Site icon Vistara News

ಶಾಪಿಂಗ್‌ ಮಾಲ್‌ನಲ್ಲಿ ದಾಳಿ: ಚೂರಿಯಿಂದ ಇರಿದು 6 ಮಂದಿಯನ್ನು ಕೊಂದ ದುಷ್ಕರ್ಮಿ; ಕಾರಣ ನಿಗೂಢ

Sydney Mall

Sydney Mall

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಶನಿವಾರ (ಏಪ್ರಿಲ್‌ 13) ವ್ಯಕ್ತಿಯೊಬ್ಬ ಶಾಪಿಂಗ್‌ ಮಾಲ್‌ನಲ್ಲಿ ದಾಳಿ ನಡೆಸಿ ಸಿಕ್ಕಸಿಕ್ಕವರಿಗೆ ಚೂರಿಯಿಂದ ಇರಿದಿದ್ದಾನೆ. ಈ ಘಟನೆಯಲ್ಲಿ ಸುಮಾರು 6 ಮಂದಿ ಮೃತಪಟ್ಟಿದ್ದಾರೆ. ಕೊನೆಗೂ ದಾಳಿ ನಡೆಸಿದ ವ್ಯಕ್ತಿಗೆ ಗುಂಡಿಟ್ಟು ಹತ್ಯೆ ಮಾಡುವಲ್ಲಿ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ ಯಶಸ್ವಿಯಾಗಿದ್ದಾರೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸರು (New South Wales police) ತಿಳಿಸಿದ್ದಾರೆ.

ವೆಸ್ಟ್‌ಫೋಲ್ಡ್‌ ಬೊಂಡಿ ಜಂಕ್ಷನ್ ಮಾಲ್ (Westfield Bondi Junction mall) ಕಾಂಪ್ಲೆಕ್ಸ್‌ನಲ್ಲಿ ಈ ಘಟನೆ ನಡೆದಿದೆ. ಶನಿವಾರ ಮಧ್ಯಾಹ್ನ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದಾಗ ಈ ದಾಳಿ ನಡೆದಿತ್ತು. ದಾಳಿಯ ಉದ್ದೇಶ ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ʼʼದುಷ್ಕರ್ಮಿಯನ್ನು ಬಂಧಿಸುವ ನಿಟ್ಟಿನಲ್ಲಿ ಪೊಲೀಸರು ಪ್ರಯತ್ನ ಮಾಡಿದ್ದರು. ಆಗ ಆತ ಪೊಲೀಸರ ಮೇಲೆಯೇ ಪ್ರತಿ ದಾಳಿ ನಡೆಸಿದ್ದ. ಕೊನೆಗೆ ಅನಿವಾರ್ಯವಾಗಿ ಪೊಲೀಸರು ಆತನನ್ನು ಹತ್ಯೆ ಮಾಡಿದರುʼʼ ಎಂದು ವರದಿಗಳು ಹೇಳಿವೆ.

ಸದ್ಯ ಘಟನೆ ನಡೆದ ವೆಸ್ಟ್‌ಫೀಲ್ಡ್ ಬೋಂಡಿ ಜಂಕ್ಷನ್ ಮಾಲ್ ಕಾಂಪ್ಲೆಕ್ಸ್‌ನಿಂದ ನೂರಾರು ಜನರನ್ನು ಸ್ಥಳಾಂತರಿಸಲಾಗಿದೆ. ದಾಳಿ ವೇಳೆ ಎಂಟು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಪೈಕಿ ಎಂಟು ತಿಂಗಳ ಮಗು ಕೂಡ ಸೇರಿದೆ.

ಕಾರಣವೇನು?

ಸಹಾಯಕ ಆಯುಕ್ತ ಆಂಥೋನಿ ಕುಕ್ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, “ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಪ್ರಾಥಮಿಕ ಹಂತದಲ್ಲಿ ಘಟನೆಗೆ ಕಾರಣವೇನು ಎನ್ನುವುದು ತಿಳಿದು ಬಂದಿಲ್ಲʼʼ ಎಂದು ತಿಳಿಸಿದ್ದಾರೆ. ದಾಳಿ ನಡೆಸಿದ ವ್ಯಕ್ತಿ ʼʼಕೊಲೆ ಮಾಡುವ ಉತ್ಸಾಹದಲ್ಲಿದ್ದʼʼ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಘಟನೆ ವೇಳೆ ನೂರಾರು ಮಂದಿ ಭಯಭೀತರಾಗಿ ಓಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಸದ್ಯ ದಾಳಿಕೋರನ ಗುರುತು ಪತ್ತೆಯಾಗಿಲ್ಲ. “ಹಸಿರು ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಜನರನ್ನು ವಿವೇಚನೆಯಿಲ್ಲದೆ ಇರಿದು ಕೊಲ್ಲಲು ಪ್ರಾರಂಭಿಸಿದ್ದʼʼ ಎಂದು ಸ್ಥಳೀಯರೊಬ್ಬರು ವಿವರಿಸಿದ್ದಾರೆ. ದಾಳಿಕೋರನು ಚಾಕುವಿನೊಂದಿಗೆ ಕೇಂದ್ರದ ಸುತ್ತಲೂ ಓಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಆಘಾತ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Iran-Israel War Explainer: ಇಸ್ರೇಲ್ ಮೇಲೆ ಇರಾನ್ ದಾಳಿಗೆ ಕ್ಷಣಗಣನೆ; ಮುಂದೇನಾಗಬಹುದು?

Exit mobile version