Site icon Vistara News

Akul Dhawan: ಅಮೆರಿಕದಲ್ಲಿ ಮೃತಪಟ್ಟ ಭಾರತೀಯ ಮೂಲದ ವಿದ್ಯಾರ್ಥಿ; ಸಾವಿಗೆ ಕಾರಣವಾಗಿದ್ದು ಇದು

akul

akul

ವಾಷಿಂಗ್ಟನ್‌: ಕಳೆದ ತಿಂಗಳು ನಿಗೂಢವಾಗಿ ಮೃತಪಟ್ಟಿದ್ದ ಅಮೆರಿಕದ ಇಲಿನಾಯ್ಸ್ ಅರ್ಬಾನಾ-ಚಾಂಪೇನ್ (University of Illinois Urbana-Champaign) ವಿಶ್ವವಿದ್ಯಾಲಯದ 18 ವರ್ಷದ ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿ ಅಕುಲ್ ಧವನ್ (Akul Dhawan) ಸಾವಿನ ಕಾರಣವನ್ನು ಪೊಲೀಸರು ಬಹಿರಂಗ ಪಡಿಸಿದ್ದಾರೆ. ಅತಿಯಾದ ಮದ್ಯ ಸೇವನೆಯೇ ಅಕುಲ್‌ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಅಕುಲ್‌ ಧವನ್‌ ಜನವರಿ 20ರಂದು ನಾಪತ್ತೆಯಾಗಿದ್ದರು. ತೀವ್ರ ಹುಡುಕಾಟದ ಬಳಿಕ ಸುಮಾರು 10 ಗಂಟೆ ಕಳೆದ ಮೇಲೆ ಅವರ ಮೃತದೇಹ ವಿಶ್ವವಿದ್ಯಾನಿಲಯ ಕಟ್ಟಡದ ಹಿಂಬದಿಯಲ್ಲಿ ಪತ್ತೆಯಾಗಿತ್ತು. ಅಕುಲ್‌ ಧವನ್‌ ಸಾವಿನ ಬಗ್ಗೆ ಆಗ ಅನುಮಾನಗಳು ಎದ್ದಿದ್ದವು. ಇದೀಗ ಪೊಲೀಸರು ಸ್ಪಷ್ಟನೆ ನೀಡಿ, ಅಕುಲ್‌ ಸಾವಿಗೆ ಸಂಬಂಧಿಸಿ ಯಾವುದೇ ರೀತಿಯ ಸಂಚು ನಡೆದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಅಂದು ಏನಾಗಿತ್ತು?

ʼʼಜನವರಿ 20ರಂದು ರಾತ್ರಿ 11:30ರ ಸುಮಾರಿಗೆ ಅಕುಲ್ ಧವನ್‌ ಮದ್ಯ ಸೇವಿಸಿ ಕಾಲೇಜಿನ ಸಮೀಪದಲ್ಲೇ ಇರುವ ಕ್ಯಾನೋಪಿ ಕ್ಲಬ್‌ಗೆ ಹೋಗಿದ್ದರು. ಆದರೆ ಕ್ಲಬ್ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದರು. ಅವರು ಕ್ಲಬ್‌ಗೆ ಪ್ರವೇಶಿಸಲು ಅನೇಕ ಬಾರಿ ಪ್ರಯತ್ನಿಸಿದರೂ ಸಿಬ್ಬಂದಿ ಅವಕಾಶವನ್ನೇ ನೀಡಲಿಲ್ಲ. ಅಲ್ಲದೆ ಅವರಿಗಾಗಿ ವ್ಯವಸ್ಥೆ ಮಾಡಿದ ಎರಡು ರೈಡ್‌ ಶೇರ್‌ ವಾಹನವನ್ನೂ ತಿರಸ್ಕರಿಸಿ ಕ್ಲಬ್‌ ಬಳಿಯಲ್ಲೇ ಅಕುಲ್‌ ಧವನ್‌ ನಿಂತಿದ್ದರುʼʼ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ʼʼಈ ವೇಳೆ ಇಲಿನಾಯ್ಸ್‌ನಲ್ಲಿ ಕಡು ಶೀತದ ವಾತಾವರಣ ಇತ್ತು. ತಾಪಮಾನ -20ರಿಂದ -30 ಡಿಗ್ರಿಗಳ ನಡುವೆ ದಾಖಲಾಗಿತ್ತು. ಈ ಚಳಿಯಿಂದ ಅಕುಲ್‌ ಧವನ್‌ ಮರಗಟ್ಟಿ ಹೋಗಿದ್ದರು. ಅವರ ಸ್ನೇಹಿತರು ಅನೇಕ ಸಲ ಕರೆ ಮಾಡಿದ್ದರೂ ಉತ್ತರಿಸದ ಹಿನ್ನೆಲೆಯಲ್ಲಿ ಅವರು ಕ್ಯಾಂಪಸ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಕ್ಲಬ್‌, ಕಾಲೇಜು ಆಸುಪಾಸು, ದಾರಿಯಲ್ಲೆಲ್ಲ ಹುಡುಕಾಟ ನಡೆಸಲಾಯಿತು. ಆದರೂ ಅಕುಲ್‌ ಧವನ್‌ ಪತ್ತೆಯಾಗಿರಲಿಲ್ಲʼʼ ಎಂದು ಅಧಿಕಾರಿ ವಿವರಿಸಿದ್ದಾರೆ.

ʼʼಮರುದಿನ ಬೆಳಗ್ಗೆ ಕಾಲೇಜು ಸಿಬ್ಬಂದಿಯೊಬ್ಬರು ಪೊಲೀಸರಿಗೆ ಕರೆ ಮಾಡಿ, ಕ್ಯಾಂಪಸ್‌ನ ಹಿಂಭಾಗ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿಯೋರ್ವ ಇರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರು ಕೂಡಲೇ ತೆರಳಿ ಪರಿಶೀಲಿಸಿದಾಗ ಅದು ಅಕುಲ್‌ ಧವನ್‌ ಎನ್ನುವುದು ತಿಳಿಯಿತು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ತೀವ್ರವಾದ ಮದ್ಯ ಸೇವನೆ ಮತ್ತು ಮತ್ತು ಹೆಪ್ಪುಗಟ್ಟುವ ಚಳಿಗೆ ದೀರ್ಘಕಾಲ ಮೈ ಒಡ್ಡಿಕೊಂಡ ಕಾರಣ ಹೈಪೋಥರ್ಮಿಯಾದಿಂದ ಅಕುಲ್‌ ಧವನ್‌ ನಿಧನರಾಗಿದ್ದರುʼʼ ಎಂದು ಅವರು ತಿಳಿಸಿದ್ದಾರೆ. ಈ ಮೂಲಕ ಕೆಲವು ದಿನಗಳಿಂದ ಮೂಡಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: Jaahnavi Kandula: ಸಾಕ್ಷಿಗಳ ಕೊರತೆ; ಭಾರತೀಯ ವಿದ್ಯಾರ್ಥಿನಿಯನ್ನು ಕೊಂದ ಪೊಲೀಸ್‌ ಅಧಿಕಾರಿ ಶಿಕ್ಷೆಯಿಂದ ಪಾರು

ವರದಿಯೊಂದರ ಪ್ರಕಾರ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 18ನೇ ವರ್ಷಕ್ಕೆ ಕಾಲಿಟ್ಟ ಅಕುಲ್‌ ಧವನ್, ಪೋಷಕರ ವಿರೋಧದ ಹೊರತಾಗಿಯೂ ರೊಬೊಟಿಕ್ಸ್ ಅಧ್ಯಯನ ಮಾಡಲು ಇಲಿನಾಯ್ಸ್ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version