Site icon Vistara News

‘ಉಗ್ರರ ಸ್ವರ್ಗ’ ಪಾಕಿಸ್ತಾನದಲ್ಲೇ 306 ಉಗ್ರ ದಾಳಿಗಳು; 693 ಮಂದಿ ಸಾವು!

306 terrorist attacks in pakistan and 693 people died

ನವದೆಹಲಿ: ‘ಉಗ್ರರ ಸ್ವರ್ಗ’ ಎನಿಸಿರುವ ಪಾಕಿಸ್ತಾನದಲ್ಲಿ (Pakistan) ಉಗ್ರ ಕೃತ್ಯಗಳು (Terrorist attacks) ಹೆಚ್ಚಾಗ ತೊಡಗಿವೆ. 2023ರಲ್ಲಿ ಪಾಕಿಸ್ತಾನದಲ್ಲಿನ ಭಯೋತ್ಪಾದನಾ (Terrorism in Pakistan) ಕೃತ್ಯಗಳಲ್ಲಿ ಶೇ.17ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಒಟ್ಟು 306 ಉಗ್ರ ದಾಳಿಗಳು ನಡೆದಿದ್ದು, 693 ಜನರು ಮೃತಪಟ್ಟಿದ್ದಾರೆ. ಒಟ್ಟು ಉಗ್ರ ಚಟುವಟಿಕೆಗಳ ಪೈಕಿ ನಿಷೇಧಿತ ಸಂಘಟನೆಗಳಾದ ಪಾಕಿಸ್ತಾನಿ ತಾಲಿಬಾನ್, ಇಸ್ಲಾಮಿಕ್ ಸ್ಟೇಟ್ ಖೋರಾಸನ್, ಬಲೂಚಿಸ್ತಾನ್ ಲಿಬರೇಷನ್ ಆರ್ಮಿ‌ಗಳಿಂದ ಶೇ.82ರಷ್ಟು ಕೊಡುಗೆ ಇದೆ ಎಂದು ವರದಿಯೊಂದು ತಿಳಿಸಿದೆ.

ಫೆಬ್ರವರಿ 8 ರ ಸಾರ್ವತ್ರಿಕ ಚುನಾವಣೆಯ ಮೊದಲು ಬಿಡುಗಡೆಯಾದ ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಫಾರ್ ಪೀಸ್ ಸ್ಟಡೀಸ್ (PIPS) 2023ರ ಭದ್ರತಾ ವರದಿಯು ಚುನಾವಣಾ ಪ್ರಚಾರ ಮತ್ತು ಮತದಾನದ ಸಮಯದಲ್ಲಿ ಚುನಾವಣಾ ಅಭ್ಯರ್ಥಿಗಳು ಮತ್ತು ರಾಜಕೀಯ ನಾಯಕರ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದೆ ಎಂದು ಡಾನ್ ಪತ್ರಿಕೆ ಗುರುವಾರ ಮಾಡಿದೆ.

ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ಮತ್ತು ಅದರ ಅಂಗಸಂಸ್ಥೆಗಳು ಮಾತುಕತೆಯ ಪ್ರಕ್ರಿಯೆಯನ್ನು ಮರುಸ್ಥಾಪಿಸಲು ಪಾಕಿಸ್ತಾನವನ್ನು ‘ಬಲವಂತ’ಗೊಳಿಸುವ ಉದ್ದೇಶದಿಂದ ತೀವ್ರವಾದ ಭಯೋತ್ಪಾದನೆಯ ದಾಳಿಯನ್ನು ಆಶ್ರಯಿಸುವುದನ್ನು ಮುಂದುವರೆಸುತ್ತವೆ ಎಂಬುದನ್ನು ಇದು ಸೂಚಿಸುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಖೈಬರ್ ಪಖ್ತುಂಕ್ವಾದ ವಿಲೀನಗೊಂಡ ಜಿಲ್ಲೆಗಳಲ್ಲಿ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ ಸಂಘಟನೆಯು ನಿರಂತರವಾಗಿ ಉಗ್ರರ ನೇಮಕಾತಿ ಮಾಡಿಕೊಳ್ಳುತ್ತಿದೆ, ತರಬೇತಿ ನೀಡುತ್ತಿದೆ. ಆತ್ಮಹತ್ಯಾ ಬಾಂಬರ್‌ಗಳನ್ನು ಸಜ್ಜುಗೊಳಿಸುತ್ತಿದ್ದು, ಇದು “ಕಳವಳಕಾರಿಯಾಗಿದೆ” ಎಂದು ಆಂತರಿಕ ಸಚಿವಾಲಯವು ಸೆನೆಟ್‌ಗೆ ತಿಳಿಸಿದ ಕೆಲವೇ ದಿನಗಳ ಬಳಿಕ ಈ ವರದಿಯಲ್ಲೂ ಅದೇ ಸಂಗತಿಗಳು ವ್ಯಕ್ತವಾಗಿವೆ.

ಪಾಕಿಸ್ತಾನದ ನೆಲದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಆಫ್ಘಾನಿಸ್ತಾನ ತನ್ನ ನೆಲವನ್ನು ಟಿಟಿಪಿಗೆ ಬಿಟ್ಟುಕೊಟ್ಟಿದೆ. ದೋಹಾ ಒಪ್ಪಂದವನ್ನು ಅದು ಪುರಸ್ಕರಿಸುತ್ತಿಲ್ಲ. ಈ ಒಪ್ಪಂದ ಪ್ರಕಾರ, ಟಿಟಿಪಿ ಕಾರ್ಯಾಚಟುವಟಿಕೆಗೆ ಆಫ್ಘಾನಿಸ್ತಾನ ಆಶ್ರಯ ನೀಡಬಾರದು ಎಂದು ಸೇನಾ ಮೂಲಗಳನ್ನು ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ.

ಕಳೆದ ವರ್ಷದಲ್ಲಿ ಪಾಕಿಸ್ತಾನದಲ್ಲಿ 23 ಆತ್ಮಹತ್ಯಾ ಬಾಂಬ್ ದಾಳಿಗಳು ಸೇರಿದಂತೆ ಒಟ್ಟು 306 ಭಯೋತ್ಪಾದಕ ದಾಳಿಗಳು ನಡೆದಿವೆ. ಈ ದಾಳಿಗಳಲ್ಲಿ693 ಜನರು (330 ಭದ್ರತಾ ಸಿಬ್ಬಂದಿ, 260 ನಾಗರಿಕರು ಮತ್ತು 103 ಉಗ್ರಗಾಮಿಗಳು) ಮೃತರಾಗಿದ್ದಾರೆ. 1,124 ಮಂದಿ ಗಾಯಗೊಂಡಿದ್ದಾರೆ. ಈ ದಾಳಿಗಳು ಹಿಂದಿನ ವರ್ಷಕ್ಕಿಂತ 17 ಪ್ರತಿಶತದಷ್ಟು ಹೆಚ್ಚಳವನ್ನು ಗುರುತಿಸಿವೆ ಮತ್ತು ಈ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆಯು ಹಿಂದಿನ ವರ್ಷದಲ್ಲಿ ಇದೇ ರೀತಿಯ ದಾಳಿಯಲ್ಲಿ ಸತ್ತವರಿಗಿಂತ 65% ರಷ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: ಇರಾಕ್‌ ಬೆಂಬಲಿತ ಹಡಗುಗಳ ಮೇಲೆ ಅಮೆರಿಕ ದಾಳಿ; 10 ಹೌತಿ ಉಗ್ರರ ಹತ್ಯೆ, ವಿಡಿಯೊ ಇದೆ

Exit mobile version