರತಕ್ಕೆ ಸ್ವಲ್ಪ ಭಯವಿದೆ ಎಂದು ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಇತ್ತೀಚೆಗೆ ಹೇಳಿದ್ದರು. ಭಾರತದ ನಿರ್ಧಾರವನ್ನು ವಿಶ್ವಸಂಸ್ಥೆಯಲ್ಲಿರುವ ಭಾರತದ ಶಾಶ್ವತ ಪ್ರತಿನಿಧಿ ಟಿ.ಎಸ್‌. ತಿರುಮೂರ್ತಿ ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದ್ದಾರೆ. ಭಾರತವು ಪ್ರಾರಂಭದಿಂದಲೂ ಶಾಂತಿ, ಚರ್ಚೆ ಹಾಗೂ ರಾಜತಾಂತ್ರಿಕ ಮಾರ್ಗದ ಸಮರ್ಥನೆ ಮಾಡುತ್ತಲೇ ಬಂದಿದೆ. ಬಿಚಾ ನಗರ ಸೇರಿ ಎಲ್ಲೆಡೆ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳನ್ನು ಖಂಡಿಸುತ್ತೇವೆ. ಭಾರತ ಎಂದಿಗೂ ಶಾಂತಿಯ ಪರ ಹಾಗೂ ಹಿಂಸೆಯ ವಿರುದ್ಧವಿದೆ ಎಂದು ತಿರುಮೂರ್ತಿ ತಿಳಿಸಿದ್ದಾರೆ.

Exit mobile version