Site icon Vistara News

Gold Heist: ಜ್ಯುವೆಲರಿ ಶಾಪ್‌ಗೆ ನುಗ್ಗಿ ಚಿನ್ನ ಕದ್ದ 20 ಕಳ್ಳರು; ಸಿನಿಮಾ ಸ್ಟೈಲಲ್ಲೇ ದರೋಡೆ ಮಾಡಿದ ವಿಡಿಯೊ ಇಲ್ಲಿದೆ!

Gold Heist

20 Robbers Storm Into Jewellery Store, CCTV Video of Dramatic Heist Surfaces

ವಾಷಿಂಗ್ಟನ್:‌ ಬ್ಯಾಂಕ್‌ಗೆ ನುಗ್ಗಿ ಕೋಟ್ಯಂತರ ರೂಪಾಯಿಯನ್ನು ದರೋಡೆ ಮಾಡುವ ಮನಿ ಹೈಸ್ಟ್‌ (Money Heist) ಎಂಬ ರೋಚಕ ವೆಬ್‌ ಸಿರೀಸ್‌ಅನ್ನು ನೀವು ನೋಡಿರಬಹುದು. ಮಾಸ್ಟರ್‌ ಪ್ಲಾನ್‌ ಮೂಲಕ ದರೋಡೆ ಮಾಡುವ ಸಿರೀಸ್‌ ಜಗತ್ತಿನಾದ್ಯಂತ ಖ್ಯಾತಿ ಗಳಿಸಿದೆ. ಆದರೆ, ಅಮೆರಿಕದಲ್ಲಿ ಮನಿ ಹೈಸ್ಟ್‌ ಮಾದರಿಯಲ್ಲಿಯೇ ಸುಮಾರು 20 ದರೋಡೆಕೋರರು ಚಿನ್ನಾಭರಣಗಳ ಮಳಿಗೆಗೆ ನುಗ್ಗಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ (Gold Heist) ಮಾಡಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಹೌದು, ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಚಿನ್ನಾಭರಣಗಳ ಮಳಿಗೆಗೆ ನುಗ್ಗಿದ 20 ಮುಸುಕುಧಾರಿ ಧರೋಡೆಕೋರರು, ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ. ಜೂನ್‌ 12ರಂದು ಮಧ್ಯರಾತ್ರಿ ಇವರು ಮಳಿಗೆಗೆ ನುಗ್ಗಿದ್ದಾರೆ. ಮುಖದ ತುಂಬ ಮುಸುಕು ಧರಿಸಿದ್ದ, ಕೈಯಲ್ಲಿ ಸುತ್ತಿಗೆಗಳನ್ನು ಹಿಡಿದುಕೊಂಡೇ ಬಂದಿದ್ದ ದರೋಡೆಕೋರರು, ಅಂಗಡಿಯಲ್ಲಿ ಗ್ಲಾಸ್‌ಗಳನ್ನು ಒಡೆದು, ಅವಸರದಲ್ಲಿಯೇ ಆಭರಣಗಳನ್ನು ಬ್ಯಾಗ್‌ಗೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಇಡೀ ಕಳ್ಳತನದ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಲ್ಲಿದೆ ದರೋಡೆಯ ವಿಡಿಯೊ

ದರೋಡೆಕೋರರು ಮೊದಲು ಜ್ಯುವೆಲರಿ ಸ್ಟೋರ್‌ನ ಬಾಗಿಲನ್ನು ಒದ್ದು, ಸುತ್ತಿಗೆಯಿಂದ ಹೊಡೆದು ಮುರಿದುಹಾಕಿದ್ದಾರೆ. ಏಕಕಾಲಕ್ಕೆ ಅವರು ಮಳಿಗೆಗೆ ನುಗ್ಗಿದ್ದು, ಪ್ರತಿಯೊಂದು ಗಾಜುಗಳನ್ನು ಒಡೆದು, ಚಿನ್ನ, ವಜ್ರದ ಆಭರಣಗಳನ್ನು ಬ್ಯಾಗ್‌ಗೆ ತುಂಬಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕೆಲವೇ ಕೆಲವು ನಿಮಿಷಗಳಲ್ಲಿ ಇಡೀ ಮಳಿಗೆಯ ಆಭರಣಗಳನ್ನು ಗುಡಿಸಿ ಗುಂಡಾಂತರ ಮಾಡಿದ್ದಾರೆ.

ಬಂಧಿತ ಆರೋಪಿಗಳು

ದರೋಡೆಕೋರರು ಹಲವು ಕಾರುಗಳಲ್ಲಿ ಬಂದು ದರೋಡೆ ಮಾಡಿದ್ದಾರೆ. ಕೂಡಲೇ ಪೊಲೀಸರು ಇವರ ಕಾರುಗಳನ್ನು ಬೆನತ್ತಿದರೂ ಕೇವಲ ಐವರು ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ. ಬಂಧಿತರಿಂದ ಕೆಲ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಐವರನ್ನೂ ಜೈಲಿಗೆ ಹಾಕಿದ್ದಾರೆ. ದರೋಡೆಕೋರರು ಕದ್ದಿರುವ ಚಿನ್ನಾಭರಣಗಳ ಒಟ್ಟು ಮೌಲ್ಯ ಎಷ್ಟು ಎಂಬುದು ಇದುವರೆಗೆ ಗೊತ್ತಿಲ್ಲ. ಮಳಿಗೆಯಲ್ಲಿ ಕಳ್ಳತನ ಮಾಡಲು ದರೋಡೆಕೋರರು ಹಲವು ದಿನಗಳಿಂದ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಉಳಿದ ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: Robbery Case: ನಗರದಲ್ಲಿ ಬೀಡು ಬಿಟ್ಟಿದೆ ತುಪ್ಪ ಕಳ್ಳತನ ಮಾಡೋ ಗ್ಯಾಂಗ್; ನಂದಿನಿ ಪಾರ್ಲರ್‌, ಸೂಪರ್ ಮಾರ್ಕೆಟ್‌ ಇವರ ಟಾರ್ಗೆಟ್‌

Exit mobile version