ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಉಗ್ರರ ದಾಳಿಗಳು (Terrorist Attack), ಆಂತರಿಕ ಗಲಭೆಗಳು ಹೆಚ್ಚಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ (Khyber Pakhtunkhwa) ಪೊಲೀಸ್ ಠಾಣೆಯೊಂದರ ಮೇಲೆ ಉಗ್ರರು ದಾಳಿ ನಡೆಸಿದ್ದು, 10 ಪೊಲೀಸರು ಮೃತಪಟ್ಟಿದ್ದಾರೆ. ಆರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ (ಫೆಬ್ರವರಿ 5) ಬೆಳಗಿನ ಜಾವ 1.30ರ ಸುಮಾರಿಗೆ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಚೌಧ್ವಾನ್ ಪೊಲೀಸ್ ಠಾಣೆ ಮೇಲೆ ಸುಮಾರು 30 ಉಗ್ರರು ಸತತವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಇದೇ ವೇಳೆ ಪೊಲೀಸರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಪೊಲೀಸರು ಹಾಗೂ ಉಗ್ರರ ನಡುವೆ ಎರಡೂವರೆ ತಾಸು ಗುಂಡಿನ ಚಕಮಕಿ ನಡೆದಿದೆ. ಆದರೆ, ದಾಳಿಯ ವೇಳೆ ಉಗ್ರರು ಪ್ರಾಬಲ್ಯ ಸಾಧಿಸಿದ್ದು, 10 ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
Big attack on Pakistan Police force-10 Pakistani Police commandos have been killed and 10 injured in a sniper raid by rebels in Chaudhwan police station.#Pakistan #ImranKhan #NawazSharif #TTP #Breakingnews #BREAKING pic.twitter.com/CW7BuKksUY
— Chaudhary Parvez (@ChaudharyParvez) February 5, 2024
“ಬೆಳಗಿನ ಜಾವ ಶಸ್ತ್ರಸಜ್ಜಿತ ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ. ಪೊಲೀಸರು ಕೂಡ ತಿರುಗೇಟು ನೀಡಲು ಯತ್ನಿಸಿದರು. ಎರಡೂವರೆ ಗಂಟೆ ನಡೆದ ಕಾಳಗದಲ್ಲಿ 10 ಪೊಲೀಸರು ಹತರಾಗಿದ್ದಾರೆ. ಕತ್ತಲಿದ್ದ ಕಾರಣ ಉಗ್ರರು ತಪ್ಪಿಸಿಕೊಂಡರು” ಎಂದು ಖೈಬರ್ ಪೊಲೀಸ್ ಚೀಫ್ ಅಖ್ತರ್ ಹಯಾತ್ ಮಾಹಿತಿ ನೀಡಿದ್ದಾರೆ. 2022ರಿಂದ ಇದುವರೆಗೆ ಪೊಲೀಸರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸುತ್ತಿದ್ದಾರೆ. ಸೋಮವಾರ ಬೆಳಗ್ಗೆ ನಡೆದ ದಾಳಿಯ ಹೊಣೆಯನ್ನು ಯಾವ ಉಗ್ರ ಸಂಘಟನೆಯೂ ಹೊತ್ತುಕೊಂಡಿಲ್ಲ ಎನ್ನಲಾಗಿದೆ.
ಬಲೂಚಿಸ್ತಾನದಲ್ಲಿ 78 ಯೋಧರ ಹತ್ಯೆ
ಬಲೂಚಿಸ್ತಾನದಲ್ಲೂ ಆಂತರಿಕ ದಂಗೆ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಬಲೂಚ್ ಲಿಬರೇಶನ್ ಆರ್ಮಿ ತನ್ನ ಆಪರೇಷನ್ ದಾರಾ-ಎ-ಬೋಲನ್ (Operation Dara-e-Bolan) ಕಾರ್ಯಾಚರಣೆಯಲ್ಲಿ 78 ಪಾಕಿಸ್ತಾನಿ ಸೈನಿಕರನ್ನು ಕೊಂದಿದೆ ಎಂದು ಬಿಎಲ್ಎ ಹೇಳಿಕೊಂಡಿದೆ. “12 ಫಿದಾಯಿನ್‌ಗಳು (ಸ್ವಯಂ ತ್ಯಾಗಿಗಳು) ಸೇರಿದಂತೆ 385 ಬಲೂಚ್ ಸ್ವಾತಂತ್ರ್ಯ ಹೋರಾಟಗಾರರು ಆಪರೇಷನ್ ದಾರಾ-ಎ-ಬೋಲನ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ 78 ಪಾಕಿಸ್ತಾನಿ ಸೈನಿಕರನ್ನು ನಿರ್ಮೂಲನೆ ಮಾಡಲಾಗಿದೆ. ಸಾಮಾನ್ಯ ಶತ್ರುವಿನ ವಿರುದ್ಧ ನಡೆಸುವ ಹೋರಾಟದಲ್ಲಿ ಯಾವುದೇ ರಾಷ್ಟ್ರದೊಂದಿಗೆ ಕೈ ಜೋಡಿಸಲು ಬಿಎಲ್ಎ ಸಿದ್ಧ” ಎಂದು ಬಲೂಚ್ ಲಿಬರೇಶನ್ ಆರ್ಮಿ ತಿಳಿಸಿದೆ. ಪಾಕಿಸ್ತಾನದಲ್ಲಿ ಫೆಬ್ರವರಿ 14ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ