Site icon Vistara News

Explainer: ಮೂರು ಹೆಗ್ಗಣಗಳ ವಿರುದ್ಧ ಗುಡುಗಿದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ !: ಪತನ ಭೀತಿಯಲ್ಲಿ ಪಾಕ್‌ ಸರ್ಕಾರ

ಬೆಂಗಳೂರು: ಭಾರತದಿಂದ 1947ರಲ್ಲಿ ವಿಭಜನೆಯಾಗಿ ಸ್ಥಾಪನೆಯಾದಾಗಿನಿಂದಲೂ ಅಸ್ಥಿರತೆಯಲ್ಲೇ ಮುಳುಗಿರುವ ನೆರೆಯ ಪಾಕಿಸ್ತಾನದಲ್ಲಿ ಮತ್ತೊಂದು ರಾಜಕೀಯ ಪಲ್ಲಟ ಹೊಸ್ತಿಲಲ್ಲಿ ಬಂದು ನಿಂತಿದೆ. 2018ರಿಂದ ಪಾಕ್‌ ಪ್ರಧಾನಿಯಾಗಿರುವ ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕರೂ ಆಗಿದ್ದ ಇಮ್ರಾನ್‌ ಖಾನ್‌ ಸರ್ಕಾರ ಇನ್ನೇಕು ಪತನಗೊಂಡು ಮತ್ತೆ ಮಿಲಿಟರಿ ಆಡಳಿತ ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ.

ಇಮ್ರಾನ್‌ ಖಾನ್‌ ನೇತೃತ್ವದ ತೆಹ್ರಿಕ್-ಎ-ಪಾಕಿಸ್ತಾನ್‌ ಮುಂದಾಳುತ್ವದ ಸಮ್ಮಿಶ್ರ ಸರ್ಕಾರದಲ್ಲಿ ತಮಗೆ ನಂಬಿಕೆ ಇಲ್ಲ ಎಂದು ವಿರೋಧ ಪಕ್ಷಗಳು ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿವೆ. ಇದಕ್ಕೆ ಸರಿಯೆನ್ನುವಂತೆ, ಸಮ್ಮಿಶ್ರ ಸರ್ಕಾರದ ಭಾಗವೇ ಆಗಿದ್ದ, ಒಬ್ಬ ಸಚಿವರೂ ಸೇರಿ ಮೂವರು ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಇಮ್ರಾನ್‌ ಖಾನ್‌ ನಿದ್ದೆಗೆಡಿಸಿದೆ.

ಸಂಸತ್ತಿನಲ್ಲಿ ಮಂಡನೆಯಾದ ಅವಿಶ್ವಾಸ ಗೊತ್ತುವಳಿಯ ಕುರಿತು ಇದೀಗ ಚರ್ಚೆ ನಡೆಯಬೇಕು. ಕನಿಷ್ಟ ಮೂರು ದಿನ ಹಾಗೂ ಗರಿಷ್ಠ ಏಳು ದಿನದವರೆಗೆ ಚರ್ಚೆಗಳು ನಡೆದು ಗೊತ್ತುವಳಿಯನ್ನು ಮತದಾನಕ್ಕೆ ಹಾಕಬೇಕು. ಆಗೇನಾದರೂ ಸಂಖ್ಯೆ ಒಟ್ಟುಗೂಡಿಸಲು ಇಮ್ರಾನ್‌ ಖಾನ್‌ ವಿಫಲವಾದರೆ ಸರ್ಕಾರದ ಪತನ ಖಚಿತ.

ಮಿಲಿಟರಿ ಬೆಂಬಲಿತ ಚಟುವಟಿಕೆ

ಪಾಕಿಸ್ತಾನದಲ್ಲಿ ಆಡಳಿತ ನಡೆಸಬೇಕೆಂದರೆ ಅಲ್ಲಿನ ಜನರ ಬೆಂಬಲಕ್ಕಿಂತಲೂ ಹೆಚ್ಚಾಗಿ ಅಲ್ಲಿನ ಮಿಲಿಟರಿ ಬೆಂಬಲ ಬೇಕು. ಮಿಲಿಟರಿ ಜತೆಗೆ, ಭಾರತ ಸೇರಿ ವಿವಿಧೆಡೆ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿರುವ ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಕೃಪಾಕಟಾಕ್ಷವೂ ಅತ್ಯವಶ್ಯಕ. 2018ಕ್ಕೂ ಮುನ್ನ ಅಧಿಕಾರದಲ್ಲಿದ್ದ ನವಾಜ್‌ ಷರೀಫ್‌ ಸರ್ಕಾರ ಪತನ ಸೇರಿ ಅನೇಕ ಸಂದರ್ಭದಲ್ಲಿ ಅಲ್ಲಿನ ನಟೋರಿಯಸ್‌ ಮಿಲಿಟರಿ ಕಾರಣಕ್ಕಾಗಯೇ ಸರ್ಕಾರಗಳು ಕುಸಿದಿವೆ. ಇದರ ಜತೆಗೆ ಅನೇಕ ರಾಜಕೀಯ ಪಕ್ಷಗಳ ಭ್ರಷ್ಟಾಚಾರದಲ್ಲೂ ಮಿತಿಮೀರಿದ್ದರಿಂದ ಹೊಸ ಆಶಾಕಿರಣವಾಗಿ ಇಮ್ರಾನ್‌ ಖಾನ್‌ ಕಾಣಿಸಿಕೊಂಡಿದ್ದರು. ಅದರಿಂದಾಗಿಯೇ 2018ರ ಚುನಾವಣೆಯಲ್ಲಿ ಇಮ್ರಾನ್‌ ಖಾನ್‌ ನೇತೃತ್ವದ ಪಕ್ಷ 149 ಸ್ಥಾನಗಳಲ್ಲಿ ಜಯಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಇಮ್ರಾನ್‌ ಖಾನ್‌ ಐದರಲ್ಲೂ ಜಯಿಸಿದ್ದರು. ಪಾಕ್‌ ಇತಿಹಾಸದಲ್ಲಿ ಇದೂ ಒಂದು ದಾಖಲಾಯಿತು. 342ಸಂಸದರಿರುವ ಸಂಸತ್ತಿನಲ್ಲಿ ಸರಳ ಬಹುಮತದಿಂದ ದೂರ ಉಳಿದಿದ್ದ ಇಮ್ರಾನ್‌ಗೆ ಇತರೆ 6 ಪಕ್ಷಗಳು ಬೆಂಬಲ ನೀಡಿ ಸರ್ಕಾರ ರಚನೆಯಾಯಿತು. ಇಷ್ಟೆಲ್ಲ ಜನಬೆಂಬಲದ ಜತೆಗೆ, ಅಲ್ಲಿನ ಮಿಲಿಟರಿಗೂ ಇಮ್ರಾನ್‌ ಖಾನ್‌ ಹತ್ತಿರವಾಗಿದ್ದರಿಂದ ಸರ್ಕಾರ ರಚನೆ ಸಾಧ್ಯವಾಯಿತು.

ಪಾಕ್‌ ಮಿಲಿಟರಿ ಮುಖ್ಯಸ್ಥ ಜನರಲ್‌ ಖಮಾರ್‌ ಜಾವೇದ್‌ ಬಜ್ವಾ ಹಾಗೂ ಇಮ್ರಾನ್‌ ಖಾನ್‌ ನಡುವೆ ಸಮನ್ವಯತೆ ಇದ್ದ ಕಾರಣದಿಂದಾಗಿ ಸರ್ಕಾರ ನಾಲ್ಕು ವರ್ಷ ನಡೆಯಿತು. ಆದರೆ ಇತ್ತೀಚೆಗೆ ಐಎಸ್‌ಐ ಮುಖ್ಯಸ್ಥರ ನೇಮಕದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಬಜ್ವಾ ಹಾಗೂ ಇಮ್ರಾನ್‌ ಖಾನ್‌ ನಡುವೆ ಆರಂಭವಾದ ಕಂದಕ ಈಗ ಅವಿಶ್ವಾಸ ನಿರ್ಣಯದ ಮಟ್ಟಿಗೆ ಬಂದು ನಿಂತಿದೆ.

ಮೂವರು ಹೆಗ್ಗಣಗಳು ಕಾರಣ

ಪಾಕ್‌ ಸಂಸತ್ತಿನಲ್ಲಿ ಒಂದೆಡೆ ಚರ್ಚೆ ಆರಭವಾಗಬೇಕಿದ್ದರೆ ಇತ್ತ ಇಮ್ರಾನ್‌ ಖಾನ್‌ ಜನತಾ ದರ್ಬಾರ್‌ ಕದ ತಟ್ಟಿದ್ದಾರೆ. ಇಸ್ಲಾಮಾಬಾದ್‌ನ ಪ್ರಸಿದ್ಧ ಪರೇಡ್‌ ಗ್ರೌಂಡ್‌ನಲ್ಲಿ ಬೃಹತ್‌ ರ‍್ಯಾಲಿಯನ್ನು ಆಯೋಜಿಸಿ ಇಮ್ರಾನ್‌ ಮಾತನಾಡಿದ್ದಾರೆ. ಈ ರ‍್ಯಾಲಿಗೆ ಸಾಂಪ್ರದಾಯಿಕ ಹಿನ್ನೆಲೆಯ “ಅಮ್ರ್‌ ಬಿಲ್‌ ಮರ್‌ ಊಫ್‌ʼ ಎಂದು ಹೆಸರಿಟ್ಟಿದ್ದಾರೆ. ಇದರ ಅರ್ಥ “ಉತ್ತಮವಾದದ್ದನ್ನು ಉತ್ತೇಜಿಸಿ” ಎಂದು. ಅಂದರೆ, ತಾವು ಉತ್ತಮರಾಗಿದ್ದು, ಜನರು ತಮ್ಮನ್ನು ಬೆಂಬಲಿಸಿ, ಅವಿಶ್ವಾಸ ನಿರ್ಣಯ ಮಂಡಿಸಿರುವವರನ್ನು ತಿರಸ್ಕರಿಸಿ ಎಂದು ಸಂದೇಶ ನೀಡಿದ್ದಾರೆ.

ಈ ರ‍್ಯಾಲಿಯಲ್ಲಿ ಮಾತನಾಡುತ್ತ ಪ್ರಮುಖವಾಗಿ “ವಿದೇಶಿ” ಶಕ್ತಿಗಳತ್ತ ಇಮ್ರಾನ್‌ ಬೊಟ್ಟು ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಅಸ್ಥಿರತೆ ಮೂಡಿಸಲು ವಿದೇಶಿ ಶಕ್ತಿಗಳು ನಮ್ಮವರಿಗೆ ಹಣ ನೀಡುತ್ತಿವೆ. ಅದರ ಆಸೆಗೆ ಒಳಗಾದ ಪಾಕಿಸ್ತಾನಿಗಳೇ ಸರ್ಕಾರವನ್ನು ಪತನಗೊಳಿಸಲು ಮುಂದಾಗಿದ್ದಾರೆ. ದೇಶದ ಹಣವನ್ನು ದೊಡ್ಡ ಕ್ರಿಮಿನಲ್‌ಗಳು ಲೂಟಿ ಮಾಡುತ್ತಿದ್ದಾರೆ. ಈ ಸ್ಥಿತಿಗೆ ಮೂರು ಹೆಗ್ಗಣಗಳು ಕಾರಣ. ಇವರಿಗೆ ವಿದೇಶಗಳಲ್ಲಿ ಲಕ್ಷಾಂತರ ಕೋಟಿ  ಮೊತ್ತದ ಆಸ್ತಿ ಇದೆ. ಕಳೆದ ಮೂವತ್ತು ವರ್ಷಗಳಿಂದ ಪಾಕಿಸ್ತಾನವನ್ನು ಇವರು ಲೂಟಿ ಮಾಡಿದ್ದಾರೆ. ಇಂಥವರನ್ನು ನಿಯಂತ್ರಿಸಲು ಮುಂದಾದಾಗ ಸರ್ಕಾರವನ್ನು ಪತನಗೊಳಿಸಲು ಮುಂದಾಗುತ್ತಾರೆ. ಜನರಲ್‌ ಪರ್ವೇಜ್‌ ಮುಷರಫ್‌ ರೀತಿ ತಮ್ಮ ಎದುರು ಮಂಡಿಯೂರಿ ಶರಣಾಗಲಿ ಎಂದು ಇವರು ಭಾವಿಸಿದ್ದಾರೆ. ಆದರೆ ನಾನು ಅವರ ತಾಳಕ್ಕೆ ಕುಣಿಯುವುದಿಲ್ಲ. ನನ್ನ ಸರ್ಕಾರ ಪತನವಾದರೂ ಸರಿ, ನನ್ನ ಪ್ರಾಣವೇ ಹೋದರೂ ಸರಿ ಎಂದು ಪಾಕ್‌ನ ಎಲ್ಲ ಪ್ರಾಂತಗಳಿಂದಲೂ ಆಗಮಿಸಿದ್ದ ಬೃಹತ್‌ ಜನಸ್ತೋಮವನ್ನುದ್ದೇಶಿಸಿ ಮಾಡಿದ ಒಂದೂವರೆ ಘಂಟೆಯ ಭಾವನಾತ್ಮಕ ಭಾಷದಣದಲ್ಲಿ ತಿಳಿಸಿದ್ದಾರೆ. ಅಂದಹಾಗೆ ಇಮ್ರಾನ್‌ ಹೇಳಿದ “ಮೂರು ಹೆಗ್ಗಣಗಳು” ಪಾಕ್‌ ಪ್ರತಿಪಕ್ಷಗಳ ನಾಯಕರಾದ, ಪಾಕಿಸ್ತಾನ್‌ ಡೆಮಾಕ್ರಟಿಕ್‌ ಮೂವ್‌ಮೆಂಟ್‌ನ ಫಜಲ್‌ ಉರ್‌ ರೆಹಮಾನ್‌, ಪಿಎಂಎಲ್‌-ಎನ್‌ನ ಶಹಬಾಜ್‌ ಷರೀಫ್‌ ಹಾಗೂ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿಯ ನಾಯಕ ಹಾಗೂ ಮಾಜಿ ರಾಷ್ಟ್ರಪತಿ, ಮಾಜಿ ಪ್ರಧಾನಿ ಬೇನಜೀರ್‌ ಭುಟ್ಟೊ ಪತಿ ಆಸಿಫ್‌ ಅಲಿ ಜರ್ದಾರಿ ಎಂದು ತಿಳಿದುಬಂದಿದೆ.

ಅವಧಿ ಪೂರ್ವ ಚುನಾವಣೆ?

ಸದ್ಯದಲ್ಲೆ ಎದುರಾಗುವ ಅವಿಶ್ವಾಸ ನಿರ್ಣಯವನ್ನು ಇಮ್ರಾನ್‌ ಖಾನ್‌ ಯಾವ ರೀತಿ ಎದುರಿಸುತ್ತಾರೆ ಎಂಬುದು ಯಕ್ಷ ಪ್ರಶ್ನೆ. ಸಾರ್ವಜನಿಕ ರ‍್ಯಾಲಿ ಮಾಡುವ ಮೂಲಕ ಪ್ರತಿಪಕ್ಷಗಳ ವಿರುದ್ಧ ಜನಾಭಿಪ್ರಾಯ ಮೂಡಿಸಲು ಇಮ್ರಾನ್‌ ಮುಂದಾಗಿದ್ದಾರೆ. ಇದರಿಂದ ಸಂಸತ್ತಿನ ಅವಿಶ್ವಾಸ ನಿರ್ಣಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಆದರೆ ಸದ್ಯದಲ್ಲೆ ಬಜೆಟ್‌ ಮಂಡಿಸಿ, ಅವಧಿ ಪೂರ್ವ ಚುನಾವಣೆಯನ್ನು ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿಯೇ ಇಂತಹ ಬೃಹತ್‌ ರ‍್ಯಾಲಿ ಆಯೋಜಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Exit mobile version