ನ್ಯೂಯಾರ್ಕ್: ಅಮೆರಿಕದ ಬ್ರೂಕ್ಲಿನ್( Brooklyn) ನಗರದ ಸಬ್‌ವೇಯಲ್ಲಿ(Sub way) ಮಂಗಳವಾರ ನಡೆದ ಶೂಟೌಟ್‌ನಲ್ಲಿ(Shootout) 23ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಕಪ್ಪು ಸಮುದಾಯದ ಫ್ರಾಂಕ್ ಜೇಮ್ಸ್ ಎಂಬ ವ್ಯಕ್ತಿ ನ್ಯೂಯಾರ್ಕ್ ಬಳಿಯ ಬ್ರೂಕ್ಲಿನ್‌ನಲ್ಲಿ ಸಬ್‌ವೇ ಮೂಲಕ ತೆರಳುತ್ತಿದ್ದಾಗ ಗನ್ ಮೂಲಕ ಶೂಟ್ ಮಾಡಿದ್ದಾನೆ. ಅಮೆರಿಕದಲ್ಲಿ ದಿನೇದಿನೆ ಉಗ್ರರೂಪ ತಾಳುತ್ತಿರುವ ಗನ್ ಸಂಸ್ಕೃತಿಯ ಜತೆಗೆ ಜನಾಂಗೀಯ ಸಂಘರ್ಷಕ್ಕೆ ಈ ಘಟನೆ ಇನ್ನಷ್ಟು ಪುಷ್ಠಿ ನೀಡಿದೆ.
ವಿಷಾನಿಲದಿಂದ ರಕ್ಷಣೆ ಪಡೆಯುವ ಮಾಸ್ಕ್ ಧರಿಸಿದ್ದ ವ್ಯಕ್ತಿಯೊಬ್ಬ ಎರಡು ಹೊಗೆ ಬಾಂಬ್‌ಗಳನ್ನು ಸಿಡಿಸಿ ವಾತಾವರಣದಲ್ಲಿ ಆತಂಕ ಸೃಷ್ಟಿಸಿದ್ದಾನೆ. ಇದೆ ಬೆನ್ನಿಗೇ ಗ್ಲಾಕ್ 17- 9 ಎಂ.ಎಂ. ಗನ್ ಮೂಲಕ 33 ಸುತ್ತು ಗುಂಡು ಹಾರಿಸಿದ್ದಾನೆ. ಶೂಟೌಟ್ ನಡೆಸುವ ಸಲುವಾಗಿ ವ್ಯಾನ್ ಒಂದನ್ನು ಬಾಡಿಗೆಗೆ ಪಡೆದಿರುವ ಜೇಮ್ಸ್‌ನನ್ನು ನ್ಯೂಯಾರ್ಕ್ ಪೊಲೀಸರು ಹುಡುಕುತ್ತಿದ್ದಾರೆ.
ಭಯೋತ್ಪಾದನೆ ಶಂಕೆ ಇಲ್ಲವೆಂದ ಪೊಲೀಸ್
ಈ ಘಟನೆಯನ್ನು ಒಬ್ಬನೇ ವ್ಯಕ್ತಿ ನಡೆಸಿರುವ ಅಂದಾಜಾಗಿದ್ದು, ಭಯೋತ್ಪಾದನಾ ಕೃತ್ಯದ ದೃಷ್ಟಿಕೋನದಲ್ಲಿ ತನಿಖೆ ನಡೆಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯು ಅಂಧಾದುಂಧಿ ಗುಂಡು ಹಾರಿಸಿದ ಕೂಡಲೆ ಸಬ್‌ವೇಯಲ್ಲಿದ್ದ ಸಹ ಪ್ರಯಾಣಿಕರು ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ. ಈ ಕುರಿತು ಲೋವಾದಲ್ಲಿ ಪ್ರವಾಸ ನಿರತ ಅಧ್ಯಕ್ಷ ಜೋ ಬೈಡೆನ್ ಪ್ರತಿಕ್ರಿಯೆ ನೀಡಿದ್ದು, ಸಂಕಷ್ಟದ ಸಮಯದಲ್ಲಿ ಸಹ ಪ್ರಯಾಣಿಕರಿಗೆ ಸಹಾಯ ಮಾಡಿದವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೆ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ನ್ಯೂಯಾರ್ಕ್ ನಗರದಲ್ಲಿ ಆಗಿಂದಾಗ್ಗೆ ಗನ್ ದಾಳಿಗಳು ನಡೆಯುತ್ತಿರುತ್ತವೆ. ಲೈಸೆನ್ಸ್ ಪಡೆದ ಗನ್‌ಗಳಲ್ಲಿ ಸೀರಿಯಲ್ ನಂಬರ್ ಇರುತ್ತವೆ, ಕೃತ್ಯ ನಡೆದಾಗ ಅವುಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಹಾಯವಾಗುತ್ತವೆ. ಆದರೆ ಬಿಡಿಭಾಗಗಳನ್ನು ಖರೀದಿಸಿ ಮನೆಯಲ್ಲೆ ಜೋಡಿಸಿಕೊಳ್ಳಬಹುದಾದ ಗನ್‌ಗಳ ಮಾರಾಟ ಅಧಿಕವಾಗಿದೆ. ಇವುಗಳನ್ನು ಪತ್ತೆ ಹಚ್ಚುವುದು ಸಾಧ್ಯವಾಗುತ್ತಿಲ್ಲವಾದ್ಧರಿಂದ ಇವುಗಳನ್ನು ಘೋಸ್ಟ್ ಗನ್(Ghost Gun) ಎಂದು ಕರೆಯಲಾಗುತ್ತದೆ. ಅಮೆರಿಕದಲ್ಲಿ ಗನ್ ದಾಳಿಯಿಂದ ಮೃತಪಟ್ಟವರ ಕುಟುಂಬದವರ ಒಕ್ಕೂಟವೇ ಇದೆ. ಇಂಥದ್ದೇ ಒಕ್ಕೂಟದ ಜತೆಗೆ ಎರಡು ದಿನದ ಹಿಂದಷ್ಟೆ ಜೋ ಬೈಡೆನ್ ಸಭೆ ನಡೆಸಿದ್ದರು. ಇತ್ತೀಚೆಗಷ್ಟೆ ಸಭೆ ನಡೆಸಿದ್ದ ಜೋ ಬೈಡೆನ್, ಘೊಸ್ಟ್ ಗನ್‌ಗಳನ್ನು ನಿಯಂತ್ರಿಸಲಾಗುತ್ತದೆ. 2016ರಿಂದ ಇಲ್ಲಿಯವರೆಗೆ ಘೋಸ್ಟ್ ಗನ್‌ಗಳನ್ನು ವಶಪಡಿಸಿಕೊಳ್ಳುವ ಪ್ರಮಾಣ 10 ಪಟ್ಟು ಹೆಚ್ಚಳವಾಗಿದೆ ಎಂದಿದ್ದರು.
ಸರ್ಕಾರದ ಕ್ರಮವನ್ನು ಅಮೆರಿಕದಲ್ಲಿ ಪ್ರಬಲವಾಗಿರುವ ರಾಷ್ಟ್ರೀಯ ರೈಫಲ್ಸ್ ಅಸೋಸಿಯೇಷನ್(NRA) ವಿರೋಧಿಸಿತ್ತು. ಇದು ಅತಿರೇಕದ ಕ್ರಮ ಎಂದು ಹೇಳಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಬೈಡೆನ್, ನಮ್ಮ ಪೊಲೀಸರನ್ನು ಕಾಮಾಡಿಕೊಳ್ಳುವುದು, ನಮ್ಮ ಮಕ್ಕಳನ್ನು ಕಾಪಾಡಿಕೊಳ್ಳುವುದು ಅತಿರೇಕವಲ್ಲ, ಅದು ಪ್ರಾಥಮಿಕವಾದ ಸಂಗತಿ, ಸಾಮಾನ್ಯ ಜ್ಞಾನ ಎಂದು ತಿರುಗೇಟು ನೀಡಿದ್ದರು. ಆದರೆ ಇದೀಗ ಮತ್ತೆ ದಾಳಿ ನಡೆದಿರುವುದು ಅಮೆರಿಕನ್ನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಹೆಚ್ಚಿನ ಓದಿಗಾಗಿ: ಭಾರತದಲ್ಲಿ ಕಡು ಬಡತನವನ್ನು ತಡೆದ ಮೋದಿ ಯೋಜನೆ: ಅಂತಾರಾಷ್ಟ್ರೀಯ ಹಣಕಾಸು ನಿಧಿ ವರದಿ ಪ್ರಶಂಸೆ
ಜನಾಂಗೀಯ ನಿಂದನೆಯ ವಿಡಿಯೋಗಳು
ಸದ್ಯ ಶೂಟೌಟ್ ಮಾಡಿದ್ದಾನೆ ಎಂದು ಗುರುತಿಸಲಾಗಿರುವ ಜೇಮ್ಸ್‌ನ ಸಾಮಾಜಿಕ ಜಾಲತಾಣ ಚಟುವಟಿಕೆಗಳನ್ನು ನ್ಯೂಯಾರ್ಕ್ ಪೊಲೀಸರು ನಿಗಾ ವಹಿಸಿದ್ದಾರೆ. 62 ವರ್ಷದ ವ್ಯಕ್ತಿ ಕಪ್ಪು ಸಮುದಾಯಕ್ಕೆ ಸೇರಿದವನು. ಅಮೆರಿಕದಲ್ಲಿ ಕಪ್ಪು ಜನಾಂಗದವರ ಮೇಲೆ ಅನ್ಯಾಯ ನಡೆಯುತ್ತಿರುವುದರ ಕುರಿತು ಅನೇಕ ವಿಡಿಯೋಗಳನ್ನು ಹರಿಬಿಟ್ಟಿದ್ದಾನೆ. ಅಮೆರಿಕವು ಹಿಂಸೆಯಿಂದಲೇ ನಿರ್ಮಾಣವಾಯಿತು, ಹಿಂಸೆಯಿಂದಲೇ ನಡೆಯುತ್ತಿದೆ, ಹಿಂಸೆಯಿಂದಲೇ ಸಾಯುತ್ತದೆ ಎಂದು ಒಂದು ವಿಡಿಯೋದಲ್ಲಿ ಹೇಳಿದ್ದಾನೆ.
ಕಪ್ಪು ಜನಾಂಗದವರ ಮೇಲೆ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಎದ್ದು ನಿಲ್ಲಬೇಕು ಎಂದು ಒಂದು ವಿಡಿಯೋದಲ್ಲಿ ಹೇಳಿದ್ದರೆ, ನ್ಯೂಯಾರ್ಕ್ ಸಬ್‌ವೇಯನ್ನು ಸುರಕ್ಷಿತವಾಗಿಸುವ ಮೇಯರ್ ಪ್ರಯತ್ನ ವ್ಯರ್ಥವಾಗಲಿದೆ ಎಂದಿದ್ದಾನೆ.
ಸಬ್‌ವೇ ಹಾಗೂ ನಗರದಲ್ಲಿ ಇಂತಹ ದಾಳಿಗಳು ನಡೆಯದಂತೆ ತಡೆಯಲು ಪೊಲೀಸರು ಅನೇಕ ಕ್ರಮಗಳನ್ನು ಕೈಗೊಂಡಿದ್ದರು. ಪೊಲೀಸ್ ಸಿಬ್ಬಂದಿ ತರಬೇತಿ, ವಿವಿಧೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಜನಸಂದಣಿ ಪ್ರದೇಶಗಳಲ್ಲಿ ದಿಢೀರ್ ತಪಾಸಣೆಯಂತಹ ಪ್ರಯತ್ನ ಮಾಡಿದ್ದರು. ಆದರೂ ಇನ್ನೊಂದು ಕೃತ್ಯ ಬೆಳಕಿಗೆ ಬಂದಿದೆ.