Site icon Vistara News

Balochistan blast: ಬಲೂಚಿಸ್ತಾನದ ಮಸೀದಿ ಬಳಿ ಆತ್ಮಹತ್ಯಾ ಸ್ಫೋಟ, ಕನಿಷ್ಠ 52 ಸಾವು

balochistan blast

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ್ (Balochistan blast) ಪ್ರಾಂತ್ಯದ ಮಸೀದಿಯೊಂದರ ಬಳಿ ಶುಕ್ರವಾರ ನಡೆದ ʼಆತ್ಮಹತ್ಯಾ ಬಾಂಬ್‌ ಸ್ಫೋಟʼದಲ್ಲಿ (Suicide bomb blast) ಕನಿಷ್ಠ 52 ಜನರು ಸಾವನ್ನಪ್ಪಿದ್ದಾರೆ ಮತ್ತು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ನೈಋತ್ಯ ಪ್ರಾಂತ್ಯದ ಮುಸ್ತಾಂಗ್ ಜಿಲ್ಲೆಯಲ್ಲಿ ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದಂದು ಧಾರ್ಮಿಕ ಮೆರವಣಿಗೆಗಾಗಿ ಜನರು ಸೇರುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಮಸ್ತಂಗ್ ಜಿಲ್ಲೆಯ ಸಹಾಯಕ ಆಯುಕ್ತರು ತಿಳಿಸಿದ್ದಾರೆ. ಪಾಕಿಸ್ತಾನದ ಆಂತರಿಕ ಸಚಿವಾಲಯವು “ಭಯೋತ್ಪಾದಕರು” ನಡೆಸಿದ ಸ್ಫೋಟ ಇದೆಂದು ದೃಢಪಡಿಸಿದೆ. “ಈದ್ ಮಿಲಾದ್-ಉಲ್-ನಬಿ ಮೆರವಣಿಗೆಯಲ್ಲಿ ಭಾಗವಹಿಸಲು ಬಂದ ಅಮಾಯಕರ ಮೇಲೆ ನಡೆದ ದಾಳಿ ಅತ್ಯಂತ ಹೇಯ ಕೃತ್ಯವಾಗಿದೆ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಬಲೂಚಿಸ್ತಾನದ ಮಾಹಿತಿ ಸಚಿವ ಜಾನ್ ಅಚಕ್‌ಜೈ ಅವರು ಈ ಬಗ್ಗೆ Xನಲ್ಲಿ ಪೋಸ್ಟ್ ಮಾಡಿದ್ದು, ಸತ್ತವರ ಸಂಖ್ಯೆ ಹೆಚ್ಚುತ್ತಿದೆ ಎಂದಿದ್ದಾರೆ. “ಶತ್ರುಗಳು ವಿದೇಶಿ ಕೈವಾಡದೊಂದಿಗೆ ಬಲೂಚಿಸ್ತಾನದಲ್ಲಿ ಧಾರ್ಮಿಕ ಸಹಿಷ್ಣುತೆ ಮತ್ತು ಶಾಂತಿಯನ್ನು ನಾಶಮಾಡಲು ಬಯಸುತ್ತಿದ್ದಾರೆ” ಎಂದು ಅಚಕ್‌ಜೈ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಇದೇ ಜಿಲ್ಲೆಯಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ 11 ಮಂದಿ ಗಾಯಗೊಂಡಿದ್ದರು. ಈ ವರ್ಷದ ಆಗಸ್ಟ್‌ನಲ್ಲಿ ಪಾಕಿಸ್ತಾನವು ಅತಿ ಹೆಚ್ಚು ಭಯೋತ್ಪಾದಕ ದಾಳಿಗಳನ್ನು ಕಂಡಿದೆ. 2014ರಿಂದೀಚೆಗೆ ಈ ವರ್ಷವೇ ಅತಿ ಹೆಚ್ಚಿನ ಮಾಸಿಕ ದಾಳಿಗಳಾಗಿವೆ. ಇಸ್ಲಾಮಾಬಾದ್ ಮೂಲದ ಥಿಂಕ್ ಟ್ಯಾಂಕ್ ಪ್ರಕಾರ, ಪಾಕಿಸ್ತಾನವು 2023ರ ಮೊದಲ ಎಂಟು ತಿಂಗಳಲ್ಲಿ 22 ಆತ್ಮಾಹುತಿ ದಾಳಿಗಳನ್ನು ಕಂಡಿದ್ದು, ಇದರಲ್ಲಿ 227 ಜನರು ಸಾವನ್ನಪ್ಪಿದ್ದಾರೆ ಮತ್ತು 497 ಜನರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: Viral video: ಲೈವ್ ಟಿವಿ ಚರ್ಚೆಯಲ್ಲಿ ಹೊಡೆದಾಡಿಕೊಂಡ ಪಾಕಿಸ್ತಾನಿ ನಾಯಕರು!

Exit mobile version