ನ್ಯೂಯಾರ್ಕ್: ಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣ ಕೆರೊಲಿನಾ ರಾಜ್ಯದಲ್ಲಿರುವ ಹಾರಿ ಕೌಂಟಿ ಎಂಬ ಪ್ರದೇಶದಲ್ಲಿ ಗಾರ್ಡನ್ ಸಿಟಿ ಎಂಬ ಬೀಚ್ ಇದೆ. ಸುಂದರವಾದ ಆ ಬೀಚ್ ಸದಾ ಪ್ರವಾಸಿಗರಿಂದ ತುಂಬಿರುತ್ತದೆ. ಅಲ್ಲಲ್ಲಿ ಹಾಕಿರುವ ಆರಾಮದಾಯಕ ಕುರ್ಚಿಗಳು, ನೆರಳಿಗಾಗಿ ಇಟ್ಟಿರುವ ದೊಡ್ಡದೊಡ್ಡ ಛತ್ರಿಗಳು, ಪ್ರವಾಸಕ್ಕೆ ಹೇಳಿಮಾಡಿಸಿದ ತಾಣವದು. ಆದರೆ ಈ ಬೀಚ್ ಒಂದು ವಿಚಿತ್ರ ದುರ್ಘಟನೆಗೆ ಸಾಕ್ಷಿಯಾಗಿದೆ. ಇಲ್ಲಿ ಹಾಕಲಾಗಿರುವ ದೊಡ್ಡ ಛತ್ರಿಯೇ ಮಹಿಳೆಯೊಬ್ಬರ ಜೀವ ತೆಗೆದಿದೆ..ಯಾರೂ ಊಹಿಸಿಕೊಳ್ಳಲೂ ಆಗದ ರೀತಿಯಲ್ಲಿ !
ಮೃತ ಮಹಿಳೆಯ ಹೆಸರು ಟ್ಯಾಮ್ಮಿ ಪೆರೌಲ್ಟ್ ಎಂದಾಗಿದ್ದು, 63 ವರ್ಷ. ಇವರು ಕಡಲತೀರಕ್ಕೆ ಹೋಗಿ, ಮರಳಿನ ಮೇಲೆ ಕುಳಿತು ಖುಷಿಯಾದ ಕ್ಷಣಗಳನ್ನು ಕಳೆಯುತ್ತಿದ್ದರು. ಅಲ್ಲಿ ಜೋರಾಗಿ ಗಾಳಿ ಬೀಸುತ್ತಿತ್ತು. ಬೀಚ್ನಲ್ಲಿ ಹೋಟೆಲ್ ಎದುರು ಹಾಕಲಾಗಿದ್ದ ದೊಡ್ಡದಾದ ಛತ್ರಿಯೊಂದು ಗಾಳಿಯ ರಭಸಕ್ಕೆ ನೆಲದಿಂದ ಎದ್ದು ಹಾರಿ ಹೋಗಿ ಮಹಿಳೆಯ ದೇಹಕ್ಕೆ ಚುಚ್ಚಿದೆ. ಅಂದರೆ ಸರಳಿನ ಭಾಗ ಅವರ ಹೊಟ್ಟೆಗೆ ಸೇರಿದ್ದರಿಂದ ಆಕೆ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಛತ್ರಿಯ ಸರಳು ಹೊಟ್ಟೆಗೆ ಸೇರಿ ಕಷ್ಟ ಪಡುತ್ತಿದ್ದ ಮಹಿಳೆಯನ್ನು ರಕ್ಷಿಸಲು ಅಲ್ಲಿದ್ದವರೆಲ್ಲ ಪ್ರಯತ್ನ ಪಟ್ಟರು. ವೃತ್ತಿಯಲ್ಲಿ ವೈದ್ಯರಾದವರೂ ಕೆಲವರು ಅಲ್ಲಿದ್ದರು. ಅವರೂ ಸಹ ತಮ್ಮ ಕೈಯಲ್ಲಾದ ಪ್ರಾಥಮಿಕ ಚಿಕಿತ್ಸೆ ಮಾಡಿ, ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ತೀವ್ರ ರಕ್ತಸ್ರಾವ ಆಗಿದ್ದರಿಂದ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ. 2016ರಲ್ಲಿ ಯುಎಸ್ನ ವರ್ಜೀನಿಯಾ ರಾಜ್ಯದ ಬೀಚ್ವೊಂದರಲ್ಲಿ 55 ವರ್ಷದ ಮಹಿಳೆಯೊಬ್ಬರು ಇದೇ ಮಾದರಿಯಲ್ಲಿ ಮೃತಪಟ್ಟಿದ್ದರು. ಬೀಚ್ನ ಅಂಬ್ರೆಲ್ಲಾ ಬಂದು ಹೊಡೆದು ಉಸಿರು ಚೆಲ್ಲಿದ್ದರು.
ಇದನ್ನೂ ಓದಿ: Chief Minister Tour | ಕಡಲ್ಕೊರೆತ ಸಮಸ್ಯೆ ತಡೆಗೆ ತಾತ್ಕಾಲಿಕ ಕಾಮಗಾರಿ: ಸಿಎಂ ಬೊಮ್ಮಾಯಿ